ಬೆಂಗಳೂರು: ‘ಈ ಬಾರಿಯ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಬೆಂಗಳೂರು ಬದಲು ಇತರ ನಗರಗಳಿಗೆ ಆದ್ಯತೆ ನೀಡಲಾಗುತ್ತಿದ್ದು, ಅಲ್ಲಿ ಹೂಡಿಕೆ ಮಾಡಲು ಮುಂದೆ ಬರುವ ಉದ್ಯಮಗಳಿಗೆ ಹಲವು ವಿನಾಯಿತಿಗಳನ್ನು ಘೋಷಿಸಲಾಗಿದೆ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದರು.
ಬೆಂಗಳೂರಿನಲ್ಲಿ ನ.2ರಿಂದ 4ರವರೆಗೆ ಮೂರು ದಿನಗಳ ಕಾಲ ನಡೆಯಲಿರುವಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ(ಜಿಮ್) ಕುರಿತುಶನಿವಾರ ನಡೆದ ‘ಪ್ರಜಾವಾಣಿ’ ಸಂವಾದದಲ್ಲಿ ಅಭಿಪ್ರಾಯ ಹಂಚಿಕೊಂಡ ಅವರು, 2–3 ನೇ ಹಂತದ ನಗರಗಳಲ್ಲಿ ಕಂಪನಿಗಳು ರೂಪಿಸುವ ಯೋಜನೆಗಳಿಗೆ ಶೇ 20ರಷ್ಟು ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ. ಅಂದರೆ, ₹25 ಕೋಟಿಯವರೆಗೆ ಪ್ರೋತ್ಸಾಹಧನ ದೊರೆಯಲಿದೆ. ಜತೆಗೆ, ವಹಿವಾಟಿನ ಮೇಲೆ ಶೇ 3ರಷ್ಟು ರಿಯಾಯಿತಿ ನೀಡಲಾಗುತ್ತಿದೆ ಎಂದರು.
‘ಸೆಮಿಕಂಡಕ್ಟರ್ ಉದ್ಯಮವನ್ನು ಬೆಂಗಳೂರಿನಲ್ಲಿ ಸ್ಥಾಪಿಸಲು ಟವರ್ ಎನ್ನುವ ಕಂಪನಿ ಮುಂದಾಗಿತ್ತು. ನಾವು ಮನವರಿಕೆ ಮಾಡಿದ ಬಳಿಕ ಮೈಸೂರಿನಲ್ಲಿ ಸ್ಥಾಪಿಸುತ್ತಿದೆ. ಸುಮಾರು ₹22,500 ಕೋಟಿ ಹೂಡಿಕೆಯಾಗಲಿದ್ದು, ಸಾವಿರಾರು ಮಂದಿಗೆ ಉದ್ಯೋಗ ದೊರೆಯಲಿದೆ. ಇದೇ ರೀತಿ ಬೆಳಗಾವಿಯಲ್ಲಿ ₹2,500 ಕೋಟಿ ಮೊತ್ತದ ಗಾಜಿನ ಕಾರ್ಖಾನೆ ಮತ್ತು ಕಲಬುರಗಿಯಲ್ಲಿ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪಿಸಲಾಗುತ್ತಿದೆ. ತುಮಕೂರು ಬಳಿ ಮುಂಬೈ–ಚೆನ್ನೈ ಕಾರಿಡಾರ್ ಮಾಡಲಾಗುತ್ತಿದೆ’ ಎಂದು ವಿವರಿಸಿದರು.
‘ಸಮಾವೇಶದಲ್ಲಿ₹5 ಲಕ್ಷ ಕೋಟಿಗೂ ಹೆಚ್ಚಿನ ಮೊತ್ತದ ಹೂಡಿಕೆಯನ್ನು ನಿರೀಕ್ಷಿಸುತ್ತಿದ್ದೇವೆ. ಈ ಹೂಡಿಕೆಯಿಂದ ಈ ಬಾರಿ 5 ಲಕ್ಷ ಜನರಿಗೆ ಉದ್ಯೋಗ ದೊರೆಯುವ ಸಾಧ್ಯತೆ ಇದೆ’ ಎಂದರು.
‘ರೋಗಗ್ರಸ್ತ ಕೈಗಾರಿಕೆಗಳಿಗೆ ಪುನಶ್ಚೇತನ ನೀಡುವ ಬಗ್ಗೆ ಹೊಸ ನೀತಿಗಳನ್ನು ರೂಪಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೈಗಾರಿಕೆ ವಲಯದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆ. ಹೀಗಾಗಿ,ತೆಲಂಗಾಣ ಸೇರಿದಂತೆ ಇತರ ರಾಜ್ಯಗಳು ನಮ್ಮ ಹತ್ತಿರವೂ ಇಲ್ಲ. ಯಾವುದೇ ರಾಜ್ಯ ನಮ್ಮ ಸ್ಪರ್ಧಿ ಅಲ್ಲ’ ಎಂದು ಸಮರ್ಥಿಸಿಕೊಂಡರು.
ವ್ಯವಸ್ಥೆಯಲ್ಲಿನಭ್ರಷ್ಟಾಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ‘ಉದ್ಯಮಿಗಳಿಗೆ ಅಂತಹ ಯಾವುದೇ ಸಮಸ್ಯೆ ಎದುರಿಸಿದರೆನೇರವಾಗಿ ಹಿರಿಯ ಅಧಿಕಾರಿಗಳಿಗೆ ಅಥವಾ ನನ್ನ ಗಮನಕ್ಕೆ ತರಬೇಕು. ಮೊದಲು ಕೊಡುವುದನ್ನು ನಿಲ್ಲಿಸಬೇಕು. ತಂತ್ರಜ್ಞಾನ ಮೂಲಕವೂ ಭ್ರಷ್ಟಾಚಾರಕ್ಕೆ ಸಾಕಷ್ಟು ಕಡಿವಾಣ ಹಾಕಲಿದೆ’ ಎಂದರು.
‘ಪಂಚಾಯಿತಿ ಮಟ್ಟದ ತೆರಿಗೆ ವ್ಯವಸ್ಥೆ ಸುಧಾರಿಸಬೇಕು’
‘ಯೋಜನೆಗಳು ಕಾಲಮಿತಿಯಲ್ಲಿ ಪೂರ್ಣಗೊಳ್ಳಬೇಕು. ಜತೆಗೆ ಪಂಚಾಯಿತಿ ವ್ಯವಸ್ಥೆಯಲ್ಲಿ ತೆರಿಗೆ ಸಮಸ್ಯೆಗಳನ್ನು ಬಗೆಹರಿಸಬೇಕು. ಕೈಗಾರಿಕೆಯ ಕಟ್ಟಡದ ಜಾಗಕ್ಕೆ ಮಾತ್ರ ತೆರಿಗೆ ವಿಧಿಸಬೇಕು’ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಬಿ.ವಿ. ಗೋಪಾಲರೆಡ್ಡಿ ಸಂವಾದದಲ್ಲಿ ಹೇಳಿದರು.
‘ಮೊದಲು ಆಶ್ವಾಸನೆಗಳು ಮಾತ್ರ ದೊರೆಯುತ್ತಿದ್ದವು. ಸರ್ಕಾರ ಕೈಗೊಂಡ ಹಲವು ಮಹತ್ವದ ಕ್ರಮಗಳಿಂದ ಉದ್ದಿಮೆದಾರರು ಈಗ ಬೆಂಗಳೂರಿನ ಆಚೆಯೂ ಇತರ ನಗರಗಳಲ್ಲಿ ಉದ್ಯಮಗಳನ್ನು ಸ್ಥಾಪಿಸಲು ಆಸಕ್ತಿ ವಹಿಸುತ್ತಿದ್ದಾರೆ. ಸುಲಲಿತ ವ್ಯಾಪಾರಕ್ಕೆ ಉತ್ತಮ ವಾತಾವರಣ ಸೃಷ್ಟಿಸಲಾಗುತ್ತಿದೆ. ಬಂದರುಗಳ ಅಭಿವೃದ್ಧಿಗೆ ಸರ್ಕಾರ ಹೆಚ್ಚು ಗಮನಹರಿಸಬೇಕಾಗಿದೆ. ಜತೆಗೆ ಕಂಟೇನರ್‌ಗಳ ಸಮಸ್ಯೆಯೂ ಇದೆ. ಕಂಟೇನರ್ ಕಾರಿಡಾರ್ ಮಾಡಿದರೆ ಅನುಕೂಲವಾಗುತ್ತದೆ. ತ್ಯಾಜ್ಯ ನಿರ್ವಹಣೆ ಸಮಸ್ಯೆಯನ್ನು ಬಗೆಹರಿಸಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.