ADVERTISEMENT

ಪ್ರಜಾವಾಣಿ ಚರ್ಚೆ: ಇದು ಬಹಿಷ್ಕಾರವಲ್ಲ; ಪ್ರೇಕ್ಷಕನ ಸ್ವಾತಂತ್ರ್ಯ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2022, 19:45 IST
Last Updated 26 ಆಗಸ್ಟ್ 2022, 19:45 IST
   

ಅಮೀರ್ ಖಾನ್‌ ನಟನೆಯ ಲಾಲ್‌ ಸಿಂಗ್ ಚಡ್ಡಾ ಸಿನಿಮಾವನ್ನು ಬಹಿಷ್ಕರಿಸಬೇಕು ಎನ್ನುವ ಟ್ವಿಟರ್ ಟ್ರೆಂಡ್ ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಹಿಂದೆಯೂ ಇದೇ ರೀತಿಯಲ್ಲಿ ಹಲವಾರು ಸಿನಿಮಾಗಳು ನೋಡುಗರಿಂದ ಬಹಿಷ್ಕಾರಕ್ಕೊಳಗಾಗಿದ್ದರೂ ಅಮೀರ್ ಖಾನ್ ಒಬ್ಬ ಅನ್ಯ ಕೋಮಿನ ನಟ ಎನ್ನುವ ಕಾರಣಕ್ಕೆ ಬಹಿಷ್ಕಾರ ಹೆಚ್ಚು ಗಮನ ಸೆಳೆದಂತಿದೆ.

ಈ ವಿಚಾರವಾಗಿ ಪ್ರೇಕ್ಷಕರು ಯಾವ ಚಿತ್ರಮಂದಿರಕ್ಕೂ ಬೆಂಕಿ ಹಚ್ಚಲಿಲ್ಲ, ಚಿತ್ರಮಂದಿರಗಳತ್ತ ತೆರಳುತ್ತಿದ್ದ ಪ್ರೇಕ್ಷಕರಿಗೆ ಕತ್ತಿ ತೋರಿಸಿ ಬೆದರಿಸಲಿಲ್ಲ. ಅತ್ಯಂತ ಪ್ರಜಾಸತ್ತಾತ್ಮಕ ರೀತಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ಪರಸ್ಪರ ಹಂಚಿಕೊಳ್ಳುವ ಮೂಲಕ, ತಿರಸ್ಕರಿಸುವಂತೆ ಕರೆ ಕೊಡುವ ಮೂಲಕ ತಮ್ಮ ಪ್ರತಿರೋಧವನ್ನು ತೋರಿಸಿದ್ದಾರೆ.

‘ನಾನು ನಿಮಗೆ ಇಷ್ಟ ಇಲ್ಲ ಎಂದಾದರೆ ನನ್ನ ಸಿನಿಮಾ ನೋಡಬೇಡಿ’ ಎಂದು ನಟಿ ಆಲಿಯಾ ಭಟ್‌ ಹೇಳಿಕೆ ಕೊಟ್ಟಿದ್ದಾರೆ. ಕರೀನಾ ಕಪೂರ್ ಕೂಡ ತಮ್ಮ ಚಿತ್ರದ ಬಿಡುಗಡೆಯ ಸಮಯದಲ್ಲಿ ಇದೇ ಧಾಟಿಯಲ್ಲೇ ಮಾತನಾಡಿದ್ದಿದೆ. ಚಿತ್ರದಲ್ಲಿ ನಟಿಸಿದ ನಟ ನಟಿಯರೇ ಈ ರೀತಿಯ ಹೇಳಿಕೆ ಕೊಡುವುದು ಸರಿ, ಅದು ಅವರ ಹಕ್ಕು ಎನ್ನುವುದಾದರೆ, ದುಡ್ಡು ಕೊಟ್ಟು ನೋಡುವವರಿಗೆ ‘ನಾನು ಆ ಚಿತ್ರವನ್ನು ನೋಡುವುದಿಲ್ಲ, ಮತ್ತು ಇಂತಿಂತಹ ಕಾರಣಕ್ಕಾಗಿ ನೀವೂ ನೋಡಬೇಡಿ’ ಎಂದು ಇತರರಿಗೆ ಹೇಳುವ ಹಕ್ಕು ಒಂದು ಪಟ್ಟು ಹೆಚ್ಚೇ ಇರಬೇಕಲ್ಲವೇ?

ADVERTISEMENT

ಪ್ರೇಕ್ಷಕರ ಈ ನಡೆಯನ್ನು ಉಲ್ಲೇಖಿಸಿ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆ ಎನ್ನುವಂತೆ ಬಿಂಬಿಸಲಾಗುತ್ತಿದೆ. ಪ್ರೇಕ್ಷಕರಿಗಾಗಿ ನಿರ್ಮಿಸುವ ಒಂದು ಚಿತ್ರದಲ್ಲಿ ಅದೇ ಪ್ರೇಕ್ಷಕನಿಗೆ ಅಸಹನೀಯ ಎನ್ನುವ ಅಂಶಗಳನ್ನು ತುಂಬಿ ತೋರಿಸುವ ನಟ/ನಿರ್ಮಾಪಕರಿಗೆ ಇರುವ ಅಸಹಿಷ್ಣುತೆಯನ್ನು ಜನರ ಮೇಲೆ ಹೀಗೆ ಆರೋಪಿಸಬಹುದೇ? ಅಷ್ಟಕ್ಕೂ ತಮ್ಮ ಪ್ರೇಕ್ಷಕರದ್ದೇ ಆಚಾರ ವಿಚಾರಗಳನ್ನು, ಸಂಸ್ಕೃತಿಯನ್ನು, ಆಚರಣೆಗಳನ್ನು ಹೀನವಾಗಿ ಚಿತ್ರಿಸಿ ತೋರಿಸುವ ಚಿತ್ರರಂಗದವರಿಗೆ ಇರುವಷ್ಟು ಅಸಹಿಷ್ಣುತೆ ಇನ್ನೊಬ್ಬರಿಗೆ ಇರಲು ಸಾಧ್ಯವೇ?

ತಮ್ಮ ಚಿತ್ರಗಳನ್ನು ಪ್ರೇಕ್ಷಕರು ಸಾಮೂಹಿಕವಾಗಿ ಬಹಿಷ್ಕರಿಸುತ್ತಿರುವುದು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಎಂದೂ ಕೆಲವು ನಟ, ನಿರ್ದೇಶಕರು ಹೇಳಿಕೊಳ್ಳುತ್ತಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯ ಕೇವಲ ಸಿನಿಮಾ ನಿರ್ಮಾಪಕರು ಮತ್ತು ನಟರಿಗೆ ಮಾತ್ರವೇ ಇರುವುದೇ? ಯಾವುದನ್ನು ನೋಡಬೇಕು, ಯಾವುದನ್ನು ತಿರಸ್ಕರಿಸ ಬೇಕು ಎನ್ನುವ ಸ್ವಾತಂತ್ರ್ಯ ಮತ್ತು ಇಂತಿಂತಹ ಕಾರಣಕ್ಕಾಗಿ ನೀವೂ ಚಿತ್ರವನ್ನು ನೋಡಬೇಡಿ ಎಂದು ತನ್ನ ಸಹ ಪ್ರೇಕ್ಷಕನಿಗೆ ಹೇಳುವ ಸ್ವಾತಂತ್ರ್ಯ ನೋಡುಗನೊಬ್ಬನಿಗೆ ಇರಲೇಬಾರದೇ?

‘ಚಲನಚಿತ್ರ ಉದ್ಯಮ ಒಂದು ಆಕರ್ಷಕ ಮತ್ತು ಬೃಹತ್ ಉದ್ಯಮ. ಪ್ರತಿ ಸಿನಿಮಾದ ಹಿಂದೆಯೂ ನೂರಾರು ಜನರ ಪರಿಶ್ರಮ, ನೂರಾರು ಕೋಟಿ ಹೂಡಿಕೆ ಇರುತ್ತದೆ. ಹಾಗಿರುವಾಗ ಪ್ರೇಕ್ಷಕರು ಸಿನಿಮಾ ವೊಂದನ್ನು ಹೀಗೆ ಬಹಿಷ್ಕರಿಸಿ ಅದರ ಕಾರ್ಮಿಕರನ್ನು ಮತ್ತು ನಿರ್ಮಾಪಕರನ್ನು ನಷ್ಟಕ್ಕೆ ದೂಡುವುದು ಸರಿಯೇ’ ಎನ್ನುವ ಕೋನದಲ್ಲೂ ಚರ್ಚೆಗಳಾಗುತ್ತಿವೆ.

ಇತ್ತೀಚೆಗಷ್ಟೇ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ನಿಷೇಧಿಸ ಲಾಗಿದೆ. ಪ್ಲಾಸ್ಟಿಕ್ ಉದ್ಯಮದಲ್ಲೂ ಸಾವಿರಾರು ಜನ ತೊಡಗಿಕೊಂಡಿದ್ದಾರಲ್ಲವೇ? ಅದರ ಮೇಲೂ ಸಾವಿರಾರು ಕೋಟಿ ರೂಪಾಯಿ ಬಂಡವಾಳ ಹೂಡಿಕೆಯಾಗಿದೆಯಲ್ಲವೇ? ಆದರೂ ಸರ್ಕಾರವೇ ಅದನ್ನು ನಿಷೇಧಿಸುವುದು ಸರಿಯೇ? ಅದು ಕಾನೂನುಬದ್ಧ ಎನ್ನುವುದಾದರೆ, ಪ್ರೇಕ್ಷಕರೇ ತಮಗಿಷ್ಟವಿಲ್ಲದ್ದನ್ನು ಕಾರಣ ಸಹಿತವಾಗಿ ತಿರಸ್ಕರಿಸುವುದು ಹೇಗೆ ಚಿತ್ರೋದ್ಯಮಕ್ಕೆ ಕಣ್ಣೀರು ತರಿಸುತ್ತದೆ?

ಮುಂದಿನ ವಾರದಲ್ಲಿ ಬರುವ ಗೌರಿ ಗಣೇಶ ಹಬ್ಬ ಹಿಂದೂಗಳ ಪಾಲಿನ ಅತಿ ದೊಡ್ಡ ಹಬ್ಬ. ಹಿಂದೂಸ್ತಾನದ ಮನೆ ಮನೆಯಲ್ಲೂ, ಬೀದಿ ಬೀದಿಯಲ್ಲೂ ಮಣ್ಣಿನ ಗಣಪತಿಯ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಆದರೆ ಇನ್ನೇನು ಹಬ್ಬ ಕೆಲವೇ ದಿನ ಇದೆ ಎನ್ನುವಾಗ ರಾಸಾಯನಿಕ ಬಣ್ಣ ಲೇಪಿಸಿದ ಆಕರ್ಷಕ ಗಣೇಶ ವಿಗ್ರಹಗಳನ್ನು ಸರ್ಕಾರ ನಿಷೇಧಿಸುತ್ತದೆ. ಪರಿಸರ ಪ್ರೇಮಿಗಳೂ ಅಂತಹ ಗಣೇಶ ವಿಗ್ರಹಗಳನ್ನು ಬಹಿಷ್ಕರಿಸುತ್ತಾರೆ. ಇತರರಿಗೂ ಅದನ್ನು ಬಹಿಷ್ಕರಿಸುವಂತೆ ಸಂದೇಶ ನೀಡುತ್ತಾರೆ. ಸಿನಿಮಾ ನಿರ್ಮಾಣದಂತೆಯೇ ಗಣೇಶ ಮೂರ್ತಿಗಳ ನಿರ್ಮಾಣದಲ್ಲೂ ಸಾವಿರಾರು ಜನರು ತೊಡಗಿಸಿಕೊಂಡಿರುತ್ತಾರೆ, ಸಾವಿರಾರು ಕೋಟಿಗಳ ಹೂಡಿಕೆಯಿರುತ್ತದೆ. ಇಷ್ಟಾಗಿಯೂ ಹಿಂದೂ ದೇವರ ಮೂರ್ತಿಗಳನ್ನು ಅದು ‘ಪರಿಸರಕ್ಕೆ ಮಾರಕ’ ಎನ್ನುವ ಕಾರಣಕ್ಕೆ ಲಾಭ ನಷ್ಟಗಳ ಬಗ್ಗೆ ಯೋಚಿಸದೆ ಸ್ವತಃ ಹಿಂದೂಗಳೇ ಬಹಿಷ್ಕರಿಸುತ್ತಾರೆ. ಪರಿಸರಕ್ಕೆ ಹಾನಿಯಾಗುತ್ತದೆ ಎನ್ನುವ ಕಾರಣಕ್ಕೆ ಬಣ್ಣದ ಗಣೇಶನನ್ನೇ ಬಹಿಷ್ಕರಿಸುವುದು ಸರಿ ಎನ್ನುವುದಾದರೆ, ತಮ್ಮ ನಂಬಿಕೆ/ಸಂಸ್ಕೃತಿಗೆ ಹಾನಿಯಾಗುತ್ತಿದೆ ಎನ್ನುವ ಕಾರಣಕ್ಕೆ ಒಂದು ಸಿನಿಮಾವನ್ನು ಪ್ರೇಕ್ಷಕ ಸಮೂಹ ಬಹಿಷ್ಕರಿಸಿದರೆ ಅದು ತಪ್ಪು ಹೇಗಾಗುತ್ತದೆ?

ಅಷ್ಟಕ್ಕೂ ಪ್ರೇಕ್ಷಕ ಇಡೀ ಚಿತ್ರರಂಗವನ್ನೇನೂ ಬಹಿಷ್ಕರಿಸಲಿಲ್ಲ. ಇದೇ ಬಹಿಷ್ಕಾರದ ಸಮಯದಲ್ಲೇ ವಿಕ್ರಾಂತ್ ರೋಣ, ಕಾರ್ತಿಕೇಯ-2 ಮುಂತಾದ ಚಿತ್ರಗಳು ಉತ್ತಮ ಗಳಿಕೆ ಕಂಡಿವೆ. ಪ್ರೇಕ್ಷಕ ತನಗೆ ಯಾವುದು ಬೇಕೋ ಅದನ್ನಷ್ಟೇ ಆರಿಸಿಕೊಂಡರೆ ಅದನ್ನು ತಪ್ಪು ಎಂದು ಹೇಳುವ ಹಕ್ಕು ಚಿತ್ರರಂಗಕ್ಕೇಕೆ ಇರಬೇಕು? ಕಾರಣ ಯಾವುದೇ ಇರಲಿ, ನೋಡುಗನಿಗಿಷ್ಟವಿಲ್ಲದ ನಾಯಕ/ನಾಯಕಿ/ನಿರ್ದೇಶಕರನ್ನು ಇಟ್ಟುಕೊಂಡು ಅವರಿಗಿಷ್ಟವಿಲ್ಲದ ಕಥೆ/ದೃಶ್ಯಗಳನ್ನು ಹೊಸೆದು ‘ನೀವಿದನ್ನು ನೋಡಲೇಬೇಕು’ ಎನ್ನುವುದು ಗ್ರಾಹಕನ ಮೇಲೆ ಎಸಗುವ ಬಲಾತ್ಕಾರವಲ್ಲವೇ?

ಪ್ರೇಕ್ಷಕರು ಇಷ್ಟಪಡದವರಿಂದ, ಪ್ರೇಕ್ಷಕರು ಇಷ್ಟಪಡದ ಅಂಶಗಳನ್ನು ಸೇರಿಸಿ ನಿರ್ಮಿಸಲ್ಪಡುವ ಸಿನಿಮಾ ಒಂದರಿಂದ ಅದಕ್ಕಾಗಿ ಕೆಲಸ ಮಾಡಿದ ನೂರಾರು ಕಾರ್ಮಿಕರು ನಷ್ಟಕ್ಕೆ ಒಳಗಾಗುತ್ತಾರೆ ಎನ್ನುವ ಮಾತು ಸಮಂಜಸವಲ್ಲ. ಆ ಕಾರ್ಮಿಕರಿಗೆ ಒಂದು ರೂಪಾಯಿ ಕೂಡ ನಷ್ಟವಾಗದಂತೆ ನೋಡಿಕೊಳ್ಳುವುದು ಸಂಪೂರ್ಣವಾಗಿ ನಿರ್ಮಾಪಕನ ಜವಾಬ್ದಾರಿಯೇ ಹೊರತು ಆ ಹೊಣೆಯನ್ನು ಪ್ರೇಕ್ಷಕನ ತಲೆಯ ಮೇಲೆ ಹೊರಿಸುವುದನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು.

ನಾಯಕ, ನಾಯಕಿಯ ವೈಯಕ್ತಿಕ ಜೀವನವನ್ನು, ಹೇಳಿಕೆಗಳನ್ನು ಕಾರಣ ಮಾಡಿಕೊಂಡು ಒಂದು ಸಿನಿಮಾವನ್ನು ನೋಡದೆ ಇರುವುದು, ಅದನ್ನು ನೋಡದಂತೆ ಇತರರಿಗೆ ಕರೆ ಕೊಡುವುದು ತಪ್ಪು ಎನ್ನುವುದು ಹಲವರ ಅಭಿಪ್ರಾಯ. ಒಬ್ಬ ನಟನಿಗೆ ಶರೀರ, ಮಾತು, ನಡವಳಿಕೆ ಎಲ್ಲವೂ ಮುಖ್ಯವಾಗುತ್ತದೆ. ಡಾ. ರಾಜ್‌ಕುಮಾರ್ ಅವರು ಅದಕ್ಕೊಂದು ಶ್ರೇಷ್ಠ ಉದಾಹರಣೆ. ಎಷ್ಟೋ ಬಾರಿ ಚಿತ್ರ ತಂಡದವರೇ ತಮ್ಮ ಸಿನಿಮಾ ಪ್ರಚಾರಕ್ಕಾಗಿ ನಟ ನಟಿಯರ ವೈಯುಕ್ತಿಕ ಜೀವನದ ಅಂಶಗಳನ್ನು ಪ್ರಮುಖವಾಗಿ ತೋರಿಸುವುದೂ ಉಂಟು. ಕಲಾವಿದರಿಗೆ ವೈಯಕ್ತಿಕ ಜೀವನ ಎನ್ನುವುದು ಇರುವುದಿಲ್ಲ. ಒಂದು ಸಿನಿಮಾಕ್ಕಾಗಿಯೇ ಹಗಲು ರಾತ್ರಿಯೆನ್ನದೆ ಜಿಮ್‌ಗೆ ತೆರಳಿ ಅಂಗಸೌಷ್ಠವ ಹೆಚ್ಚಿಸಿಕೊಳ್ಳುವ ನಟರು, ತಮ್ಮಿಷ್ಟದ ಆಹಾರ ತ್ಯಜಿಸಿ ‘ಜೀರೋ ಫಿಗರ್’ ಕಾಯ್ದುಕೊಳ್ಳುವ ನಟಿಯರು ಅದೇ ಸಿನಿಮಾಕ್ಕಾಗಿ ತಾವೇನು ಮಾತಾಡಬೇಕು, ಹೇಗೆ ವರ್ತಿಸಬೇಕು ಎನ್ನುವುದನ್ನೂ ಅರಿತುಕೊಂಡು, ಅದನ್ನು ಪಾಲಿಸಲೇಬೇಕು.

ಇಷ್ಟಾಗಿಯೂ ಈ ವಿಚಾರವಾಗಿ ಪ್ರೇಕ್ಷಕರು ಯಾವ ಚಿತ್ರಮಂದಿರಕ್ಕೂ ಬೆಂಕಿ ಹಚ್ಚಲಿಲ್ಲ, ಚಿತ್ರಮಂದಿರ ಗಳತ್ತ ತೆರಳುತ್ತಿದ್ದ ಪ್ರೇಕ್ಷಕರಿಗೆ ಕತ್ತಿ ತೋರಿಸಿ ಬೆದರಿಸಲಿಲ್ಲ. ಅತ್ಯಂತ ಪ್ರಜಾಸತ್ತಾತ್ಮಕ ರೀತಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮೂಲಕ, ತಿರಸ್ಕರಿಸುವಂತೆ ಕರೆ ಕೊಡುವ ಮೂಲಕ ಪ್ರತಿರೋಧವನ್ನು ತೋರಿಸಿದ್ದಾರೆ. ಪ್ರೇಕ್ಷಕರ ಈ ಸನ್ನಡತೆಯನ್ನೂ ಈ ಚರ್ಚೆಯ ಸಂದರ್ಭದಲ್ಲಿ ಮೆಚ್ಚಿಕೊಳ್ಳಲೇಬೇಕು.

ಅಂತಿಮವಾಗಿ ಒಂದು ಸಿನಿಮಾವನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಎಲ್ಲ ರೀತಿಯ ಸ್ವಾತಂತ್ರ್ಯವೂ ಪ್ರೇಕ್ಷಕನಿಗಿದೆ. ಯಾವ ಕಥೆಯನ್ನು ಆರಿಸಿಕೊಳ್ಳಬೇಕು, ಯಾವ ದೃಶ್ಯಗಳನ್ನು ಸೇರಿಸಬೇಕು, ಯಾವ ಸಂಭಾಷಣೆಯನ್ನು ಹೇಳಿಸಬೇಕು ಎನ್ನುವ ಎಲ್ಲ ಸ್ವಾತಂತ್ರ್ಯ ಚಿತ್ರತಂಡಕ್ಕೂ ಇದೆ. ಆದರೆ ನಾವು ಕೊಟ್ಟಿದ್ದನ್ನು ಜನ ನೋಡಲೇಬೇಕು, ಬಹಿಷ್ಕರಿಸಬಾರದು ಎನ್ನುವ ಹಕ್ಕು ಯಾವ ನಟ, ನಿರ್ಮಾಪಕರಿಗೂ ಇಲ್ಲ. ಏಕೆಂದರೆ ಪ್ರತಿಯೊಂದು ಉದ್ಯಮವೂ ಗ್ರಾಹಕನಿಗೆ ಬೇಕಾದದ್ದನ್ನು ಕೊಡಬೇಕೇ ಹೊರತು ತಾನು ಕೊಟ್ಟಿದ್ದನ್ನು ಗ್ರಾಹಕ ಸ್ವೀಕರಿಸಬೇಕು ಎನ್ನುವ ಧೋರಣೆ ಇಟ್ಟುಕೊಳ್ಳುವಂತಿಲ್ಲ. ಮತ್ತು ಈ ವಿಷಯದಲ್ಲಿ ಪ್ರೇಕ್ಷಕನೇ ಸಾರ್ವಭೌಮ!

ಲೇಖಕ: ನವೋದ್ಯಮಿ, ಹವ್ಯಾಸಿ ಬರಹಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.