ADVERTISEMENT

ಕರ್ನಾಟಕ – 50 | 25 ವರ್ಷಗಳ ಮುನ್ನೋಟ: ರಾಜ್ಯಕ್ಕೆ ಬೇಕಿದೆ ತನ್ನದೇ ಆದ ನೀತಿ

ಡಾ.ಪುರುಷೋತ್ತಮ ಬಿಳಿಮಲೆ
Published 10 ನವೆಂಬರ್ 2023, 23:30 IST
Last Updated 10 ನವೆಂಬರ್ 2023, 23:30 IST
<div class="paragraphs"><p>ಪುರುಷೋತ್ತಮ ಬಿಳಿಮಲೆ</p></div>

ಪುರುಷೋತ್ತಮ ಬಿಳಿಮಲೆ

   

ಇವತ್ತಿನ ಶಿಕ್ಷಣವು ಯಾವುದೇ ದೇಶದ ಗಡಿಗಳಿಗೆ ಸೀಮಿತವಾಗಿ ಉಳಿಯದೆ, ‘ಸೀಮಾತೀತ’ವಾಗಿದೆ. ಇಂಥ ಬೆಳವಣಿಗೆಗಳಿಗೆ ಕರ್ನಾಟಕ ಸರ್ಕಾರವು ತನ್ನನ್ನು ಬೌದ್ಧಿಕವಾಗಿ ಮತ್ತು ಭೌತಿಕವಾಗಿ ಸಜ್ಜುಗೊಳಿಸಿಕೊಳ್ಳಬೇಕಾದ್ದು ಬಹಳ ಅಗತ್ಯ. ಒಂದೋ ಈ ಬೆಳವಣಿಗೆಗಳನ್ನು ಅದು ವಿರೋಧಿಸಬೇಕು ಅಥವಾ ಹೊಸ ಬದಲಾವಣೆಗಳಿಗೆ ಅದು ತನ್ನನ್ನು ಪೂರ್ತಿ ತೆರೆದುಕೊಳ್ಳಬೇಕು, ಇಲ್ಲವೇ ಕೆಲವನ್ನು ಪರಿಷ್ಕರಿಸಿ ಒಪ್ಪಿಕೊಳ್ಳಬೇಕು.

****

ADVERTISEMENT

2020ರಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಹೊಸ ಶಿಕ್ಷಣ ನೀತಿಯು ಮುಂದಿನ 2040ರವರೆಗಣ ತನ್ನ ಶೈಕ್ಷಣಿಕ ಯೋಜನೆಗಳನ್ನು ಪ್ರಕಟಿಸಿದೆ. ಆದರೆ ಕರ್ನಾಟಕ ಸರ್ಕಾರವನ್ನು ಹೊರತುಪಡಿಸಿದರೆ, ಬೇರಾವ ರಾಜ್ಯವೂ ಅದನ್ನು ಇನ್ನೂ ಅನುಷ್ಠಾನಕ್ಕೆ ತಂದಿಲ್ಲ. ಈ ನಡುವೆ ತಮಿಳುನಾಡು ಸರ್ಕಾರವು ಹೊಸ ಶಿಕ್ಷಣ ನೀತಿಯನ್ನು ಇಡಿಯಾಗಿ ತಿರಸ್ಕರಿಸಿ, ತನ್ನದೇ ಆದ ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೆ ತರುವುದಾಗಿ ಘೋಷಿಸಿದೆ. ಕರ್ನಾಟಕವೂ ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಈ ಬೆಳವಣಿಗೆಗಳು ಸದ್ಯಕ್ಕೆ ಪ್ರಾಥಮಿಕ, ಉನ್ನತ ಶಿಕ್ಷಣ, ವೃತ್ತಿಪರ ಶಿಕ್ಷಣ, ಶಿಕ್ಷಣ ಮಾಧ್ಯಮ ಇತ್ಯಾದಿ ವಿಷಯಗಳಲ್ಲಿ ಹಲವು ಗೊಂದಲ ಹುಟ್ಟುಹಾಕಿದೆ. ಈ ಗೊಂದಲಗಳಿಗೆ ಅಂತರರಾಷ್ಟ್ರೀಯ, ರಾಷ್ಟ್ರೀಯ ಮತ್ತು ಪ್ರಾದೇಶಿಕ ಆಯಾಮಗಳಿವೆ.

ಅಂತರರಾಷ್ಟ್ರೀಯ ಆಯಾಮಗಳು: 1990ರ ದಶಕದಲ್ಲಿ ಆರಂಭಗೊಂಡ ಜಾಗತೀಕರಣ ಪ್ರಕ್ರಿಯೆಯು ಜಗತ್ತಿನ ಭಾಷೆಗಳ ವ್ಯಾಕರಣವನ್ನು ಏಕರೂಪಿಯಾಗಿ ಮಾರ್ಪಡಿಸಿದೆ. ಉನ್ನತ ಶಿಕ್ಷಣದ ಅಂತರರಾಷ್ಟ್ರೀಕರಣವು ಜೋರಾಗಿ ನಡೆಯುತ್ತಿದೆ. ಈ ಬೆಳವಣಿಗೆಗಳು ಶಿಕ್ಷಣದ ಪರಿಕಲ್ಪನೆಯನ್ನೇ ಆಮೂಲಾಗ್ರವಾಗಿ ಬದಲಾಯಿಸಿವೆ.

//2007ರ ಭೂಷಣ್‌ ಪಟವರ್ಧನ್‌ ಸಮಿತಿಯ ಶಿಫಾರಸುಗಳು ಹಾಗೂ ಹೊಸ ಶಿಕ್ಷಣ ನೀತಿಯ ಧೋರಣೆಗಳಿಗೆ ಅನುಗುಣವಾಗಿ ಚಾಲ್ತಿಗೆ ಬಂದಿರುವ ಖಾಸಗೀಕರಣ, ವ್ಯಾಪಾರೀಕರಣ ಹಾಗೂ ಮಾರುಕಟ್ಟೆಯ ರೀತಿ-ನೀತಿಗಳು ಇವತ್ತಿನ ಶಿಕ್ಷಣವನ್ನು ನಿಯಂತ್ರಿಸುತ್ತಿವೆ//. ಶಿಕ್ಷಣ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಹಾಜರಾತಿ, ದೇಶೀಯ ಮತ್ತು ವಿದೇಶೀ  ವಿದ್ಯಾಲಯಗಳು ಒಟ್ಟಿಗೆ ಕೆಲಸ ಮಾಡುವ ಅವಳಿ ಕಾರ್ಯಕ್ರಮಗಳು ಹಾಗೂ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳು ಈಗಾಗಲೇ ಅನುಷ್ಠಾನಕ್ಕೆ ಬಂದಿವೆ. ವಿದೇಶಿ ವಿಶ್ವವಿದ್ಯಾಲಯಗಳು ಭಾರತದಲ್ಲಿ ತಮ್ಮ ಅಧ್ಯಯನ ಮತ್ತು ಪ್ರವೇಶ ಕೇಂದ್ರಗಳನ್ನು ತೆರೆದಿವೆ. ‘ವಿದೇಶದಲ್ಲಿ ಒಂದು ಸೆಮಿಸ್ಟರ್‌ ಅಭ್ಯಾಸ’ ( SAP – Study Abroad Program) ಎಂಬ ಕಾರ್ಯಕ್ರಮದ ಅಡಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ದೇಶ ವಿದೇಶಗಳ ನಡುವೆ ಓಡಾಡುತ್ತಿದ್ದಾರೆ. ಇವುಗಳಿಗೆ ಪೂರಕವಾಗಿ, ಮಾರುಕಟ್ಟೆ ಕೇಂದ್ರಿತ ಪಠ್ಯಕ್ರಮಗಳ ಸಿದ್ಧತೆ, ಅಧ್ಯಯನದ ಅವಧಿ, ಕಂಪ್ಯೂಟರ್‌ ಆಧಾರಿತ ಮೌಲ್ಯಮಾಪನ ವಿಧಾನ ಮತ್ತು ಗುಣಾಂಕಗಳ ಹಂಚುವಿಕೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ವೀಕಾರಗೊಂಡು ಚಾಲ್ತಿಗೆ ಬರುತ್ತಿವೆ.

ಮಕ್ಕಳಿಗೆ ಕೆಲವು ಕೌಶಲಗಳನ್ನು ಕಲಿಸಿ, ಅವರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುವುದು ಇಲ್ಲವೇ ವಿದೇಶಗಳಿಗೆ ಕಳಿಸಿಕೊಡುವುದು ಮುಖ್ಯ ಎಂದು ಬಹುತೇಕ ಎಲ್ಲರನ್ನೂ ನಂಬಿಸಲಾಗಿದೆ. ಸ್ಪರ್ಧಾತ್ಮಕ ಆರ್ಥಿಕತೆಯ ಹಿಂದೆ ಬಿದ್ದಿರುವ ಜನರ ಆದ್ಯತೆಗಳು ಇವತ್ತು ಆಮೂಲಾಗ್ರವಾಗಿ ಬದಲಾಗಿವೆ. ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಅಧ್ಯಯನಗಳನ್ನು ‘ಅನುತ್ಪಾದಕ’ ಎಂದು ಘೋಷಿಸಲಾಗಿದೆ.

ಇವೆಲ್ಲದರ ಪರಿಣಾಮವಾಗಿ ಇವತ್ತಿನ ಶಿಕ್ಷಣವು ಯಾವುದೇ ದೇಶದ ಗಡಿಗಳಿಗೆ ಸೀಮಿತವಾಗಿ ಉಳಿಯದೆ, ‘ಸೀಮಾತೀತ’ವಾಗಿದೆ. ಇಂಥ ಬೆಳವಣಿಗೆಗಳಿಗೆ ಕರ್ನಾಟಕ ಸರ್ಕಾರವು ತನ್ನನ್ನು ಬೌದ್ಧಿಕವಾಗಿ ಮತ್ತು ಭೌತಿಕವಾಗಿ ಸಜ್ಜುಗೊಳಿಸಿಕೊಳ್ಳಬೇಕಾದ್ದು ಬಹಳ ಅಗತ್ಯ. ಒಂದೋ ಈ ಬೆಳವಣಿಗೆಗಳನ್ನು ಅದು ವಿರೋಧಿಸಬೇಕು ಅಥವಾ ಹೊಸ ಬದಲಾವಣೆಗಳಿಗೆ ಅದು ತನ್ನನ್ನು ಪೂರ್ತಿ ತೆರೆದುಕೊಳ್ಳಬೇಕು, ಇಲ್ಲವೇ ಕೆಲವನ್ನು ಪರಿಷ್ಕರಿಸಿ ಒಪ್ಪಿಕೊಳ್ಳಬೇಕು. ಬೋಧನಾಂಗವನ್ನು ಸಶಕ್ತಗೊಳಿಸಬೇಕು. ಕ್ಯಾಂಪಸ್‌ಗಳು ಅತ್ಯಾಧುನಿಕವಾಗಬೇಕು. ಆದರೆ ಏನೂ ಮಾಡದೆ ‘ದುಡ್ಡಿಲ್ಲ’ ಎಂದು ಕುಳಿತರೆ ಮುಂದಿನ 25 ವರ್ಷಗಳಲ್ಲಿ ಕನ್ನಡಿಗರು ಅನಾಥರಾಗುವುದಂತೂ ಖಂಡಿತಾ. ಶಿಕ್ಷಣವು ಸರ್ಕಾರದ ಆದ್ಯತೆಗಳಲ್ಲಿ ಒಂದಾಗಬೇಕಾದ್ದು ಅತ್ಯಗತ್ಯ.

ರಾಷ್ಟ್ರೀಯ ಆಯಾಮಗಳು: ಶಿಕ್ಷಣದ ಜಾಗತೀಕರಣಕ್ಕೆ ಸಂಬಂಧಿಸಿದಂತೆ ಅನೇಕ ವಿಷಯಗಳಿದ್ದರೂ ಕರ್ನಾಟಕಕ್ಕೆ ಹೆಚ್ಚು ಪ್ರಸ್ತುತವಾಗಿರುವ ಭಾಷಾ ಮಾಧ್ಯಮದ ವಿಷಯನ್ನು ಇಲ್ಲಿ ಪರಿಶೀಲಿಸಬಹುದು. ಹೊಸ ಶಿಕ್ಷಣ ನೀತಿಯು ಈ ಸಮಸ್ಯೆಯನ್ನು ಗಮನಿಸಿದೆ. ಅದರ ಶಿಫಾರಸು 4.11ರಲ್ಲಿ ಸಾಧ್ಯವಾದ ಮಟ್ಟಿಗೆ ಕಡೇ ಪಕ್ಷ ಐದನೆಯ ತರಗತಿವರೆಗೆ ಅಥವಾ ಅದಕ್ಕಿಂತ ಮುಂದೆ ಎಂಟನೆಯ ತರಗತಿವರೆಗೆ ಅಥವಾ ಅದಕ್ಕಿಂತಲೂ ಮುಂದೆ ಶಿಕ್ಷಣದ ಮಾಧ್ಯಮ ಮನೆ ಭಾಷೆ/ಪ್ರಾದೇಶಿಕ ಭಾಷೆ/ಮಾತೃ ಭಾಷೆ/ ಸ್ಥಳೀಯ ಭಾಷೆ/ ಆಗಿರಬೇಕಾಗುತ್ತದೆ ಎಂಬ ಮಾತನ್ನು ಸ್ಪಷ್ಟವಾಗಿ ಹೇಳಲಾಗಿದೆ. ಆದರೆ ಇದನ್ನು ಸಾಧ್ಯ ಮಾಡುವುದು ಹೇಗೆ?

ಕರ್ನಾಟಕ ಸರ್ಕಾರವು ಕನ್ನಡವನ್ನು ಪ್ರಾಥಮಿಕ ಹಂತದಲ್ಲಿ ಕಡ್ಡಾಯ ಮಾಡಲು 1984ರಲ್ಲಿಯೇ ಆದೇಶ ಹೊರಡಿಸಿದೆ. ಆದರೆ, ಸುಪ್ರೀಂ ಕೋರ್ಟಿನ ಐವರು ನ್ಯಾಯಾಧೀಶರ ಪೀಠವು ಸಂವಿಧಾನದ ವಿಧಿ 19(1)(ಎ), 19(1)(ಜಿ), 21(ಎ), 26, 29, 30 ಮತ್ತು 250ಎಗಳನ್ನು ಆಧರಿಸಿ ಕರ್ನಾಟಕ ಸರ್ಕಾರದ ಆದೇಶವನ್ನು 2015ರಲ್ಲಿಯೇ ರದ್ದುಗೊಳಿಸಿದೆ. ಈಗ ಈ ಕುರಿತು ಸಂವಿಧಾನದಲ್ಲಿಯೇ ಸೂಕ್ತ ತಿದ್ದುಪಡಿ ತಂದರೆ ಮಾತ್ರ ಕನ್ನಡ ಮಾಧ್ಯಮವನ್ನು ಉಳಿಸಲು ಸಾಧ್ಯ. ಈ ವಿಷಯದಲ್ಲಿ ಕರ್ನಾಟಕ ಮುಂದಾಳತ್ವ ವಹಿಸಿದರೆ ದೇಶದ ಇತರ ರಾಜ್ಯಗಳ ಬೆಂಬಲ ಸಿಗುತ್ತದೆ.

ಹಿಂದಿಯ ಸಮಸ್ಯೆ: ಸಂವಿಧಾನ ನಿರ್ದೇಶಿಸಿದ ಪ್ರಕಾರವೇ ಹಿಂದಿಯು ಗೃಹ ಇಲಾಖೆಯ ಅಡಿಯಲ್ಲಿ ಬರುತ್ತದೆ. ಗೃಹಮಂತ್ರಿಗಳ ನೇತೃತ್ವದ ‘ಹಿಂದಿ ಅಭಿವೃದ್ಧಿ ಸಮಿತಿ’ಯು ಮಾಡಿದ ಶಿಫಾರಸುಗಳು ಪಾರ್ಲಿಮೆಂಟಿಗೂ ಹೋಗಬೇಕಾಗಿಲ್ಲ. ರಾಷ್ಟ್ರಪತಿಗಳ ಅಂಕಿತ ಬಿದ್ದರೆ ಅದು ಕಾನೂನಾಗುತ್ತದೆ. ಪರಿಣಾಮವಾಗಿ ಹಿಂದಿಯು ಕಳೆದ 40 ವರ್ಷದಲ್ಲಿ 66% ಬೆಳವಣಿಗೆ ತೋರಿಸಿದೆ. ಉಳಿದೆಲ್ಲಾ ಭಾಷೆಗಳು ಮಾನವ ಸಂಪನ್ಮೂಲ ಇಲಾಖೆಯ ಅಡಿಯಲ್ಲಿ ಬರುತ್ತಿದ್ದು ಶೇಕಡಾ 8–9ರ ಬೆಳವಣಿಗೆ ತೋರಿಸುತ್ತಿವೆ. ಕನ್ನಡ ಅತಿ ಕನಿಷ್ಠ ಎಂದರೆ ಶೇಕಡಾ 3.62 ಬೆಳವಣಿಗೆ ತೋರಿಸುತ್ತಿದೆ. ಹಲವು ಭಾಷೆಗಳು ಇಳಿಮುಖವಾಗಿವೆ. ಇದನ್ನು ಕರ್ನಾಟಕವು ಗಂಭೀರವಾಗಿ ಗಮನಿಸಿ, ಎಲ್ಲ ಭಾಷೆಗಳೂ ಒಂದೇ ಸಚಿವಾಲಯದ ಅಡಿಯಲ್ಲಿ ಬರುವಂತೆ ಮಾಡಲು ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದ ಚಳವಳಿ ರೂಪಿಸಬೇಕು.

ತ್ರಿಭಾಷಾ ಸೂತ್ರದ ಹೊರೆ: ಹೊಸ ಶಿಕ್ಷಣ ನೀತಿಯು ತ್ರಿಭಾಷಾ ನೀತಿಯನ್ನು ಅನುಸರಿಸಲು ಕರೆನೀಡಿದೆ. ಕರ್ನಾಟಕವು ಅದನ್ನು 1968ರಿಂದಲೂ ಅನುಸರಿಸಿಕೊಂಡು ಬಂದಿದೆ. ಆದರೆ ತಮಿಳುನಾಡು ದ್ವಿಭಾಷಾ ನೀತಿಗೆ ಅಂಟಿಕೊಂಡಿದೆ. ಇದರಿಂದ ಕರ್ನಾಟಕ ಮತ್ತು ತಮಿಳುನಾಡುಗಳಿಗಾದ ಲಾಭ ನಷ್ಟಗಳೇನು ಎಂಬ ಕುರಿತು ಚರ್ಚೆ ನಡೆಯಬೇಕು. ತ್ರಿಭಾಷಾ ಸೂತ್ರದ ಅಂಗವಾಗಿ ಉತ್ತರ ಭಾರತೀಯರು ದಕ್ಷಿಣ ಭಾರತದ ಒಂದು ಭಾಷೆಯನ್ನು ಕಲಿಯಬೇಕು. ಆದರೆ ಅವರು ಕಲಿತೇ ಇಲ್ಲ. ಹೀಗೆ ಯಾರಿಗೂ ಬೇಡವಾದ ತ್ರಿಭಾಷಾ ನೀತಿ ಕರ್ನಾಟಕಕ್ಕೆ ಏಕೆ ಬೇಕು? ಎಂಬುದರ ಕುರಿತು ಕರ್ನಾಟಕ ಸರ್ಕಾರವು ಮುಂದಿನ ದಿನಗಳಲ್ಲಿ ಗಂಭೀರವಾಗಿ ಯೋಚಿಸಬೇಕು.

ಪ್ರಾದೇಶಿಕ ಸಮಸ್ಯೆಗಳು: ಕರ್ನಾಟಕದಲ್ಲಿ ಕನ್ನಡದ ಜೊತೆಗೆ ಇತರ ಸುಮಾರು 72 ಭಾಷೆಗಳಿವೆ. ಭಾಷಾವಾರು ಪ್ರಾಂತ್ಯಗಳ ರಚನೆಯಾದಾಗ ಪ್ರಭಾವೀ ಪ್ರಾದೇಶಿಕ ಭಾಷೆಗಳಿಗೇನೋ ಮಹತ್ವ ಬಂದಿತು. ಆದರೆ ಈ ಹಂತದಲ್ಲಿ ಪ್ರಾದೇಶಿಕ ಭಾಷೆಗಳ ಆಶ್ರಯದಲ್ಲಿರುವ, ಆದರೆ ಯಾವುದೇ ರಾಜ್ಯದ ಅಧಿಕೃತ ಭಾಷೆಗಳಲ್ಲದ ಸಣ್ಣ ಭಾಷೆಗಳು ತೀವ್ರ ಉಪೇಕ್ಷೆಗೆ ಒಳಗಾದವು.

ಸಣ್ಣ ಭಾಷೆಗಳನ್ನು ಅನೇಕ ರಾಜ್ಯ ಸರ್ಕಾರಗಳು ತಮ್ಮ ರಾಜ್ಯದ ಅಧಿಕೃತ ಭಾಷೆಗಳೆಂದು ಘೋಷಿಸಿವೆ. ಆಂಧ್ರ ಪ್ರದೇಶವು ತೆಲುಗುವಿನ ಜೊತೆಗೆ ಉರ್ದುವನ್ನು, ಬಿಹಾರವು ಬಿಹಾರಿ ಭಾಷೆಯ ಜೊತೆಗೆ ಬಾಂಗ್ಲಾವನ್ನು, ಪಶ್ಚಿಮ ಬಂಗಾಳವು ಬಾಂಗ್ಲಾ ಜೊತೆಗೆ ಉರ್ದು, ಪಂಜಾಬಿ, ನೇಪಾಲಿ, ಒರಿಯಾ ಮತ್ತು ಹಿಂದಿಯನ್ನು, ದೆಹಲಿ ಸರ್ಕಾರವು ಹಿಂದಿಯ ಜೊತೆಗೆ ಪಂಜಾಬಿ ಮತ್ತು ಉರ್ದುವನ್ನು ಅಧಿಕೃತ ಭಾಷೆಗಳೆಂದು ಘೋಷಿಸಿವೆ. ಆದರೆ ಕರ್ನಾಟಕವು ಇತರ ಯಾವುದೇ ಭಾಷೆಗಳಿಗೆ ಅಧಿಕೃತ ಮನ್ನಣೆ ನೀಡಿಲ್ಲ.

ಈ ತಿಳಿವಳಿಕೆಗಳ ಚೌಕಟ್ಟಿನಲ್ಲಿ ಕರ್ನಾಟಕ ಸರ್ಕಾರವು ಮುಂದಿನ ದಿನಗಳಲ್ಲಿ ತನ್ನದೇ ಆದ ಶೈಕ್ಷಣಿಕ ನೀತಿಯೊಂದನ್ನು ರೂಪಿಸುವ ಅಗತ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.