ಡಾಲರ್ ಎದುರು ರೂಪಾಯಿ ಮೌಲ್ಯವು ₹80ರ ಆಸುಪಾಸಿಗೆ ಕುಸಿದಿರುವುದು ಅರ್ಥವ್ಯವಸ್ಥೆಯ ಮೂಲಭೂತ ನೆಲೆಗಟ್ಟುಗಳು ದುರ್ಬಲವಾಗಿವೆ ಎಂಬುದರ ಸೂಚನೆಯಾಗಿದೆ. ಬಡ್ಡಿದರ, ಅಂತರರಾಷ್ಟ್ರೀಯ ವ್ಯಾಪಾರ, ಹಣದುಬ್ಬರ, ಸರ್ಕಾರದ ಸಾಲ, ನಿರುದ್ಯೋಗ, ಹೂಡಿಕೆಯು ಅರ್ಥವ್ಯವಸ್ಥೆಯ ಆರೋಗ್ಯದ ಮುಖ್ಯ ಸೂಚಕಗಳಾಗಿವೆ. ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ನ ಸಂಪೂರ್ಣ ನಿಷ್ಕ್ರಿಯತೆಯು ಅರ್ಥವ್ಯವಸ್ಥೆಯ ಮೂಲಭೂತ ನೆಲೆಗಟ್ಟುಗಳನ್ನು ಶಿಥಿಲಗೊಳಿಸಿದೆ
***
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕ ಡಾಲರ್ ಎದುರು ಭಾರತೀಯ ರೂಪಾಯಿಯ ವಿನಿಮಯ ಮೌಲ್ಯವು ಭಾರಿ ಕುಸಿತಕ್ಕೆ ಸಾಕ್ಷಿಯಾಗಿದ್ದು, ಅರ್ಥ ವ್ಯವಸ್ಥೆ ಮತ್ತು ಅಂತರರಾಷ್ಟ್ರೀಯ ಹಣ ವರ್ಗಾವಣೆಯನ್ನು ಬಾಧಿಸಿದೆ. ಡಾಲರ್ ಎದುರು ರೂಪಾಯಿಯ ಮೌಲ್ಯವು ಈ ವರ್ಷ ಶೇ 5.9ರಷ್ಟು ಕೆಳಕ್ಕೆ ಇಳಿದಿರುವುದರಿಂದ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿಯ ಬಲ ಕುಂದಿದೆ. ಅಂದರೆ, ಈಗ ಒಂದು ಡಾಲರ್ ಖರೀದಿಸಬೇಕಿದ್ದರೆ ಹೆಚ್ಚು ರೂಪಾಯಿ ನೀಡಬೇಕಿದೆ. ಡಾಲರ್ ಎದುರು ರೂಪಾಯಿ ಮೌಲ್ಯವು ₹80ರ ಆಸುಪಾಸಿಗೆ ಕುಸಿದಿರುವುದು ಅರ್ಥವ್ಯವಸ್ಥೆಯ ಮೂಲಭೂತ ನೆಲೆಗಟ್ಟುಗಳು ದುರ್ಬಲವಾಗಿವೆ ಎಂಬುದರ ಸೂಚನೆಯಾಗಿದೆ. ಬಡ್ಡಿದರ, ಅಂತರರಾಷ್ಟ್ರೀಯ ವ್ಯಾಪಾರ, ಹಣದುಬ್ಬರ, ಸರ್ಕಾರದ ಸಾಲ, ನಿರುದ್ಯೋಗ, ಹೂಡಿಕೆಯು ಅರ್ಥವ್ಯವಸ್ಥೆಯ ಆರೋಗ್ಯದ ಮುಖ್ಯ ಸೂಚಕಗಳಾಗಿವೆ. ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಸಂಪೂರ್ಣ ನಿಷ್ಕ್ರಿಯತೆಯು ಅರ್ಥವ್ಯವಸ್ಥೆಯ ಮೂಲಭೂತ ನೆಲೆಗಟ್ಟುಗಳನ್ನು ಶಿಥಿಲಗೊಳಿಸಿದೆ. ಅಂತರರಾಷ್ಟ್ರೀಯ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯವು ಪಾತಾಳಕ್ಕೆ ಕುಸಿಯಲೂ ಇದು ಕಾರಣವಾಗಿದೆ.
ಡಾಲರ್ ಎದುರು ರೂಪಾಯಿಯ ವಿನಿಮಯ ದರವು ಹೇಗೆ ನಿರ್ಧಾರವಾಗುತ್ತದೆ ಎಂಬುದು ಅರ್ಥವ್ಯವಸ್ಥೆಯ ಮೂಲ ನೆಲೆಗಟ್ಟುಗಳನ್ನು ಅವಲಂಬಿಸಿರುತ್ತದೆ. ಭಾರತದ ಅರ್ಥವ್ಯವಸ್ಥೆಗೆ ಸದ್ಯದಲ್ಲಿಯೇ ದೊಡ್ಡ ಗಂಡಾಂತರ ಕಾದಿದೆ ಎಂಬುದನ್ನು ರೂಪಾಯಿಯ ಕುಸಿತದ ವೇಗವು ತೋರಿಸುತ್ತದೆ.
ಅಂತರರಾಷ್ಟ್ರೀಯ, ದೇಶೀಯ ಆರ್ಥಿಕತೆಯ ಮೂಲಭೂತ ಅಂಶಗಳು ಮತ್ತು ವಿದ್ಯಮಾನಗಳು ವಿನಿಮಯ ದರದ ಏರಿಳಿತದ ಮೇಲೆ ನೇರ ಪ್ರಭಾವ ಬೀರುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಏರಿಕೆ ಮತ್ತು ಭಾರತವು ಕಚ್ಚಾ ತೈಲಕ್ಕಾಗಿ ಆಮದನ್ನೇ ಮುಖ್ಯವಾಗಿ ನೆಚ್ಚಿಕೊಂಡಿರುವುದು ರೂಪಾಯಿ ಮೌಲ್ಯ ಕುಸಿಯಲು ಕಾರಣವಾದ ಅಂಶಗಳಲ್ಲಿ ಒಂದು. ಭಾರತದ ಕಚ್ಚಾ ತೈಲ ಬೇಡಿಕೆಯ ಶೇ 85ರಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಅತಿ ಹೆಚ್ಚು ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿರುವ ದೇಶಗಳಲ್ಲಿ ಭಾರತವು ಮೂರನೇ ಸ್ಥಾನದಲ್ಲಿದೆ. 2021–22ರಲ್ಲಿ ಭಾರತವು 21.2 ಕೋಟಿ ಟನ್ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿತ್ತು. ಇದಕ್ಕೆ ತಗುಲಿದ ವೆಚ್ಚ ಸುಮಾರು ₹9.50 ಲಕ್ಷ ಕೋಟಿ. ಬ್ರೆಂಟ್ ಕಚ್ಚಾ ತೈಲದ ದರವು ಪ್ರತಿ ಬ್ಯಾರಲ್‌ಗೆ 110 ಡಾಲರ್‌ಗೆ (₹8,789) ಏರಿಕೆಯಾದದ್ದು ಅಮೆರಿಕ ಡಾಲರ್‌ನ ಬೇಡಿಕೆಯನ್ನು ಹೆಚ್ಚಿಸಿತು. ಏಕೆಂದರೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲವನ್ನು ಡಾಲರ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ.
ಭಾರತವು ಈಗಾಗಲೇ ₹76,704 ಕೋಟಿ ಚಾಲ್ತಿ ಖಾತೆ ಕೊರತೆಯನ್ನು ಎದುರಿಸುತ್ತಿದೆ. ಇದು ಒಟ್ಟು ದೇಶಿ ಉತ್ಪನ್ನದ (ಜಿಡಿಪಿ) ಶೇ 1.3ರಷ್ಟಾಗುತ್ತದೆ. ರೂಪಾಯಿ ಮೌಲ್ಯ ಕುಸಿತದಿಂದಾಗಿ ಚಾಲ್ತಿ ಖಾತೆ ಕೊರತೆಯು ಇನ್ನಷ್ಟು ಹೆಚ್ಚಾಗಬಹುದು. ಆರ್ಥಿಕ ಕೊರತೆಯು ಜಿಡಿಪಿಯ ಶೇ 6.4ರಷ್ಟಕ್ಕೆ ತಲುಪಿರುವ ಕಾರಣ ದೇಶವು ಭಾರಿ ಮೊತ್ತದ ವಿದೇಶಿ ಸಾಲವನ್ನು ಅವಲಂಬಿಸುವಂತಹ ಸ್ಥಿತಿ ಉಂಟಾಗಿದೆ. ಸಾಲಕ್ಕೆ ಪಾವತಿಸಬೇಕಾದ ವಾರ್ಷಿಕ ಬಡ್ಡಿಯೇ ₹9.41 ಲಕ್ಷ ಕೋಟಿಯಷ್ಟು ಎಂದು ಅಂದಾಜಿಸಲಾಗಿದೆ. ಇದು ಒಟ್ಟು ರೆವೆನ್ಯೂ ವೆಚ್ಚದ ಶೇ 29ರಷ್ಟಾಗುತ್ತದೆ. ಇದರಿಂದಾಗಿ ರೂಪಾಯಿ ಅಪಮೌಲ್ಯ ಮಾಡಬೇಕಾದ ಸ್ಥಿತಿ ಉಂಟಾಗುತ್ತದೆ. ಅದಲ್ಲದೆ, ಚಿಲ್ಲರೆ ಹಣದುಬ್ಬರವು ಶೇ 7ರಷ್ಟಕ್ಕೆ ಏರಿಕೆಯಾಗಿರುವುದು, ವಿದೇಶಿ ಸಾಂಸ್ಥಿಕ ಹೂಡಿಕೆದಾರರು 2022ರಲ್ಲಿ ₹2.26 ಲಕ್ಷ ಕೋಟಿ ಮೊತ್ತವನ್ನು ಹಿಂದಕ್ಕೆ ಪಡೆದಿರುವುದು ಕೂಡ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಡಾಲರ್‌ನಲ್ಲಿ ಮಾಡಿದ್ದ ಹೂಡಿಕೆಯನ್ನು ಹಿಂದಕ್ಕೆ ಪಡೆಯಲು ಹೂಡಿಕೆ ಮೇಲೆ ಕಡಿಮೆ ಲಾಭಾಂಶ ಅಥವಾ ಉತ್ಪಾದನಾ ವೆಚ್ಚ ಹೆಚ್ಚಳದಿಂದಾಗಿ ಲಾಭದಲ್ಲಿ ಕುಸಿತ ಕಾರಣವಾಗಿದೆ. ಲಾಭ ಮಾತ್ರವಲ್ಲದೆ, ಅರ್ಥ ವ್ಯವಸ್ಥೆಯು ಪ್ರಬಲ ಮತ್ತು ಸ್ಥಿರವಾಗಿರುವ ದೇಶದಲ್ಲಿ ಹೂಡಿಕೆ ಮಾಡಲು ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬಯಸುತ್ತಾರೆ.
ದೇಶದ ಆರ್ಥಿಕ ಶಕ್ತಿಯು ಡಾಲರ್ ಎದುರು ಆ ದೇಶದ ಕರೆನ್ಸಿಯ ಮೌಲ್ಯದ ಮೇಲೆ ನಿರ್ಧಾರವಾಗುತ್ತದೆ. 2025ರ ಹೊತ್ತಿಗೆ ಅರ್ಥವ್ಯವಸ್ಥೆಯನ್ನು 5 ಲಕ್ಷ ಕೋಟಿ ಡಾಲರ್‌ಗೆ ಏರಿಸಬೇಕು ಎಂಬ ಆಕಾಂಕ್ಷೆಯನ್ನು ದೇಶವು ಹೊಂದಿದೆ. ಆದರೆ, ವಿದೇಶಿ ವಿನಿಮಯ ಮಾರುಕಟ್ಟೆಯು ಇತರ ದೇಶಗಳ ಹೋಲಿಕೆಯಲ್ಲಿ ಭಾರತದ ಆರ್ಥಿಕ ಶಕ್ತಿಯನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರವನ್ನು ಹೊಂದಿದೆ.
ಸರ್ಕಾರವು ಮಧ್ಯಪ್ರವೇಶಿಸಿ ರೂಪಾಯಿ ಮೌಲ್ಯ ಕುಸಿತವನ್ನು ತಡೆಯದೇ ಇದ್ದರೆ ಕ್ರಮೇಣ ಆರ್ಥಿಕ ಬಿಕ್ಕಟ್ಟು ಎದುರಾಗಬಹುದು ಎನ್ನಲಾಗುತ್ತಿದೆ. ರೂಪಾಯಿ ಮೌಲ್ಯ ಕುಸಿತವು ಪಾವತಿ ಸಮತೋಲನ ಸ್ಥಿತಿಯನ್ನು ಬಾಧಿಸಬಹುದು, ಅಂತರರಾಷ್ಟ್ರೀಯ ವ್ಯಾಪಾರಕ್ಕೆ ತೊಡಕು ಉಂಟು ಮಾಡಬಹುದು, ಹಣದುಬ್ಬರವನ್ನು ಇನ್ನಷ್ಟು ಹೆಚ್ಚಿಸಬಹುದು, ಉದ್ಯಮವನ್ನು ಸಂಕಷ್ಟಕ್ಕೆ ದೂಡಬಹುದು ಮತ್ತು ಲಾಭ ಕುಸಿಯಲು ಕಾರಣವಾಗಬಹುದು, ಜೀವನವೆಚ್ಚವನ್ನು ಹೆಚ್ಚಿಸಬಹುದು, ವಿದೇಶಕ್ಕೆ ಹೋಗುವ ಭಾರತೀಯರ ವೆಚ್ಚ ಹೆಚ್ಚಿಸಬಹುದು, ವಿದೇಶಿ ಸಾಲಕ್ಕೆ ನೀಡಬೇಕಾದ ಬಡ್ಡಿಯ ಹೊರೆ ಹೆಚ್ಚಬಹುದು, ನಿರುದ್ಯೋಗ ದರ ಹೆಚ್ಚಿಸಬಹುದು, ವಿದೇಶಿ ನೇರ ಹೂಡಿಕೆ ಕಡಿಮೆ ಆಗಬಹುದು, ಅಂತರರಾಷ್ಟ್ರೀಯ ಹಣಕಾಸು ವರ್ಗಾವಣೆಯು ದುರ್ಬಲಗೊಳ್ಳಬಹುದು ಮತ್ತು ಬೇಡಿಕೆ ಕುಸಿಯಬಹುದು.
ಭಾರತ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಸಕಾಲದಲ್ಲಿ ಕೈಗೊಳ್ಳುವ ಗಟ್ಟಿಯಾದ ನೀತಿಯು ರೂಪಾಯಿ ಮೌಲ್ಯ ಕುಸಿತವನ್ನು ತಡೆಯಬಹುದು. ಹಣದುಬ್ಬರವು ನಾಗಾಲೋಟ ತಲುಪುವ ಮುನ್ನವೇ ಅದನ್ನು ನಿಯಂತ್ರಿಸಬೇಕಾದುದು ಬಹಳ ಮುಖ್ಯ. ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಎಕ್ಸೈಸ್ ಸುಂಕವು ಬಹಳ ಹೆಚ್ಚು ಇದೆ. ಹಣದುಬ್ಬರ ಕಡಿಮೆ ಮಾಡಲು ಈ ದರವನ್ನು ಗಣನೀಯವಾಗಿ ತಗ್ಗಿಸಬೇಕು. ಆರ್‌ಬಿಐಯು 60 ಸಾವರಿ ಕೋಟಿ ಡಾಲರ್ (ಸುಮಾರು ₹47.95 ಲಕ್ಷ ಕೋಟಿ) ವಿದೇಶಿ ವಿನಿಮಯ ಮೀಸಲು ಹೊಂದಿದೆ. ವಿದೇಶಿ ವಿನಿಮಯ ಮೀಸಲಿನ ಒಂದು ಭಾಗವನ್ನು ಮಾರಾಟ ಮಾಡುವ ಮೂಲಕ ಆರ್‌ಬಿಐ ಸಕಾಲದಲ್ಲಿ ಕ್ರಮ ಕೈಗೊಂಡದರೆ ರೂಪಾಯಿಯ ಸ್ಥಿರತೆ ಸಾಧ್ಯವಾಗಬಹುದು. ಇದು ಅಲ್ಪಾವಧಿ ಕ್ರಮ.
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿಯನ್ನು ಸ್ಥಿರಗೊಳಿಸಿ, ಆ ಮೂಲಕ ಮೌಲ್ಯ ಹೆಚ್ಚಿಸಲು ಸರ್ಕಾರ ಮತ್ತು ಆರ್‌ಬಿಐ ಗಂಭೀರ ಪ್ರಯತ್ನ ನಡೆಸಬೇಕು. ರೂಪಾಯಿಯ ಮೌಲ್ಯಕ್ಕೆ ಸ್ಥಿರತೆ ತಂದುಕೊಟ್ಟು, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮತ್ತು ಅನಿವಾಸಿ ಭಾರತೀಯರ ಆತ್ಮವಿಶ್ವಾಸವನ್ನು ಆರ್‌ಬಿಐ ಹೆಚ್ಚಿಸಬೇಕು. ವಿದೇಶಿ ಕರೆನ್ಸಿ ಮತ್ತು ಇತರ ಆರ್ಥಿಕ ಅಪಾಯಗಳು ಭಾರತದ ಮಾರುಕಟ್ಟೆ ಅಥವಾ ಜಾಗತೀಕರಣಗೊಂಡ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅವು ಅರ್ಥವ್ಯವಸ್ಥೆಯ ಮೂಲಭೂತ ಅಂಶಗಳನ್ನೂ ಬಾಧಿಸುತ್ತವೆ. ಆದ್ದರಿಂದ ಅಂತರರಾಷ್ಟ್ರೀಯ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿಯನ್ನು ಬಲಪಡಿಸುವುದರ ಜತೆಗೆ, ಡಾಲರ್ ಎದುರು ರೂಪಾಯಿಯ ಮೌಲ್ಯದ ಅಸ್ಥಿರತೆಯನ್ನು ಕಡಿಮೆ ಮಾಡಬೇಕು. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿಯ ಮೌಲ್ಯಕ್ಕೆ ಎದುರಾಗುವ ಆಘಾತಗಳನ್ನು ನಿಭಾಯಿಸುವುದಕ್ಕಾಗಿ ಅಂತರರಾಷ್ಟ್ರೀಯ ಮತ್ತು ದೇಶೀಯ ರೂಪಾಯಿ ವಿನಿಮಯ ಮಾರುಕಟ್ಟೆಯನ್ನು ಗಟ್ಟಿಗೊಳಿಸಲು ಉಷಾ ಥೋರಟ್ ಅವರ ಅಧ್ಯಕ್ಷತೆಯ ಸಮಿತಿಯು ನೀಡಿದ ವರದಿಯ ಶಿಫಾರಸುಗಳನ್ನು ಆರ್‌ಬಿಐ ಅನುಸರಿಸಬೇಕು.
ಲೇಖಕ: ಪ್ರಾಧ್ಯಾಪಕ ಮತ್ತು ಡೀನ್, ಇನ್ಸ್‌ಟಿಟ್ಯೂಟ್ ಫಾರ್ ಸೋಷಿಯಲ್ ಆ್ಯಂಡ್ ಇಕನಾಮಿಕ್ ಚೇಂಜ್, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.