ADVERTISEMENT

ಚರ್ಚೆ | ಒಂದು ದೇಶ, ಒಂದು ಚುನಾವಣೆ: ಅಸಾಧ್ಯವನ್ನು ಸಾಧ್ಯವಾಗಿಸಲು ಮೋದಿ ಮುಂದಡಿ

ಎ ಸೂರ್ಯಪ್ರಕಾಶ್
Published 8 ಸೆಪ್ಟೆಂಬರ್ 2023, 19:13 IST
Last Updated 8 ಸೆಪ್ಟೆಂಬರ್ 2023, 19:13 IST
<div class="paragraphs"><p>ಎ ಸೂರ್ಯಪ್ರಕಾಶ್</p></div>

ಎ ಸೂರ್ಯಪ್ರಕಾಶ್

   

ಎಷ್ಟೇ ಕ್ಲಿಷ್ಟ ಸಮಸ್ಯೆಯಾದರೂ ಸರಿ, ಪ್ರಧಾನಿ ನರೇಂದ್ರ ಮೋದಿ ಅವರು ಆ ಸಮಸ್ಯೆಯ ಆಳಕ್ಕಿಳಿದು ಅದಕ್ಕೊಂದು ಪರಿಹಾರ ಕಂಡುಕೊಳ್ಳುತ್ತಾರೆ. ಪ್ರಧಾನಿ ಮೋದಿ ಅವರ ಕಾರ್ಯವೈಖರಿಯನ್ನು ಗಮನಿಸಿದರೆ ಅವರ ಈ ಸಾಮರ್ಥ್ಯದ ಅರಿವಾಗುತ್ತದೆ. ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಜೊತೆಗೆ ಜಿಲ್ಲಾ ಪಂಚಾಯಿತಿಗೂ ಏಕಕಾಲದಲ್ಲಿ ಚುನಾವಣೆಯನ್ನು ನಡೆಸುವ ಅವರ ಆಸೆಯು ಇದಕ್ಕೆ ತಾಜಾ ಉದಾಹರಣೆಯಾಗಿದೆ.

ಇಂಥದ್ದೆ ಕಾರ್ಯವೈಖರಿಯನ್ನು ಅವರು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಲೂ ಪ್ರದರ್ಶಿಸಿದ್ದರು. ಇದೇ ದೃಢ ಸಂಕಲ್ಪವನ್ನು ಅವರು ಪ್ರಧಾನಿಯಾದ ಮೇಲೂ ನೋಡಬಹುದಾಗಿದೆ. 370ನೇ ವಿಧಿ ಅಡಿಯಲ್ಲಿ ಜಮ್ಮು–ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ್ದು, 1,500 ಕಾನೂನುಗಳಲ್ಲಿದ್ದ ತೊಡಕುಗಳನ್ನು ನಿವಾರಿಸಿರುವುದು, ಸುಮಾರು 20 ವರ್ಷಗಳಿಂದ ಬರಿಯ ಚರ್ಚೆಯಲ್ಲಿಯೇ ಇದ್ದ, ಎಂದಿಗೂ ಕಾರ್ಯರೂಪಕ್ಕೆ ಬಾರದ ನೂತನ ಸಂಸತ್‌ ಕಟ್ಟಡ ನಿರ್ಮಾಣದ ನಿರ್ಧಾರ ತೆಗೆದುಕೊಂಡಿದ್ದು – ಇವು ಮೋದಿ ಅವರ ಕೆಲವು ದೃಢ ಸಂಕಲ್ಪಗಳಿಗೆ ಉದಾಹರಣೆಗಳು.

ADVERTISEMENT

ದೇಶದಲ್ಲಿರುವ ವೈವಿಧ್ಯ ಮತ್ತು ಸ್ವಾತಂತ್ರ್ಯಾನಂತರ ರಾಜಕೀಯ ಹಾಗೂ ಸಾಮಾಜಿಕವಾಗಿ ದೇಶದಲ್ಲಿ ಇರುವ ಸಂಕೀರ್ಣ ಸನ್ನಿವೇಶಗಳು ‘ಒಂದು ದೇಶ, ಒಂದು ಚುನಾವಣೆ’ ಸಂಕಲ್ಪವನ್ನು ಜಾರಿ ಮಾಡುವುದನ್ನು ಅಸಾಧ್ಯವಾಗಿಸಿವೆ. ಆದರೆ, ಈ ಅಸಾಧ್ಯವನ್ನು ಸಾಧ್ಯವಾಗಿಸುವ  ಸವಾಲನ್ನು ಪ್ರಧಾನಿ ಮೋದಿ ಎದುರಿಸಲು ಹಿಂದಡಿ ಇಡಲಿಲ್ಲ. ಇದೇ ಕಾರಣಕ್ಕಾಗಿಯೇ ‘ಒಂದು ದೇಶ, ಒಂದು ಚುನಾವಣೆ’ ಕಾರ್ಯಸಾಧ್ಯತೆ ಪರಿಶೀಲಿಸಲು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲು ಪ್ರಧಾನಿ ನಿರ್ಧಾರ ಕೈಗೊಂಡರು.

ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಈ ಸಂಕಲ್ಪವನ್ನು ಸ್ವಾಗತಿಸಬೇಕಾಗುತ್ತದೆ. ಪದೇ ಪದೇ ನಡೆಯುವ ಚುನಾವಣೆಯು ಆಡಳಿತದ ಹಾಗೂ ಜನಸಾಮಾನ್ಯರ ಜೀವನದ ಗತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದ್ದರಿಂದಲೇ ‘ಒಂದು ದೇಶ, ಒಂದು ಚುನಾವಣೆ’ಯನ್ನು ಒಪ್ಪಿಕೊಳ್ಳಬೇಕಾಗುತ್ತದೆ.

ದೇಶದಲ್ಲಿರುವ ವಿವಿಧತೆ ಮತ್ತು ಸ್ವಾತಂತ್ರ್ಯಾ ನಂತರ ರಾಜಕೀಯ ಹಾಗೂ ಸಾಮಾಜಿಕವಾಗಿ ದೇಶದಲ್ಲಿ ಇರುವ ಸಂಕೀರ್ಣ ಸನ್ನಿವೇಶಗಳು ‘ಒಂದು ದೇಶ, ಒಂದು ಚುನಾವಣೆ’ ಸಂಕಲ್ಪವನ್ನು ಜಾರಿ ಮಾಡುವುದು ಸಾಧ್ಯವೇ ಇಲ್ಲ. ಆದರೆ, ಈ ಸಂಕಲ್ಪವನ್ನು ಆಗು ಮಾಡುವ ಸವಾಲನ್ನು ಪ್ರಧಾನಿ ಮೋದಿ ಎದುರಿಸಲು ಹಿಂದಡಿ ಇಡಲಿಲ್ಲ

ಚುನಾವಣಾ ಆಯೋಗವು ನೀತಿ ಸಂಹಿತೆಯನ್ನು ಕಠಿಣವಾಗಿ ಜಾರಿ ಮಾಡುತ್ತಿದೆ. ಚುನಾವಣೆ ಸಂದರ್ಭದಲ್ಲಿ ಸರ್ಕಾರವೊಂದು ಯಾವುದೇ ಯೋಜನೆಯನ್ನು ಜಾರಿ ಮಾಡದಂತೆ, ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ಈ ಸಂಹಿತೆಯು ತಡೆಯುತ್ತದೆ. ಇದು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರವನ್ನು ಮೂರು ತಿಂಗಳ ಕಾಲ ಒಂದರ್ಥದಲ್ಲಿ ನಿಷ್ಕ್ರಿಯಗೊಳಿಸುತ್ತದೆ. ಇದು ಒಂದು ಸಮಸ್ಯೆ. ಇನ್ನೊಂದು ಸಮಸ್ಯೆ ಏನೆಂದರೆ, ವರ್ಷದಿಂದ ವರ್ಷಕ್ಕೆ ಬರುವ ಚುನಾವಣೆಗಳ ಕಾರಣದಿಂದ ರಾಜಕೀಯ ನಾಯಕರ ಮನಸ್ಸು ಆಡಳಿತದ ಕಡೆಗೆ ನೆಟ್ಟಿರದೆ, ಪಕ್ಷದ ಪ್ರಚಾರದ ಕುರಿತು ಮಾತ್ರವೇ ಇರುತ್ತದೆ. ಜೊತೆಗೆ, ಚುನಾವಣೆಗಳು ಬೇರೆ ಬೇರೆ ಅವಧಿಯಲ್ಲಿ ನಡೆದಷ್ಟೂ, ಚುನಾವಣೆಗೆ ವ್ಯಯಿಸುವ ವೆಚ್ಚವು ಅಷ್ಟೇ ಏರಿಕೆಯಾಗುತ್ತದೆ. ಒಂದುವೇಳೆ ಚುನಾವಣೆಗಳು ಒಂದೇ ವೇಳೆಯಲ್ಲಿ ನಡೆದರೆ, ಈ ವೆಚ್ಚವು ತಗ್ಗಲಿದೆ.

1952, 1957, 1962 ಮತ್ತು 1967ರಲ್ಲಿ ದೇಶದಲ್ಲಿ ವಿಧಾನಸಭೆ ಹಾಗೂ ಲೋಕಸಭೆಗೆ ಏಕಕಾಲದಲ್ಲಿ ಚುನಾವಣೆಗಳು ನಡೆದಿವೆ. ಈ ವಿಷಯ ಈಗಿನ ಪೀಳಿಗೆಗೆ ತಿಳಿದಿರಲಿಕ್ಕಿಲ್ಲ. ಮತದಾರನಿಗೆ ಎರಡು ಮತಪತ್ರಗಳನ್ನು ನೀಡಲಾಗುತ್ತಿತ್ತು. ಒಂದು ಲೋಕಸಭೆಗಾಗಿ ಇನ್ನೊಂದು ವಿಧಾನಸಭೆಗಾಗಿ. ಈ ಎರಡೂ ಮತಪತ್ರಗಳನ್ನು ಪ್ರತ್ಯೇಕ ಬಾಕ್ಸ್‌ಗಳಲ್ಲಿ ಇರಿಸಲಾಗುತ್ತಿತ್ತು.

1967-71ರ ಅವಧಿಯಲ್ಲಿ ಈ ಸಂಪ್ರದಾಯಕ್ಕೆ ತಡೆಯಂಟಾಯಿತು. ದೇಶದ ಉತ್ತರ ಭಾಗದ ಹಾಗೂ ಮಧ್ಯ ಭಾಗದ ಕೆಲವು ರಾಜ್ಯಗಳಲ್ಲಿ ಎಂದೂ ಹೊಂದಾಣಿಕೆಯೇ ಸಾಧ್ಯವಾಗದ ಎಸ್‌ಎಸ್‌ಪಿ, ಜನಸಂಘ, ಸಿಪಿಎಂ, ಸಿಪಿಐ ಪಕ್ಷಗಳ ಮೈತ್ರಿಕೂಟವು ಅಧಿಕಾರದಲ್ಲಿ ಇತ್ತು. ಈ ಸರ್ಕಾರಗಳು ಅವಧಿಗೂ ಮುನ್ನವೇ ಉರುಳಿತು ಮತ್ತು ಅಲ್ಲೆಲ್ಲಾ ರಾಷ್ಟ್ರಪತಿ ಆಳ್ವಿಕೆ ಹೇರಿಕೆಯಾಯಿತು. ನಂತರ ಅವಧಿಗೂ ಮುನ್ನವೇ  ಚುನಾವಣೆಗಳು ಘೋಷಣೆಯಾದವು.

ಹಾಗಿದ್ದರೂ ಹಲವು ರಾಜ್ಯಗಳಲ್ಲಿ ಸರ್ಕಾರವು ಐದು ವರ್ಷಗಳ ಅಧಿಕಾರಾವಧಿ ಪೂರ್ಣಗೊಳಿಸಿತ್ತು. ಆದರೆ, 1971ರಲ್ಲಿ ಇಂದಿರಾ ಗಾಂಧಿ ಅವರು ಲೋಕಸಭೆಗೆ ಅವಧಿಗೂ ಮುನ್ನವೇ ಚುನಾವಣೆ ಘೋಷಿಸಿದರು. ಇಲ್ಲಿಂದ ಲೋಕಸಭೆ ಹಾಗೂ ವಿಧಾನಸಭೆಗೆ ಒಂದೇ ವೇಳೆಯಲ್ಲಿ ನಡೆಯುತ್ತಿದ್ದ ಚುನಾವಣೆಯ ಸಂಪ್ರದಾಯಕ್ಕೆ ಸಂಪೂರ್ಣ ತಡೆ ಬಿದ್ದಿತು.

ಈ ವರ್ಷದಲ್ಲಿ ಛತ್ತೀಸಗಢ, ಮಧ್ಯಪ್ರದೇಶ, ಮಿಜೋರಾಂ, ರಾಜಸ್ಥಾನ ಹಾಗೂ ತೆಲಂಗಾಣ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿವೆ. ಮುಂದಿನ ವರ್ಷ ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಹಾಗೂ ಸಿಕ್ಕಿಂ ವಿಧಾನಸಭೆಗಳಿಗೆ ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. 2024ರ ಅಕ್ಟೋಬರ್‌ ಹೊತ್ತಿಗೆ ಹರಿಯಾಣ ಹಾಗೂ ಮಹಾರಾಷ್ಟ್ರದಲ್ಲಿ ಹಾಗೂ ಡಿಸೆಂಬರ್‌ ಹೊತ್ತಿಗೆ ಜಾರ್ಖಂಡ್‌ನಲ್ಲಿ ಚುನಾವಣೆ ನಡೆಯಲಿದೆ. 2024ರ ಮೇ ತಿಂಗಳಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿದೆ. ವರ್ಷವಿಡೀ ಬೇರೆ ಬೇರೆ ರಾಜ್ಯಗಳಲ್ಲಿ ಚುನಾವಣೆ ನಡೆಸುವುದು ಸರಿ ಇದೆ ಎಂದು ಅನ್ನಿಸುತ್ತದೆಯೇ? ಒಂದೇ ಬಾರಿಗೆ ಚುನಾವಣೆ ನಡೆಸಲು ಸಂವಿಧಾನಕ್ಕೆ ಬಹುಮುಖ್ಯವಾದ ತಿದ್ದುಪಡಿಗಳನ್ನು ಮಾಡಬೇಕು, ಚುನಾವಣಾ ಕಾನೂನುಗಳಿಗೆ ಬದಲಾವಣೆಗಳನ್ನು ಮಾಡುವಂಥ ಸಂಕೀರ್ಣ ವಿಷಯಗಳು ಇದರಲ್ಲಿವೆ. ಇದೇ ಕಾರಣಕ್ಕೆ ಈ ಹಿಂದಿನ ಸರ್ಕಾರವು ಯಾವುದೇ ಪ್ರಯತ್ನ ಮಾಡಿಯೇ ಇಲ್ಲ.

ಕೆಲವು ಪ್ರಮುಖ ಪಕ್ಷಗಳು ಸಹಕಾರ ನೀಡಿದರೆ, ಲೋಕಸಭೆ ಹಾಗೂ ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸಬಹುದು. ಇದರ ಮೊದಲ ಹೆಜ್ಜೆಯಾಗಿ ‘ಒಂದು ದೇಶ, ಎರಡು ಚುನಾವಣೆ’ಯನ್ನು ನಡೆಸಬಹುದಾಗಿದೆ. ‘ಎರಡು ಚುನಾವಣೆ’ ಅಂದರೆ, ದೇಶದ ಎಲ್ಲ ರಾಜ್ಯಗಳನ್ನು ಎರಡು ಗುಂಪುಗಳಾಗಿ ವಿಂಗಡಿಸುವುದು. ಲೋಕಸಭೆ ಚುನಾವಣೆಯೊಂದಿಗೆ ಒಂದು ಗುಂಪಿನ ರಾಜ್ಯಗಳಲ್ಲಿ ಚುನಾವಣೆ ನಡೆಸುವುದು. ಇದರಿಂದಾಗಿ ರಾಜಕೀಯ ನಾಯಕರು ತಮ್ಮ ಸಮಯವನ್ನು ಆಡಳಿತದ ಕಡೆಗೆ ಹೆಚ್ಚು ನೀಡುವಂತಾಗುತ್ತದೆ. ಈ ಪ್ರಕ್ರಿಯೆಯಿಂದ ಯಾವುದೇ ರಾಜಕೀಯ ಪಕ್ಷಕ್ಕೆ ಅಥವಾ ಮೈತ್ರಿಕೂಟಕ್ಕೆ ಲಾಭವೂ ಇಲ್ಲ ನಷ್ಟವೂ ಇಲ್ಲ. ಎಲ್ಲ ಪಕ್ಷಗಳು ಹಾಗೂ ಮೈತ್ರಿಕೂಟಗಳಿಗೆ ಒಂದೇ ರೀತಿಯ ಅನುಕೂಲ ಹಾಗೂ ಅನನುಕೂಲಗಳು ಆಗುತ್ತವೆ. ಏನೇ ಆದರೂ, ಇದರಿಂದ ದೇಶಕ್ಕಂತೂ ಅನುಕೂಲವಿದೆ.

ದೇಶದಲ್ಲಿ ಒಂದುರೀತಿಯ ಜಡತ್ವ ಇದೆ ಹಾಗೂ ಕಲ್ಪನಾ ದಾರಿದ್ರ್ಯ ಇದೆ. ಇವು ದೇಶದಲ್ಲಿನ ಸಮಸ್ಯೆಗಳನ್ನು ಹೆಚ್ಚಿಸುತ್ತಿವೆ ಎನ್ನುವುದು ಪ್ರಧಾನಿ ಮೋದಿ ಅವರ ಅಭಿಪ್ರಾಯ. ಈ ಜಡತ್ವವು ಕೊನೆಗೊಳ್ಳಬೇಕು. ಜಡತ್ವವು ಕೊನೆಗಾಣಿಸಲು ‘ಒಂದು ದೇಶ, ಒಂದು ಚುನಾವಣೆ’ಯು ಉತ್ತಮವಾದ ಹಾಗೂ ಬಹುಮುಖ್ಯವಾದ ಹೆಜ್ಜೆ ಆಗಲಿದೆ.

_________________________________

ಲೇಖಕ: ರಾಜಕೀಯ ವಿಶ್ಲೇಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.