ಈಗ ಮದುವೆ ಎನ್ನುವುದೊಂದು ಮಾರುಕಟ್ಟೆ. ವಯಸ್ಸಿಗೆ ಬಂದ ಮಗಳು ಮನೆಯಲ್ಲಿದ್ದರೆ ‘ಸೆರಗಲ್ಲಿ ಕೆಂಡ ಕಟ್ಟಿಕೊಂಡಂತೆ’ ಪಾಲಕರು ಚಡಪಡಿಸುತ್ತಾರೆ. ಹುಡುಗಿ ಎಳೆಯವಳಾದಷ್ಟೂ ವರನಿಗೆ ಕೊಡಬೇಕಾದ ದಕ್ಷಿಣೆ ಕಡಿಮೆಯಾದ್ದರಿಂದ ‘ಒಳ್ಳೆಯ ವರ’ ಸಿಕ್ಕರೆ ಮಗಳಿಗೆ/ವರನಿಗೆ ಎಷ್ಟೇ ವಯಸ್ಸಾದರೂ ಮದುವೆ ಮಾಡಿ ‘ಕೊಟ್ಟು’ ಬಿಡುತ್ತಾರೆ.
ವಧೂವರರಿಗೆ ಕನಿಷ್ಠ 21 ವರ್ಷವಾಗಬೇಕೆಂಬ ಕಾನೂನು ಬರುತ್ತಿದೆ. ತಾಯಿ–ಮಗುವಿನ ಹಿತದೃಷ್ಟಿಯಿಂದಲೋ, ಒಂದು ಸಮುದಾಯವನ್ನು ಗುರಿಯಾಗಿಸಿ ಹಣಿಯಲೆಂದೋ ಅಂತೂ ನಾಲ್ಕು ದಶಕಗಳ ಬಳಿಕ ಮದುವೆಯ ವಯಸ್ಸನ್ನು 18 ವರ್ಷದಿಂದ ಇಪ್ಪತ್ತೊಂದಕ್ಕೆ ಏರಿಸಲಾಗುತ್ತಿದೆ. ಒಂದೆಡೆ ಹೆಣ್ಣಿಗೆ ಸಿಕ್ಕ ಅತಿಸ್ವಾತಂತ್ರ್ಯದಿಂದ ಕೌಟುಂಬಿಕ ಬಿಕ್ಕಟ್ಟುಗಳು ತಲೆದೋರುತ್ತಿವೆಯೆಂದು ಸಿಬಿಎಸ್‌ಇ ಪ್ರಶ್ನೆಪತ್ರಿಕೆ ಬಿಂಬಿಸುತ್ತಿದ್ದರೆ, ಇನ್ನೊಂದೆಡೆ ಮದುವೆಯ ವಯಸ್ಸು ಏರಿಸಿ ಹೆಣ್ಣಿನ ಹಿತ ಕಾಯತ್ತಿರುವೆವೆಂದು ಆಳುವ ವ್ಯವಸ್ಥೆ ಹೇಳುತ್ತಿದೆ.
ಭಾರತದ ಸಾಮಾಜಿಕ, ಆರ್ಥಿಕ ವಾಸ್ತವಗಳನ್ನು ಗಮನಿಸಿದರೆ ಬರಲಿರುವ ಕಾನೂನಿನ ಪರಿಣಾಮ ಎಲ್ಲರಿಗೂ ಒಂದೇ ಆಗಿರುವುದಿಲ್ಲ. ಆ ಕಾರಣದಿಂದಲೇ ಈ ಚರ್ಚೆಗೆ ಹಲವು ಆಯಾಮಗಳಿವೆ. ಸುರಕ್ಷಿತ ತಾಯ್ತನದ ವೈದ್ಯಕೀಯ ದೃಷ್ಟಿಯಿಂದ ಹುಡುಗಿಯ ಮದುವೆಯ ವಯಸ್ಸು 21 ವರ್ಷ ಆಗುವುದು ಸ್ವಾಗತಾರ್ಹವಾಗಿದೆ. ಈಗ ಬಹುತೇಕ ಹುಡುಗಿಯರು ಹತ್ತು ವರ್ಷದ ಆಸುಪಾಸು ಮೈನೆರೆಯುತ್ತಾರೆ. ಮುಟ್ಟು ಬೇಗ ಶುರುವಾದರೂ ರಕ್ತಹೀನತೆ, ಅಪೌಷ್ಟಿಕತೆ, ಅತಿಶ್ರಮ ಅಥವಾ ಶ್ರಮರಾಹಿತ್ಯಗಳಿಂದ ರಸದೂತಗಳ ಚಕ್ರ ಅನಿಯಮಿತವಾಗಿರುತ್ತದೆ. ಹೀಗಿರುತ್ತ ಹದಿನೆಂಟಕ್ಕೆ ಅಥವಾ ಅದಕ್ಕೂ ಮೊದಲೇ ಮದುವೆಯಾದರೂ ಮದುವೆಯಾಗಿ ಒಂಬತ್ತು ತಿಂಗಳಿಗೆ ವಧು ಮಗು ಹೆರಲೆಂಬ ನಿರೀಕ್ಷೆಯಿರುತ್ತದೆ. ಮಗುತನವು ಮಾಸುವ ಮೊದಲೇ ಹುಡುಗಿ ಮಗುವಿನ ತಾಯಿಯಾಗುತ್ತಾಳೆ. ಮತ್ತೆಮತ್ತೆ ದೇಹವನ್ನು ಬಸುರು, ಗರ್ಭಪಾತ, ಕುಟುಂಬ ಯೋಜನಾ ವಿಧಾನಗಳಿಗೊಡ್ಡಿಕೊಳ್ಳುತ್ತಾಳೆ. ಒಂದುವೇಳೆ ಬಸುರಾಗದೇ ಪ್ರತಿತಿಂಗಳು ಮುಟ್ಟಾಗುತ್ತ ಹೋದಳೋ, ಮನೆಯವರಿಗೆ ಆತಂಕ ಶುರುವಾಗುತ್ತದೆ. ಅವಳ ಹೆಣ್ತನದ ಬಗೆಗೆ ಉಳಿದವರಿಗೂ, ಸ್ವತಃ ಅವಳಿಗೂ ಅನುಮಾನ ಮೊದಲಾಗುತ್ತದೆ. ಪೂಜೆ, ಹರಕೆ, ಜ್ಯೋತಿಷ್ಯ, ಆಸ್ಪತ್ರೆಗಳಲ್ಲಿ ತಪಾಸಣೆ, ಗಾಂವಟಿ ಮದ್ದು ಎಲ್ಲವೂ ನಡೆಯುತ್ತವೆ.
ಸುರಕ್ಷಿತ ತಾಯ್ತನ ಪ್ರತಿ ಹೆಣ್ಣಿನ ಹಕ್ಕು. ಭಾರತದ 15-19 ವರ್ಷ ವಯೋಮಾನದ ಯುವತಿಯರ ಸಾವಿನ ಮುಖ್ಯ ಕಾರಣ ತಾಯ್ತನ ಸಂಬಂಧಿ ಕಾಂಪ್ಲಿಕೇಷನ್ನುಗಳೇ ಆಗಿವೆ. ಭಾರತದಲ್ಲಿ 2016-17ರಲ್ಲಿ ಒಂದು ಲಕ್ಷ ಸಜೀವ ಮಕ್ಕಳ ಜನನಕ್ಕೆ 113 ತಾಯಂದಿರು ತೀರಿಕೊಂಡಿದ್ದಾರೆ. ಅಂದರೆ, ಆ ವರ್ಷ ಈ ಕಾರಣದಿಂದ 27,000 ಬಾಣಂತಿಯರು ತೀರಿಕೊಂಡರು. ಅವರಲ್ಲಿ ಹೆಚ್ಚಿನವರು 20ರ ಆಸುಪಾಸು ವಯಸ್ಸಿನವರು. ಶಿಶುಮರಣಗಳಲ್ಲಿ ಹದಿಹರೆಯದ ತಾಯಿ ಹೆತ್ತ ಕೂಸುಗಳೇ ಹೆಚ್ಚು. ಬಸುರು, ಹೆರಿಗೆ, ಗರ್ಭನಿರೋಧಕ ಮಾತ್ರೆ-ಕಾಪರ್ ಟಿ-ಸಂತಾನಹರಣ ಶಸ್ತ್ರಚಿಕಿತ್ಸೆ-ಸಿಸೇರಿಯನ್ ಶಸ್ತ್ರಚಿಕಿತ್ಸೆ ಮೊದಲಾದುವುಗಳ ಕಾಂಪ್ಲಿಕೇಷನ್ನುಗಳು ಹದಿನೆಂಟರ ಹುಡುಗಿಗೆ ಗಹನವಾಗಿರುತ್ತವೆ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡರೆ ಮೊದಲ ಹೆರಿಗೆಗೆ ಬರುವ ಬಸುರಿಯ ವಯಸ್ಸು ಇಪ್ಪತ್ತರ ದಶಕದಲ್ಲಿ ಮುಂದೆ ಮುಂದೆ ಸರಿದಷ್ಟೂ ಒಳಿತೇ.
ಬಾಲ್ಯವಿವಾಹ ಹುಟ್ಟಿಕೊಂಡಿದ್ದು ತಳಿ ಶುದ್ಧತೆ ಕುರಿತ ಅತಿರೇಕದ ಕಲ್ಪನೆಯಿಂದ. ಹೆಣ್ಣು ಎಂದರೆ ಹ್ಞೂಂ ಎಂದು ತಲೆಯಾಡಿಸಬೇಕಾದವಳು; ಬುದ್ಧಿ ಬಲಿಯುವ ಮುನ್ನವೇ ಅವಳನ್ನು ಪಳಗಿಸಿಟ್ಟುಕೊಳ್ಳಬೇಕೆಂಬುದು ಬಾಲ್ಯವಿವಾಹದ ಹಿಂದಿರುವ ತರ್ಕ.
ಈಗ ಮದುವೆ ಎನ್ನುವುದೊಂದು ಮಾರುಕಟ್ಟೆ. ವಯಸ್ಸಿಗೆ ಬಂದ ಮಗಳು ಮನೆಯಲ್ಲಿದ್ದರೆ ‘ಸೆರಗಲ್ಲಿ ಕೆಂಡ ಕಟ್ಟಿಕೊಂಡಂತೆ’ ಪಾಲಕರು ಚಡಪಡಿಸುತ್ತಾರೆ. ಹುಡುಗಿ ಎಳೆಯವಳಾದಷ್ಟೂ ವರನಿಗೆ ಕೊಡಬೇಕಾದ ದಕ್ಷಿಣೆ ಕಡಿಮೆಯಾದ್ದರಿಂದ ‘ಒಳ್ಳೆಯ ವರ’ ಸಿಕ್ಕರೆ ಮಗಳಿಗೆ/ವರನಿಗೆ ಎಷ್ಟೇ ವಯಸ್ಸಾದರೂ ಮದುವೆ ಮಾಡಿ ‘ಕೊಟ್ಟು’ ಬಿಡುತ್ತಾರೆ. ಈ ಭಾವನೆ ಗ್ರಾಮೀಣ ಭಾಗದಲ್ಲಿ, ಕೆಳವರ್ಗಗಳಲ್ಲಿ ಬಲವಾಗಿದೆ. ಹದಿಹರೆಯದ ಹೆಣ್ಣು ಮಕ್ಕಳ ದೃಷ್ಟಿಯಿಂದ ನೋಡಿದರೆ ತನ್ನ ಶಕ್ತಿಮಿತಿಗಳನ್ನು, ದೇಹಾಕಾಂಕ್ಷೆಗಳನ್ನು, ಸಾಮಾಜಿಕ ಸಂಬಂಧಗಳ ಸ್ವರೂಪ-ಸಂಕಟಗಳನ್ನು, ದಾಂಪತ್ಯದ ಸವಾಲುಗಳನ್ನು, ತಾಯ್ತನವೆಂಬ ಅಸ್ವಾತಂತ್ರ್ಯವನ್ನು ಅರಗಿಸಿಕೊಳ್ಳಲು 21 ವರ್ಷಕ್ಕೆ ಮದುವೆಯಾಗುವುದು ಸೂಕ್ತವಾಗಿದೆ. ಉನ್ನತ ಶಿಕ್ಷಣ, ವೃತ್ತಿಗಳಲ್ಲಿ ತೊಡಗಿಕೊಳ್ಳುವ ಕನಸಿನ ತರುಣಿಯರಿಗೆ ಮದುವೆ ತಮ್ಮ ಸಾಧನೆಗೆ ಅಡೆತಡೆಯಾಗುವುದೆಂಬ ಭಾವನೆಯಿರುತ್ತದೆ. ಕಾಲೇಜಿಗೆ ಹೋಗದೇ ಸಣ್ಣಪುಟ್ಟ ಉದ್ಯೋಗಗಳಲ್ಲಿ ಅನಿವಾರ್ಯವಾಗಿ ದುಡಿಯಬೇಕಾದ ತರುಣಿಯರಿಗೂ ಮದುವೆಯ ಕನಿಷ್ಠ ವಯಸ್ಸು ಮುಂದೆ ಹೋದರೆ ಆರ್ಥಿಕ ಸ್ವಾಯತ್ತೆ ದೊರಕಿ ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾಗುತ್ತದೆ. ಹಾಗಾಗಿ ಇಪ್ಪತ್ತರ ನಂತರ ವಿವಾಹವಾಗುವುದು ಯುವತಿಯರ ದೈಹಿಕ, ಮಾನಸಿಕ, ವ್ಯಕ್ತಿತ್ವದ ಬೆಳವಣಿಗೆಯ ದೃಷ್ಟಿಯಿಂದ ಸೂಕ್ತ ಎನ್ನಬಹುದು.
ಬಾಲ್ಯವಿವಾಹ, ವರದಕ್ಷಿಣೆ, ಜಾತಿನಿಂದನೆಗಳೆಲ್ಲ ನಿಷೇಧಗೊಂಡು ದಶಕಗಳೇ ಕಳೆದಿವೆ. ಆದರೂ ಬಾಲ್ಯವಿವಾಹಗಳು ಸಿಂಧುವಾಗುತ್ತವೆ, ಅಂತರ್ಜಾತಿ ವಿವಾಹ ಅಪರಾಧವೆನಿಸಿಕೊಳ್ಳುತ್ತದೆ, ವರದಕ್ಷಿಣೆ ಸರ್ವಮಾನ್ಯವಾಗಿದೆ! ಯುನಿಸೆಫ್ ಪ್ರಕಾರ, ಪ್ರತಿವರ್ಷ ಭಾರತದಲ್ಲಿ 15 ಲಕ್ಷ ಅಪ್ರಾಪ್ತ ವಯಸ್ಸಿನ ಹುಡುಗಿಯರ ಮದುವೆಯಾಗುತ್ತಿದೆ. ಎಂದರೆ ಶೇ 23ರಷ್ಟು ಮದುವೆಗಳು ಬಾಲ್ಯವಿವಾಹಗಳೇ ಆಗಿದ್ದು ಗುರುಹಿರಿಯರ, ಜನನಾಯಕರ ಆಶೀರ್ವಾದದೊಂದಿಗೇ ನಡೆಯುತ್ತಿವೆ. ಕೋವಿಡ್ ಸಮಯದಲ್ಲಿದು ಇನ್ನಷ್ಟು ಹೆಚ್ಚಾಗಿದೆ. ಅದನ್ನು ವಿರೋಧಿಸಿದ ರಾಜಾಸ್ಥಾನದ ಭಾಂವ್ರಿದೇವಿಯಂತಹ ಕಾರ್ಯಕರ್ತೆಯರು ಗುಂಪು ಅತ್ಯಾಚಾರಕ್ಕೆ ಒಳಗಾಗುತ್ತದೆ.
18 ವರ್ಷದೊಳಗಿನವರ ಬಾಲ್ಯವಿವಾಹವನ್ನೇ ತಡೆಯಲಾಗದ ಸರ್ಕಾರವು 21ರವರೆಗೆ ಯುವತಿಯರು ಮದುವೆಯಾಗದಂತೆ ಏಕೆ ತಡೆಯುತ್ತಿದೆ? ಅದಕ್ಕಾಗಿ ಎಂತಹ ಕಾರ್ಯಯೋಜನೆ ರೂಪಿಸುತ್ತದೆ? ಈ ಕಾನೂನಿನ ಹಿಂದಿನ ಅಸಲಿ ಉದ್ದೇಶವೇನು ಎಂಬ ಗಂಭೀರ ಪ್ರಶ್ನೆ ಹಲವರದಾಗಿದೆ. ಕಾನೂನು ದುರ್ಬಳಕೆಯಾಗಿ, ಕಾನೂನು ಜ್ಞಾನವಿರದ ಸಮುದಾಯಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಇದು ನೆಪವಾಗಲಿದೆಯೇ? ಇಚ್ಛೆಪಟ್ಟು ಸಂಗಾತಿಯನ್ನು ಆಯ್ಕೆಮಾಡಿಕೊಂಡ ಹುಡುಗಿಯೂ ಮದುವೆಯಾಗಲು 21ರವರೆಗೆ ಕಾಯಬೇಕಾಗುವುದು ವ್ಯಕ್ತಿ ಸ್ವಾತಂತ್ರ್ಯದ ದೃಷ್ಟಿಯಿಂದ ಸರಿಯೇ ಎಂಬ ಅನುಮಾನಗಳೂ ಎದ್ದಿವೆ.
ಮತ್ತೊಂದು ತಾಂತ್ರಿಕ ತೊಡಕೂ ಇದರಲ್ಲಿದೆ: ಭಾರತದಲ್ಲಿ 18 ವರ್ಷ ವಯಸ್ಸು ಬಾಲ್ಯ-ಪ್ರೌಢ ಅವಸ್ಥೆಗಳ ನಡುವಿನ ಗೆರೆಯೆಳೆಯುವ ಬಿಂದುವಾಗಿದೆ. 18 ದಾಟಿದವರು ಮತ ಹಾಕಬಹುದು; ಒಪ್ಪಿಗೆ ನೀಡಿ ಲೈಂಗಿಕ ಸಂಪರ್ಕ ನಡೆಸಬಹುದು; ಕಾರ್ಮಿಕರೆಂದು ಕೆಲಸ ಮಾಡಬಹುದು; 18 ದಾಟಿದ ಅಪರಾಧಿಯನ್ನು ವಯಸ್ಕ ಅಪರಾಧಿಯಾಗಿಯೇ ಪರಿಗಣಿಸಲಾಗುತ್ತದೆ. ಇಲ್ಲೆಲ್ಲ ಇರುವ 18ರ ಗಡಿ ಮದುವೆಗೆ ಮಾತ್ರ 21 ಏಕಾಗಬೇಕು ಎಂಬ ತಕರಾರು ಕೆಲವರದಾಗಿದೆ.
ಮತ ಹಾಕುವುದಕ್ಕೂ, ಮದುವೆಯಾಗುವುದಕ್ಕೂ ಪರಿಣಾಮದ ದೃಷ್ಟಿಯಿಂದ ಅಜಗಜಾಂತರವಿದೆ, ನಿಜ. 18 ವರ್ಷಕ್ಕೆ ಮತ ಹಾಕಿ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿದ್ದಕ್ಕೆ ಐದು ವರ್ಷ ಮಾತ್ರ ಜವಾಬ್ದಾರರಾಗಿರಬೇಕಾಗುತ್ತದೆ. ಮದುವೆಯ ಪ್ರತಿಫಲಕ್ಕೆ ಜೀವಮಾನವಿಡೀ ಬಾಧ್ಯಸ್ಥರಾಗಿರಬೇಕಾಗುತ್ತದೆ. ಅದಕ್ಕೆ 21ರವರೆಗೆ ತಡೆದು ಮದುವೆಯಾದರೆ ಬದುಕು ಕ್ರಾಂತಿಕಾರಕವಾಗಿ ಬದಲಾಗುವಂತಹ ಹೊಸ ಅವಕಾಶಗಳನ್ನು ಸರ್ಕಾರ ಸೃಷ್ಟಿಸಬೇಕು. ಎಲ್ಲರಿಗೂ ಉಚಿತ ಕಡ್ಡಾಯ ಪದವಿ ಶಿಕ್ಷಣ, ಸರ್ವರಿಗೂ ನಿಶ್ಚಿತ ಕನಿಷ್ಠ ವರಮಾನ ದೊರೆಯುವಂತಹ ಉದ್ಯೋಗ ಕಾರ್ಯಕ್ರಮಗಳನ್ನು ಯೋಜಿಸಬೇಕು.
ಹಾಗೆ ನೋಡಿದರೆ ಪ್ರಜ್ಞಾವಂತ ಸಮಾಜಕ್ಕೆ ಕಾನೂನುಗಳೇ ಬೇಡ. ನ್ಯಾಯದ ತಿಳಿವಳಿಕೆ ತಂತಾನೇ ಬರಬೇಕು. ಆದರೆ ಭಾರತದ ಸಾಮಾಜಿಕ, ಸಾಂಸ್ಕೃತಿಕ ಪರಿಸರ ಹೇಗಿದೆಯೆಂದರೆ ಇಲ್ಲಿ ಜಾತಿ ಹೆಸರು ಹಿಡಿದು ಅವಮಾನಿಸಬೇಡಿ ಎನ್ನಲೊಂದು ಕಾನೂನು ಬೇಕು. ನಿಮ್ಮ ಎಳೆಯ ಕೂಸಿಗೆ ಮದುವೆ ಮಾಡಬೇಡಿ ಎನ್ನಲೂ ಒಂದು ಕಾನೂನು ಬರಬೇಕು. ವರದಕ್ಷಿಣೆ ತಪ್ಪು, ಅತ್ಯಾಚಾರ ಅಪರಾಧ ಎಂದು ಎಚ್ಚರಿಸಲೂ ಕಾನೂನು ತರಬೇಕು. ಭಾರತದ ನೆಲ ಸಮತೆಯ ಸಮೃದ್ಧ ಬಯಲಾಗುವವರೆಗೆ ಹೊಸಹೊಸ ಕಾನೂನುಗಳು ರೂಪುಗೊಳ್ಳಲೇಬೇಕು. ಈ ಪರಿಸ್ಥಿತಿಯನ್ನು ಆಳುವ ಸರ್ಕಾರಗಳು ದುರುಪಯೋಗಪಡಿಸಿಕೊಳ್ಳಬಾರದು. ಕಾಲದ ತುರ್ತನ್ನು, ಲೋಕಹಿತವನ್ನು ಸಮುದಾಯಗಳಿಗೆ ತಿಳಿಸುವ ಮಾರ್ಗವಾಗಿ ಕಾನೂನು ರೂಪಿಸಬೇಕು. ಅದಕ್ಕಾಗಿ ಪ್ರಜೆಗಳೂ, ಪ್ರಭುಗಳೂ ಸಂವಿಧಾನವನ್ನು ಬದುಕಬೇಕು. ಕಾನೂನುಗಳನ್ನು ಜೀವನಮೌಲ್ಯವಾಗಿ ಅಳವಡಿಸಿಕೊಳ್ಳಬೇಕು. ಆಗಷ್ಟೇ ಸರ್ವರಿಗೂ ಸಮಾನತೆ, ಸ್ವಾಯತ್ತೆ, ಘನತೆಯ ಬದುಕು ಸಾಧ್ಯವಾದೀತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.