ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವು ಅಕಾಡೆಮಿಗಳ ಸ್ವಾಯತ್ತೆಯನ್ನು ಒಪ್ಪಿಕೊಂಡಿದೆ. ಪ್ರಾಧಿಕಾರಗಳಿಗೆ ಈಗಾಗಲೇ ಶಾಸನಾತ್ಮಕ ಅಧಿಕಾರವಿದೆ. ಆದರೆ 2005ರ ಅಕಾಡೆಮಿಯ ನಿಯಮಾವಳಿಯ ತಿದ್ದುಪಡಿ ಇನ್ನೂ ಆಗಿಲ್ಲ. ಆದ್ದರಿಂದ ಉದ್ರೇಕಾತ್ಮಕ ಅಂತಿಮ ಉವಾಚಗಳ ಬದಲು ಸರ್ಕಾರವೇ ಒಪ್ಪಿರುವ ಸಾಂಸ್ಕೃತಿಕ ಸ್ವಾಯತ್ತೆ ಪರಿಕಲ್ಪನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಮುಂದಾಗಬೇಕು. ಸರ್ಕಾರದ ಸಾಂಸ್ಕೃತಿಕ ಅಂಗಸಂಸ್ಥೆಗಳೂ ಸ್ವಾಯತ್ತೆಯ ಸಮರ್ಥನೆಯ ಹೊಣೆಗಾರಿಕೆ ಹೊರಬೇಕು. ಏನಾದರೂ ಬಿಕ್ಕಟ್ಟು ಉಂಟಾದರೆ ಸರ್ಕಾರವು ಸಂವಾದದ ಸೌಜನ್ಯ ತೋರಬೇಕು.
ನಮ್ಮ ಸರ್ಕಾರಗಳು ಆರಂಭದಿಂದಲೂ ಸಾಂಸ್ಕೃತಿಕ ಸ್ವಾಯತ್ತೆಯ ಪರವಾದ ನಿಲುವನ್ನು ತಾಳಿರುವ ದೊಡ್ಡ ಪರಂಪರೆಯೇ ಇದೆ. ಈ ಸ್ವಾಯತ್ತ ಪರಂಪರೆಯನ್ನು ಈಗಿನ ಸರ್ಕಾರ ಮತ್ತು ಅದರ ಸಾಂಸ್ಕೃತಿಕ ಅಂಗಸಂಸ್ಥೆಯ ಪದಾಧಿಕಾರಿಗಳು ಸರಿಯಾಗಿ ಅರ್ಥಮಾಡಿಕೊಂಡರೆ ವಿವಾದವೇ ಇರುವುದಿಲ್ಲ.
ಸಾಂಸ್ಕೃತಿಕ ಸ್ವಾಯತ್ತ ಪರಂಪರೆಯ ಮೂಲವನ್ನು ನಾಲ್ವಡಿ ಕೃಷ್ಣರಾಜ ಒಡೆಯರ ಆಡಳಿತಾವಧಿಯಲ್ಲಿ ಕಾಣಬಹುದು. ಆಗ ಒಂದು ಸ್ವತಂತ್ರ ಸಾಹಿತ್ಯ ಸಂಸ್ಥೆಯನ್ನು ಸ್ಥಾಪಿಸುವುದು ನಾಲ್ವಡಿಯವರ ಆಶಯವಾಗಿತ್ತು. ಅನಂತರ 1914ರಲ್ಲಿ ನಡೆದ ಮೈಸೂರು ಸಂಸ್ಥಾನದ ‘ಸಂಪದಭ್ಯುದಯ ಸಮಾಜ’ದ ವಾರ್ಷಿಕ ಸಮ್ಮೇಳನದಲ್ಲಿ ನಿರ್ಣಯ ಮಾಡಲಾಗುತ್ತದೆ. ಆ ನಿರ್ಣಯ ಹೀಗಿದೆ: ‘ಕನ್ನಡ ಭಾಷೆಯಲ್ಲಿ ವಿವಿಧ ಗ್ರಂಥಗಳನ್ನು ರಚಿಸುವವರ ಪ್ರೋತ್ಸಾಹಕ್ಕಾಗಿ ಸ್ವತಂತ್ರಾಧಿಕಾರವುಳ್ಳ ಪರಿಷತ್ತು ಇರಬೇಕು. ಸರ್ಕಾರ ವಿಶೇಷ ಸಹಾಯ ಮಾಡಬೇಕು’ –ಈ ನಿರ್ಣಯದಲ್ಲಿ ‘ಸ್ವತಂತ್ರಾಧಿಕಾರವುಳ್ಳ ಪರಿಷತ್ತು’ ಎಂಬುದನ್ನು ಗಮನಿಸಬೇಕು. ನಿರ್ಣಯ ಸ್ವೀಕಾರದ ನಂತರ ಡಿವಿಜಿ, ಎಚ್.ವಿ. ನಂಜುಂಡಯ್ಯ ಮುಂತಾದ ವಿದ್ವಾಂಸರೇ ಚರ್ಚಿಸಿ ರೂಪುರೇಷೆಗಳನ್ನು ಸಿದ್ಧ ಮಾಡುತ್ತಾರೆ. ರಾಜರು, ದಿವಾನರು ಮಧ್ಯ ಪ್ರವೇಶಿಸುವುದಿಲ್ಲ. 1915ಕ್ಕೆ ‘ಸಾಹಿತ್ಯ ಪರಿಷತ್ತು’ ನಾಲ್ವಡಿಯವರಿಂದಲೇ ಚಾಲನೆಗೊಳ್ಳುತ್ತದೆ. ಹೀಗೆ ಸರ್ಕಾರದ ಕಡೆಯಿಂದ 1914ರಲ್ಲೇ ಸಾಂಸ್ಕೃತಿಕ ಸ್ವಾಯತ್ತೆಯ ಇತಿಹಾಸ ಆರಂಭವಾಗುತ್ತದೆ.
ಕೇಂದ್ರ ಸರ್ಕಾರದ ‘ಸಾಹಿತ್ಯ ಅಕಾಡೆಮಿ’ ಆರಂಭವಾದದ್ದು 1954ರ ಮಾರ್ಚ್ 12ರಂದು. ಆಗ ಪ್ರಧಾನಮಂತ್ರಿಯವರೇ ಅಕಾಡೆಮಿಯ ಅಧ್ಯಕ್ಷರು. ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಅವರು ಮೊದಲ ಸಭೆಯಲ್ಲಿಯೇ ಹೀಗೆ ಹೇಳಿದ್ದರು: ‘ಈ ಅಕಾಡೆಮಿಯ ಅಧ್ಯಕ್ಷನಾಗಿ ನಾನು ನಿಮಗೆ ಪ್ರಾಮಾಣಿಕವಾಗಿ ಹೇಳುತ್ತೇನೆ; ನನ್ನ ಕೆಲಸದಲ್ಲಿ ಪ್ರಧಾನಿ ಹಸ್ತಕ್ಷೇಪ ಮಾಡುವುದಿಲ್ಲ’. ತಮ್ಮ ಮಾತಿನಂತೆ ಅವರು ಪ್ರಧಾನಿಯ ಅಧಿಕಾರವನ್ನು ಇಲ್ಲಿ ಚಲಾಯಿಸಲಿಲ್ಲ. ಮೊದಲ ಸಭೆಯಲ್ಲೇ ಅಕಾಡೆಮಿಗೆ ಸರ್ಕಾರದ ನೇಮಕಾತಿ ಬೇಡ ಎಂದು ನಿರ್ಣಯಿಸಲಾಯಿತು. ಸ್ವಾಯತ್ತ ಪರಿಕಲ್ಪನೆಯೇ ಪ್ರಮುಖವಾಯಿತು.
ಕರ್ನಾಟಕದಲ್ಲಿ ಸಾಹಿತ್ಯ ಅಕಾಡೆಮಿಯ ಸ್ಥಾಪನೆಯಾದದ್ದು 1961ರಲ್ಲಿ. ಆರಂಭದ ಅನೇಕ ವರ್ಷ ಶಿಕ್ಷಣ ಸಚಿವರೇ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು. 1976ರಲ್ಲಿ ಯುವಜನ ಖಾತೆ ಸಚಿವರು ಅಧ್ಯಕ್ಷರಾಗಿದ್ದರು. 1977ರ ಜೂನ್ ಒಂದರಂದು ದೇವರಾಜ ಅರಸು ನೇತೃತ್ವದ ಸರ್ಕಾರವು ಸಾಹಿತ್ಯದ ಜೊತೆಗೆ ಜಾನಪದ ಮತ್ತು ಯಕ್ಷಗಾನ, ಸಂಗೀತ ಮತ್ತು ನೃತ್ಯ ಹಾಗೂ ನಾಟಕ ಅಕಾಡೆಮಿಗಳ ರಚನೆಗೆ ನಿರ್ಧಾರ ಕೈಗೊಂಡು ಆದೇಶ ಹೊರಡಿಸಿತು. ಆಗ ಅಕಾಡೆಮಿಗಳ ಕಾರ್ಯ ಸ್ವರೂಪದ ಬಗ್ಗೆ ಒಂದು ‘ಸನ್ನದು’ (Charter) ಸಿದ್ಧವಾಯಿತು. 1978ರ ನವೆಂಬರ್ 28ರಲ್ಲಿ ಈ ಅಕಾಡೆಮಿಗಳ ಸ್ಥಾಪನೆಗೆ ವಿವರವಾದ ಆದೇಶ ಮತ್ತು ಸನ್ನದು ಬಿಡುಗಡೆಯಾಯಿತು. ಪ್ರತೀ ಅಕಾಡೆಮಿಯ ಆದೇಶದ ಶೀರ್ಷಿಕೆಯಲ್ಲೇ ‘ಸ್ವಾಯತ್ತ ಸನ್ನದು’ (Character of Autonomy) ಎಂದು ನಮೂದಿಸಲಾಗಿದೆ. ಆದೇಶದ ಕ್ರಮಾಂಕ ನಾಲ್ಕರಲ್ಲಿ ಹೀಗೆ ಸ್ಪಷ್ಟಪಡಿಸಲಾಗಿದೆ: ‘ಮೇಲೆ ಸೂಚಿಸಿದ ಅಕಾಡೆಮಿಗಳು, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯಕ್ಕೆ ಸಲಹೆ ಸೂಚಿಸುವ ಮಂಡಲಿಗಳಂತಿದ್ದವು. ಅಕಾಡೆಮಿಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಉದ್ದೇಶದಿಂದ ಮೇಲ್ಕಂಡ ಅಕಾಡೆಮಿಗಳನ್ನು ಸ್ವಾಯತ್ತ ಸಂಸ್ಥೆಗಳನ್ನಾಗಿ ಬೇರ್ಪಡಿಸಲಾಯಿತು’. ಅಂದರೆ ದೇವರಾಜ ಅರಸು ನೇತೃತ್ವದ ಸರ್ಕಾರವು ಇಲಾಖೆಯಿಂದ ಬೇರ್ಪಡಿಸಿ, ಅಕಾಡೆಮಿಗಳಿಗೆ ಸಂಪೂರ್ಣ ಸ್ವಾಯತ್ತ ಸ್ವಾತಂತ್ರ್ಯವನ್ನು ನೀಡಿತು.
ಮುಂದೆ ಕೆಲವು ಘಟನೆಗಳು ನಡೆದವು. ತಮಗಿದ್ದ ಸ್ವಾಯತ್ತೆಯನ್ನು ಬಳಸಿಕೊಂಡು ಒಂದು ಅಕಾಡೆಮಿಯ ಅಧ್ಯಕ್ಷರು ತಮಗೆ ಅರವತ್ತು ವರ್ಷ ತುಂಬಿದೆಯೆಂದು ಅರವತ್ತು ಜನಕ್ಕೆ ಪ್ರಶಸ್ತಿ ಕೊಟ್ಟರು. ಇನ್ನೊಬ್ಬರು ಏಕೀಕರಣದ ಸುವರ್ಣ ಸಂಭ್ರಮ ಎಂದು ಲೆಕ್ಕ ಮೀರಿ ಪ್ರಶಸ್ತಿ ಕೊಟ್ಟರು. ಇಂಥ ನಡೆಯನ್ನು ಆಕ್ಷೇಪಿಸಿದವರಲ್ಲಿ ನಾನೂ ಒಬ್ಬ. ಪ್ರಶಸ್ತಿ ನೀಡಿಕೆಯ ಸಂಖ್ಯೆಗೆ ನಿರ್ದಿಷ್ಟ ನಿಯಮ ಕಡ್ಡಾಯವಾಗಬೇಕೆಂದು ಆರಂಭವಾದ ಚರ್ಚೆ ಹೊಸ ನಿಯಮಾವಳಿಯ ರೂಪ ತಾಳಿ ಸರ್ಕಾರವು 2005ರ ಮಾರ್ಚ್ 14ರಂದು ಹೊಸ ನಿಯಮಾವಳಿಯನ್ನು ಜಾರಿಗೆ ತಂದಿತು. ಸರ್ಕಾರದ ಅಧಿಕಾರಿಗಳ ನಿಯಂತ್ರಣಕ್ಕೆ ಹೆಚ್ಚು ಅವಕಾಶ ಕಲ್ಪಿಸಿಕೊಂಡ ಈ ನಿಯಮಾವಳಿಯು ದೇವರಾಜ ಅರಸು ಕಾಲದ ಸಾಂಸ್ಕೃತಿಕ ಸ್ವಾಯತ್ತೆ ಪರಿಕಲ್ಪನೆಯನ್ನು ಮೊಟಕು ಮಾಡಿತು.
ಮುಂದೆ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಬಂದಾಗ ನನ್ನ ನೇತೃತ್ವದಲ್ಲಿ ಸಮಗ್ರ ಸಾಂಸ್ಕೃತಿಕ ನೀತಿ ನಿರೂಪಣೆಗಾಗಿ ಸಮಿತಿಯನ್ನು ನೇಮಿಸಿತು. ನಮ್ಮ ಸಮಿತಿಯು ನೀಡಿದ ಅನೇಕ ಶಿಫಾರಸುಗಳಲ್ಲಿ ಅಕಾಡೆಮಿಗಳ ರಚನೆಗೆ ಹೊಸ ವಿಧಾನವನ್ನು ಸೂಚಿಸಿ 2005ರ ನಿಯಮಾವಳಿಗೆ ತಿದ್ದುಪಡಿ ಮಾಡಿ ಸ್ವಾಯತ್ತೆಯ ಮರುಸ್ಥಾಪನೆ ಮಾಡಬೇಕೆಂಬುದೂ ಒಂದು ಶಿಫಾರಸಾಗಿತ್ತು. ಸರ್ಕಾರವು ಎಚ್.ಕೆ. ಪಾಟೀಲರ ಅಧ್ಯಕ್ಷತೆಯಲ್ಲಿ ಉಪಸಮಿತಿ ರಚಿಸಿತು. ಈ ಸಮಿತಿಯು ನಮ್ಮ ಶಿಫಾರಸುಗಳಲ್ಲಿ ಮುಖ್ಯವಾದ ಕೆಲವನ್ನು ಒಪ್ಪಿತು. ಮಂತ್ರಿಮಂಡಲವೂ ಮುದ್ರೆಯೊತ್ತಿತು. 2017ರ ಅಕ್ಟೋಬರ್ 10ರಂದು ಸರ್ಕಾರದ ಅಧಿಕೃತ ಆದೇಶವೂ ಹೊರಟಿತು. ಅದರಲ್ಲಿ ಅಕಾಡೆಮಿಗಳಿಗೆ ಸಂಬಂಧಿಸಿದಂತೆ ಹೀಗೆ ನಮೂದಿಸಲಾಗಿದೆ:
‘ಅಕಾಡೆಮಿಯ ಅಂಗರಚನೆ/ನಿಯಮಾವಳಿ ಮತ್ತು ಹಣಕಾಸಿನ ನಿರ್ವಹಣೆಯಲ್ಲಿ ನಿಯಮಾನುಸಾರ ಕಾರ್ಯಕ್ರಮಗಳನ್ನು ರೂಪಿಸುವ ಮತ್ತು ಅನುಷ್ಠಾನ ಮಾಡುವ ಸ್ವಾಯತ್ತೆಯನ್ನು ಅಕಾಡೆಮಿಗಳಿಗೆ ಒದಗಿಸುವುದು’.
ಅಂದರೆ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವೂ ಅಕಾಡೆಮಿಗಳ ಸ್ವಾಯತ್ತೆಯನ್ನು ಒಪ್ಪಿಕೊಂಡಿದೆ. ಪ್ರಾಧಿಕಾರಗಳಿಗೆ ಈಗಾಗಲೇ ಶಾಸನಾತ್ಮಕ ಅಧಿಕಾರವಿದೆ. ಆದರೆ 2005ರ ಅಕಾಡೆಮಿಯ ನಿಯಮಾವಳಿಯ ತಿದ್ದುಪಡಿ ಇನ್ನೂ ಆಗಿಲ್ಲ. ಆದ್ದರಿಂದ ಉದ್ರೇಕಾತ್ಮಕ ಅಂತಿಮ ಉವಾಚಗಳ ಬದಲು ಸರ್ಕಾರವೇ ಒಪ್ಪಿರುವ ಸಾಂಸ್ಕೃತಿಕ ಸ್ವಾಯತ್ತೆ ಪರಿಕಲ್ಪನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಮುಂದಾಗಬೇಕು. ಸರ್ಕಾರದ ಸಾಂಸ್ಕೃತಿಕ ಅಂಗಸಂಸ್ಥೆಗಳೂ ಸ್ವಾಯತ್ತೆಯ ಸಮರ್ಥನೆಯ ಹೊಣೆಗಾರಿಕೆ ಹೊರಬೇಕು. ಏನಾದರೂ ಬಿಕ್ಕಟ್ಟು ಉಂಟಾದರೆ ಸರ್ಕಾರವು ಸಂವಾದದ ಸೌಜನ್ಯ ತೋರಬೇಕು. ಈ ಮಾದರಿಯ ನಡವಳಿಕೆಗೆ ಸಂಕೋಚದಿಂದಲೇ ನನ್ನ ಎರಡು ಅನುಭವಗಳನ್ನು ಹಂಚಿಕೊಳ್ಳ ಬಯಸುತ್ತೇನೆ.
ಒಂದು: ನಾನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಿದ್ದ ಕಾಲ. ಆಗ ಎಸ್. ಬಂಗಾರಪ್ಪನವರು ಮುಖ್ಯಮಂತ್ರಿ. ಅವರು ಸತ್ಯಸಾಯಿಬಾಬ ಅವರಿಗೆ ಎರಡು ಕೋಟಿ ರೂಪಾಯಿ ಅನುದಾನ ಕೊಡವುದಾಗಿ ಪ್ರಕಟಿಸಿದರು. ಅವರಿಂದಲೇ ಅಧ್ಯಕ್ಷನಾಗಿ ನೇಮಕಗೊಂಡ ನಾನು ಅದನ್ನು ವಿರೋಧಿಸಿ ಪತ್ರಿಕೆಗಳಿಗೆ ಬರೆದೆ. ‘ಮುಖ್ಯಮಂತ್ರಿ’ ಬಂಗಾರಪ್ಪನವರ ಸೌಜನ್ಯ ಎಷ್ಟು ಹಿರಿದಾಗಿತ್ತೆಂದರೆ, ನನ್ನನ್ನು ಆಹ್ವಾನಿಸಿದರು. ತಾವು ಹಣ ಕೊಟ್ಟಿರುವುದು ಸಾಯಿಬಾಬ ಅವರ ಸ್ವಂತಕ್ಕಲ್ಲ, ಬಡವರಿಗೆ ಅನುಕೂಲವಾಗುವ ಅವರ ಆಸ್ಪತ್ರೆಗೆ ಎಂದು ಮನವರಿಕೆ ಮಾಡಿದರು. ‘ಇಷ್ಟರ ಮೇಲೆ ನಿಮ್ಮ ಅಭಿಪ್ರಾಯ ನಿಮ್ಮದು ನನಗೆ ಬೇಸರವಿಲ್ಲ’ ಎಂದರು.
ಎರಡು: ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯವರಾಗಿದ್ದಾಗ ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ. ನಾನು ಕೊಟ್ಟ ಕೆಲವು ರಚನಾತ್ಮಕ ಸಲಹೆಗಳು ಜಾರಿಯಾಗದೆ ಇದ್ದಾಗ ರಾಜೀನಾಮೆ ಕೊಡಲು ಮುಂದಾಗಿ ಒಂದು ದೀರ್ಘ ಪತ್ರ ಬರೆದು ಮುಖ್ಯಮಂತ್ರಿಯವರ ವಿಶೇಷಾಧಿಕಾರಿ ಪ್ರಕಾಶ್ ಅವರ ಕೈಗೆ ಕೊಟ್ಟು ಬಂದೆ. ರಾತ್ರಿ ಹತ್ತೂವರೆಗೆ ‘ಮುಖ್ಯಮಂತ್ರಿ’ ಕೃಷ್ಣ ಅವರು ನನಗೆ ಫೋನ್ ಮಾಡಿ ಬೆಳಿಗ್ಗೆ ತಿಂಡಿಗೆ ಬರಲು ಆಹ್ವಾನಿಸಿದರು. ಬೆಳಿಗ್ಗೆ ಹೋದಾಗ ‘ನಾನು ಮೂಲತಃ ಸಮಾಜವಾದಿ; ಅದಕ್ಕೆ ವಿರುದ್ಧವಾದ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಆಗಿದ್ದೇನೆ’ ಎಂದು ಮಾತು ಆರಂಭಿಸಿ ಆಡಳಿತದ ಅಡೆ ತಡೆಗಳನ್ನು ವಿವರಿಸಿದರು. ರಾಜೀನಾಮೆ ಕೊಡಬೇಡಿ ಎಂದರು. ಆನಂತರ ನನ್ನ ಸಲಹೆಯಂತೆ ಕನ್ನಡ ಮಾಧ್ಯಮದವರಿಗೆ ಮೀಸಲಾತಿಯನ್ನೂ ಒಳಗೊಂಡಂತೆ ಅನೇಕ ಕ್ರಮಗಳಿಗೆ ಕಾರಣರಾದರು.
ಈ ಎರಡು ಪ್ರಸಂಗಗಳು ಸರ್ಕಾರದ ಸೌಜನ್ಯ ಮತ್ತು ಸಂವಾದಕ್ಕೆ ಸಾಕ್ಷಿಯಾಗಿವೆ. ಸಾಂಸ್ಕೃತಿಕ ಸ್ವಾಭಿಮಾನ ಮತ್ತು ಸರ್ಕಾರದ ಸೌಜನ್ಯ- ಎರಡಕ್ಕೂ ಪ್ರಜಾಸತ್ತತ್ಮಕ ಸಂವಾದ ಸಾಧ್ಯವಿದ್ದರೆ ಸ್ವಾಯತ್ತೆಗೆ ಧಕ್ಕೆಯಾಗದು.
ಲೇಖಕ: ಸಾಹಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.