ADVERTISEMENT

ಪ್ರಜಾವಾಣಿ ಚರ್ಚೆ: ದೇಶವನ್ನು ವ್ಯಾಪಿಸಿದ ಬುಲ್ಡೋಜರ್‌ ಸೋಂಕು

ಆರೋಪಿಗಳ ಆಸ್ತಿ ನೆಲಸಮಗೊಳಿಸುವುದು ಸರಿಯಾದ ಕ್ರಮವೇ?

ಸೌಮ್ಯಾ ರೆಡ್ಡಿ
Published 29 ಏಪ್ರಿಲ್ 2022, 19:31 IST
Last Updated 29 ಏಪ್ರಿಲ್ 2022, 19:31 IST
ಸೌಮ್ಯಾ ರೆಡ್ಡಿ
ಸೌಮ್ಯಾ ರೆಡ್ಡಿ   

* ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಇದೇ ವಾರ ನೀಡಿದ ವರದಿ ಪ್ರಕಾರ ಸೂಕ್ತ ಉದ್ಯೋಗ ಹುಡುಕಲು ಸಾಧ್ಯವಾಗದೆ ಹತಾಶರಾದ ಉದ್ಯೋಗಾಕಾಂಕ್ಷಿಗಳು ಉದ್ಯೋಗ ಹುಡುಕುವುದನ್ನೇ ನಿಲ್ಲಿಸಿದ್ದಾರೆ. 2017ರಿಂದ 2022ರ ಮಧ್ಯೆ (ನೋಟು ನಿಷೇಧದ ದಾಳಿಯಿಂದ ಬುಲ್ಡೋಜರ್ ದಾಳಿವರೆಗಿನ ಅವಧಿ) ಭಾರತದ ಕಾರ್ಮಿಕರ ಪಾಲ್ಗೊಳ್ಳುವಿಕೆ ದರ ಶೇ 46ರಿಂದ ಶೇ 40ಕ್ಕೆ ಕುಸಿದಿದೆ.

* ಭಾರತದ ರಿಸರ್ವ್ ಬ್ಯಾಂಕಿನ ಹಣಕಾಸು ನೀತಿ ಸಮಿತಿ (ಎಂಪಿಸಿ) ಹೆಚ್ಚುತ್ತಿರುವ ಹಣದುಬ್ಬರಕ್ಕೆ ಏಪ್ರಿಲ್ 22ರಂದು ಆತಂಕ ವ್ಯಕ್ತಪಡಿಸಿದೆ.

* ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‍ಸಿಆರ್‌ಬಿ) ವರದಿ ಪ್ರಕಾರ, 11,716 ಉದ್ಯಮಿಗಳು 2020ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ ಕರ್ನಾಟಕದಲ್ಲೇ ಅತಿ ಹೆಚ್ಚು ಅಂದರೆ 1,772 ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ADVERTISEMENT

* ನ್ಯಾಷನಲ್ ಸ್ಮಾಲ್ ಇಂಡಸ್ಟ್ರೀಸ್ ಕಾರ್ಪೊರೇಷನ್ ಲಿಮಿಟೆಡ್ ಸಮೀಕ್ಷಾ ವರದಿ ಪ್ರಕಾರ, 2020ರಿಂದ 2022ರ ಮಾರ್ಚ್ 9ರವರೆಗೆ 6 ಸಾವಿರಕ್ಕೂ ಅಧಿಕ ಸಣ್ಣ-ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳು ಬಂದ್ ಆಗಿವೆ.

* ಅಂತರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ವರದಿಯ ಪ್ರಕಾರ, ಭಾರತದ ತಲಾ ಆದಾಯ ನೆರೆಯ ಬಾಂಗ್ಲಾದೇಶಕ್ಕಿಂತ ಕೆಳಕ್ಕೆ ಕುಸಿದಿದೆ. ಬಾಂಗ್ಲಾ ದೇಶದ ತಲಾ ಆದಾಯ 2,227 ಡಾಲರ್ ಇದ್ದರೆ ಭಾರತದ ತಲಾ ಆದಾಯ 1,947.41 ಡಾಲರ್‌ಗೆ ಕುಸಿದಿದೆ.

ಈ ಅಂಕಿ ಅಂಶಗಳಲ್ಲಿ ಹೆಚ್ಚಿನವು ಕೇಂದ್ರ ಸರ್ಕಾರವೇ ಒದಗಿಸಿದ್ದು ಮತ್ತು ಉಳಿದ ಪ್ರತಿಷ್ಠಿತ ಸಂಸ್ಥೆಗಳ ಅಂಕಿ ಅಂಶಗಳನ್ನು ಕೇಂದ್ರ ಸರ್ಕಾರವೇ ಒಪ್ಪಿಕೊಂಡಿದೆ. ಈಗ, ಸೂಚ್ಯಂಕಗಳ ಕಡೆಗೂ ನೋಡಿ ಬಿಡೋಣ...

* ಹಸಿವು ಮತ್ತು ಅಪೌಷ್ಟಿಕತೆಯನ್ನು ಅಳೆಯುವ ಜಿಎಚ್‍ಐ ಪ್ರಕಾರ, ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ 116 ದೇಶಗಳಲ್ಲಿ ಭಾರತ 101ನೇ ಸ್ಥಾನದಲ್ಲಿದೆ. ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳಕ್ಕಿಂತ ಕೆಳಕ್ಕೆ ಕುಸಿದಿದೆ.

* ಜಾಗತಿಕ ಆಹಾರ ಭದ್ರತೆ (ಜಿಎಫ್‍ಎಸ್) ಸೂಚ್ಯಂಕದಲ್ಲಿ 113 ದೇಶಗಳಲ್ಲಿ ಭಾರತ 71ನೇ ಸ್ಥಾನದಲ್ಲಿದೆ.

ಇವಲ್ಲದೆ ಅಭಿವ್ಯಕ್ತಿ ಹಾಗೂ ಪತ್ರಿಕಾ ಸ್ವಾತಂತ್ರ್ಯ, ಮಹಿಳೆಯರ ಸುರಕ್ಷತೆ ಹೀಗೆ ಇನ್ನೂ ಹತ್ತು ಹಲವು ಸೂಚ್ಯಂಕಗಳಲ್ಲಿ ಭಾರತವು ಶೋಚನೀಯ ಸ್ಥಿತಿಗೆ ಕುಸಿಯುತ್ತಿರುವ ಹೊತ್ತಲ್ಲೇ ಕೋಮುಗಲಭೆಗಳು, ಶಾಂತಿ ಕದಡುವ ಯತ್ನಗಳು ಏರಿಕೆ ಆಗುತ್ತಲೇ ಇವೆ.

ಬೆಲೆ ಏರಿಕೆಯಿಂದ ಜನ ಕಂಗಾಲಾಗಿದ್ದಾರೆ. ಕೃಷಿ ಉತ್ಪನ್ನಗಳ ಬೆಲೆ ಕುಸಿದಿದೆ. ವಿವಿಧ ಉದ್ಯಮಗಳು ಭಾರತದಿಂದ ಸಾಲು ಸಾಲಾಗಿ ಕಾಲು ಕೀಳುತ್ತಿದ್ದರೆ, ಭಾರತದ ರಫ್ತು ಕುಸಿದು ಆಮದು ಪ್ರಮಾಣ ದಾಖಲೆ ಮಟ್ಟದಲ್ಲಿ ಹೆಚ್ಚಾಗಿದೆ. ಇವೆಲ್ಲದರ ಒಟ್ಟು ಪರಿಣಾಮವಾಗಿ ಪ್ರತಿಯೊಂದು ಶ್ರಮಿಕ ವರ್ಗವೂ ತನ್ನ ಬೇಡಿಕೆ ಮುಂದಿಟ್ಟು ಬೀದಿಗಿಳಿದಿವೆ.

ಕೇಂದ್ರ ಸರ್ಕಾರವು ತನ್ನ ಕಳಪೆ ಆರ್ಥಿಕ ನೀತಿ ಮತ್ತು ಆಡಳಿತದಿಂದ ದೇಶದ ಶ್ರಮಿಕ ವರ್ಗ ಮತ್ತು ತೆರಿಗೆದಾರರ ಬದುಕನ್ನು ನೆಲಸಮ ಮಾಡುತ್ತಿದೆ. ಮಧ್ಯಮವರ್ಗಕ್ಕೆ ಸೇರಿದ್ದ ಸುಮಾರು 8 ಕೋಟಿ ಜನರನ್ನು ಜೆಸಿಬಿಯಲ್ಲಿ ಎತ್ತಿ ಬಡತನದ ರಾಶಿಗೆ ಸುರಿದಿದೆ. ಬಡ ಮತ್ತು ಮಧ್ಯಮವರ್ಗದ ಜನರ ಹೊಟ್ಟೆಯ ಸಿಟ್ಟು ರಟ್ಟೆಗೆ ಏರುತ್ತಿರುವ ಹೊತ್ತಿನಲ್ಲೇ ರಾಜಧಾನಿ ದೆಹಲಿ ಕಡೆಯಿಂದಲೇ ಬುಲ್ಡೋಜರ್ ಆಕ್ರಮಣ ಶುರುವಾಗಿದೆ. ಜನರ ಬದುಕನ್ನು ನೆಲಸಮ ಮಾಡುತ್ತಿರುವ ಬುಲ್ಡೋಜರ್‌ಗಳು ಕಣ್ಣಿಗೆ ಕಾಣುತ್ತಿಲ್ಲ ಅಷ್ಟೇ.

ಉತ್ತರ ಪ್ರದೇಶದಲ್ಲಿ ಕಾಣಿಸಿಕೊಂಡ ಬುಲ್ಡೋಜರ್ ಸೋಂಕು ದೆಹಲಿಯನ್ನು ಆಕ್ರಮಿಸಿಕೊಂಡು ಮಧ್ಯಪ್ರದೇಶವನ್ನೂ ದಾಟಿ ಇಡೀ ದೇಶವನ್ನು ವ್ಯಾಪಿಸುತ್ತಿದೆ. ಹಿಂದೂಗಳ ಪವಿತ್ರವಾದ ರಾಮನವಮಿ ಮತ್ತು ಹನುಮ ಜಯಂತಿ ಹಬ್ಬಗಳನ್ನೇ ಆರಿಸಿಕೊಂಡು ತಮ್ಮ ಬುಲ್ಡೋಜರ್ ರಾಜಕಾರಣಕ್ಕೆ ಭೂಮಿಯನ್ನು ಹದಗೊಳಿಸಿಕೊಳ್ಳುವ ಕ್ರೌರ್ಯದ ಕೆಲಸಕ್ಕೆ ಬಿಜೆಪಿ ಮುಂದಾಗಿದೆ.

ಕಲ್ಲುತೂರಾಟ ನಡೆಸಿ ಕೋಮು ಕೀಟಲೆ ಮಾಡಿದರು ಎಂದು ಬಿಂಬಿಸಿ ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಬುಲ್ಡೋಜರ್ ದಾಂದಲೆ ಶುರುವಾಯಿತು. ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಬಳಿಕ ಅದುವರೆಗೂ ಹೇಳಿದ್ದ ಕಲ್ಲು ತೂರಾಟದ ನೆಪವನ್ನು ಪಕ್ಕಕ್ಕಿಡಲಾಯಿತು. ಸಾರ್ವಜನಿಕ ಸ್ಥಳ ಒತ್ತುವರಿ ಮಾಡಿ ಬೀದಿ ಬದಿ ವ್ಯಾಪಾರ ಮಾಡಿಕೊಂಡಿದ್ದವರನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಯಿತು ಎಂದು ಬಿಜೆಪಿ ಅಧಿಕಾರ ನಡೆಸುತ್ತಿರುವ ಉತ್ತರ ದೆಹಲಿ ಮಹಾನಗರಪಾಲಿಕೆಯು (ಎನ್‌ಡಿಎಂಸಿ) ಸುಪ್ರೀಂ ಕೋರ್ಟ್‌ಗೂ ಸುಳ್ಳು ಹೇಳಿತು. ‘ಬೀದಿ ಬದಿ ಅಂಗಡಿ ತೆರವಿಗೆ ಬುಲ್ಡೋಜರ್ ಬೇಕಾಯಿತೇ’ ಎನ್ನುವ ಸುಪ್ರೀಂ ಕೋರ್ಟ್ ಪ್ರಶ್ನೆಗೆ ಎನ್‌ಡಿಎಂಸಿ ಬಳಿ ಉತ್ತರವೇ ಇಲ್ಲ.

ದೆಹಲಿಯಲ್ಲಿ ಸರ್ಕಾರವೇ ಗುರುತಿಸಿದ 781 ಅನಧಿಕೃತ ಕೊಳೆಗೇರಿಗಳಿವೆ. ಇವೆಲ್ಲವನ್ನೂ ಬಿಟ್ಟು ಜಹಾಂಗೀರ್‌ಪುರಿಯನ್ನೇ ಆಯ್ಕೆ ಮಾಡಿಕೊಳ್ಳಲು ಏನು ಕಾರಣ ಎನ್ನುವ ಪ್ರಶ್ನೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದ ವಕೀಲರು ಮುಂದಿಟ್ಟಿದ್ದಾರೆ. ಇದಕ್ಕೂ ಎನ್‌ಡಿಎಂಸಿ ಮತ್ತು ಬಿಜೆಪಿ ಬಳಿ ಉತ್ತರ ಇಲ್ಲ.

ಪ್ರಜಾಪ್ರಭುತ್ವವನ್ನು ರಕ್ಷಿಸುವುದಾಗಿ ಪ್ರಮಾಣ ವಚನ ಸ್ವೀಕರಿಸಿದ ಸರ್ಕಾರವೇ ಸಂವಿಧಾನಬದ್ಧ ಕಾನೂನಿನ ಆಳ್ವಿಕೆಯನ್ನು ನೆಲಸಮ ಮಾಡಿ, ಬುಲ್ಡೋಜರ್ ನ್ಯಾಯಕ್ಕೆ ಮುಂದಾಗಿದೆ. ಆರೋಪ ಸಾಬೀತಾಗುವವರೆಗೆ ಆರೋಪಿಯನ್ನು ಅಪರಾಧಿ ಎಂದು ಪರಿಗಣಿಸಲಾಗದು ಎಂದು ಈ ನೆಲದ ಕಾನೂನು ಹೇಳುತ್ತದೆ. ಆರೋಪಿಯು ಹಂತಕ ಎಂದು ಸಾಬೀತಾದರೂ ಅಪರಾಧಿಗೆ ಸೇರಿದ ಆಸ್ತಿಯನ್ನು ನಾಶ ಮಾಡಲು ನಮ್ಮ ಸಂವಿಧಾನದಲ್ಲಿ ಅವಕಾಶ ಇಲ್ಲ. ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಯಾವ ಶಿಕ್ಷೆ ಇದೆಯೋ ಅದಷ್ಟನ್ನು ವಿಧಿಸಲು ಮಾತ್ರ ಅವಕಾಶ ಇದೆ. ಜೊತೆಗೆ, ಶಿಕ್ಷೆ ವಿಧಿಸುವ ಅಧಿಕಾರ ಸರ್ಕಾರಕ್ಕೆ ಇಲ್ಲ. ಅದು ಕಾನೂನು ಪ್ರಕ್ರಿಯೆಯ ಮೂಲಕವೇ ನಡೆಯಬೇಕು. ಕಲ್ಲು ತೂರಿದವರು ಒತ್ತುವರಿ ಮಾಡಿಕೊಂಡಿದ್ದರೆ ಅದನ್ನು ಪತ್ತೆ ಮಾಡಿ, ಆಸ್ತಿಯನ್ನು ನೆಲಸಮ ಮಾಡಿ ಎಂದು ದೆಹಲಿ ಬಿಜೆಪಿ ಘಟಕದ ಮುಖ್ಯಸ್ಥ ಆದೇಶ್‌ ಗುಪ್ತಾ ಬರೆದ ಪತ್ರದ ಆಧಾರದಲ್ಲಿ ಎನ್‌ಡಿಎಂಸಿ ಕೈಗೊಂಡ ಕ್ರಮವೇ ಸಂವಿಧಾನ ವಿರೋಧಿ ಕ್ರಮ. ಆರೋಪಿಗಳಿಗೆ ಆಸ್ತಿ ನೆಲಸಮದ ಶಿಕ್ಷೆ ವಿಧಿಸುವ ಮೂಲಕ ಉತ್ತರ ಪ್ರದೇಶ, ಮಧ್ಯಪ್ರದೇಶದ ಸರ್ಕಾರಗಳು, ಎನ್‌ಡಿಎಂಸಿ ಮತ್ತು ಅಲ್ಲಿ ಆಳ್ವಿಕೆ ನಡೆಸುತ್ತಿರುವ ಬಿಜೆಪಿ ಸಂವಿಧಾನವನ್ನೇ ಉಲ್ಲಂಘಿಸಿವೆ.

ತೆರವು ಕಾರ್ಯಾಚರಣೆಯನ್ನು ತಕ್ಷಣ ನಿಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ ಬಳಿಕವೂ ಕಟ್ಟಡ ಧ್ವಂಸ ಕಾರ್ಯಾಚರಣೆಯನ್ನು ಮುಂದುವರಿಸಿದ ಕ್ರಮ, ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಬಿಜೆಪಿಗೆ ನಂಬಿಕೆಯೇ ಇಲ್ಲ ಎಂಬುದನ್ನು ತೋರಿಸುತ್ತದೆ.

ರಾಮನವಮಿ, ಹನುಮ ಜಯಂತಿಯಂದು ಕತ್ತಿ, ತಲವಾರು, ಪಿಸ್ತೂಲಿನ ವಿಕೃತ ಪ್ರದರ್ಶನವನ್ನು ಈ ದೇಶದ ಶ್ರದ್ಧಾಭಕ್ತಿಯ ಹಿಂದೂಗಳು ಯಾವತ್ತೂ ಬೆಂಬಲಿಸುವುದಿಲ್ಲ. ಇದು ಹಿಂದೂ ಧರ್ಮಕ್ಕೆ ಮತ್ತು ಹಿಂದೂ ಧರ್ಮವನ್ನು ನಿಜ ಅರ್ಥದಲ್ಲಿ ಪಾಲಿಸುತ್ತಿರುವವರಿಗೆ ಮಾಡಿದ ಅವಮಾನ. ಧರ್ಮದ ಹೆಸರಿನಲ್ಲಿ ರಕ್ತ ಹರಿಸುವುದು, ದ್ವೇಷ ಬಿತ್ತುವುದು ಹಿಂದೂ ಧರ್ಮದ ಶ್ರೇಷ್ಠ ಪರಂಪರೆಯ ಅವಹೇಳನ.

ಲೇಖಕಿ: ಕಾಂಗ್ರೆಸ್ ಶಾಸಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.