ADVERTISEMENT

ಜಿಂದಾಲ್‌ಗೆ ಜಮೀನು ಮಾರಾಟ ಸರಿಯೇ?ಕೈಗಾರಿಕೆಗಳಿಗೆ ಆದ್ಯತೆ ಇಲ್ಲ– ಪ್ರಶಾಂತ ಪ್ರಕಾಶ

ಪ್ರಜಾವಾಣಿ ಚರ್ಚೆ: ಬಳ್ಳಾರಿಯಲ್ಲಿ ಜಿಂದಾಲ್ ಕಂಪನಿಗೆ 3,667 ಎಕರೆ ಜಮೀನು ಮಾರಾಟ ನಿರ್ಧಾರ ಸರಿಯೇ? ಆ್ಯಕ್ಸಲ್ ಇಂಡಿಯಾದ ಸಂಸ್ಥಾಪಕ ಪಾಲುದಾರ ಪ್ರಶಾಂತ ಪ್ರಕಾಶ ಅವರ ಲೇಖನ

ಪ್ರಜಾವಾಣಿ ವಿಶೇಷ
Published 6 ಸೆಪ್ಟೆಂಬರ್ 2024, 19:16 IST
Last Updated 6 ಸೆಪ್ಟೆಂಬರ್ 2024, 19:16 IST
<div class="paragraphs"><p>ಜಿಂದಾಲ್‌ಗೆ ಜಮೀನು ಮಾರಾಟ ಸರಿಯೇ?: ಕೈಗಾರಿಕೆಗಳಿಗೆ ಆದ್ಯತೆ ಏಕೆ ಇಲ್ಲ? ಪ್ರಶಾಂತ</p></div>

ಜಿಂದಾಲ್‌ಗೆ ಜಮೀನು ಮಾರಾಟ ಸರಿಯೇ?: ಕೈಗಾರಿಕೆಗಳಿಗೆ ಆದ್ಯತೆ ಏಕೆ ಇಲ್ಲ? ಪ್ರಶಾಂತ

   

ಭಾರತವೇ ಆಗಲಿ, ನಮ್ಮ ಕರ್ನಾಟಕವೇ ಆಗಲಿ... ಮೂಲಭೂತವಾಗಿ ಕೃಷಿ ಪ್ರಧಾನ ಆರ್ಥಿಕ ವ್ಯವಸ್ಥೆಗಳು ಎನ್ನುವ ಗ್ರಹಿಕೆಯನ್ನು ಸ್ವಾತಂತ್ರ್ಯ ಬಂದಾಗಿನಿಂದಲೂ ಬಿತ್ತಲಾಗಿದೆ. ಸಾರ್ವಜನಿಕ ಬದುಕಿನಲ್ಲಿರುವವರು ತಮಗೆ ಇಷ್ಟವಿದೆಯೋ ಇಲ್ಲವೋ, ಕೃಷಿಯ ಪರವಾಗಿ ರಮ್ಯವಾಗಿ ಮಾತನಾಡಬೇಕು, ರೈತಾಪಿ ವರ್ಗದ ಬಗ್ಗೆ ಸಹಾನುಭೂತಿ ಸೂಚಿಸುತ್ತಲೇ ಇರಬೇಕು ಎನ್ನುವುದು ಸಂಪ್ರದಾಯದಂತಾಗಿದೆ. 

ನಾನು ಕೃಷಿ ಕ್ಷೇತ್ರದ ವಿರೋಧಿಯಲ್ಲ. 140 ಕೋಟಿ ಜನರಿರುವ ದೇಶದಲ್ಲಿ ಕೃಷಿಯ ಸ್ವಾವಲಂಬನೆ, ನಮ್ಮ ಆಹಾರ ಭದ್ರತೆ, ರೈತನಿಗೂ ಗರಿಷ್ಠ ಲಾಭ, ಕೃಷಿ ಉತ್ಪನ್ನಗಳಿಗೆ ಒಳ್ಳೆಯ ಮಾರುಕಟ್ಟೆ, ಅವುಗಳ ರಫ್ತು, ನೀರಾವರಿ, ಕೃಷಿಗೆ ಪೂರಕವಾಗಿ ತೋಟಗಾರಿಕೆ, ಹೈನುಗಾರಿಕೆಗಳ ಬೆಳವಣಿಗೆ ಇವೆಲ್ಲವೂ ಇರಲೇಬೇಕು. ಆದರೆ, ಕೃಷಿಯೊಂದೇ ದೇಶದ ಜನರ ಅಗತ್ಯಗಳನ್ನೆಲ್ಲ ಪೂರೈಸಲಾರದು; ಕೃಷಿಯೊಂದಿಗೆ ಕೈಗಾರಿಕಾ ಬೆಳವಣಿಗೆಗೂ ನಾವು ಒತ್ತು ಕೊಡಬೇಕು.

ADVERTISEMENT

ನಮ್ಮಲ್ಲಿ ರೈತಾಪಿ ಸಮುದಾಯವನ್ನು ಒಂದು ‘ರಾಜಕೀಯ ಶಕ್ತಿ’ ಎನ್ನುವಂತೆ ನೋಡಲಾಗುತ್ತಿದೆ. ಈ ಪರಿಕಲ್ಪನೆಯೇ ಸಮಸ್ಯಾತ್ಮಕವಾಗಿದೆ. ಈ ದೃಷ್ಟಿಯಿಂದಾಗಿ ಕೃಷಿಕರಿಗೆ ಇರುವ ‘ತೂಕ’ವು ಸಾವಿರಾರು ಕೋಟಿ ಬಂಡವಾಳ ಹೂಡುವ ಮತ್ತು ಉದ್ಯೋಗ ಸೃಷ್ಟಿಸುವ ಕೈಗಾರಿಕೋದ್ಯಮಿಗಳಿಗೆ ಇಲ್ಲ. ಇಡೀ ವ್ಯವಸ್ಥೆಯಲ್ಲಿ ಕೃಷಿ ಮತ್ತು ಕೈಗಾರಿಕೆ ಎರಡೂ ಒಂದು ಗಾಡಿಯ ನೊಗಕ್ಕೆ ಹೆಗಲು ಕೊಟ್ಟಿರುವ ಎರಡು ಎತ್ತುಗಳಿದ್ದಂತೆ ಎಂದು ನಾವು ಕಾಣುವವರೆಗೂ ಈ ಸಮಸ್ಯೆ ಹಾಗೆಯೇ ಇರುತ್ತದೆ.

ಭಾರತದ ಜಿಡಿಪಿ ಬೆಳವಣಿಗೆಗೆ ಕೃಷಿರಂಗದ ಕೊಡುಗೆ ಈಗ ಶೇ 18ರ ಆಸುಪಾಸಿನಲ್ಲಿದೆ. 2021-22ರ ಅಂಕಿ ಅಂಶಗಳ ಪ್ರಕಾರ, ಕೈಗಾರಿಕಾ ರಂಗವು ನಮ್ಮ ಜಿಡಿಪಿಗೆ ವಾರ್ಷಿಕವಾಗಿ ಶೇ 28.3ರಷ್ಟು ಕೊಡುಗೆ ನೀಡುತ್ತಿದೆ. ಜಿಡಿಪಿಗೆ ಶೇ 53.3ರಷ್ಟು ಕೊಡುಗೆ ಸೇವಾವಲಯದಿಂದ ಬರುತ್ತಿದೆ. ಕರ್ನಾಟಕದಲ್ಲಿ ಈ ಕೊಡುಗೆಯು ಕ್ರಮವಾಗಿ ಶೇ 15, ಶೇ 19 ಮತ್ತು ಶೇ 66ರಷ್ಟಿದೆ. ವರ್ಷದಿಂದ ವರ್ಷಕ್ಕೆ ನಮ್ಮ ಜಿಡಿಪಿಗೆ ಕೃಷಿಕ್ಷೇತ್ರದ ಕೊಡುಗೆ ಕಡಿಮೆಯಾಗುತ್ತಿದೆ ಎನ್ನುವುದಂತೂ ವಾಸ್ತವ.

ಇದು ಸ್ಪರ್ಧಾತ್ಮಕ ಯುಗ. ನಾವು ಜಾಗತೀಕರಣಕ್ಕೆ ತೆರೆದುಕೊಂಡು 33 ವರ್ಷಗಳಾದವು. ನಮಗಿಂತ ಮೊದಲೇ, 1978ರಲ್ಲೇ ಆರ್ಥಿಕ ಉದಾರೀಕರಣಕ್ಕೆ ತೆರೆದುಕೊಂಡ ಚೀನಾ ಆರ್ಥಿಕವಾಗಿ ನಮಗಿಂತ ಎಂಟು ಪಟ್ಟು ಮುಂದಿದೆ. ಆದರೆ, ಇತ್ತ ಭಾರತ/ಕರ್ನಾಟಕ ಇನ್ನೂ ರಕ್ಷಣಾತ್ಮಕ ತಂತ್ರವನ್ನೇ ಅನುಸರಿಸುತ್ತಿವೆ. ಇಷ್ಟರ ಮಧ್ಯೆಯೂ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್‌, ತಮಿಳುನಾಡು, ಅವಿಭಜಿತ ಆಂಧ್ರಪ್ರದೇಶ ಮುಂತಾದ ರಾಜ್ಯಗಳು ಗಮನಾರ್ಹವಾಗಿ ಕೈಗಾರಿಕಾ ಬೆಳವಣಿಗೆ ಸಾಧಿಸಿವೆ. ಉತ್ತರ ಭಾರತದ ರಾಜ್ಯಗಳು ಈ ಸತ್ಯವನ್ನು ತಡವಾಗಿ ಅರಿತುಕೊಂಡು, ಈಗ ಮೈ ಕೊಡವಿಕೊಂಡು ಎದ್ದೇಳುತ್ತಿವೆ. ಇವೆಲ್ಲ ಒಂದು ಮಟ್ಟದಲ್ಲಿ ಸಮಾಧಾನದ ಸಂಗತಿಗಳು, ನಿಜ. ಆದರೂ ದೊಡ್ಡದೊಡ್ಡ ನಗರಗಳಾಚೆಗೆ ಬಹಳ ಗಟ್ಟಿಯಾದ ಉದ್ಯಮಗಳನ್ನು ತೆಗೆದುಕೊಂಡು ಹೋಗಿ, ನೆಲೆಯೂರುವಂತೆ ಮಾಡುವುದು ತೃಪ್ತಿಕರವೆನ್ನುವಷ್ಟರ ಮಟ್ಟಿಗೆ ಸಾಧ್ಯವಾಗಿಲ್ಲ.

ಕರ್ನಾಟಕವು ಐಟಿ-ಬಿಟಿ, ಸೆಮಿಕಂಡಕ್ಟರ್, ಎಐ, ಬ್ಲಾಕ್-ಚೈನ್, ಐಒಟಿ, ಸಂಶೋಧನೆ ಮತ್ತು ಅಭಿವೃದ್ಧಿ, ಜಾಗತಿಕ ಉತ್ಕೃಷ್ಟತಾ ಕೇಂದ್ರಗಳು, ಬಂಡವಾಳ ಹೂಡಿಕೆ ಆಕರ್ಷಣೆ, ಇನೊವೇಶನ್, ಉದ್ಯಮಸ್ನೇಹಿ ಕಾರ್ಯಪರಿಸರ, ಸ್ಟಾರ್ಟ್‌ ಅಪ್… ಇವುಗಳಲ್ಲೆಲ್ಲ ಅಗ್ರಸ್ಥಾನದಲ್ಲೇ ಇದೆ ನಿಜ. ಆದರೆ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್‌, ತೆಲಂಗಾಣ ಮುಂತಾದ ರಾಜ್ಯಗಳಿಂದ ತೀವ್ರ ಸ್ಪರ್ಧೆ ಇದೆ. ಈಗ ಉತ್ತರಪ್ರದೇಶದಂತಹ ರಾಜ್ಯ ಕೂಡ ನಮಗೆ ಸ್ಪರ್ಧೆ ಒಡ್ಡುತ್ತಿದೆ. ಇದರ ಮಧ್ಯೆ ಉದ್ಯಮಿಗಳನ್ನು ನಮ್ಮಲ್ಲೇ ಉಳಿಸಿಕೊಳ್ಳಲು, ಸೆಳೆಯಲು ಪ್ರೋತ್ಸಾಹ, ಉತ್ತೇಜನ, ರಿಯಾಯಿತಿ, ಸಬ್ಸಿಡಿ, ವಿನಾಯಿತಿ ಇವುಗಳನ್ನು ಆಕರ್ಷಕವೆನ್ನುವಂತೆ ಕೊಡಲೇಬೇಕಾಗುತ್ತದೆ. ಇಲ್ಲದಿದ್ದರೆ, ಉದ್ಯಮಿಗಳು ಬೇರೆ ರಾಜ್ಯಗಳಿಗೆ ಹೋಗಲು ಶುರು ಮಾಡುತ್ತಾರೆ.

ಉದ್ಯಮ ಸ್ಥಾಪನೆ ಎಂದರೆ ಅದೊಂದು ದೊಡ್ಡ ರಿಸ್ಕ್! ಇದರಲ್ಲಿ ಜೀವನ್ಮರಣದ ಪ್ರಶ್ನೆ ಇರುತ್ತದೆ. ಏಕೆಂದರೆ, ಬಂಡವಾಳ ಕ್ರೋಡೀಕರಣ ಮತ್ತು ಹೂಡಿಕೆ-ಉದ್ಯೋಗ ಸೃಷ್ಟಿ-ಉತ್ಪಾದನೆ-ಮಾರುಕಟ್ಟೆ-ಆರ್ಥಿಕ ವರಮಾನ-ರಫ್ತು-ಸರ್ಕಾರದ ಪ್ರೋತ್ಸಾಹ- ಜಾಗತಿಕ ಏರಿಳಿತಗಳು ಇವೆಲ್ಲವೂ ಒಂದು ಸರಪಣಿ. ಇದರಲ್ಲಿ ಒಂದು ಕೊಂಡಿಯಲ್ಲಿ ಏನಾದರೂ ವ್ಯತ್ಯಾಸವಾದರೂ ಉದ್ಯಮಿ ಮುಳುಗುತ್ತಾನೆ. ನಮ್ಮಲ್ಲಿ ನಗರಪ್ರದೇಶಗಳತ್ತ ಹೆಚ್ಚುತ್ತಿರುವ ನಿರಂತರ ವಲಸೆ, ಜನಸಂಖ್ಯೆಯ ಅಗಾಧತೆ, ಸತತ ನಗರೀಕರಣ, ನಿರುದ್ಯೋಗ ನಿವಾರಣೆಯ ಜರೂರು ಇವನ್ನೆಲ್ಲ ಕಣ್ಣಮುಂದೆ ತಂದುಕೊಂಡರೆ, ಕೈಗಾರಿಕೆಗಳು ಯಾಕೆ ಅಗತ್ಯ ಎನ್ನುವ ಸತ್ಯದ ಸಾಕ್ಷಾತ್ಕಾರವಾಗುತ್ತದೆ. ಹೀಗಾಗಿ ನಾವು ನಮ್ಮ ಚಿಂತನೆಗಳಲ್ಲಿ ‘ಕಂಫರ್ಟ್ ಝೋನ್’ನಿಂದ ಆಚೆಗೆ ಬರಬೇಕಾದ ತುರ್ತು ಇದೆ.

ರಾಜ್ಯದಲ್ಲಿ ಈಗ ಸರ್ಕಾರ ಜಿಂದಾಲ್ ಕಂಪನಿಗೆ ನಿಯಮಾನುಸಾರವಾಗಿಯೇ 3,667 ಎಕರೆ ಜಮೀನು ಕೊಡಲು ಮುಂದಾಗಿರುವುದು ಅನಗತ್ಯ ಕಾರಣಗಳಿಗಾಗಿ ವಿವಾದದ ಸ್ವರೂಪ ಪಡೆದುಕೊಂಡಿದೆ. ಇದೊಂದು ಬೇಸರದ ವಿದ್ಯಮಾನ. ₹90 ಸಾವಿರ ಕೋಟಿ ಹೂಡಿಕೆ ಮಾಡಿ, 50 ಸಾವಿರ ಉದ್ಯೋಗ ಸೃಷ್ಟಿಸಿರುವ ಒಂದು ಬೃಹತ್ ಉದ್ಯಮ ಸಂಸ್ಥೆಯ ವಿಚಾರದಲ್ಲಿ ಆರೋಪ-ಪ್ರತ್ಯಾರೋಪಗಳ ಸದ್ದು ಜೋರಾಗಿರುವುದು ಒಳ್ಳೆಯ ಸೂಚನೆಯಲ್ಲ. ಈ ವಿಚಾರದಲ್ಲಿ ಸರ್ಕಾರ ತನ್ನ ಮಾತನ್ನು ಉಳಿಸಿಕೊಳ್ಳಬೇಕು. ಮುಖ್ಯವಾಗಿ, ರಾಜಕೀಯ ಪಕ್ಷಗಳು ತಾವು ಆಡಳಿತ ನಡೆಸುತ್ತಿದ್ದರೆ ಜಿಂದಾಲ್ ಪರ ಮಾತನಾಡುವುದು ಮತ್ತು ವಿರೋಧ ಪಕ್ಷಗಳ ಸಾಲಿನಲ್ಲಿದ್ದಾಗ ವಿರುದ್ಧವಾಗಿ ಮಾತನಾಡುವುದು ತಪ್ಪಬೇಕು. ಇಂತಹ ಪ್ರವೃತ್ತಿಯಿಂದ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತದಷ್ಟೆ. 

ಮುಖ್ಯವಾಗಿ ಹೇಳಬೇಕೆಂದರೆ, ರಾಜ್ಯದ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಶಿವಮೊಗ್ಗ, ಬೆಳಗಾವಿ, ಬೆಂಗಳೂರು ಹೊರವಲಯ ಮತ್ತು ಗ್ರಾಮಾಂತರ, ತುಮಕೂರು ಮುಂತಾದ ಕಡೆಗಳಲ್ಲೆಲ್ಲ ಕೈಗಾರಿಕೆಗಳ ಸ್ಥಾಪನೆಗೆ ಭೂಮಿ ಬೇಕೆಂದರೆ ಎಕರೆಗೆ ಕೋಟಿಗಟ್ಟಲೆ ಹಣ ನೀಡಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಉದ್ಯಮಿಗೆ ಲಾಭದ ಖಾತ್ರಿ ಎಲ್ಲಿದೆ? ಉದ್ಯಮಿಗಳು ಬೀದಿಗೆ ಬಿದ್ದರೆ ಅವನನ್ನೇ ನೆಚ್ಚಿಕೊಂಡಿರುವವರ ಗತಿ ಏನು? ಕಾಲ ಮಿಂಚಿ ಹೋಗುವ ಮೊದಲು, ನಮ್ಮ ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಕೈಗಾರಿಕೆಗಳು ಮತ್ತು ಉದ್ಯಮಿಗಳ ಬಗ್ಗೆ ವಾಸ್ತವಿಕ ನೆಲೆಗಟ್ಟಿನಲ್ಲಿ ಪುರೋಗಾಮಿಯಾಗಿ ಯೋಚಿಸುವುದನ್ನು ಆರಂಭಿಸಬೇಕು. ಪ್ರತಿಗಾಮಿ ಆಲೋಚನೆಗಳ ಡಂಗುರ ಹೊಡೆಯುತ್ತಿದ್ದ ಕೆಲವು ರಾಜ್ಯಗಳು ಅನುಭವಿಸುತ್ತಿರುವ ದುರವಸ್ಥೆಯಿಂದ ಕರ್ನಾಟಕ ಪಾಠಗಳನ್ನು ಕಲಿಯಬೇಕು. ಇಲ್ಲದೆ ಹೋದರೆ, ‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಮುಚ್ಚಿದ’ ಎನ್ನುವಂತಾಗುತ್ತದಷ್ಟೆ.

ಲೇಖಕ: ಆ್ಯಕ್ಸಲ್ ಇಂಡಿಯಾದ ಸಂಸ್ಥಾಪಕ ಪಾಲುದಾರ

ಪ್ರಶಾಂತ ಪ್ರಕಾಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.