ವಿಧಾನಸಭಾ ಚುನಾವಣೆಯಲ್ಲಿನ ಹೀನಾಯ ಸೋಲಿನಿಂದ ಹತಾಶೆಯ ಸ್ಥಿತಿಗೆ ತಲುಪಿರುವ ಬಿಜೆಪಿ ರಾಜ್ಯ ನಾಯಕರು, ರಾಜ್ಯದ ಜನರು ಕೊಟ್ಟ ಏಟಿನ ಆಘಾತದಿಂದ ಇನ್ನೂ ಹೊರಬಂದಿಲ್ಲ. ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಬಿಜೆಪಿಯ ಕೇಂದ್ರ ನಾಯಕರು ಆ ಪಕ್ಷದ ರಾಜ್ಯ ಘಟಕದ ನಾಯಕರನ್ನು ದೀರ್ಘ ಕಾಲ ದೂರ ಇರಿಸಿದ್ದರು. ರಾಜ್ಯದ ಬಿಜೆಪಿ ನಾಯಕರ ವಿರುದ್ಧ ಆ ಪಕ್ಷದ ವರಿಷ್ಠರ ಕೋಪ ಇನ್ನೂ ತಣಿದಿಲ್ಲ. ಈಗ ಹಿಂದುತ್ವದ ದಾಳವನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ ಗದ್ದಲ ಸೃಷ್ಟಿಸಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಒಲವು ಗಳಿಸಲು ಬಿಜೆಪಿ ನಾಯಕರು ಕೆಟ್ಟ ತಂತ್ರವೊಂದನ್ನು ರೂಪಿಸಿದ್ದಾರೆ. ಅದರ ಭಾಗವಾಗಿಯೇ ‘ಕರಸೇವಕ’ರ ಬಂಧನದ ಹೆಸರಿನಲ್ಲಿ ರಾಜ್ಯದ ಉದ್ದಗಲಕ್ಕೆ ಸುಳ್ಳು ಹಬ್ಬಿಸುತ್ತಾ, ಅಶಾಂತಿ ಸೃಷ್ಟಿಗೆ ಪ್ರಯತ್ನ ಮಾಡುತ್ತಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಆರು ತಿಂಗಳು ಕಳೆದಿವೆ. ಈ ಅವಧಿಯಲ್ಲಿ ರಾಜ್ಯದ ಮಹಿಳೆಯರ, ರೈತರ ಪರ ಅಥವಾ ಕನ್ನಡಿಗರ ಹಿತಾಸಕ್ತಿಯ ಪರ ಒಮ್ಮೆಯೂ ಬಿಜೆಪಿ ಸೊಲ್ಲೆತ್ತಲಿಲ್ಲ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕರ ನೇಮಕವಾಗುತ್ತಿದ್ದಂತೆಯೇ ಮಣಿಕಂಠ ರಾಠೋಡ್ ಪ್ರಕರಣ ಮುಂದಿಟ್ಟುಕೊಂಡು ನನ್ನ ರಾಜೀನಾಮೆಗೆ ಆಗ್ರಹಿಸಿದ್ದರು. ಮಣಿಕಂಠ ವಿರುದ್ಧ ಅನ್ನಭಾಗ್ಯ ಅಕ್ಕಿ ಕಳ್ಳಸಾಗಣೆಯ 50ಕ್ಕೂ ಹೆಚ್ಚು ಪ್ರಕರಣಗಳಿವೆ. ಅಂಗನವಾಡಿ ಮಕ್ಕಳಿಗೆ ವಿತರಿಸಲು ಪೂರೈಸಿದ್ದ ಹಾಲಿನ ಪುಡಿ ಕಳ್ಳತನದ ಪ್ರಕರಣದಲ್ಲಿ ಶಿಕ್ಷೆಗೊಳಗಾದ ವ್ಯಕ್ತಿ ಆತ. ಬೆಳಗಾವಿಯಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆಯುತ್ತಿದ್ದಾಗ ಬಿಜೆಪಿ ಕಾರ್ಯಕರ್ತ ಪೃಥ್ವಿ ಸಿಂಗ್ ಎಂಬಾತ ತಾನೇ ಕೊಯ್ದುಕೊಂಡು ಹಲ್ಲೆಯ ಕತೆ ಕಟ್ಟಿದ್ದ. ಅದನ್ನೇ ಮುಂದಿಟ್ಟುಕೊಂಡು ಎರಡು ದಿನ ಬಿಜೆಪಿಯವರು ಕಲಾಪಕ್ಕೆ ಅಡ್ಡಿಪಡಿಸಿದ್ದರು. ಪೃಥ್ವಿ ಸಿಂಗ್ ವಿರುದ್ಧ ಗಾಂಜಾ ಬೆಳೆದಿರುವುದು, ಮಾರಕಾಸ್ತ್ರಗಳ ದಾಸ್ತಾನಿನ ಆರೋಪಗಳಿವೆ. ಲಾಂಗ್ ಪೆಂಡಿಂಗ್ ಕೇಸ್’ (ಎಲ್‌ಪಿಸಿ) ವಾರಂಟ್‌ಗಳ ತ್ವರಿತ ಇತ್ಯರ್ಥಕ್ಕೆ ಹೈಕೋರ್ಟ್ ನೀಡಿದ್ದ ನಿರ್ದೇಶನದ ಅನುಸಾರ 31 ವರ್ಷ ಹಳೆಯ ಪ್ರಕರಣದಲ್ಲಿ ಹುಬ್ಬಳ್ಳಿಯ ಶ್ರೀಕಾಂತ್ ಪೂಜಾರಿಯನ್ನು ಬಂಧಿಸಿದ್ದನ್ನು ಮುಂದಿಟ್ಟುಕೊಂಡು ‘ಕರಸೇವಕರ’ ಹೆಸರಿನಲ್ಲಿ ಹುಸಿ ಹೋರಾಟ ರೂಪಿಸಿ ರಾಜಕೀಯ ಲಾಭ ಪಡೆಯುವ ತಂತ್ರ ಹೂಡಿದೆ.
ಶ್ರೀಕಾಂತ್ ಪೂಜಾರಿ ಮೇಲೆ 16 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ದೊಂಬಿ, ಅಕ್ರಮ ಮದ್ಯ ಮಾರಾಟ ಹಾಗೂ ಮಟ್ಕಾ ದಂಧೆಯಲ್ಲಿ ಭಾಗಿಯಾಗಿದ್ದ ಆರೋಪಗಳಿದ್ದವು. 15 ಪ್ರಕರಣಗಳಲ್ಲಿ ಆತ ಖುಲಾಸೆಯಾಗಿದ್ದಾನೆ ಎಂಬ ವಾದವನ್ನು ಬಿಜೆಪಿ ಮುಂದಿಡುತ್ತಿದೆ. ಅದು ಸತ್ಯವೇ ಆಗಿದ್ದರೂ ಬಾಕಿ ಇರುವ ಒಂದು ಪ್ರಕರಣದಲ್ಲಿ ಶ್ರೀಕಾಂತ್ ಅರೋಪಿಯಲ್ಲವೆ? ದೀರ್ಘ ಕಾಲದಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕಾರಣಕ್ಕಾಗಿ ಆತನನ್ನು ಪೊಲೀಸರು ಬಂಧಿಸಿದ್ದರು. ಹುಬ್ಬಳ್ಳಿಯಲ್ಲೇ ಅಂತಹ 36 ಪ್ರಕರಣಗಳಲ್ಲಿ ಆರೋಪಿಗಳ ಬಂಧನವಾಗಿದೆ. ಈ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಯಾವುದೇ ಪಾತ್ರ ಇಲ್ಲ. ಹೈಕೋರ್ಟ್ ನಿರ್ದೇಶನದಂತೆ ನಡೆದ ಬಂಧನ ಕಾರ್ಯಾಚರಣೆಯನ್ನೂ ಬಿಜೆಪಿ ಈಗ ರಾಜಕೀಯಕ್ಕಾಗಿ ವಿರೋಧಿಸುತ್ತಿದೆ. ಸಂವಿಧಾನ ಮತ್ತು ಅದರಿಂದ ದತ್ತವಾದ ಕಾನೂನನ್ನು ಯಾವತ್ತೂ ಒಪ್ಪದೇ, ಕಾನೂನು ವಿರೋಧಿ ಚಟುವಟಿಕೆ ಮಾಡುವುದನ್ನೇ ರೂಢಿಸಿಕೊಂಡಿರುವ ಬಿಜೆಪಿ ನಾಯಕರು, ಶ್ರೀಕಾಂತ್ ಬಂಧನ ವಿರೋಧಿಸಿ ಬೀದಿಗಿಳಿಯುವ ಮೂಲಕ ರಾಜ್ಯದ ಜನರನ್ನೂ ನ್ಯಾಯಾಂಗದ ವಿರುದ್ಧ ಎತ್ತಿಕಟ್ಟುವ ಕೆಲಸಕ್ಕೆ ಕೈಹಾಕಿದ್ದಾರೆ. ಇದು ಆ ಪಕ್ಷದವರ ಸಂವಿಧಾನ ವಿರೋಧಿ ಮನಃಸ್ಥಿತಿಗೆ ಸಾಕ್ಷಿ.
ಶ್ರೀಕಾಂತ್ ಪೂಜಾರಿ ವಿರುದ್ಧ ನಮ್ಮ ಸರ್ಕಾರದ ಅವಧಿಯಲ್ಲಿ ಹೊಸ ಪ್ರಕರಣ ದಾಖಲಿಸಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲೂ ಆ ಪ್ರಕರಣ ಇತ್ತು. ಬಸವರಾಜ ಬೊಮ್ಮಾಯಿ, ಆರ್. ಅಶೋಕ ಅವರಿಗೆಲ್ಲ ಕರಸೇವಕರ ಮೇಲೆ ಇಷ್ಟೊಂದು ಪ್ರೀತಿ ಇರುವುದು ನಿಜವಾಗಿದ್ದರೆ ಅವರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವ ಪ್ರಯತ್ನವನ್ನು ಏಕೆ ಮಾಡಲಿಲ್ಲ? ಈಗ ರಾಜಕೀಯ ಲಾಭಕ್ಕಾಗಿ ಕರಸೇವಕರ ಹೆಸರನ್ನು ಬಳಕೆ ಮಾಡಲು ಹೊರಟಿರುವುದನ್ನು ಅರಿಯದಷ್ಟು ರಾಜ್ಯದ ಜನ ಮೂರ್ಖರು ಎಂದು ಅವರು ಭಾವಿಸಿರಬೇಕು. ಪರಶುರಾಮನ ಕಂಚಿನ ಪ್ರತಿಮೆ ನಿರ್ಮಾಣ ಕಾಮಗಾರಿಯಲ್ಲಿ ಕಾರ್ಕಳದ ಜನರಿಗೆ ಮೋಸ ಮಾಡಿರುವ ಶಾಸಕ ವಿ. ಸುನಿಲ್ ಕುಮಾರ್ ಕೂಡ ಈಗ ‘ನಾನೂ ಕರಸೇವಕ ನನ್ನನ್ನೂ ಬಂಧಿಸಿ’ ಎನ್ನುತ್ತಿದ್ದಾರೆ. ಪರಶುರಾಮನ ಹೆಸರಿನಲ್ಲಿ ಮೋಸ ಮಾಡಿದವರನ್ನೂ ರಾಮಭಕ್ತ ಎನ್ನಬಹುದೆ? ಸಂಸತ್ತಿನ ಮೇಲೆ ದಾಳಿ ಮಾಡಿದವರಿಗೆ ಪಾಸ್ ನೀಡಿದ್ದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಈಗ ಮೈಸೂರು ಚಾಮುಂಡೇಶ್ವರಿ ದೇವಿಯ ಕಡೆ ಕೈ ತೋರಿಸುತ್ತಿದ್ದಾರೆ. ಸಮಾಜದ ಶಾಂತಿ ಕದಡುವವರು, ಕಳ್ಳಕಾಕರಿಗೆಲ್ಲ ‘ರಾಮಭಕ್ತ’ರ ಪಟ್ಟವನ್ನು ಬಿಜೆಪಿಯವರು ಕಟ್ಟುತ್ತಾರೆಂದರೆ ಅವರ ಸಂಸ್ಕೃತಿ ಏನು ಎಂಬುದಕ್ಕೆ ಬೇರೆ ವ್ಯಾಖ್ಯಾನ ಬೇಕಿಲ್ಲ.
ಈ ದೇಶ ಯಾವುದೇ ಧರ್ಮ ಗ್ರಂಥದ ಆಧಾರದಲ್ಲಿ ನಡೆಯುತ್ತಿಲ್ಲ. ಭಗವದ್ಗೀತೆ, ಬೈಬಲ್, ಕುರ್‌ಆನ್ ಯಾವುದೂ ಭಾರತದ ಆಡಳಿತವನ್ನು ನಿರ್ಧರಿಸುತ್ತಿಲ್ಲ. ಡಾ.ಬಿ.ಆರ್. ಅಂಬೇಡ್ಕರ್ ನೀಡಿದ ಸಂವಿಧಾನದ ಅಡಿಯಲ್ಲಿ ದೇಶ ಮುನ್ನಡೆಯುತ್ತಿದೆ. ರಾಜ್ಯದಲ್ಲಿ ಸಂವಿಧಾನದಂತೆ ನಡೆಯುವ ಸರ್ಕಾರವಿದೆ. ಕಾನೂನು ಉಲ್ಲಂಘಿಸುವವರು ಯಾವ ಧರ್ಮಕ್ಕೆ ಸೇರಿದ್ದಾರೆ ಎಂಬುದನ್ನು ಆಧರಿಸಿ ತೀರ್ಮಾನ ಕೈಗೊಳ್ಳುವ ವ್ಯವಸ್ಥೆ ಇಲ್ಲ. ಯಾರೇ ಕಾನೂನು ಉಲ್ಲಂಘಿಸಿದರೂ ಬಂಧಿಸುತ್ತೇವೆ. ಅವರು ಕರಸೇವಕರೇ ಆಗಿರಲಿ, ಸ್ವಯಂಸೇವಕರೇ ಆಗಿರಲಿ, ನಾನೇ ಆಗಿರಲಿ. ಎಲ್ಲರಿಗೂ ಒಂದೇ ನ್ಯಾಯ.
ರಾಮಮಂದಿರ ನಿರ್ಮಾಣ ಆಯಿತು. ರಾಮರಾಜ್ಯವೂ ನಿರ್ಮಾಣ ಆಗಬೇಕಲ್ಲವೆ? ಉದ್ಯೋಗ ಸೃಷ್ಟಿ, ರೈತರು, ಕಾರ್ಮಿಕರು, ಮಹಿಳೆಯರ ಜೀವನಮಟ್ಟ ಸುಧಾರಣೆಯ ಬಗ್ಗೆ ಯಾವತ್ತಾದರೂ ಬಿಜೆಪಿ ನಾಯಕರು ಯೋಚಿಸಿದ್ದಾರೆಯೆ? 15ನೇ ಹಣಕಾಸು ಆಯೋಗದ ಅನುದಾನ ಹಾಗೂ ಸರಕು ಮತ್ತು ಸೇವಾ ತೆರಿಗೆಯ ಹಂಚಿಕೆಯಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯ, ವಿಪತ್ತು ಪರಿಹಾರ ನಿಧಿಯಡಿ ನೆರವು ನೀಡುವುದರಲ್ಲಿನ ವಿಳಂಬದ ಬಗ್ಗೆ ಏಕೆ ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ? ಧರ್ಮದ ಹೆಸರಿನಲ್ಲಿ ಜನರ ದಿಕ್ಕು ತಪ್ಪಿಸುವ ಬಿಜೆಪಿ ನಾಯಕರು ತಮ್ಮ ಮಕ್ಕಳನ್ನು ಧರ್ಮ ರಕ್ಷಣೆ, ಗೋರಕ್ಷಣೆ ಮತ್ತು ಗೋಶಾಲೆಗಳ ಕೆಲಸಕ್ಕೆ ಏಕೆ ನಿಯೋಜಿಸುವುದಿಲ್ಲ? ಇವರ ಮಕ್ಕಳೆಲ್ಲರೂ ಒಳ್ಳೆಯ ಶಿಕ್ಷಣ, ಉದ್ಯೋಗ ಪಡೆಯಬೇಕು. ವಿದೇಶದಲ್ಲೇ ಓದಬೇಕು. ನವೋದ್ಯಮಗಳನ್ನು ಸ್ಥಾಪಿಸಬೇಕು. ಕಾರು, ಬಂಗಲೆ ಹೊಂದಿರಬೇಕು. ಬಡವರ ಮಕ್ಕಳು ಬೀದಿಯಲ್ಲಿ ನಿಂತು ಬಡಿದಾಡಿ, ಪ್ರಾಣ ಬಿಡಬೇಕು ಎಂಬುದು ಬಿಜೆಪಿ ನಾಯಕರ ಧೋರಣೆ. ಅದರ ಭಾಗವಾಗಿಯೇ ಇಂತಹ ಘಟನೆಗಳನ್ನು ಮುಂದಿಟ್ಟುಕೊಂಡು ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಬಡ ಹಿಂದುಳಿದ, ದಲಿತ ಯುವಕರನ್ನು ಬಿಜೆಪಿ ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತದೆ ಎನ್ನುವುದಕ್ಕೆ ಪರೇಶ್ ಮೇಸ್ತ ಪ್ರಕರಣಕ್ಕಿಂತ ಬೇರೆ ಸಾಕ್ಷ್ಯ ಬೇಕೆ?
ರಾಮಾಯಣವನ್ನು ನಿಜವಾಗಿಯೂ ಇವರು ಓದಿದ್ದರೆ ಇಂತಹ ಹೀನ ರಾಜಕೀಯ ಮಾಡುತ್ತಿರಲಿಲ್ಲ. ‘ರಾವಣ ನನ್ನಿಂದ ಅಂತ್ಯವಾಗಲಿಲ್ಲ, ಅವನ ಅಹಂಕಾರವೇ ಅವನ ಅಂತ್ಯಕ್ಕೆ ಕಾರಣವಾಯಿತು’ ಎಂದು ಶ್ರೀರಾಮ ಕೊನೆಯಲ್ಲಿ ಹೇಳುತ್ತಾನೆ. ಅದೇ ರೀತಿಯ ಅಹಂಕಾರದಿಂದ ಬಿಜೆಪಿ ವರ್ತಿಸುತ್ತಿದೆ. ಧೋರಣೆ ಬದಲಾಗದಿದ್ದರೆ ಅಹಂಕಾರವೇ ಬಿಜೆಪಿಯ ಅಂತ್ಯಕ್ಕೆ ಕಾರಣವಾಗುತ್ತದೆ.
****
ಬಿಜೆಪಿ ಸರ್ಕಾರದ ಅವಧಿಯಲ್ಲೂ ಆ ಪ್ರಕರಣ ಇತ್ತು. ಬಸವರಾಜ ಬೊಮ್ಮಾಯಿ, ಆರ್. ಅಶೋಕ ಅವರಿಗೆಲ್ಲ ಕರಸೇವಕರ ಮೇಲೆ ಇಷ್ಟೊಂದು ಪ್ರೀತಿ ಇರುವುದು ನಿಜವಾಗಿದ್ದರೆ ಅವರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವ ಪ್ರಯತ್ನವನ್ನು ಏಕೆ ಮಾಡಲಿಲ್ಲ? ಈಗ ರಾಜಕೀಯ ಲಾಭಕ್ಕಾಗಿ ಕರಸೇವಕರ ಹೆಸರನ್ನು ಬಳಕೆ ಮಾಡಲು ಹೊರಟಿರುವುದನ್ನು ಅರಿಯದಷ್ಟು ರಾಜ್ಯದ ಜನ ಮೂರ್ಖರು ಎಂದು ಅವರು ಭಾವಿಸಿರಬೇಕು.
****
ಲೇಖಕ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ
ನಿರೂಪಣೆ: ವಿ.ಎಸ್. ಸುಬ್ರಹ್ಮಣ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.