ಹಾಡಹಗಲಲ್ಲೇ ಕೊಲೆ ಮಾಡಿದವರನ್ನು ಶಿಕ್ಷಿಸಲೂ ಸಾಕ್ಷಿ ದೊರಕದೆ ಹೋಗುವ ಈ ದೇಶದಲ್ಲಿ ಬಹಳಷ್ಟು ಜನ ಸೇರಿರುವಲ್ಲಿ ಯಾರೋ ಒಂದಷ್ಟು ಮಂದಿ ಕಿಡಿಗೇಡಿಗಳು ಯಾವ ಪ್ರೇರಣೆಯಿಂದಲೋ, ಯಾರ ಒತ್ತಾಸೆಯಿಂದಲೋ, ಯಾವ ಅಪಾರ್ಥ ಕಲ್ಪಿಸಿಕೊಂಡೋ ಅಥವಾ ಸ್ಪಷ್ಟ ಕ್ರಿಮಿನಲ್ ಉದ್ದೇಶದಿಂದಲೋ ನಡೆಸುವ ದಾಂದಲೆಗಳಲ್ಲಿ ಯಾರನ್ನೋ ಸಂಶಯ ಮಾತ್ರದಿಂದ ಬಂಧಿಸುವುದು, ತತ್ ಕ್ಷಣ ಅಂತವರ ಮನೆಯನ್ನು ಬುಲ್ಡೋಜರ್ ಬಳಸಿ ನೆಲಸಮ ಮಾಡುವುದು ರಾಜಕೀಯ ಅಧಿಕಾರದ ಮದೋನ್ಮತ್ತತೆಯ ಪರಾಕಾಷ್ಠೆ. ಇದು ತಪ್ಪು, ಇದನ್ನು ಈಗಿಂದೀಗಲೇ ನಿಲ್ಲಿಸಬೇಕು ಅಂತ ಸ್ಪಷ್ಟವಾಗಿ ಹೇಳಲು ಈ ದೇಶದ ಸರ್ವಶಕ್ತ ನ್ಯಾಯಾಂಗಕ್ಕೆ ಇಷ್ಟು ಸಮಯ ಬೇಕಾಯಿತು ಎನ್ನುವುದೇ ಒಂದು ಚೋದ್ಯ
‘ಬುಲ್ಡೋಜರ್ ನ್ಯಾಯ’ ಎಂದು ಹೇಳುವಾಗ, ಬುಲ್ಡೋಜರ್ ಎಂಬ ಪದ ಪ್ರಯೋಗ ಸರಿಯಾಗಿಯೇ ಇದೆ. ಆದರೆ ಅದರ ಜತೆಗೆ ‘ನ್ಯಾಯ’ ಎನ್ನುವ ಪದವನ್ನು ಜೋಡಿಸುವುದು ವಿರೋಧಾಭಾಸಕರ ಮಾತ್ರವಲ್ಲ ಅನರ್ಥಕಾರಿ ಕೂಡಾ. ಯಾಕೆಂದರೆ ಬುಲ್ಡೋಜರ್ ನ್ಯಾಯ ಎಂದಾಗ ಬುಲ್ಡೋಜರ್ ಹರಿಸಿ ನ್ಯಾಯ ನೀಡಲಾಗಿದೆ ಎನ್ನುವ ಅರ್ಥ ಬರುತ್ತದೆ. ಬುಲ್ಡೋಜರ್ ಮೂಲಕ ದಾಳಿಗಳನ್ನು ನಡೆಸುವುದರ ಮೂಲಕ ನೀಡಿದ್ದು ನ್ಯಾಯವನ್ನಲ್ಲ, ಅನ್ಯಾಯವನ್ನು, ಕ್ರೌರ್ಯವನ್ನು... ಸುಪ್ರೀಂ ಕೋರ್ಟ್ ಕೂಡಾ ಇದನ್ನೇ ಹೇಳಿದ್ದು.
ಅಪ್ರಬುದ್ಧ, ಅನಾಗರಿಕ ಮತ್ತು ಪಕ್ಷಪಾತಿ ರಾಜಕಾರಣ ಇದ್ದಲ್ಲಿ ಇಂತಹ ಅನ್ಯಾಯದ ಪರಂಪರೆಗಳೆಲ್ಲಾ ಹುಟ್ಟಿಕೊಳ್ಳುವುದು ಸಹಜ. ಆದರೆ ಅದನ್ನು ‘ನ್ಯಾಯ’ ಅಂತ ಅರಿತೋ ಅರಿಯದೆಯೋ ಕರೆಯುವುದು ಮತ್ತು ಅದರ ಹಿಂದಿರುವ ರಾಜಕೀಯದ ವಿರುದ್ಧ ವಿಸ್ತೃತ ಜನಸಮೂಹ ಹೇಸಿಗೆ ಪಡದೇ ಇರುವುದು ಇಡೀ ಸಮಾಜವೇ ಎಂತಹ ಸಂವೇದನಾ ಶೂನ್ಯ ಸ್ಥಿತಿಯಲ್ಲಿದೆ ಎನ್ನುವುದನ್ನು ತೋರಿಸುತ್ತದೆ ಮತ್ತು ಮಾಧ್ಯಮಗಳು ಎಷ್ಟು ವಿವೇಚನಾ ಶೂನ್ಯವಾಗಿ ಹೋಗಿವೆ ಎನ್ನುವುದನ್ನು ಸಾರುತ್ತದೆ. ಕೊನೆಗೂ ನ್ಯಾಯಾಂಗ ಹೇಳಬೇಕಾದದ್ದನ್ನು ಹೇಳಿದೆ, ಮಾಡಬೇಕಾದದ್ದನ್ನು ಮಾಡಿದೆ. ಅಂದರೆ, ಬುಲ್ಡೋಜರ್ ಅನ್ಯಾಯದ ಅಸಂಗತ ನಾಟಕದ ಸುದೀರ್ಘ ಒಂದನೇ ಅಂಕ ಮುಗಿದಿದೆ. ಹಾಗಂತ ಇಡೀ ನಾಟಕವೇ ಮುಗಿದಿದೆ ಅಂತ ಭಾವಿಸಿದರೆ ಆತುರದ ತೀರ್ಮಾನ ಆದೀತು.
ನ್ಯಾಯಾಂಗ ಹೇಳಿದ್ದು ಅಂತಿಮ ಎನ್ನುವ ಕಾಲವೊಂದಿತ್ತು. ಆ ಕಾಲದ ರಾಜಕೀಯ ಬೇರೆಯೇ ಇತ್ತು. ಈ ಕಾಲದ ರಾಜಕೀಯದಲ್ಲಿ ರಾಜಕೀಯದಲ್ಲಿದ್ದವರು ಮಾಡಿದ್ದೇ ಅಂತಿಮ. ನ್ಯಾಯಾಂಗವಲ್ಲ, ಸ್ವತಃ ಈ ವಿಶ್ವದ ನಿಯಾಮಕ ಶಕ್ತಿಯೇ ಧರೆಗಿಳಿದು ಬಂದು ವಿವೇಕವನ್ನು ಭೋದಿಸಿದರೂ ಅದು ಅಂತಿಮವೆಂದೋ, ಅನುಷ್ಠಾನಗೊಳ್ಳುತ್ತದೆಯೆಂದೋ ಅರ್ಥವಲ್ಲ. ಹಾಗಾಗಿ, ಮುಂದಿನ ಅಂಕ ಹೇಗೆ ಅನಾವರಣಗೊಳ್ಳುವುದು ಎನ್ನುವ ಕುತೂಹಲವನ್ನು ಉಳಿಸಿಕೊಳ್ಳುತ್ತಲೇ ಈಗಾಗಲೇ ಸುಪ್ರೀಂ ಕೋರ್ಟ್‌ನ ತೀರ್ಪಿನೊಂದಿಗೆ ಅಂತ್ಯಗೊಂಡ ಮೊದಲ ಅಂಕದಲ್ಲಿ ನಡೆದುಹೋದ ಸಮಗ್ರ ಬೆಳವಣಿಗೆಗಳ ರಾಜಕೀಯ ಆಯಾಮಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ.
ಬಿಜೆಪಿಯ ಡಬಲ್ ಎಂಜಿನ್ ಸರಕಾರಗಳು ಇರುವ ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ ಮುಂತಾದೆಡೆಗಳಲ್ಲಿ ಪ್ರಮುಖವಾಗಿ ನಡೆದಿರುವ ಈ ಇಡೀ ಅನ್ಯಾಯದ ಕ್ರೂರ ಪ್ರಹಸನಕ್ಕೆ ನಾಲ್ಕೈದು ವರ್ಷಗಳ ಇತಿಹಾಸವಿದೆ. ಆರಂಭದಲ್ಲಿ ಕುಖ್ಯಾತ ಕ್ರಿಮಿನಲ್ ವ್ಯಕ್ತಿಗಳಿಗೆ ಸೇರಿದ ಕಟ್ಟಡಗಳನ್ನು ಕೆಡವಲಾಯಿತು. ಆ ಕಟ್ಟಡಗಳನ್ನು ಅಕ್ರಮವಾಗಿ ಕಟ್ಟಲಾಗಿತ್ತು ಎನ್ನುವ ಸಮಾಜಾಯಿಷಿ ಬರುತ್ತಿತ್ತು. ಕ್ರಿಮಿನಲ್‌ಗಳ ವಿರುದ್ಧ ಕೊನೆಗೂ ಖಡಕ್ ಕ್ರಮ ಆಗುತ್ತಿದೆ ಅಂತ ಜನ ಸಮಾಧಾನ ಪಟ್ಟರು. ಜನರ ಮೆಚ್ಚುಗೆ ಮುಂದೆ ವೋಟುಗಳಾಗಲಿವೆ ಎಂದು ಆಳುವ ಪಕ್ಷ ಸಂಭ್ರಮಿಸಿತು. ಕೆಡವಿದ್ದು ಅಕ್ರಮ ಕಟ್ಟಡಗಳನ್ನು ಎಂದಾದರೆ ಅಕ್ರಮ ಕಟ್ಟಡ ತಲೆ ಎತ್ತಲು ಅವಕಾಶ ನೀಡಿದ್ದು ಯಾಕೆ ಎನ್ನುವ ಪ್ರಶ್ನೆ ಯಾರೂ ಕೇಳಲಿಲ್ಲ. ಅಕ್ರಮವಾಗಿ ಕಟ್ಟಿದ ಕಟ್ಟಡಗಳೇ ಆಗಿದ್ದರೂ, ಅವು ಕ್ರಿಮಿನಲ್‌ಗಳಿಗೆ ಸೇರಿದ್ದರೂ ಕಟ್ಟಡ ಕೆಡವುದಕ್ಕೆ ಅನುಸರಿಸಬೇಕಿರುವ ಕಾನೂನು ಕ್ರಮಗಳಿವೆ. ಅವುಗಳನ್ನು ಅನುಸರಿಸಲಾಗಿದೆಯೇ ಅಂತ ಯಾರೂ ಕೇಳಲಿಲ್ಲ. ಕ್ರಿಮಿನಲ್‌ಗಳಿಗೆ ಸೇರಿದ ಅಕ್ರಮ ಕಟ್ಟಡಗಳಾದರೆ ಅವುಗಳನ್ನು ಕೆಡವುದು, ಕ್ರಿಮಿನಲ್‌ಗಳಲ್ಲದವರ ಅಕ್ರಮ ಕಟ್ಟಗಳಾದರೆ ಬಿಟ್ಟುಬಿಡುವುದು ಎನ್ನುವುದು ಯಾವ ನ್ಯಾಯ ಅಂತ ಯಾರೂ ಕೇಳಲಿಲ್ಲ. ಅಷ್ಟಕ್ಕೂ ಕ್ರಿಮಿನಲ್ ವ್ಯಕ್ತಿಗಳನ್ನು ಅವರ ಮನೆಗಳನ್ನು ಕೆಡವುದರ ಮೂಲಕ ಮಟ್ಟಹಾಕಬೇಕು ಎನ್ನುವ ಕಾನೂನು ಎಲ್ಲಿದೆ ಎಂದೂ ಯಾರೂ ಕೇಳಲಿಲ್ಲ.
‘ಪಾಪಿ ಮಕ್ಕಳಿಗೆ ಧರ್ಮಾತ್ಮರಾದ ತಂದೆ ತಾಯಂದಿರು, ಅಣ್ಣತಮ್ಮಂದಿರು ಇರಬಹುದು - ಅವರನ್ನೂ ಅಕ್ಷರಶಃ ಬೀದಿಗೆ ತಳ್ಳುವುದು ಅನ್ಯಾಯ’ ಅಂತ ಸುಪ್ರೀಂ ಕೋರ್ಟ್ ಈಗ ಹೇಳಿದೆ. ಬಹಳ ತಡವಾಗಿ! ಅಷ್ಟೊತ್ತಿಗೆ ಕ್ರಿಮಿನಲ್‌ಗಳು ಅಂತ ಸರ್ಕಾರ ಬೆಟ್ಟುಮಾಡಿ ತೋರಿಸಿದವರ ಮತ್ತು ಪೊಲೀಸರ ಕಡೆಯಿಂದ ಕೇವಲ ಆಪಾದನೆಗೊಳಗಾದವರ ಹತ್ತಾರು, ನೂರಾರು ಮನೆಗಳು ನೆಲಸಮ ಆಗಿ ಹೋಗಿದ್ದವು.
ಕುಖ್ಯಾತ ಕ್ರಿಮಿನಲ್‌ಗಳಿಗೆ ಪಾಠ ಕಲಿಸಲು ಎಂದು ಪ್ರಾರಂಭ ಆದ ಬುಲ್ಡೋಜರ್ ಕ್ರೌರ್ಯ ಆ ನಂತರ ವಿಕಾರವಾದ ಕೋಮು ಆಯಾಮವನ್ನು ಪಡೆದುಕೊಳ್ಳುತ್ತದೆ ಮತ್ತು ಮುಸ್ಲಿಂ ಸಮುದಾಯದವರ ಮನೆಗಳು ಬುಲ್ಡೋಜರ್ ಕಾರ್ಯಾಚರಣೆಯ ಮುಖ್ಯ ಗುರಿಗಳಾಗುತ್ತವೆ. ‘ನಾವು ಯಾರಿಗೆ ಹೇಗೆ ಬುದ್ದಿ ಕಲಿಸುತಿದ್ದೇವೆ ನೋಡಿ, ನಾವು ಯಾರನ್ನು ಎಲ್ಲಿಡುತ್ತೇವೆ ನೋಡಿ’ ಎನ್ನುವ ಸಂದೇಶ ರವಾನಿಸಿ ಬಹುಸಂಖ್ಯಾತರ ಓಟುಗಳನ್ನು ಗಟ್ಟಿಮಾಡಿಕೊಳ್ಳುವ ರಾಜಕೀಯದ ಮುಖವಾಗಿ ಬುಲ್ಡೋಜರ್ ವಿಜೃಂಭಿಸುತ್ತದೆ. ಬುಲ್ಡೋಜರ್ ಅನ್ಯಾಯದ ಸಂತ್ರಸ್ತರು ಬಹುತೇಕ ಪ್ರಕರಣಗಳಲ್ಲಿ ಮುಸ್ಲಿಮರೇ ಆಗಿರುವುದನ್ನು ಗುರುತಿಸಿದ ಪಂಜಾಬ್--ಹರಿಯಾಣ ಹೈಕೋರ್ಟ್, ಒಂದು ಹಂತದಲ್ಲಿ ‘ಇದೇನಿದು, ಈ ದೇಶದಲ್ಲಿ ಜನಾಂಗೀಯ ಶುದ್ಧೀಕರಣಕ್ಕೆ (enthic cleansing) ಹೊರಟಿದ್ದೀರಾ’ (ಅಂದರೆ ಒಂದು ಸಮುದಾಯದವರನ್ನು ಸಂಪೂರ್ಣ ನಾಶ ಮಾಡಬೇಕು ಅಂತ ಹೊರಟಿದ್ದೀರಾ) ಎಂದು ನೇರವಾಗಿ ಕೇಳಿದ್ದೂ ಆಯಿತು.
ಕೋಮು ಸಂಘರ್ಷಗಳು ಮತ್ತು ಗಲಭೆಗಳ ಮೂಲ ಹುಡುಕುವುದು, ಅದರ ಹಿಂದಿರುವ ಕಾಣದ, ಕಾಣಿಸುವ ಕೈಗಳನ್ನು ಮತ್ತು ತಲೆಗಳನ್ನು ಗುರುತಿಸುವುದು ಎಷ್ಟು ಕಷ್ಟದ ಕೆಲಸ ಅಂತ ದೇಶದ ಇಂದಿನ ಸಾಮಾಜಿಕ-ರಾಜಕೀಯ ವ್ಯವಸ್ಥೆಯ ಪ್ರಾಥಮಿಕ ಪರಿಚಯ ಇದ್ದ ಯಾರಿಗೆ ಆದರೂ ತಿಳಿದಿರುತ್ತದೆ. ಕೋಮುಗಲಭೆಗಳು ಸಂಭವಿಸುತ್ತವೆಯೇ ಅಥವಾ ಅವುಗಳನ್ನು ಸೃಷ್ಟಿಸಲಾಗುತ್ತಿದೆಯೇ ಎನ್ನುವ ಪ್ರಶ್ನೆ ಸ್ವಾತಂತ್ರ್ಯ ಪೂರ್ವದಿಂದಲೂ ಉತ್ತರವಿಲ್ಲದೆ ಉಳಿದಿದೆ. ಪೊಲೀಸರು ಇಂತಹ ಗಲಭೆಗಳಾದಾಗ ಹೇಗೆ ನಡೆದುಕೊಳ್ಳುತ್ತಾರೆ? ಯಾರ‍್ಯಾರ ಮೇಲೆ, ಹೇಗೆಲ್ಲಾ ಕೇಸು ದಾಖಲಿಸುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತು. ಹಾಡಹಗಲಲ್ಲೇ ಕೊಲೆ ಮಾಡಿದವರನ್ನು ಶಿಕ್ಷಿಸಲು ಕೂಡಾ ಸಾಕ್ಷಿ ದೊರಕದೆ ಹೋಗುವ ಈ ದೇಶದಲ್ಲಿ ಬಹಳಷ್ಟು ಜನ ಸೇರಿರುವಲ್ಲಿ ಯಾರೋ ಒಂದಷ್ಟು ಮಂದಿ ಕಿಡಿಗೇಡಿಗಳು ಯಾವ ಪ್ರೇರಣೆಯಿಂದಲೋ, ಯಾರ ಒತ್ತಾಸೆಯಿಂದಲೋ, ಯಾವ ಅಪಾರ್ಥ ಕಲ್ಪಿಸಿಕೊಂಡೋ ಅಥವಾ ಸ್ಪಷ್ಟ ಕ್ರಿಮಿನಲ್ ಉದ್ದೇಶಗಳಿಂದಲೋ ನಡೆಸುವ ದಾಂದಲೆಗಳಲ್ಲಿ ಯಾರನ್ನೋ ಸಂಶಯ ಮಾತ್ರದಿಂದ ಬಂಧಿಸುವುದು, ತತ್ ಕ್ಷಣ ಅಂತವರ ಮನೆಯನ್ನು ಬುಲ್ಡೋಜರ್ ಬಳಸಿ ನೆಲಸಮ ಮಾಡುವುದು ರಾಜಕೀಯ ಅಧಿಕಾರದ ಮದೋನ್ಮತ್ತತೆಯ ಪರಾಕಾಷ್ಠೆ. ಇದು ತಪ್ಪು, ಇದನ್ನು ಈಗಿಂದೀಗಲೇ ನಿಲ್ಲಿಸಬೇಕು ಅಂತ ಸ್ಪಷ್ಟವಾಗಿ ಹೇಳಲು ಈ ದೇಶದ ಸರ್ವಶಕ್ತ ನ್ಯಾಯಾಂಗಕ್ಕೆ ಇಷ್ಟು ಸಮಯ ಬೇಕಾಯಿತು ಎನ್ನುವುದೇ ಒಂದು ಚೋದ್ಯ.
ರಾಜಕೀಯ ಪಕ್ಷಗಳು ಬೀದಿಗಿಳಿಯಬೇಕಿದ್ದ ವಿಚಾರ ಇದು. ಚುನಾವಣಾ ವಿಷಯ ಆಗಬೇಕಿದ್ದ ವಿಷಯ ಇದು. ಏನೂ ಆಗಿಲ್ಲ. ಬದಲಿಗೆ, ಅದ್ಯಾವುದೋ ಚಾಳಿ ಮನೆ ಮಂದಿಗೆಲ್ಲಾ ಎಂಬಂತೆ ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಈ ಅವಧಿಯುದ್ದಕ್ಕೆ ಆಗಿ ಹೋದ ಕಾಂಗ್ರೆಸ್ ಸರ್ಕಾರಗಳೂ ಕೆಲ ಪ್ರಕರಣದಲ್ಲಿ ಬುಲ್ಡೋಜರ್ ದಾಳಿ ನಡೆಸಿ ಶೌರ್ಯ ಪ್ರದರ್ಶಿಸಿವೆ. ಈಗ ತೀರ್ಪು ಬಂದ ಮೇಲೆ ನ್ಯಾಯಾಲಯದ ನೆರಳಲ್ಲಿ ನಿಂತು ವಿರೋಧ ಪಕ್ಷದ ನಾಯಕರೆಲ್ಲಾ ಹಿಂದೆ ಆಗಿ ಹೋಗಿದ್ದನ್ನು ಖಂಡಿಸುತ್ತಿದ್ದಾರೆ. ಏನು ಪ್ರಯೋಜನ? ಮನೆ ಮಠ ಕಳೆದುಕೊಂಡ ಕುಟುಂಬಗಳಿಗೆ ಯಾರು ತೀರ್ಪಿನ ಪರ ಮಾತಾಡಿದರೆಷ್ಟು, ಯಾರು ತೀರ್ಪಿನ ವಿರುದ್ಧ ಮಾತನಾಡಿದರೆಷ್ಟು?
ಅನಧಿಕೃತ ಮತ್ತು ಅಕ್ರಮವಾಗಿ ಮನೆ ಅಥವಾ ಕಟ್ಟಡಗಳನ್ನು ನಿರ್ಮಿಸುವುದರ ವಿರುದ್ಧ, ಮತೀಯ ಗಲಭೆ ಸೃಷ್ಟಿಸುವವರ ವಿರುದ್ಧ, ಅದಕ್ಕೆ ಪ್ರಚೋದಿಸುವವರ ವಿರುದ್ಧ, ಅದರಲ್ಲಿ ಉದ್ದೇಶಪೂರ್ವಕ ಪಾಲ್ಗೊಳ್ಳುವವರ ವಿರುದ್ಧ ಕ್ರಮ ಕ್ರಮಕೈಗೊಳ್ಳಲೆಂದೇ ಸರ್ಕಾರಗಳು ಇರುವುದು. ಹಾಗೆಂದು ಕ್ರಮಕೈಗೊಳ್ಳುವ ನೆಪದಲ್ಲಿ ಚುನಾಯಿತ ಸರ್ಕಾರವೊಂದು ಅಕ್ಷರಶಃ ಉನ್ಮಾದ ಪ್ರದರ್ಶಿಸುವುದು, ಕಠಿಣ ಸಂದೇಶ ರವಾನಿಸುವ ಹೆಸರಲ್ಲಿ ಸಂದೇಹ ಮಾತ್ರದಿಂದ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದವರ ಮನೆಗಳನ್ನು ಎರ‍್ರಾಬಿರ್‍ರಿಯಾಗಿ ಕೆಡವಿ ಶೌರ್ಯ ಪ್ರದರ್ಶನ ಮಾಡುವುದು, ಕೆಡವುವ ಪ್ರಕ್ರಿಯೆಯಲ್ಲಿ ಬ್ಯಾಂಡು, ವಾದ್ಯ, ನಗಾರಿ ಬಾರಿಸಿ ಅದನ್ನೊಂದು ಜಾತ್ರೆಯಂತೆ ನಡೆಸುವುದು ಇವೆಲ್ಲವೂ ನಿಲ್ಲಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಆದರೆ ಇಂತಹದ್ದೆಲ್ಲಾ ನಮ್ಮ ಕಣ್ಣ ಮುಂದೆ ಇಷ್ಟು ಕಾಲ ಅವ್ಯಾಹತವಾಗಿ ನಡೆಯಲು ಸಾಧ್ಯವಾಯಿತು ಎನ್ನುವುದು ನಮ್ಮ ನಾಗರಿಕತೆಯ ಮಟ್ಟವನ್ನು ಜಗಜ್ಜಾಹೀರುಗೊಳಿಸಿದೆ.
ಲೇಖಕ: ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಸಹ ಪ್ರಾಧ್ಯಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.