ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಸಂಬಂಧ ಮತ್ತೆ ಶುರುವಾಗಬೇಕೋ ಬೇಡವೋ ಎಂಬ ಜಿಜ್ಞಾಸೆ ಚಾಂಪಿಯನ್ಸ್ ಟ್ರೋಫಿ ಸಮಯದಲ್ಲಿ ತಲೆ ಎತ್ತಿದೆ. ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ತಂಡವನ್ನು ಕಳುಹಿಸುವುದಿಲ್ಲ ಎಂಬ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ ನಿಲುವು ವಜ್ರದಷ್ಟು ಕಠೋರವಾಗಿದೆ. ಎರಡೂ ದೇಶಗಳ ರಾಜತಾಂತ್ರಿಕ ಸಂಬಂಧಗಳ ಹಿನ್ನೆಲೆಯಲ್ಲಿ ಈ ನಿಲುವು ಸಮರ್ಪಕ ಎಂದೆನಿಸಬಹುದು. ಆದರೆ, ಅಷ್ಟೊಂದು ಕಠೋರವಾಗುವ ಅಗತ್ಯವಿದೆಯೇ? ಇಂತಹ ನಿಲುವಿನಿಂದ ಕ್ರೀಡೆ ಹಾಗೂ ಲಲಿತ ಕಲೆಗಳು ಉಪವಾಸ ಬೀಳುವುದಂತೂ ಖಂಡಿತ. ಗಂಡ ಹೆಂಡತಿಯರ ಜಗಳದ ನಡುವೆ ಕೂಸು ಬಡವಾಗಬೇಕೇ?
ಹಿಂದೆ ಗಡಿಗಳ ಸಲುವಾಗಿ ಎರಡು ರಾಷ್ಟ್ರ ಅಥವಾ ರಾಜ್ಯ, ಪ್ರಾಂತ್ಯಗಳ ನಡುವೆ ಯುದ್ಧಗಳಾಗುತ್ತಿದ್ದವು. ಅಪಾರ ಪ್ರಮಾಣದ ಸಾವು ನೋವು ಸಂಭವಿಸುತ್ತಿತ್ತು. ಬಳಿಕ ಗಡಿಗಳು ನಿರ್ಧಾರವಾಗಿ ರಾಷ್ಟ್ರ, ರಾಜ್ಯಗಳು ರಚನೆಗೊಂಡು ಯುದ್ಧದ ಜಾಗವನ್ನು ಕ್ರೀಡೆಗಳು ತುಂಬಿದವು. ಯುದ್ಧದಲ್ಲಿ ಸಾವು ನೋವುಗಳಿದ್ದರೆ, ಕ್ರೀಡೆಯಲ್ಲಿ ಜಯಾಪಜಯಗಳಿವೆ. ಎರಡು ವಿರೋಧಿ ರಾಷ್ಟ್ರಗಳ ನಡುವೆ ಕ್ರೀಡಾ ಪಂದ್ಯಗಳು ನಡೆಯುವಾಗ ಅಭಿಮಾನಿಗಳಲ್ಲಿ ಕ್ರೀಡೋನ್ಮಾದ ತುಂಬಿರುತ್ತದೆ. ಸೋತ ತಂಡದ ಅಭಿಮಾನಿಗಳು ನಿರಾಶರಾಗುವುದು ಸಹಜ. ಅದೇ ರೀತಿ, ಗೆದ್ದ ತಂಡದ ಅಭಿಮಾನಿಗಳು ಸಂಭ್ರಮಿಸುವುದು ಸ್ವಾಭಾವಿಕ. ಆದರೆ, ಪಂದ್ಯದಲ್ಲಿ ಪಾಲ್ಗೊಂಡ ಕ್ರೀಡಾಪಟುಗಳು ಅದೊಂದು ಕ್ರೀಡೆ ಎಂದು ಭಾವಿಸಿ ಪರಸ್ಪರ ಅಭಿನಂದಿಸುತ್ತಾರೆ. ಹಸ್ತಲಾಘವ ನೀಡುತ್ತಾರೆ. ಮುಗುಳ್ನಗುತ್ತಾರೆ. ಅಪ್ಪಿಕೊಳ್ಳುತ್ತಾರೆ.
ಒಲಿಂಪಿಕ್ ಕ್ರೀಡಾಕೂಟವು ಜಾಗತಿಕ ಮಟ್ಟದ ಕ್ರೀಡಾಪಟುಗಳ ಜೀವಮಾನದ ಸಾಧನೆಯ ಪ್ರದರ್ಶನ ನೀಡಲೊಂದು ಆಡುಂಬೊಲ. ಇತ್ತೀಚೆಗೆ ಪ್ಯಾರಿಸ್‌ನಲ್ಲಿ ಮುಕ್ತಾಯಗೊಂಡ ಕೂಟದಲ್ಲಿ ಪಾಕಿಸ್ತಾನದ ಈಟಿ (ಜಾವಲಿನ್) ಎಸೆತಗಾರ ಆರ್ಷದ್ ನದೀಮ್ ಚಿನ್ನದ ಪದಕ ಗೆದ್ದರೆ, ಭಾರತದ ಕಣ್ಮಣಿ ನೀರಜ್ ಚೋಪ್ರಾ ಬೆಳ್ಳಿ ಪದಕ ಗಳಿಸಿದರು. ಈ ಇಬ್ಬರೂ ಶ್ರೇಷ್ಠ ಕ್ರೀಡಾಪಟುಗಳ ಸ್ನೇಹ ಮತ್ತು ನದೀಮ್ ಸಾಧನೆಯ ಹಿಂದೆ ಚೋಪ್ರಾ ಕೊಡುಗೆ ಇದೆ ಎಂಬುದೂ ಎಲ್ಲರಿಗೂ ತಿಳಿದಿರುವುದೇ. ಅದು ಕ್ರೀಡಾ ಧರ್ಮ. ಕೌಶಲಕ್ಕೆ, ಹೃದಯದ ಔದಾರ್ಯಕ್ಕೆ ಗಡಿಗಳಿಲ್ಲವಲ್ಲ! ಇಬ್ಬರ ಸಾಧನೆಯನ್ನು ಕೊಂಡಾಡುತ್ತಾ, ಅವರ ಅಮ್ಮಂದಿರು ಪರಸ್ಪರ ನೀಡಿರುವ ಹೇಳಿಕೆಗಳನ್ನು ಗಮನಿಸಿ. ಅದನ್ನು ನೋಡಿದಾಗ ಭಾರತ ಮತ್ತು ಪಾಕಿಸ್ತಾನದ ನಡುವೆ ಇಷ್ಟೊಂದು ದೊಡ್ಡ ಕಂದಕವಿದೆಯೇ ಎಂದು ಯಾರಿಗಾದರೂ ಅನಿಸಿತ್ತೇ? ಇದು ಕ್ರೀಡೆಗೆ
ಇರುವ ಶಕ್ತಿ.
ಒಲಿಂಪಿಕ್ಸ್ ಉದ್ಘಾಟನೆ ಸಂದರ್ಭದಲ್ಲಿ ಪಾರಿವಾಳಗಳನ್ನು ಮುಗಿಲಿಗೆ ತೂರಿ ಹಾರಿಸಲಾಗುತ್ತದೆ. ಶಾಂತಿ ಸಾರುವುದು ಅದರ ಉದ್ದೇಶ. ಪಾಕಿಸ್ತಾನದ ರಾಜಕೀಯ ನಿಲುವಿನಲ್ಲಿ ಭಯೋತ್ಪಾದನೆ ಮುಂಚೂಣಿಯಲ್ಲಿ ನಿಂತಿದೆ. ಅದುವೇ ಅದರ ಪ್ರಮುಖ ಅಸ್ತ್ರ. ಇದು ಒಡಲಲ್ಲಿನ ಕೆಂಡ. ಅದೀಗ ಕಾಳ್ಗಿಚ್ಚಾಗಿ ಹೊಗೆ ಉಸಿರುಗಟ್ಟಿಸುತ್ತಿರುವಾಗ ಶಾಂತಿಯ ಪಾರಿವಾಳಗಳನ್ನು ಆ ಕಿಚ್ಚಿನ ಮೇಲೆ ಹಾರಿಸಬೇಕೆ? ಪಾರಿವಾಳದ ರೆಕ್ಕೆ ಪುಕ್ಕಗಳು ಸುಟ್ಟು ಕರಕಲಾಗುವುದಿಲ್ಲವೇ ಎಂಬುದು ಭಾರತದ ಪ್ರಶ್ನೆ. ಕ್ರೀಡೆ ಮತ್ತು ರಾಜಕಾರಣವನ್ನು ಒಂದಾಗಿ ನೋಡುವ ಅಗತ್ಯವೇನೂ ಇಲ್ಲ. ಕ್ರೀಡೆಗೆ ಅವಕಾಶ ನೀಡಿದರೂ, ಉಗ್ರವಾದದ ಬಗ್ಗೆ ಪಾಕಿಸ್ತಾನದ ನಿಲುವಿನ ವಿರುದ್ಧ, ಗಡಿಗಳಲ್ಲಿ ಉಗ್ರರ ಉಪಟಳದ ವಿರುದ್ಧ ಕ್ರಮ ಕೈಗೊಳ್ಳುವ ಸ್ವಾತಂತ್ರ್ಯ ಭಾರತಕ್ಕೆ ಯಾವಾಗಲೂ ಇದ್ದೇ ಇದೆ
ಭಾರತ ಮತ್ತು ಪಾಕಿಸ್ತಾನದ ನಡುವೆ ಕ್ರಿಕೆಟ್ ನಡೆಯುತ್ತದೆ ಎಂದರೆ, ಭಾರತ ತಂಡದ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶುಭ್‌ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಮುಂತಾದ ಆಕ್ರಮಣಶೀಲ ಬ್ಯಾಟರ್‌ಗಳು ಪಾಕಿಸ್ತಾನದ ಪ್ರಚಂಡ ವೇಗದ ಬೌಲರ್‌ಗಳ ಎದುರು ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತು ಮಾಡಲು ಸಿಗುವ ಸುವರ್ಣಾವಕಾಶ. ಹಾಗೆಯೇ ಭಾರತದ ಜಸ್‌ಪ್ರೀತ್ ಬೂಮ್ರಾ , ಆರ್ಷ್‌ದೀಪ್, ಬಿಷ್ಣೋಯಿ, ವರುಣ್ ಚಕ್ರವರ್ತಿ ಇಂತಹ ಪ್ರತಿಭಾನ್ವಿತ ಬೌಲರ್‌ಗಳ ಎದುರು ಪಾಕ್‌ನ ಬಾಬರ್ ಅಜಮ್ ಮತ್ತವರ ಬ್ಯಾಟರ್‌ಗಳು ಹೇಗೆ ಬ್ಯಾಟ್ ಝಳಪಿಸಬಹುದೆಂಬುದೇ ಒಂದು ರೋಚಕ ಕಲ್ಪನೆ. ಕ್ರೀಡಾಭಿಮಾನಿಗಳಿಗೆ ರಸಸೌದಣ ಸಿಗುವ ಸಂದರ್ಭ ಅದು. ನಿಜವಾದ ಕ್ರೀಡಾ ಪ್ರೇಮಿಗಳು ಯಾವತ್ತೂ ಇಂತಹ ಅಪೂರ್ವ ಅವಕಾಶವನ್ನು ಕಳೆದುಕೊಳ್ಳಲು ಬಯಸುವುದಿಲ್ಲ.
ಭಯೋತ್ಪಾದನೆಯ ವಿಚಾರದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಹದಗೆಟ್ಟಿರುವುದು ನಿಜ. ಸಂಬಂಧ ಸುಧಾರಿಸದೇ ಇರಲು ಪಾಕಿಸ್ತಾನದ ರಾಜತಾಂತ್ರಿಕ ನಡೆಗಳು, ನೀತಿಗಳು ಕಾರಣವಾಗಿರಬಹುದು. ಆದರೆ, ಕ್ರಿಕೆಟ್ ಸೇರಿದಂತೆ ಯಾವುದೇ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ರಾಜಕೀಯ, ರಾಜತಾಂತ್ರಿಕ ಸಂಬಂಧಗಳ ಹೊರತಾದ ದೃಷ್ಟಿಕೋನದಿಂದ ನೋಡಬೇಕು. ಎರಡೂ ರಾಷ್ಟ್ರಗಳ ಸಂಬಂಧ ಬಿಗಡಾಯಿಸಿದ್ದ ಸಂದರ್ಭದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ದಿಢೀರ್ ಪಾಕಿಸ್ತಾನಕ್ಕೆ ತೆರಳಿ, ಆಗಿನ ಪ್ರಧಾನಿ ನವಾಜ್ ಷರೀಫ್ ಅವರನ್ನು ಭೇಟಿ ಮಾಡಿ ಅವರಿಗೆ ಹುಟ್ಟುಹಬ್ಬ ಶುಭಾಶಯ ಹೇಳಿದ್ದು ನೆನಪಿರಬಹುದು. ಅದು ನೆರೆಯ ರಾಷ್ಟ್ರದತ್ತ ಸ್ನೇಹದ ಹಸ್ತ ಚಾಚಿದ ಪ್ರಯತ್ನವಾಗಿತ್ತು. ಈಗಲೂ ಉಭಯ ದೇಶಗಳ ನಡುವೆ ಪರಿಸ್ಥಿತಿ ವಿಷಮವಾಗಿದೆ. ರಾಜತಾಂತ್ರಿಕವಾಗಿ ಅಥವಾ ರಾಜಕೀಯವಾಗಿ ಅದು ಸುಧಾರಿಸುವ ಸಾಧ್ಯತೆಯೂ ಕಾಣುತ್ತಿಲ್ಲ. ಅಂತಹ ಸಂದರ್ಭದಲ್ಲಿ ಎರಡೂ ರಾಷ್ಟ್ರಗಳು ಕ್ರಿಕೆಟ್ ಮೂಲಕ ಸಂಬಂಧವನ್ನು ಗಟ್ಟಿಗೊಳಿಸುವ ಪ್ರಯತ್ನವನ್ನು ಏಕೆ ಮಾಡಬಾರದು?
ಕ್ರೀಡೆ ಶಾಂತಿಯ ರಾಯಭಾರಿ: ಕ್ರೀಡೆ ಯಾವಾಗಲೂ ಜಾಗತಿಕ ಶಾಂತಿ, ಸಹಬಾಳ್ವೆಯನ್ನು ಬಯಸುತ್ತದೆ. ಅದು ಸೌಹಾರ್ದ ಸಂಬಂಧಗಳ ಸಂವರ್ಧನೆಯ ರಾಯಭಾರಿ. ಒಲಿಂಪಿಕ್ ಕ್ರೀಡಾಕೂಟದ ಉದ್ಘಾಟನೆಯ ಸಂದರ್ಭದಲ್ಲಿ ಪಾರಿವಾಳಗಳನ್ನು ಮುಗಿಲಿಗೆ ತೂರಿ ಹಾರಿಸಲಾಗುತ್ತದೆ. ಶಾಂತಿ ಸಾರುವುದು ಅದರ ಉದ್ದೇಶ.
ನೆರೆ ರಾಷ್ಟ್ರದ ರಾಜಕೀಯ ನಿಲುವಿನಲ್ಲಿ ಭಯೋತ್ಪಾದನೆ ಮುಂಚೂಣಿಯಲ್ಲಿ ನಿಂತಿದೆ. ಅದುವೇ ಅದರ ಪ್ರಮುಖ ಅಸ್ತ್ರ. ಇದು ಒಡಲಲ್ಲಿನ ಕೆಂಡ. ಅದೀಗ ಕಾಳ್ಗಿಚ್ಚಾಗಿ ಹೊಗೆ ಉಸಿರುಗಟ್ಟಿಸುತ್ತಿರುವಾಗ ಶಾಂತಿಯ ಪಾರಿವಾಳಗಳನ್ನು ಆ ಕಿಚ್ಚಿನ ಮೇಲೆ ಹಾರಿಸಬೇಕೇ? ಪಾರಿವಾಳದ ರೆಕ್ಕೆ ಪುಕ್ಕಗಳು ಸುಟ್ಟು ಕರಕಲಾಗದೇ ಎಂಬುದು ಭಾರತದ ಪ್ರಶ್ನೆ. ಈ ಪ್ರಶ್ನೆಯಲ್ಲಿ ಯಾವ ತಪ್ಪೂ ಇಲ್ಲ. ಹಾಗಿದ್ದರೂ ಕ್ರೀಡೆ ಮತ್ತು ರಾಜಕಾರಣವನ್ನು ಒಂದಾಗಿ ನೋಡುವ ಅಗತ್ಯವೇನೂ ಇಲ್ಲ. ಕ್ರೀಡೆಗೆ ಅವಕಾಶ ನೀಡಿದರೂ, ಉಗ್ರವಾದದ ಬಗ್ಗೆ ಪಾಕಿಸ್ತಾನದ ನಿಲುವಿನ ವಿರುದ್ಧ, ಗಡಿಗಳಲ್ಲಿ ಉಗ್ರರ ಉಪಟಳದ ವಿರುದ್ಧ ಕ್ರಮ ಕೈಗೊಳ್ಳುವ ಸ್ವಾತಂತ್ರ್ಯ ಭಾರತಕ್ಕೆ ಯಾವಾಗಲೂ ಇದ್ದೇ ಇದೆ.
ದುಬೈ ಸೇರಿದಂತೆ ತಟಸ್ಥ ಸ್ಥಳಗಳಲ್ಲಿ ನಡೆಯುವ ಪಂದ್ಯಗಳಲ್ಲಿ ಭಾರತ ತಂಡ ಪಾಕಿಸ್ತಾನದೊಂದಿಗ ಆಡುತ್ತಲೇ ಬಂದಿದೆ. ತಟಸ್ಥ ಸ್ಥಳದಲ್ಲಿ ಆಡಬಹುದಾದರೆ ಪಾಕಿಸ್ತಾನದಲ್ಲಿ ಯಾಕೆ ಸಾಧ್ಯವಿಲ್ಲ ಎಂಬ ಪ್ರಶ್ನೆ ಮೂಡುತ್ತದೆ. ಪಾಕಿಸ್ತಾನದಲ್ಲಿ ಭಾರತದ ಆಟಗಾರರ ಸುರಕ್ಷತೆಯ ಬಗ್ಗೆ ಬಿಸಿಸಿಐ ಆತಂಕ ವ್ಯಕ್ತಪಡಿಸಿರುವುದರಲ್ಲಿ ತಪ್ಪಿಲ್ಲ. ಆದರೆ, ಇಡೀ ಟೂರ್ನಿಯು ಐಸಿಸಿಯ ಮೇಲ್ವಿಚಾರಣೆಯಲ್ಲಿ ನಡೆಯುತ್ತದೆ. ಆಟಗಾರರ ಭದ್ರತೆಯ ಜವಾಬ್ದಾರಿ ಪಾಕಿಸ್ತಾನಕ್ಕೆ ಇದ್ದಷ್ಟೇ ಐಸಿಸಿಗೂ ಇದೆ ಎಂಬುದನ್ನು ಯಾರೂ ಮರೆಯಬಾರದು. ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್‌ನಂತಹ ರಾಷ್ಟ್ರಗಳು ತಮ್ಮ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತಿವೆ. ಅಲ್ಲಿ ಅವರು ನಿರ್ಭೀತಿಯಿಂದ ಆಡುತ್ತಿದ್ದಾರೆ. ಹೀಗಿರುವಾಗ, ನಮ್ಮ ತಂಡವೂ ಅಲ್ಲಿಗೆ ಹೋದರೆ, ಪಾಕ್ ತಂಡವೂ ನಮ್ಮಲ್ಲಿಗೆ ಬಂದು ಆಡಿದರೆ ಎಷ್ಟು ಚೆಂದವಲ್ಲವೇ?
ಮೊದಲೇ ಹೇಳಿದಂತೆ, ಕ್ರೀಡೆ ಶಾಂತಿಯ ದೂತ. ಇಲ್ಲಿ ಸಾವಿಲ್ಲ. ಸೋಲು ಮತ್ತು ಗೆಲುವಷ್ಟೇ ಇರುತ್ತದೆ. ಆಟದ ಮೂಲಕ ರಕ್ತಪಾತ ರಹಿತ ಶಾಂತಿಯನ್ನು ಸಾಧಿಸಬಹುದು. ಹೀಗಿರುವಾಗ ಭಾರತ ಮತ್ತು ಪಾಕಿಸ್ತಾನ ದೊಡ್ಡ ಮನಸ್ಸು ಮಾಡಿ ಪರಸ್ಪರ ಕ್ರೀಡಾ ಚಟುವಟಿಕೆಗಳ ಮೂಲಕ ಮುರಿದು ಬಿದ್ದ ಸಂಬಂಧವನ್ನು ಮತ್ತೆ ಹಳಿಗೆ ತರಲು ಪ್ರಯತ್ನ ಪಡಬಹುದು. ಇದಕ್ಕೆ ಚಾಂಪಿಯನ್ಸ್ ಟ್ರೋಫಿಯನ್ನು ಚಿಮ್ಮು ಹಲಗೆಯನ್ನಾಗಿ ಬಳಸಬಹುದು.
ಲೇಖಕ: ನಿವೃತ್ತ ಇತಿಹಾಸ ಉಪನ್ಯಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.