ADVERTISEMENT

ಚರ್ಚೆ | ಪ್ರಭಾವಿ ಪ್ರಕಾಶಕರು: ಸರ್ಕಾರದ ಮೌನವೇಕೆ?

ಗ್ರಂಥಾಲಯ ಕ್ಷೇತ್ರವನ್ನು ಅನುತ್ಪಾದಕ ಎಂದು ಪರಿಗಣಿಸದೆ, ಪುಸ್ತಕ ಸಂಸ್ಕೃತಿಯನ್ನು ಬಿತ್ತಿ ಬೆಳೆಯುತ್ತಿರುವ ಕ್ಷೇತ್ರವೆಂದು ಪರಿಗಣಿಸಬೇಕಾದ ತುರ್ತು ಅಗತ್ಯ ಈಗ ಎದುರಾಗಿದೆ

ರಾಜಕುಮಾರ ಕುಲಕರ್ಣಿ
Published 21 ಅಕ್ಟೋಬರ್ 2024, 1:59 IST
Last Updated 21 ಅಕ್ಟೋಬರ್ 2024, 1:59 IST
   

ಗ್ರಂಥಾಲಯ ಇಲಾಖೆಯಿಂದ 2020ನೇ ಸಾಲಿನಲ್ಲಿ ಆಯ್ಕೆಗೊಂಡು ಪೂರೈಸಿರುವ ಪುಸ್ತಕಗಳ ಹಣ ಪೂರ್ಣಪ್ರಮಾಣದಲ್ಲಿ ಪಾವತಿ ಆಗಿಲ್ಲ ಎಂದು ಕೆಲವು ಪ್ರಕಾಶಕರು ಪತ್ರಿಕೆಯಲ್ಲಿ ಇತ್ತೀಚೆಗೆ ಅಳಲು ತೋಡಿಕೊಂಡಿದ್ದಾರೆ. ಜೊತೆಗೆ ಕೆಲವು ಪಟ್ಟಭದ್ರ ಪ್ರಕಾಶಕರು ಇಲಾಖೆಯ ಪುಸ್ತಕ ಖರೀದಿ ಆದೇಶಪತ್ರವು ಎಲ್ಲ ಪ್ರಕಾಶಕರಿಗೆ ತಲುಪುವ ಮೊದಲೇ ಪುಸ್ತಕಗಳನ್ನು ಪೂರೈಸಿ ಹಣ ಪಡೆಯುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಪ್ರಕಾಶಕರ ಇಂತಹ ಆರೋಪದ ಅನ್ವಯ, ಗ್ರಂಥಾಲಯ ಇಲಾಖೆಗೆ ಪುಸ್ತಕಗಳನ್ನು ಪೂರೈಸುತ್ತಿರುವ ಪ್ರಕಾಶಕರಲ್ಲಿ ದುರ್ಬಲರು ಮತ್ತು ಸಬಲರು ಎಂದು ಎರಡು ಗುಂಪುಗಳಿರುವ ಸತ್ಯ ಬಹಿರಂಗಗೊಂಡಿದೆ.

2020ನೇ ಸಾಲಿನ ಹಣ ಪೂರ್ಣಪ್ರಮಾಣದಲ್ಲಿ ತಮಗೆ ಪಾವತಿಯಾಗದೆ 2021ನೇ ಸಾಲಿನ ಪುಸ್ತಕಗಳ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು ವ್ಯಾವಹಾರಿಕ ನೈತಿಕತೆ ಅಲ್ಲ ಎನ್ನುವ ಪ್ರಕಾಶಕರ ಮಾತಿನಲ್ಲಿ ಸತ್ಯವಿದೆ. ಹೀಗೆ ಪೂರ್ಣಪ್ರಮಾಣದಲ್ಲಿ ಹಣ ಪಾವತಿಯಾಗದೇ ಇರುವುದು ಎಲ್ಲ ಪ್ರಕಾಶಕರಿಗಲ್ಲ, ಕೆಲವು ಪ್ರಕಾಶಕರಿಗೆ ಮಾತ್ರ ಎನ್ನುವ ಸಂಗತಿ ಬೆಳಕಿಗೆ ಬಂದಿದೆ. ಇಂತಹ ತಾರತಮ್ಯದ ವಿರುದ್ಧ ಧ್ವನಿ ಎತ್ತಿರುವ ಪ್ರಕಾಶಕರ ನಡೆ ಅಭಿನಂದನಾರ್ಹ. ಪುಸ್ತಕಗಳನ್ನು ಪೂರೈಸಿರುವ ಎಲ್ಲ ಪ್ರಕಾಶಕರಿಗೆ ಹಣವನ್ನು ಪಾವತಿಸಬೇಕಾದದ್ದು ಇಲಾಖೆಯ ಜವಾಬ್ದಾರಿ. ಕೆಲವು ಪ್ರಭಾವಿ ಪ್ರಕಾಶಕರಿಗೆ ಆದ್ಯತೆ ನೀಡಿ, ಉಳಿದ ಪ್ರಕಾಶಕರ ವಿಷಯದಲ್ಲಿ ತಾರತಮ್ಯ ಧೋರಣೆ ತಳೆಯುವುದು ಸರಿಯಲ್ಲ.

ಕೆಲವರನ್ನು ಹೊರತುಪಡಿಸಿ ಹೆಚ್ಚಿನ ಪ್ರಕಾಶಕರು ಪ್ರತಿವರ್ಷ ಸೀಮಿತ ಸಂಖ್ಯೆಯಲ್ಲಿ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. ಇಲಾಖೆಯ ವಿರುದ್ಧ ಧ್ವನಿ ಎತ್ತಿದವರಲ್ಲಿ ಬಹುತೇಕರು ಸೀಮಿತ ಸಂಖ್ಯೆಯಲ್ಲಿ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಪ್ರಕಾಶಕರು ಎನ್ನುವುದು ಗಮನಿಸಬೇಕಾದ ಸಂಗತಿ. ಸರ್ಕಾರ ತಮಗೆ ಪಾವತಿಸಬೇಕಾದ ಹಣವನ್ನು ಮೊದಲು ಪಾವತಿಸಿ ನಂತರದ ವರ್ಷದ ಪುಸ್ತಕಗಳ ಆಯ್ಕೆಯ ಪ್ರಕ್ರಿಯೆಯನ್ನು ಆರಂಭಿಸಲಿ ಎನ್ನುವುದು ಅವರ ಬೇಡಿಕೆ. ಇಂತಹ ಸನ್ನಿವೇಶದಲ್ಲಿ ಪ್ರತಿವರ್ಷ ನೂರಾರು ಶೀರ್ಷಿಕೆಗಳ ಸಾವಿರಾರು ಪುಸ್ತಕಗಳನ್ನು ಪ್ರಕಟಿಸುತ್ತಿರುವ ಪ್ರಕಾಶಕರೇಕೆ ಇಲಾಖೆಯ ವಿರುದ್ಧ ಧ್ವನಿ ಎತ್ತುತ್ತಿಲ್ಲ ಎನ್ನುವ ಪ್ರಶ್ನೆ ಸಹಜವಾಗಿಯೇ ಎದುರಾಗುತ್ತದೆ. ಪ್ರಕಾಶಕರ ಈ ಮೌನ ಹಲವು ಸಂದೇಹಗಳಿಗೆ ಆಸ್ಪದ ಮಾಡಿಕೊಡುತ್ತದೆ.

ADVERTISEMENT

ಇಲಾಖೆಯ ತಾರತಮ್ಯ ಧೋರಣೆ ವಿರುದ್ಧ ಧ್ವನಿ ಎತ್ತದೇ ಇರುವ ಎಲ್ಲ ಪ್ರಕಾಶಕರನ್ನು ಅನುಮಾನದಿಂದ ನೋಡುವುದು ಅಥವಾ ಅವರ ವಿರುದ್ಧ ಆರೋಪ ಹೊರಿಸುವುದು ತಪ್ಪು. ಗುಣಮಟ್ಟದ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ತಮ್ಮದೇ ಓದುಗರ ಬಳಗವನ್ನು ಸೃಷ್ಟಿಸಿಕೊಂಡಿರುವ ಕೆಲವು ಪ್ರಕಾಶಕರು ಗ್ರಂಥಾಲಯ ಇಲಾಖೆಯನ್ನು ನೆಚ್ಚಿಕೊಂಡಿರುವುದು ಕಡಿಮೆ. ಗುಣಾತ್ಮಕ ಪುಸ್ತಕಗಳನ್ನು ಖರೀದಿಸುವಲ್ಲಿ ಓದುಗರು ತೋರಿಸುತ್ತಿರುವ ಆಸಕ್ತಿಯೇ ಕೆಲವು ಪ್ರಕಾಶಕರಿಗೆ ನಿಯಮಿತವಾಗಿ ಪುಸ್ತಕಗಳನ್ನು ಪ್ರಕಟಿಸಲು ಪ್ರೇರಣೆಯಾಗಿದೆ. ಹಾಗೆಂದು ಇಲಾಖೆಯ ವಿರುದ್ಧ ಧ್ವನಿ ಎತ್ತಿರುವ ಪ್ರಕಾಶಕರು ಗುಣಾತ್ಮಕ ಪುಸ್ತಕಗಳನ್ನು ಪ್ರಕಟಿಸುತ್ತಿಲ್ಲ ಎಂದರ್ಥವಲ್ಲ. ಹೋರಾಟದ ಕಹಳೆ ಊದಿರುವ ಪ್ರಕಾಶಕರಲ್ಲಿ ಹೆಚ್ಚಿನವರು ಪ್ರತಿವರ್ಷ ಗುಣಮಟ್ಟದ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. ಆದರೆ ತಮ್ಮ ಸೀಮಿತ ಸಂಖ್ಯೆಯ ಪ್ರಕಟಣೆ ಹಾಗೂ ಸೀಮಿತ ಓದುಗ ಬಳಗವನ್ನು ಹೊಂದಿರುವವರಿಗೆ ಗ್ರಂಥಾಲಯ ಇಲಾಖೆಯ ನೆರವು ಬೇಕಾಗಬಹುದು. ಅದರ ಮೇಲೆ ಅವಲಂಬನೆ ಅನಿವಾರ್ಯ ಕೂಡ ಆಗಿರುತ್ತದೆ.

ಗ್ರಂಥಾಲಯ ಇಲಾಖೆಗೆ ಪುಸ್ತಕಗಳನ್ನು ಪೂರೈಸಲೆಂದೇ ಕೆಲವು ಪ್ರಕಾಶನ ಸಂಸ್ಥೆಗಳು ಹುಟ್ಟಿಕೊಂಡಿವೆ. ಇನ್ನು ಕೆಲವು ಪ್ರಕಾಶಕರು ಅಸ್ತಿತ್ವದಲ್ಲಿಯೇ ಇಲ್ಲದ ಹತ್ತಾರು ಪ್ರಕಾಶನ ಸಂಸ್ಥೆಗಳ ಹೆಸರಿನಿಂದ ಪುಸ್ತಕಗಳನ್ನು ಪೂರೈಸಿ ಆರ್ಥಿಕವಾಗಿ ಬಲಾಢ್ಯರಾಗುತ್ತಿದ್ದಾರೆ. ಇಂತಹ ಪ್ರಕಾಶಕರೇ ಇಲಾಖೆಯನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಂಡು ನಿಯಂತ್ರಿಸುತ್ತಿದ್ದಾರೆ. ಇಲಾಖೆಯ ಮೇಲಧಿಕಾರಿಗಳ ಜೊತೆಗೆ ಸ್ನೇಹ ಬೆಳೆಸಿ, ಪುಸ್ತಕ ಪೂರೈಕೆಗೆ ಸಂಬಂಧಿಸಿದ ಮಾಹಿತಿಯನ್ನು ಅಧಿಕೃತ ಆದೇಶ ಹೊರಬೀಳುವ ಮೊದಲೇ ಕಲೆಹಾಕುತ್ತಾರೆ. ಪೂರೈಸಿದ ಪುಸ್ತಕಗಳ ಹಣವನ್ನು ಕೂಡ ಎಲ್ಲರಿಗಿಂತ ಮೊದಲು ಪಡೆಯುತ್ತಿದ್ದಾರೆ.

ಪುಸ್ತಕಗಳ ಖರೀದಿಗೆ ಸಂಬಂಧಿಸಿದಂತೆ ಅನುಸರಿಸುತ್ತಿರುವ ವಿಳಂಬ ಧೋರಣೆಯು ಇಲಾಖೆಯ ಸೋಮಾರಿತನ ಮತ್ತು ನಿರ್ಲಕ್ಷ್ಯಕ್ಕೆ  ಕೈಗನ್ನಡಿಯಾಗಿದೆ. 2021ನೇ ಸಾಲಿನ ಪುಸ್ತಕಗಳ ಆಯ್ಕೆ ಪ್ರಕ್ರಿಯೆಯನ್ನು 2024ರಲ್ಲಿ ಪೂರ್ಣಗೊಳಿಸಿದ್ದು ನ್ಯಾಯಸಮ್ಮತವಲ್ಲ. ಪ್ರಕಾಶಕರ ಬೇಡಿಕೆಯಂತೆ ಆಯಾ ವರ್ಷದ ಪುಸ್ತಕಗಳ ಆಯ್ಕೆ, ಖರೀದಿ ಮತ್ತು ಹಣಪಾವತಿಯನ್ನು ಆಯಾ ಆರ್ಥಿಕ ವರ್ಷದಲ್ಲೇ ಪೂರ್ಣಗೊಳಿಸುವುದು ಸರಿಯಾದ ಕ್ರಮ. ಗ್ರಂಥಾಲಯ ಇಲಾಖೆ ಕೂಡ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಈ ಕ್ಷೇತ್ರವನ್ನು ಅನುತ್ಪಾದಕ ಕ್ಷೇತ್ರವೆಂದು ಪರಿಗಣಿಸದೆ ಪುಸ್ತಕ ಸಂಸ್ಕೃತಿಯನ್ನು ಬಿತ್ತಿ ಬೆಳೆಯುತ್ತಿರುವ ಕ್ಷೇತ್ರವೆಂದು ಪರಿಗಣಿಸಬೇಕಾಗಿದೆ. ಅಂತೆಯೇ ಸದೃಢಗೊಳಿಸಲು ಕ್ರಮ ಜರುಗಿಸಬೇಕಿದೆ. 

ಗ್ರಂಥಾಲಯ ಇಲಾಖೆಯಲ್ಲಿ ಅವ್ಯವಹಾರ ಏಕೆ ತಾಂಡವವಾಡುತ್ತಿದೆ? ಪುಸ್ತಕಗಳ ಖರೀದಿ ಮತ್ತು ಹಣ ಪಾವತಿಯಲ್ಲಿ ಏಕೆ ತಾರತಮ್ಯ ಮಾಡಲಾಗುತ್ತಿದೆ? ಪ್ರಭಾವಶಾಲಿ ಪ್ರಕಾಶಕರು ಹತ್ತಾರು ಪ್ರಕಾಶನ ಸಂಸ್ಥೆಗಳ ಹೆಸರುಗಳಿಂದ ಪುಸ್ತಕಗಳನ್ನು ಪೂರೈಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿಲ್ಲವೇ? ಗಮನಕ್ಕೆ ಬಂದರೂ ಮೇಲಧಿಕಾರಿಗಳು ಕಣ್ಣಿದ್ದೂ ಕುರುಡರಂತೆ ಇರಲು ಏನು ಕಾರಣ? ಈ ಎಲ್ಲ ಪ್ರಶ್ನೆಗಳಿಗೆ ಸರ್ಕಾರ ಉತ್ತರದಾಯಿಯಾಗಬೇಕಿದೆ ಮತ್ತು ಕಠಿಣ ನಿಲುವು ತಳೆಯಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.