ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರ ನೇತೃತ್ವದ ರಾಜ್ಯಭಾಷೆಯ ಬಗೆಗಿನ ಸಂಸತ್ ಸಮಿತಿಯು ತನ್ನ ಶಿಫಾರಸುಗಳನ್ನು ರಾಷ್ಟ್ರಪತಿಯವರಿಗೆ ಇತ್ತೀಚೆಗೆ ಸಲ್ಲಿಸಿದೆ. ಈ ಶಿಫಾರಸಿನಲ್ಲಿ ಹಿಂದಿ ಭಾಷಿಕ ರಾಜ್ಯಗಳಲ್ಲಿರುವ ಐಐಟಿಯಂತಹ ತಾಂತ್ರಿಕ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿಯಲ್ಲಿ ಬೋಧನೆ ಮಾಡಲು ಮತ್ತು ಹಿಂದಿಯೇತರ ರಾಜ್ಯಗಳಲ್ಲಿ ಸ್ಥಳೀಯ ಭಾಷೆಯಲ್ಲಿ ಬೋಧನೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಹೇಳಲಾಗಿದೆ. ವಿಶ್ವಸಂಸ್ಥೆಯ ಆಡಳಿತ ಭಾಷೆಗಳಲ್ಲಿ ಹಿಂದಿಯನ್ನೂ ಒಳಪಡಿಸಬೇಕು, ಭಾರತ ಸರ್ಕಾರದ ಉದ್ಯೋಗ ಪರೀಕ್ಷೆಗಳಲ್ಲಿ ಇಂಗ್ಲಿಷ್ ಕಡ್ಡಾಯ ವಿಷಯವನ್ನು ತೆಗೆಯಬೇಕು, ಅಧಿಕಾರಿಗಳು ಹಿಂದಿ ಭಾಷಿಕ ರಾಜ್ಯಗಳಿಗೆ ವರ್ಗಾವಣೆಯಾಗಿ ಹೋಗಲು ಉದ್ದೇಶಪೂರ್ವಕವಾಗಿ ಹಿಂಜರಿಕೆ ತೋರಿದರೆ ಅಂಥವರಿಗೆ ಎಚ್ಚರಿಕೆ ಕೊಡುವ ಜೊತೆಗೆ, ಅವರ ವಾರ್ಷಿಕ ಕಾರ್ಯ ನಿರ್ವಹಣಾ ವರದಿಯಲ್ಲಿ ದಾಖಲಿಸಬೇಕು, ಸಂವಿಧಾನದ 348ನೇ ವಿಧಿ ಪ್ರಕಾರ, ಹಿಂದಿ ಭಾಷಿಕ ರಾಜ್ಯಗಳ ಹೈಕೋರ್ಟ್‌ಗಳ ಆದೇಶಗಳನ್ನು ಹಿಂದಿಗೆ ಭಾಷಾಂತರಿಸಬೇಕುಎಂಬುದು ಸೇರಿದಂತೆ 100ಕ್ಕೂ ಹೆಚ್ಚಿನ ಶಿಫಾರಸುಗಳು ಇವೆ ಎನ್ನುವುದು ಸುದ್ದಿ ಪತ್ರಿಕೆಗಳಲ್ಲಿ ವರದಿಯಾಗಿದೆ. ಈ ಶಿಫಾರಸುಗಳಿಗೆ ಭಾರತದ ವಿವಿಧ ಕಡೆಗಳಿಂದ ವಿರೋಧವೂ ವ್ಯಕ್ತವಾಗಿದೆ.
ಹಿಂದಿ ಬಳಕೆ ಹೆಚ್ಚಿಸಬೇಕು ಎನ್ನುವ ಶಿಫಾರಸನ್ನು ವಿರೋಧಿಸುವವರು ಅರ್ಥಮಾಡಿ ಕೊಳ್ಳಬೇಕಾದ ಅನೇಕ ಅಂಶಗಳಿವೆ. ಮೊದಲನೆ ಯದಾಗಿ, ಈ ರೀತಿಯ ಶಿಫಾರಸುಗಳನ್ನು ನೀಡುತ್ತಿರುವುದು ಇದೇ ಮೊದಲೇನೂ ಅಲ್ಲ. 1950ರಿಂದ ಇಲ್ಲಿಯವರೆಗೆ ರಾಷ್ಟ್ರಪತಿಯವರಿಗೆ ಹತ್ತು ಬಾರಿ ಹಿಂದಿ ಭಾಷೆಯ ಬಳಕೆ ಹೆಚ್ಚಿಸಲು ಶಿಫಾರಸುಗಳನ್ನು ನೀಡಲಾಗಿದೆ. ಮುಖ್ಯವಾದ ವಿಚಾರವೆಂದರೆ, ಸಂವಿಧಾನದ 344ನೇ ವಿಧಿ ಪ್ರಕಾರವೇ ಈ ಶಿಫಾರಸುಗಳನ್ನು ಸಲ್ಲಿಸಲಾಗಿದೆ.
ಸಂವಿಧಾನದ 344ನೇ ವಿಧಿ ಪ್ರಕಾರ ರಾಜಭಾಷಾ ಸಮಿತಿಯನ್ನು ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ರಚನೆ ಮಾಡಲಾಗುತ್ತದೆ. ಲೋಕಸಭೆಯ 20 ಸದಸ್ಯರು ಮತ್ತು ರಾಜ್ಯಸಭೆಯ 10 ಸದಸ್ಯರನ್ನು ಈ ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗುತ್ತದೆ. ಸಂವಿಧಾನದ 8ನೇ ಪರಿಚ್ಛೇದದ ಎಲ್ಲ ಭಾಷೆಗಳನ್ನು ಪ್ರತಿನಿಧಿಸುವ ಸದಸ್ಯರು ಈ ಸಮಿತಿಯಲ್ಲಿ ಇರುವಂತೆ ನೋಡಿಕೊಳ್ಳಲಾಗುತ್ತದೆ. ಈ ಮೂಲಕ, ಹಿಂದಿಗೆ ಹೆಚ್ಚುಗಾರಿಕೆ ಕೊಡಬೇಕು ಎನ್ನುವ ಶಿಫಾರಸುಗಳಿಗೆ ಈ ಎಲ್ಲಾ ಭಾಷೆಯನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳ ಒಪ್ಪಿಗೆ ಇರುವಂತೆ ಮಾಡಲಾಗುತ್ತದೆ.
ಆಯೋಗವು ಯಾವೆಲ್ಲ ಅಂಶಗಳ ಮೇಲೆ ಶಿಫಾರಸು ನೀಡಬೇಕು ಎನ್ನುವುದನ್ನೂ ಸಂವಿಧಾನದಲ್ಲಿ ಹೇಳಲಾಗಿದೆ. ಭಾರತದ ಒಕ್ಕೂಟದ ಆಡಳಿತದಲ್ಲಿ ಹಿಂದಿ ಬಳಕೆಯನ್ನು ಹೆಚ್ಚಿಸಿ, ಇಂಗ್ಲಿಷ್ ಬಳಕೆಯನ್ನು ಕಡಿಮೆ ಮಾಡುವ ದಿಸೆಯಲ್ಲಿ ಈ ಸಮಿತಿಯು ಪ್ರತಿ ಐದು ವರ್ಷಕ್ಕೆ ಒಮ್ಮೆ ರಾಷ್ಟ್ರಪತಿಯವರಿಗೆ ಶಿಫಾರಸುಗಳನ್ನು ಸಲ್ಲಿಸುತ್ತದೆ. ರಾಷ್ಟ್ರಪತಿಯವರು ಒಪ್ಪಿಗೆ ನೀಡಿದರೆ, ಈ ಶಿಫಾರಸುಗಳ ಕೆಲವು ಅಂಶಗಳನ್ನು ಅಥವಾ ಎಲ್ಲಾ ಅಂಶಗಳನ್ನು ಜಾರಿಗೆ ತರಲು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
ಭಾರತವು ಭಾಷಾ ವೈವಿಧ್ಯದಿಂದ ಕೂಡಿದ ಒಕ್ಕೂಟ. ದೇಶದ ಆಡಳಿತದಲ್ಲಿ ವಿವಿಧ ಭಾಷೆ ಗಳನ್ನು ಹೆಚ್ಚು ಹೆಚ್ಚು ಬಳಸುವುದರಿಂದ ಆಡಳಿತ ದಲ್ಲಿ ಪಾದರ್ಶಕತೆಯನ್ನು ಹೆಚ್ಚಿಸಬಹುದು ಮತ್ತು ಕಾನೂನು ರಚನೆಯಲ್ಲಿ ಜನರ ಒಳಗೊಳ್ಳುವಿಕೆ ಯನ್ನು ಹೆಚ್ಚಿಸಬಹುದು. ಆದರೆ, ಭಾರತ ಸರ್ಕಾರವು 70 ವರ್ಷಗಳಿಂದ ಆಡಳಿತದಲ್ಲಿ ಹಿಂದಿ ಭಾಷೆಗೆ ಮಾತ್ರ ಹೆಚ್ಚುಗಾರಿಕೆ ನೀಡುವ ಮೂಲಕ ಹಿಂದಿಯೇತರ ಜನರನ್ನು ಆಡಳಿತದಿಂದ ಮತ್ತು ಕಾನೂನಿನ ರಚನೆಯಿಂದ ದೂರ ಉಳಿಯುವಂತೆ ಮಾಡಿದೆ. ರಾಜಭಾಷಾ ಸಮಿತಿಯ ಶಿಫಾರಸುಗಳು ಭಾರತ ಸರ್ಕಾರದ ಈ ನಡೆಗೆ ಪುಷ್ಟಿ ನೀಡುತ್ತಾ ಬಂದಿವೆ. ಇಂಗ್ಲಿಷ್ ಭಾಷೆಯ ಬಳಕೆ ಕಡಿಮೆ ಮಾಡಲು ಹಿಂದಿ ಭಾಷೆಯ ಬಳಕೆಯನ್ನು ಮಾತ್ರ ಹೆಚ್ಚಿಸುವುದರಿಂದ ಹಿಂದಿ ಭಾಷಿಕರಲ್ಲದ ಕೋಟ್ಯಂತರ ಮಂದಿಗೆ ಯಾವ ಉಪಯೋಗವೂ ಇಲ್ಲ. ಕೆಲವೆಡೆ ಹಿಂದಿಯೇತರ ನಾಗರಿಕರಿಗೆ ಅಪಾಯವನ್ನೂ ತಂದೊಡ್ಡಿದೆ.
ಭಾರತೀಯರೆಲ್ಲರನ್ನೂ ಪ್ರತಿನಿಧಿಸುವ ಮತ್ತು ಎಲ್ಲಾ ಭಾಷೆಗಳಿಗೂ ಮನ್ನಣೆ ನೀಡಲಾಗುವುದು ಎಂದು ಬಾಯಿ ಮಾತಿನಲ್ಲಿ ಮಾತ್ರ ಹೇಳುವ ಭಾರತ ಸರ್ಕಾರಕ್ಕೆ ಕೆಲವು ಪ್ರಶ್ನೆಗಳನ್ನು ಕೇಳಬೇಕಿದೆ. ಆ ಪ್ರಶ್ನೆಗಳಲ್ಲಿ ಪ್ರಮುಖವಾದವು ಹೀಗಿವೆ: ಶಿಕ್ಷಣದಲ್ಲಿ ಭಾರತೀಯ ಭಾಷೆಯನ್ನು ಬಳಕೆ ಮಾಡುವುದು ಸ್ವಾಗತಾರ್ಹ ಕ್ರಮವಾಗಿದೆ. ಆದರೆ,ರಾಷ್ಟ್ರ ಮಟ್ಟದಲ್ಲಿ ಪರೀಕ್ಷೆ ನಡೆಸಿ, ಐಐಟಿಯಂತಹ ಸಂಸ್ಥೆಗಳ ಸೀಟ್‌ಗಳ ಹಂಚಿಕೆ ಮಾಡಲಾಗುತ್ತದೆ. ಹೀಗಾಗಿ ಐಐಟಿಯಂತಹ ಸಂಸ್ಥೆಗಳಲ್ಲಿ ಎಲ್ಲ ರಾಜ್ಯಗಳಿಗೆ ಸೇರಿದ ಮತ್ತು ವಿವಿಧ ಭಾಷೆಗಳನ್ನು ಮಾತನಾಡುವ ವಿದ್ಯಾರ್ಥಿಗಳಿರುತ್ತಾರೆ. ಹೀಗಿರುವಾಗ ಹಿಂದಿ ಭಾಷಿಕ ರಾಜ್ಯಗಳಲ್ಲಿ ಹಿಂದಿಯಲ್ಲಿ ಮತ್ತು ಹಿಂದಿಯೇತರ ಭಾಷಿಕ ರಾಜ್ಯಗಳಲ್ಲಿ ಆಯಾ ರಾಜ್ಯದ ಭಾಷೆಯಲ್ಲಿ ಬೋಧನೆ ನಡೆಸುವುದು ಹೇಗೆ ಸಾಧ್ಯ? ಶಿಕ್ಷಣದಲ್ಲಿ ಸ್ಥಳೀಯ ಭಾಷೆಗೆ ಹೆಚ್ಚುಗಾರಿಕೆ ಸಿಗಬೇಕೆಂದರೆ ಶಿಕ್ಷಣದ ಮೇಲಿನ ಹಿಡಿತ ರಾಜ್ಯ ಸರ್ಕಾರದ ಬಳಿ ಇರಬೇಕು. ರಾಜ್ಯ ಮಟ್ಟದಲ್ಲಿ ಪರೀಕ್ಷೆ ನಡೆದು ಸೀಟ್ ಹಂಚಿಕೆಯಾದಾಗ ಮಾತ್ರ ಸ್ಥಳೀಯ ಭಾಷೆಗೆ ಮಹತ್ವ ದೊರೆಯುತ್ತದೆ. ಈ ದಿಸೆಯಲ್ಲಿ ರಾಜ್ಯ ಸರ್ಕಾರಗಳಿಗೆ ಶಿಕ್ಷಣದ ಮೇಲಿನ ಹಿಡಿತವನ್ನು ಬಿಟ್ಟುಕೊಡಲು ಭಾರತ ಸರ್ಕಾರ ತಯಾರಿದೆಯೇ? ಅಥವಾ ಹಿಂದಿಗೆ ಹೆಚ್ಚುಗಾರಿಕೆ ನೀಡಿದಾಗ ವ್ಯಕ್ತವಾಗುವ ವಿರೋಧವನ್ನು ಕಡಿಮೆ ಮಾಡಲು ಆಯಾ ರಾಜ್ಯದ ಭಾಷೆಯಲ್ಲಿ ಬೋಧನೆ ಮಾಡಬೇಕು ಎನ್ನಲಾಗಿದೆಯೇ?
ಹಿಂದಿ ಭಾಷಿಕ ರಾಜ್ಯದ ಆಡಳಿತದಲ್ಲಿ ಇಂಗ್ಲಿಷ್‌ನ ಬಳಕೆಯನ್ನು ಕಡಿಮೆ ಮಾಡುವುದಕ್ಕೆ ಹಿಂದಿ ಭಾಷೆಯ ಬಳಕೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ, ಹಿಂದಿಯೇತರ ರಾಜ್ಯಗಳಲ್ಲೂ ಆಯಾ ಭಾಷೆಗಳ ಬಳಕೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತದೆಯೇ? ಸಂವಿಧಾನದ 343ನೇ ವಿಧಿಯಲ್ಲಿ ಹಿಂದಿಯೊಂದೇ ಆಡಳಿತ ಭಾಷೆ ಎಂದು ಇರುವಾಗ, ಹಿಂದಿಯೇತರ ರಾಜ್ಯಗಳಲ್ಲಿ ಆಯಾ ರಾಜ್ಯ ಭಾಷೆಯನ್ನು ಬಳಕೆ ಮಾಡಲು ಹೇಗೆ ಕ್ರಮ ಕೈಗೊಳ್ಳಲಾಗುತ್ತದೆ? ಹಿಂದಿಯೇತರ ರಾಜ್ಯದಲ್ಲಿ ಆಯಾ ರಾಜ್ಯದ ಭಾಷೆಯ ಬಳಕೆ ಹೆಚ್ಚಿಸದೇ ಇಂಗ್ಲಿಷ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದಾದರೂ ಹೇಗೆ? ಹಿಂದಿ ಭಾಷಿಕರಲ್ಲದ ಜನರಿಗೆ ತಮ್ಮ ಭಾಷೆಯಲ್ಲೇ ಉದ್ಯೋಗ ನೇಮಕಾತಿ ಪರೀಕ್ಷೆ ಬರೆಯಲು ಅವಕಾಶ ನೀಡದೇ ಇಂಗ್ಲಿಷ್ ಮೇಲಿರುವ ಅವಲಂಬನೆಯನ್ನು ಹೇಗೆ ಕಡಿಮೆ ಮಾಡಲು ಸಾಧ್ಯ? ಸಂವಿಧಾನದ 348ನೇ ವಿಧಿಯ ಪ್ರಕಾರ, ಆಯಾ ರಾಜ್ಯದ ಭಾಷೆಯನ್ನು ಹೈಕೋರ್ಟ್‌ನಲ್ಲಿ ಬಳಸಲು ಅವಕಾಶ ನೀಡಬಹುದು ಎನ್ನುವ ಅಂಶವಿದ್ದರೂ ಹಿಂದಿಯೇತರ ಭಾಷೆಗಳಿಗೆ ಅವಕಾಶ ನೀಡದ ಸರಕಾರದ ನಡೆ ಎಷ್ಟು ಸರಿ?
ಹಿಂದಿಗೆ ಮಾತ್ರ ಹೆಚ್ಚುಗಾರಿಕೆ ನೀಡುವುದು ಭಾರತ ಒಕ್ಕೂಟ ವೈವಿಧ್ಯಕ್ಕೆ ಧಕ್ಕೆ ಮಾಡುತ್ತದೆ. ಭಾರತ ಒಕ್ಕೂಟದಲ್ಲಿ ಆಡಳಿತ, ಉದ್ಯೋಗ, ಶಿಕ್ಷಣದಲ್ಲಿ ಭಾರತೀಯ ಭಾಷೆಗಳ ಬಳಕೆ ಹೆಚ್ಚಿಸುವುದು ಇಂದಿನ ಅಗತ್ಯಗಳಲ್ಲಿ ಪ್ರಮುಖವಾಗಿದೆ. ಭಾರತೀಯ ಭಾಷೆಗಳ ಬಳಕೆ ಹೆಚ್ಚಾಗಲು ಸಂವಿಧಾನದ 343ನೇ ವಿಧಿಗೆ ತಿದ್ದುಪಡಿ ಮಾಡಿ 8ನೇ ಪರಿಚ್ಛೇದದಲ್ಲಿ ಗುರುತಿಸಿರುವ 22 ಭಾಷೆಗಳಿಗೂ ಆಡಳಿತ ಭಾಷೆ ಸ್ಥಾನ ನೀಡಬೇಕಿದೆ. ಹಿಂದಿಗೆ ಮಾತ್ರ ಹೆಚ್ಚುಗಾರಿಕೆ ನೀಡಬೇಕು ಎನ್ನುವ ಶಿಫಾರಸುಗಳು ನಿಲ್ಲಬೇಕು ಎಂದರೆ ರಾಜಭಾಷಾ ಸಮಿತಿಯ ಬದಲಿಗೆ ಭಾರತೀಯ ಭಾಷಾ ಸಮಿತಿ ರಚನೆಯಾಗಬೇಕು, ಹಿಂದಿ ಭಾಷೆಯೊಂದರ ಬಳಕೆಯನ್ನು ಹೆಚ್ಚಿಸುವಂತೆ ಶಿಫಾರಸು ನೀಡಬೇಕು ಎನ್ನುವ ಬದಲಿಗೆ ಭಾರತೀಯ ಭಾಷೆಗಳ ಬಳಕೆ ಹೆಚ್ಚಿಸುವಂತೆ ಶಿಫಾರಸು ನೀಡಬೇಕು ಎಂದು ಸಂವಿಧಾನದ 344ನೇ ವಿಧಿಗೆ ತಿದ್ದುಪಡಿಯಾಗಬೇಕಿದೆ. ಜೊತೆಗೆ ಸಂವಿಧಾನದ 351ನೇ ವಿಧಿಯಲ್ಲಿ ಇರುವ ಹಿಂದಿ ಭಾಷೆಯ ಪ್ರಚಾರ ಭಾರತ ಸರ್ಕಾರದ ಕರ್ತವ್ಯ ಎನ್ನುವ ಅಂಶಕ್ಕೆ ತಿದ್ದುಪಡಿ ತರಬೇಕು. ಅದನ್ನು ಭಾರತೀಯ ಭಾಷೆಗಳ ಬಳಕೆ ಹೆಚ್ಚಿಸುವುದು ಭಾರತ ಸರ್ಕಾರದ ಕರ್ತವ್ಯ ಎಂದು ಮಾಡಬೇಕು. ಈ ತಿದ್ದುಪಡಿಗಳಾಗದೇ ಹಿಂದಿಯೇತರ ಭಾರತೀಯ ಭಾಷೆಗಳಿಗೆ, ಹಿಂದಿಯೇತರ ನಾಗರಿಕರಿಗೆ ಭವಿಷ್ಯವಿಲ್ಲ.
ಲೇಖಕ: ಕರ್ನಾಟಕ ರಕ್ಷಣಾ ವೇದಿಕೆಯ ಮುಖ್ಯ ವಕ್ತಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.