ಕಳೆದ ಕೆಲವು ತಿಂಗಳುಗಳಲ್ಲಿ ಜಾಗತಿಕ ಮಾರುಕಟ್ಟೆಯು ಕೆಲವು ವ್ಯಾಪಕ ಮತ್ತು ಕ್ಷಿಪ್ರ ಬದಲಾವಣೆಗಳಿಗೆ ಗುರಿಯಾಗಿದೆ.ಬದಲಾದ ಈ ಸನ್ನಿವೇಶಗಳಿಗೆ ಹೊಂದಿಕೊಳ್ಳಲು ಬಹುತೇಕ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ಬಹಳ ಪ್ರಯಾಸಪಟ್ಟಿವೆ.
ಕೋವಿಡ್ ಸಾಂಕ್ರಾಮಿಕದ ಹೊಡೆತದಿಂದ ಜಾಗತಿಕ ಮಾರುಕಟ್ಟೆಯು ಚೇತರಿಸಿಕೊಳ್ಳುವ ಹಂತದಲ್ಲಿದ್ದಾಗಲೇ ರಷ್ಯಾ–ಉಕ್ರೇನ್ ಯುದ್ಧವು ಬಂದೆರಗಿದೆ. ಇದರಿಂದ ಜಾಗತಿಕ ಇಂಧನ, ಸರಕು ಮತ್ತು ಆಹಾರ ಪದಾರ್ಥಗಳ ಮಾರುಕಟ್ಟೆಗೆ ಧಕ್ಕೆಯಾಗಿದೆ. ಯುದ್ಧದ ಬೆನ್ನಲ್ಲೇ ಹಲವು ದೇಶಗಳು ಆರ್ಥಿಕ ನಿರ್ಬಂಧದಂತಹ ಪ್ರಬಲ ಅಸ್ತ್ರವನ್ನು ಪ್ರಯೋಗಿಸಿವೆ. ಈ ಅಸ್ತ್ರವನ್ನು ಪ್ರಯೋಗಿಸಿದ ದೇಶಗಳೂ ಸೇರಿ, ಬಹುತೇಕ ದೇಶಗಳಲ್ಲಿ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಮತ್ತು ಕೊರತೆ ಉಂಟಾಗಿದೆ.ಈ ಸ್ವರೂಪದ ಪ್ರತಿಕ್ರಿಯೆ ಕಂಡುಬಂದಿದ್ದು, ಎರಡನೇ ವಿಶ್ವ ಯುದ್ಧದ ನಂತರ ಇದೇ ಮೊದಲು.
ಈ ನಿರ್ಬಂಧಗಳ ಭಾಗವಾಗಿ ಹಣಕಾಸು ಸಂಸ್ಥೆಗಳು ಮತ್ತು ಅವುಗಳ ವಹಿವಾಟುಗಳನ್ನು ಸ್ಥಗಿತಗೊಳಿಸಿದ್ದರಿಂದ ಜಾಗತಿಕ ಮಾರುಕಟ್ಟೆಯು ಅಲ್ಲೋಲಕಲ್ಲೋಲವಾಗಿದೆ. ಇದರ ಪರಿಣಾಮವು 100ಕ್ಕೂ ಹೆಚ್ಚು ದೇಶಗಳನ್ನು ಬಾಧಿಸಬಹುದು ಮತ್ತು ಜಾಗತಿಕ ವಹಿವಾಟು ನಡೆಸಲು ಅಗತ್ಯವಿರುವ ನಿಧಿಯನ್ನು ಹೊಂದಿಸಿಕೊಳ್ಳಲು ಆ ದೇಶಗಳಿಗೆ ತೊಡಕಾಗಬಹುದು ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯು (ಐಎಂಎಫ್) ಕಳವಳ ವ್ಯಕ್ತಪಡಿಸಿತ್ತು.ಅದರ ಬೆನ್ನಲ್ಲೇ ಜಾಗತಿಕ ಆರ್ಥಿಕತೆಯ ಬೆಳವಣಿಗೆಯ ಅಂದಾಜನ್ನು ಐಎಂಎಫ್ ಇಳಿಸಿತ್ತು. 2021ರಲ್ಲಿ ಶೇ 5.7ರಷ್ಟಿದ್ದ ಆರ್ಥಿಕ ಬೆಳವಣಿಗೆಯ ದರವು, 2022ರಲ್ಲಿ ಶೇ 2.9ರಷ್ಟಕ್ಕೆ ಕುಸಿಯಬಹುದು ಎಂದು ಐಎಂಎಫ್ ಅಂದಾಜಿಸಿದೆ. ಜಗತ್ತಿನಾದ್ಯಂತ ಆರ್ಥಿಕತೆಗಳು ಕಠಿಣ ಪರಿಸ್ಥಿತಿಯಲ್ಲಿ ಇವೆ ಎಂಬುದನ್ನು ಈ ಅಂದಾಜು ದೃಢಪಡಿಸುತ್ತದೆ. ಹಲವು ದೇಶಗಳ ಆರ್ಥಿಕತೆಯೇ ಸ್ಥಗಿತವಾಗಿ ಬಿಡುವ ಅಪಾಯವಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ಅಮೆರಿಕದ ಹಣದುಬ್ಬರವು ಶೇ 10ರ ಗಡಿಯನ್ನು ಸಮೀಪಿಸಿದೆ. ಹೀಗಿದ್ದೂ ಜಗತ್ತಿನ ಹೆಚ್ಚಿನ ಕರೆನ್ಸಿಗಳ ಎದುರು ಅಮೆರಿಕದ ಡಾಲರ್‌ನ ಮೌಲ್ಯ ಏರಿಕೆಯಾಗುತ್ತಿದೆ ಎಂಬುದು ಗಮನಿಸಬೇಕಾದ ಅಂಶ. ಡಾಲರ್ ಎದುರು ಭಾರತದ ರೂಪಾಯಿಯ ಮೌಲ್ಯ ಉತ್ತಮವಾಗೇ ಇತ್ತು. ಆದರೆ ಈಚೆಗೆ ರೂಪಾಯಿಯ ಮೌಲ್ಯ ₹80ರಷ್ಟಕ್ಕೆ ಕುಸಿದಿದೆ.ಈ ಸ್ವರೂಪದ ಅಪಮೌಲ್ಯಕ್ಕೆ ಗುರಿಯಾಗಿದ್ದು ಭಾರತದ ರೂಪಾಯಿ ಮಾತ್ರವಲ್ಲ. ಯೂರೊವಿನ ಮೌಲ್ಯ ಡಾಲರ್ ಎದುರು 20 ವರ್ಷಗಳ ಕನಿಷ್ಠಮಟ್ಟಕ್ಕೆ ಕುಸಿದಿದೆ. ಪ್ರಬಲ ಕರೆನ್ಸಿಗಳಾದ ಜಪಾನಿನ ಯೆನ್ ಮತ್ತು ಚೀನಾದರೆನ್‌ಮಿನ್‌ಬಿಯ ಮೌಲ್ಯ ಸಹ ಕುಸಿದದೆ.
ರೂಪಾಯಿ ಮೌಲ್ಯ ಕುಸಿಯಲು ಹಲವು ಕಾರಣಗಳು ಇವೆ. ಅಥವಾ ಬೇರೊಂದು ಮಾತಿನಲ್ಲಿ ಹೇಳುವುದಾದರೆ, ಈ ಪರಿಸ್ಥಿತಿಯನ್ನು ಅಮೆರಿಕದ ಡಾಲರ್‌ನ ಮೌಲ್ಯವರ್ಧನೆ ಎಂದು ವಿವರಿಸಬಹುದು.
ಅಮೆರಿಕದ ಹಣದುಬ್ಬರವನ್ನು ಶೇ 2ರಷ್ಟಕ್ಕೆ ನಿಯಂತ್ರಿಸುವ ಗುರಿಯನ್ನು ಫೆಡರಲ್ ಬ್ಯಾಂಕ್ ಹಾಕಿಕೊಂಡಿತ್ತು. ಆದರೆ, ಈ ಗುರಿಯನ್ನೂ ಮೀರಿ ಹಣದುಬ್ಬರವು ಶೇ 10ರ ಗಡಿಯನ್ನು ಸಮೀಪಿಸಿದೆ. ಇದನ್ನು ನಿಯಂತ್ರಿಸುವ ಸಲುವಾಗಿ ಫೆಡರಲ್ ಬ್ಯಾಂಕ್ ಬಡ್ಡಿದರವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದೆ. ಅಮೆರಿಕದಲ್ಲಿ ಬಡ್ಡಿದರ ಏರಿಕೆಯಾದ ಕಾರಣ ಅಲ್ಲಿನ ಬಾಂಡ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಉದ್ದೇಶದಿಂದ, ಭಾರತದ ಹಣಕಾಸು ಮಾರುಕಟ್ಟೆಯಲ್ಲಿ ಮಾಡಿದ್ದ ಹೂಡಿಕೆಯನ್ನು ಭಾರಿ ಪ್ರಮಾಣದಲ್ಲಿ ಹೊರತೆಗೆಯಲಾಗಿದೆ.ಕಳೆದ ಆರು ತಿಂಗಳಲ್ಲಿ ಸುಮಾರು ಎರಡು ಲಕ್ಷ ಕೋಟಿ ರೂಪಾಯಿಯಷ್ಟು ಬಂಡವಾಳವು ಭಾರತದ ಮಾರುಕಟ್ಟೆಯಿಂದ ಹೊರಹೋಗಿದೆ ಎಂದು ಸೆಬಿ ಅಂದಾಜಿಸಿದೆ. ಇದು ಡಾಲರ್‌ನ ಮೌಲ್ಯವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ.
ಜಾಗತಿಕ ಕಚ್ಚಾತೈಲದ ವಹಿವಾಟನ್ನು ಅಮೆರಿಕದ ಡಾಲರ್ ಮೂಲಕವೇ ನಡೆಸಲಾಗುತ್ತದೆ. ಹೀಗಾಗಿಕಚ್ಚಾತೈಲದ ಬೆಲೆ ಮತ್ತು ಡಾಲರ್‌ನ ಮೌಲ್ಯದ ನಡುವೆ ನೇರಾನೇರ ಸಂಬಂಧವಿದೆ. ಕೋವಿಡ್ ಸಾಂಕ್ರಾಮಿಕದ ನಂತರ ಭಾರತದಲ್ಲಿ ಇಂಧನದ ಬೇಡಿಕೆ ಹೆಚ್ಚಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಕಚ್ಚಾತೈಲದ ಬೆಲೆ ಏರಿಕೆಯೂ ಭಾರತಕ್ಕೆ ಪ್ರತಿಕೂಲವಾಗಿ ಪರಿಣಮಿಸಿದೆ. ಹೀಗಾಗಿ 2020–21ರಲ್ಲಿ ಕಚ್ಚಾತೈಲದ ಆಮದು ಮೌಲ್ಯ ಸುಮಾರು ₹4.96 ಲಕ್ಷ ಕೋಟಿ ಇದ್ದದ್ದು, 2021–22ರಲ್ಲಿ ಸುಮಾರು ₹9.50 ಲಕ್ಷ ಕೋಟಿಗೆ ಏರಿಕೆಯಾಗಿದೆ.
ಇದೇ ಜನವರಿಯಲ್ಲಿ ಪ್ರತಿ ಬ್ಯಾರಲ್ ಕಚ್ಚಾತೈಲದ ಬೆಲೆಯು 100 ಡಾಲರ್‌ನ ಗಡಿಯನ್ನು ದಾಟಿತ್ತು ಮತ್ತು ಅದರ ಮೇಲೆಯೇ ಇತ್ತು. ಒಮ್ಮೆ 140 ಡಾಲರ್‌ನ ಗಡಿಯನ್ನೂ ಮುಟ್ಟಿತ್ತು. ರಷ್ಯಾದಿಂದ ರಿಯಾಯಿತಿ ದರದಲ್ಲಿ ಸ್ವಲ್ಪ ಪ್ರಮಾಣದ ಕಚ್ಚಾತೈಲವನ್ನು ಭಾರತ ಖರೀದಿಸಿದೆ. ಆದರೆ, ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್‌ಗೆ ಬೇಡಿಕೆ ಮತ್ತು ಅದರ ಮೌಲ್ಯ ಎರಡೂ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಭಾರತದ ವ್ಯಾಪಾರ ಕೊರತೆಯು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. 2020–21ರಲ್ಲಿ ಭಾರತದ ವ್ಯಾಪಾರ ಕೊರತೆಯು ಸುಮಾರು ₹8.13 ಲಕ್ಷ ಕೋಟಿ ಇದ್ದದ್ದು, 2021–22ರಲ್ಲಿ ಸುಮಾರು ₹15.31 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದು ಶೇ 85ರಷ್ಟು ಏರಿಕೆ. ಇದು ಡಾಲರ್‌ಗೆ ಬೇಡಿಕೆಯನ್ನು ಹೆಚ್ಚಿಸಿದೆ.
2021–22ನೇ ಸಾಲಿನ ವಿದೇಶಿ ವ್ಯಾಪಾರಕ್ಕಾಗಿ ಭಾರತವು ಮಾಡಬೇಕಿರುವ ಪಾವತಿಯಲ್ಲಿ 1,000 ಕೋಟಿ ಡಾಲರ್‌ನಷ್ಟು (ಸುಮಾರು ₹79,771 ಕೋಟಿ) ಕೊರತೆಯಾಗಿದೆ. ಭಾರತದ ವಿದೇಶಿ ವಿನಿಮಯ ಮೀಸಲು ಕಡಿಮೆಯಾಗಿರುವುದನ್ನು ಇದು ಸೂಚಿಸುತ್ತದೆ. 2021ರ ಅಕ್ಟೋಬರ್‌ನಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು 64,200 ಕೋಟಿ ಡಾಲರ್‌ನಷ್ಟಿತ್ತು (ಸುಮಾರು ₹51.21 ಲಕ್ಷ). 2022ರ ಜುಲೈ ಆರಂಭದ ವೇಳೆಗೆ ಅದು 58,800 ಕೋಟಿ ಡಾಲರ್‌ಗೆ (ಸುಮಾರು ₹46.90 ಲಕ್ಷ ಕೋಟಿ) ಕುಸಿದಿದೆ. ಭಾರತವು ತಾನು ಗಳಿಸುತ್ತಿರುವುದಕ್ಕಿಂತ ಹೆಚ್ಚು ಡಾಲರ್ ಅನ್ನು ಪಾವತಿಸುತ್ತಿದೆ ಎಂಬುದನ್ನು ಇದು ಸೂಚಿಸುತ್ತದೆ.
ಡಾಲರ್ ಮತ್ತು ರೂಪಾಯಿಯ ವಿನಿಮಯ ದರವು ಬೇಡಿಕೆ ಮತ್ತು ಪೂರೈಕೆಯನ್ನು ಅವಲಂಬಿಸಿದೆ. ಸರಳವಾಗಿ ಹೇಳುವುದಾದರೆ ಬೇಡಿಕೆ ಹೆಚ್ಚಿದ್ದು, ಪೂರೈಕೆ ಕಡಿಮೆ ಇದ್ದರೆ ಸಹಜವಾಗಿಯೇ ಬೆಲೆ ಏರಿಕೆಯಾಗುತ್ತದೆ. ಡಾಲರ್‌ಗೆ ಬೇಡಿಕೆ ಹೆಚ್ಚಿರುವುದರಿಂದ ಅದರ ಮೌಲ್ಯ ಹೆಚ್ಚಾಗಿದೆ. ಹೀಗಾಗಿ ರೂಪಾಯಿಯ ಎದುರು ಡಾಲರ್ ದುಬಾರಿಯಾಗಿ ಪರಿಣಮಿಸಿದೆ.
ಇಂತಹ ಸಂದರ್ಭದಲ್ಲಿ ರೂಪಾಯಿಯನ್ನು ರಕ್ಷಿಸಲು ಆರ್‌ಬಿಐ ಮಧ್ಯಪ್ರವೇಶಿಸಬೇಕಿತ್ತು ಮತ್ತು ಇದಕ್ಕಾಗಿ ತನ್ನ ವಿದೇಶಿ ವಿನಿಮಯ ಮೀಸಲಿನಲ್ಲಿ ಸ್ವಲ್ಪ ಪ್ರಮಾಣವನ್ನು ಬಳಸಬಹುದಿತ್ತು ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಈಗಿನ ಜಾಗತಿಕ ಅಸ್ಥಿರ ಪರಿಸ್ಥಿತಿಯನ್ನು ಗಮನಿಸಿದರೆ ಅಂತಹ ಕ್ರಮಗಳು ಅಪಾಯವನ್ನು ತಂದೊಡ್ಡಬಹುದಿತ್ತು. ಹೀಗಿದ್ದೂ ಜಾಗತಿಕ ಮಾರುಕಟ್ಟೆಯಲ್ಲಿ ರೂಪಾಯಿಯ ಮೂಲಕವೇ ವಹಿವಾಟು ನಡೆಸುವ ಅತ್ಯಂತ ದಿಟ್ಟವಾದ ಕ್ರಮವನ್ನು ಆರ್‌ಬಿಐ ತೆಗೆದುಕೊಂಡಿದೆ. ಇದು ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ರೂಪಾಯಿಯ ವಹಿವಾಟಿನ ಸಾಧ್ಯತೆಗಳನ್ನು ವಿಸ್ತರಿಸಬಹುದು. ಡಾಲರ್‌ನ ಪ್ರಾಬಲ್ಯ ಇರುವ ಜಾಗತಿಕ ಮಾರುಕಟ್ಟೆಯಲ್ಲಿ, ಮಧ್ಯಮಾವಧಿಯಲ್ಲಿ ರೂಪಾಯಿಯನ್ನು ಬಲಗೊಳಿಸಲು ಇಂತಹ ಸಣ್ಣ ಕ್ರಮಗಳೂ ಕಾರಣವಾಗುತ್ತವೆ.
ಭಾರತದ ಆರ್ಥಿಕತೆಯ ಅಡಿಪಾಯಗಳು ದೃಢವಾಗಿವೆ ಮತ್ತು ಸ್ಥಗಿತತೆಯ ಅಪಾಯವನ್ನು ಮೀರಲಿವೆ ಎಂಬುದನ್ನು ಕೆಲವು ಸೂಕ್ಷ್ಮ ಸಂಗತಿಗಳು ಸೂಚಿಸುತ್ತಿವೆ. ಆದರೆ ಜಾಗತಿಕ ಆರ್ಥಿಕತೆಯ ಅಸ್ಥಿರತೆಯು ಮುಂದುವರಿಯಲಿದೆ ಮತ್ತು ಅದರ ಪರಿಣಾಮಗಳು ಏನು ಎಂಬುದು ಊಹಿಸಲು ಸಾಧ್ಯವಿಲ್ಲ. ಹೀಗಾಗಿ ದಿಟ್ಟವಾದ ನಿರ್ಧಾರ ತೆಗೆದುಕೊಂಡು ಪಶ್ಚಾತ್ತಾಪ ಪಡುವುದಕ್ಕಿಂತ, ರಕ್ಷಣಾತ್ಮಕವಾದ ಕ್ರಮಗಳ ಮೊರೆ ಹೋಗುವುದು ಹೆಚ್ಚು ಸುರಕ್ಷಿತ.
ಈ ಎಲ್ಲಾ ವಿದ್ಯಮಾನಗಳು ಕೇಂದ್ರ ಸರ್ಕಾರ ಮತ್ತು ಆರ್‌ಬಿಐನ ನಿಯಂತ್ರಣದ ವ್ಯಾಪ್ತಿಯಲ್ಲಿಲ್ಲ. ಅವುಗಳ ಮುಂದೆ ಇರುವ ಆಯ್ಕೆಗಳು ಸೀಮಿತವಾದವು. ಹೀಗಾಗಿ ಸರ್ಕಾರ ಮತ್ತು ಆರ್‌ಬಿಐ ವಿವೇಕಯುತವಾಗಿ ನಡೆಯುತ್ತಿವೆ ಮತ್ತು ಅವು ಅಜಾಗರೂಕವಾಗಿಲ್ಲ.
ಲೇಖಕ: ಉದ್ಯಮಿ, ಎಫ್‌ಕೆಸಿಸಿಐ ಮಾಜಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.