ಹಲವು ವರ್ಷಗಳಿಂದ ಸುಪ್ರೀಂ ಕೋರ್ಟ್, ತಾನೇ ಅನುಸರಿಸಿಕೊಂಡು ಬಂದಿದ್ದ ಸಮಾನತೆಯ ನ್ಯಾಯವಿವೇಚನೆಯ ಆಧಾರದಲ್ಲಿ ವೈವಾಹಿಕ ಸಮಾನತೆಯ ಪರ ತೀರ್ಪನ್ನು ನೀಡಬಹುದಿತ್ತು. ಕುತೂಹಲಕಾರಿ ಅಂಶವೇನೆಂದರೆ, ಎಲ್‌ಜಿಬಿಟಿಕ್ಯು+ ಸಮುದಾಯದವರಿಗೆ ವೈವಾಹಿಕ ಸಮಾನತೆ ನೀಡದಿರುವುದು ಅವರಿಗೆ ತೋರುವ ತಾರತಮ್ಯವಾಗಿದೆ ಎಂಬುದನ್ನು ಎಲ್ಲಾ ನ್ಯಾಯಮೂರ್ತಿಗಳೂ ಉಲ್ಲೇಖಿಸಿದ್ದಾರೆ. ಆದರೆ, ಇದಕ್ಕೆ ಪರಿಹಾರವನ್ನು ಮಾತ್ರ ಅವರು ನೀಡಲಿಲ್ಲ.
**
ವೈವಾಹಿಕ ಸಮಾನತೆಯ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ಇತ್ತೀಚೆಗೆ ತೀರ್ಪೊಂದನ್ನು ನೀಡಿದೆ. ಈ ಬಗ್ಗೆ ಹಲವು ಅರ್ಜಿಗಳು ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದ್ದವು. ಎಲ್‌ಜಿಬಿಟಿಕ್ಯು+ ವ್ಯಕ್ತಿಗಳನ್ನು ಒಳಗೊಳ್ಳದೇ ಇರುವ 1954ರ ವಿಶೇಷ ವಿವಾಹ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿಯೇ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. 3:2 ಬಹುಮತದ ತೀರ್ಪಿನಲ್ಲಿ ನ್ಯಾಯಾಲಯವು ವಿಶೇಷ ವಿವಾಹ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದಿದೆ ಮತ್ತು ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಲು ಸೋತಿದೆ.
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಪ್ರತ್ಯೇಕ ಅಧಿಕಾರಗಳ ತತ್ವವನ್ನು ಮುಂದಿಟ್ಟುಕೊಂಡು ನ್ಯಾಯಾಲಯವು ತನ್ನ ತೀರ್ಪು ನೀಡಿದೆ. ವಿಶೇಷ ವಿವಾಹದ ಕಾಯ್ದೆ ಅಡಿಯಲ್ಲಿ ಸಲಿಂಗ ವಿವಾಹಕ್ಕೆ ಅನುಮತಿ ನೀಡಬೇಕಾಗಿರುವುದು ನ್ಯಾಯಾಂಗದ ವ್ಯಾಪ್ತಿಗೆ ಬರುವುದಿಲ್ಲ. ಕಾನೂನುಗಳನ್ನು ತಿದ್ದುಪಡಿ ಮಾಡುವುದು, ಜಾರಿ ಮಾಡುವುದರ ಮೂಲಕ ವೈವಾಹಿಕ ಸಮಾನತೆ ನೀಡಬೇಕಾಗಿರುವುದು ಶಾಸಕಾಂಗದ ಕಾರ್ಯವ್ಯಾಪ್ತಿ ಎಂದು ನ್ಯಾಯಾಲಯ ಹೇಳಿದೆ.
ವೈವಾಹಿಕ ಸಮಾನತೆ ನೀಡಬೇಕು ಎಂದಾದರೆ, ನಿರ್ವಹಣೆ, ಜೀವನಾಂಶ, ವಿಚ್ಛೇದನ ಮತ್ತು ಉತ್ತರಾಧಿಕಾರ... ಹೀಗೆ ಗೊಂಚಲು ಗೊಂಚಲಾಗಿರುವ ಕೌಟುಂಬಿಕ ಕಾನೂನುಗಳಿಗೆ ಆಮೂಲಾಗ್ರ ಸುಧಾರಣೆ ಮಾಡಬೇಕಾಗುತ್ತದೆ. ಈ ಕಾರಣಕ್ಕಾಗಿ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಬೇಕಾಗಿರುವುದು ಶಾಸಕಾಂಗದ ಕೆಲಸ ಎಂದು ನ್ಯಾಯಾಲಯ ತನ್ನ ವಾದಕ್ಕೆ ಸಮರ್ಥನೆ ಮುಂದಿಟ್ಟಿದೆ.
ಎರಡು ವಿಷಯಗಳ ಕುರಿತು ಈ ಲೇಖನದಲ್ಲಿ ವಿಶ್ಲೇಷಣೆ ಮಾಡುತ್ತೇನೆ. ಒಂದನೆಯದು: ವಿಶೇಷ ವಿವಾಹ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿಯಲು ನ್ಯಾಯಾಲಯ ನೀಡಿರುವ ಸಮರ್ಥನೆಗಳು. ಎರಡನೆಯದು: ವಿಷಯಕ್ಕೆ ಪರಿಹಾರ ಕಂಡುಕೊಳ್ಳಲು ಇಚ್ಛಾಶಕ್ತಿ ತೋರದ ನ್ಯಾಯಾಲಯ. ಈ ಎರಡೂ ವಿಷಯಗಳಲ್ಲಿ ನ್ಯಾಯಾಲಯ ಸೋತಿದೆ ಎನ್ನುವುದೇ ನನ್ನ ವಾದವಾಗಿದೆ.
ವಿವಾಹವು ಮೂಲಭೂತ ಹಕ್ಕು ಅಲ್ಲ ಎಂಬುದನ್ನು ನ್ಯಾಯಾಪೀಠವು ಅವಿರೋಧವಾಗಿ ಒಪ್ಪಿಕೊಂಡಿದೆ. ಬದಲಿಗೆ, ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದು ಮತ್ತು ಅವರ ಜೊತೆಯಲ್ಲಿ ಸಂಬಂಧ ಇರಿಸಿಕೊಳ್ಳುವುದು ಮೂಲಭೂತ ಹಕ್ಕು ಎಂದು ಪೀಠ ಹೇಳಿದೆ. ಹಾಗೆಂದು ಸರ್ಕಾರವು ಈ ಸಂಬಂಧಕ್ಕೆ ಕಾನೂನು ಮಾನ್ಯತೆ ನೀಡಬೇಕು ಎಂದೇನು ಇಲ್ಲ ಎಂದೂ ನ್ಯಾಯಾಲಯದ ಹೇಳಿದೆ.
ಹಲವು ವರ್ಷಗಳಿಂದ ಸುಪ್ರೀಂ ಕೋರ್ಟ್, ತಾನೇ ಅನುಸರಿಸಿಕೊಂಡು ಬಂದಿದ್ದ ಸಮಾನತೆಯ ನ್ಯಾಯವಿವೇಚನೆಯ ಆಧಾರದಲ್ಲಿ ವೈವಾಹಿಕ ಸಮಾನತೆಯ ಪರ ತೀರ್ಪನ್ನು ನೀಡಬಹುದಿತ್ತು. ಕುತೂಹಲಕಾರಿ ಅಂಶವೇನೆಂದರೆ, ಎಲ್‌ಜಿಬಿಟಿಕ್ಯು+ ಸಮುದಾಯದವರಿಗೆ ವೈವಾಹಿಕ ಸಮಾನತೆ ನೀಡದಿರುವುದು ಅವರಿಗೆ ತೋರುವ ತಾರತಮ್ಯವಾಗಿದೆ ಎಂಬುದನ್ನು ಎಲ್ಲಾ ನ್ಯಾಯಮೂರ್ತಿಗಳೂ ಉಲ್ಲೇಖಿಸಿದ್ದಾರೆ. ಆದರೆ, ಇದಕ್ಕೆ ಪರಿಹಾರವನ್ನು ಮಾತ್ರ ಅವರು ನೀಡಲಿಲ್ಲ.
ವಿಶೇಷ ವಿವಾಹ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ನಿರ್ಧರಿಸುವುದು ನಿರರ್ಥಕ ಕೆಲಸವಾಗಿದೆ. ಯಾಕೆಂದರೆ, ಸಲಿಂಗ ವಿವಾಹಕ್ಕೆ ಸಂಬಂಧಿಸಿ ಪರಿಹಾರ ನೀಡುವುದಕ್ಕೆ ನ್ಯಾಯಾಲಯಕ್ಕೆ ಅಧಿಕಾರ ಇಲ್ಲ ಎಂದು ಮೂಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ. ಸಮಾನತೆಯ ಹಕ್ಕನ್ನು ಉಲ್ಲಂಘಿಸಿರುವುದಕ್ಕಾಗಿ ವಿಶೇಷ ವಿವಾಹ ಕಾಯ್ದೆಯು ಅಸಾಂವಿಧಾನಿಕವಾಗಿದೆ ಎಂದು ನ್ಯಾಯಮೂರ್ತಿ ಎಸ್.ಕೆ. ಕೌಲ್ ಅವರು ಅಭಿಪ್ರಾಯಪಡುತ್ತಾರೆ. ಆದರೆ, ಈ ಕಾಯ್ದೆಯನ್ನು ತೆಗೆದುಹಾಕಲು ನಿರಾಕರಿಸುತ್ತಾರೆ.
ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಿಲ್ಲದ ಕಾರಣಕ್ಕಾಗಿ ಎಲ್‌ಜಿಬಿಟಿಕ್ಯು+ ಸಮುದಾಯದ ಜನರು ಉದ್ಯೋಗ, ಆರೋಗ್ಯ, ವ್ಯವಹಾರ, ಸಾಮಾಜಿಕ ಭದ್ರತೆ ಹಾಗೂ ಜೀವವಿಮೆಗಳಿಗೆ ಸಂಬಂಧಿಸಿ ಸಮಸ್ಯೆ ಎದುರಿಸುತ್ತಾರೆ ಎಂಬುದನ್ನು ನ್ಯಾಯಮೂರ್ತಿ ರವೀಂದ್ರ ಭಟ್ ಅವರು ಒಪ್ಪಿಕೊಂಡಿದ್ದಾರೆ. ಇಂಥ ಅನ್ಯಾಯ ಮತ್ತು ಅಸಮಾನತೆಗಳು ಎಲ್‌ಜಿಬಿಟಿಕ್ಯು+ ಸಮುದಾಯದವರಿಗೆ ತಾರತಮ್ಯವನ್ನು ಎದುರಿಸುವಂತೆ ಮಾಡಿದೆ ಎಂದೂ ಹೇಳುತ್ತಾರೆ. ಆದರೆ, ವಿಶೇಷ ವಿವಾಹ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಮಾತ್ರ ಎತ್ತಿ ಹಿಡಿಯುತ್ತಾರೆ. ಗಂಡು–ಹೆಣ್ಣಿನ ಅಂತರಧರ್ಮೀಯ ಹಾಗೂ ಅಂತರಜಾತಿ ವಿವಾಹವನ್ನು ಊರ್ಜಿತಗೊಳಿಸುವುದು ವಿಶೇಷ ವಿವಾಹ ಕಾಯ್ದೆಯ ಉದ್ದೇಶವೇ ಹೊರತು, ಸಲಿಂಗ ಜೋಡಿಗಳನ್ನು ಹೊರಗಿಡುವುದಲ್ಲ ಎನ್ನುತ್ತಾರೆ ಅವರು. ಇಷ್ಟೆಲ್ಲಾ ಹೇಳಿದರೂ, ಎಲ್‌ಜಿಬಿಟಿಕ್ಯು+ ವ್ಯಕ್ತಿಗಳ ಸಾಂವಿಧಾನಿಕ ಹಕ್ಕುಗಳನ್ನು ಮಾನ್ಯ ಮಾಡಲಿಲ್ಲ.
ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡದಿರಲು ಸುಪ್ರೀಂ ಕೋರ್ಟ್ ಮಂಡಿಸಿರುವ ವಾದವು, ಭಾರತ ಸರ್ಕಾರ ಮತ್ತು ನವತೇಜ್ ಜೋಹಾರ್ ಪ್ರಕರಣದಲ್ಲಿ ತಾನೇ ನೀಡಿದ್ದ ತೀರ್ಪನ್ನು ನಿರ್ಲಕ್ಷಿಸಿದೆ. ಲಿಂಗದ ಆಧಾರದಲ್ಲಿ ತಾರತಮ್ಯ ಮಾಡುವುದು ಸಂವಿಧಾನಬಾಹಿರ ಎಂದು ನವತೇಜ್ ಜೋಹಾರ್ ಪ್ರಕರಣದಲ್ಲಿ ನ್ಯಾಯಾಲಯ ಹೇಳಿತ್ತು. ತಾರತಮ್ಯ ನಿವಾರಣೆಗಾಗಿಯೇ ಕಾನೂನೊಂದನ್ನು ರಚಿಸಲಾಗುತ್ತದೆ. ಆದರೆ, ಈ ಕಾನೂನಿನ ಕೆಲವು ಅಂಶಗಳು ತಾರತಮ್ಯಕ್ಕೆ ಎಡೆಮಾಡಿಕೊಡುತ್ತದೆ. ಇದೇ ಪರೋಕ್ಷ ತಾರತಮ್ಯ ಎಂದು ಲೆಫ್ಟಿನೆಂಟ್ ಕರ್ನಲ್ ನಿತಿಶಾ ಹಾಗೂ ಭಾರತ ಸರ್ಕಾರ ಮತ್ತು ನವಜಿತ್ ಪ್ರಕರಣಗಳಲ್ಲಿ ನಡೆದಿತ್ತು ಎಂದು ಸ್ವತಃ ಸುಪ್ರೀಂ ಕೋರ್ಟ್ ಆ ಪ್ರಕರಣಗಳ ತೀರ್ಪಿನಲ್ಲಿ ಅರ್ಥೈಸಿತ್ತು.
ಸಲಿಂಗ ವಿವಾಹ ಸಂಬಂಧದ ತೀರ್ಪು ನೀಡುವಾಗ ಸುಪ್ರೀಂ ಕೋರ್ಟ್ ಇಂಥ ಪರೋಕ್ಷ ತಾರತಮ್ಯಗಳು ಇರುವ ಹಲವು ಪ್ರಕರಣಗಳನ್ನು ನಿರ್ಲಕ್ಷಿಸಿದೆ. ಇದೇ ತೀರ್ಪಿನಲ್ಲಿ ಎಲ್‌ಜಿಬಿಟಿಕ್ಯು+ ಸಮುದಾಯದವರು ಅನುಭವಿಸುವ ತಾರತಮ್ಯ ಹಾಗೂ ಅದರಿಂದಾಗುವ ಪರಿಣಾಮಗಳ ಬಗ್ಗೆ ನ್ಯಾಯಪೀಠವು ಉಲ್ಲೇಖಿಸಿತಾದರೂ ತಾರತಮ್ಯದ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ. ತನ್ನದೇ ಹಿಂದಿನ ತೀರ್ಪುಗಳ ಬಗ್ಗೆ, ಸಮಾನತೆಯ ಕುರಿತು ತನ್ನ ನ್ಯಾಯವಿವೇಚನೆ ಬಗ್ಗೆಯೇ ನಿರ್ಲಕ್ಷ್ಯ ತೋರಿದ್ದು ನಿರಾಶೆ ತಂದಿದೆ.
ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿದರೆ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಅಧಿಕಾರ ತತ್ವಗಳನ್ನು ಉಲ್ಲಂಘಿಸಿದಂತೆ ಆಗುತ್ತದೆ ಎನ್ನುವ ನ್ಯಾಯಾಲಯದ ಆತಂಕಕ್ಕೆ ಏನು ಕಾರಣ ಎಂಬುದನ್ನು ಯಾರಾದರೂ ಊಹಿಸಬಹುದು. ಇಲ್ಲಿ ಎರಡು ವಿಷಯಗಳಿವೆ. ಮೊದಲನೆಯದು: ಕೌಟುಂಬಿಕ ಕಾನೂನು ಹಾಗೂ ವಿವಾಹವು ಹೆಣ್ಣು ಮತ್ತು ಗಂಡನ್ನು ಪ್ರತ್ಯೇಕವಾಗಿ ನಡೆಸಿಕೊಳ್ಳುತ್ತದೆ. ಎರಡನೆಯದು: ನಿರ್ವಹಣೆ, ವಿಚ್ಛೇದನ, ಪೋಷಕತ್ವ, ಉತ್ತರಾಧಿಕಾರ... ಇಂಥ ಕೌಟುಂಬಿಕ ಕಾನೂನುಗಳಿಗೆ ವಿವಾಹವು ಮೊದಲ ಬಿಂದುವಾಗಿದೆ. ಈ ಬಿಂದುವಿನಿಂದಲೇ ಈ ಎಲ್ಲಾ ಕಾನೂನುಗಳು, ಹಕ್ಕುಗಳು, ರಕ್ಷಣೆಗಳನ್ನು ನೀಡಲಾಗುತ್ತದೆ. ಎಲ್‌ಜಿಬಿಟಿಕ್ಯು+ ಸಮುದಾಯದ ಜನರಿಗೆ ವಿವಾಹದ ಹಕ್ಕು ಎಂಬುದನ್ನು ನಿರ್ವಾತದಲ್ಲಿ ಕಾರ್ಯಗತಗೊಳಿಸಲು ಸಾಧ್ಯವಿಲ್ಲ. ಇದಕ್ಕಾಗಿ ಕೌಟುಂಬಿಕ ಕಾನೂನುಗಳಲ್ಲಿ ಸುಧಾರಣೆ ತರಬೇಕಾಗುತ್ತದೆ. ವಿಶೇಷ ವಿವಾಹ ಕಾಯ್ದೆ ಹಾಗೂ ವೈಯಕ್ತಿಕ ಕಾನೂನುಗಳಿಗೂ ಇದು ಅನ್ವಯವಾಗುತ್ತದೆ.
ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವುದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ಸರಿಯಾಗಿಯೇ ಇದೆ. ಇದು ಶಾಸಕಾಂಗದ ಕಾರ್ಯವ್ಯಾಪ್ತಿಗೆ ಬರುತ್ತದೆಯಾದರೂ, ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವಲ್ಲಿ ಈ ‘ಕಾರ್ಯವ್ಯಾಪ್ತಿ’ಯ ತತ್ವವು ಅಡ್ಡಿ ಬರುವುದಿಲ್ಲ.
ಇಡೀಯ ಕಾನೂನನ್ನೇ ರದ್ದು ಮಾಡುವ ಬದಲು, ತಾರತಮ್ಯಕ್ಕೆ ಕಾರಣವಾಗುತ್ತಿರುವ ಅಂಶಗಳನ್ನು ಅಮಾನ್ಯ ಎಂದು ಸುಪ್ರೀಂ ಕೋರ್ಟ್ ಘೋಷಣೆ ಮಾಡಬಹುದಿತ್ತು. ಒಂದೊಮ್ಮೆ ಕಾನೂನಿನ ಇಂಥ ಅಂಶಗಳು ಅಸಾಂವಿಧಾನಿಕ ಎಂದು ಪೀಠ ಹೇಳಿದ್ದರೆ, ಆಗ ಶಾಸಕಾಂಗವು ಸರಿಯಾದ ಕ್ರಮ ಕೈಗೊಳ್ಳಲು ಅನುವು ಮಾಡಿದಂತಾಗುತ್ತಿತ್ತು. ಈ ಮಾದರಿಯ ತೀರ್ಪನ್ನು ದಕ್ಷಿಣ ಆಫ್ರಿಕಾದ ಸಂವಿಧಾನ ಪೀಠವು (ಗೃಹ ಸಚಿವಾಲಯ ಮತ್ತು ಫೌರೆ ಪ್ರಕರಣ) ಹಲವು ವರ್ಷಗಳ ಹಿಂದೆಯೇ ನೀಡಿತ್ತು ಮತ್ತು ವೈವಾಹಿಕ ಸಮಾನತೆಯನ್ನು ಅದು ಎತ್ತಿಹಿಡಿದಿತ್ತು. ದಕ್ಷಿಣ ಆಫ್ರಿಕಾದ ಸಂವಿಧಾನ ಪೀಠದ ಮಾದರಿಯಲ್ಲಿಯೇ ಇಲ್ಲಿಯೂ ಸುಪ್ರೀಂ ಕೋರ್ಟ್ ಸಲಿಂಗ ವಿವಾಹ ಮಾನ್ಯತೆಗೆ ಸಂಬಂಧಿಸಿದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಿತ್ತು.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರೇ ಹೇಳಿರುವಂತೆ, ದಕ್ಷಿಣ ಆಫ್ರಿಕಾದ ಸಾಮಾಜಿಕ–ರಾಜಕೀಯ ಸಂದರ್ಭಕ್ಕೂ ಭಾರತದ ಸಂದರ್ಭಕ್ಕೂ ವ್ಯತ್ಯಾಸವಿದೆ. ಇದೇ ಕಾರಣಕ್ಕೇ ಅಂಥ ತೀರ್ಪನ್ನು ಇಲ್ಲಿ ನೀಡಲು ನ್ಯಾಯಾಲಯವು ಹಿಂದಡಿ ಇಟ್ಟಿತು. ಹಾಗಿದ್ದರೂ ಕಾನೂನಾತ್ಮಕ ಪರಿಹಾರ ಮತ್ತು ವಿವಿಧ ಆದೇಶಗಳ ಮೂಲಕ ಬದಲಾವಣೆಯು ಜಾರಿಗೆ ಬರುವಂತೆ ನೋಡಿಕೊಳ್ಳಬಹುದಿತ್ತು. ಜೊತೆಗೆ, ಸಂವಿಧಾನದಲ್ಲಿ ಉಲ್ಲೇಖಿಸಿಲ್ಲದ ಹಕ್ಕುಗಳಿಗೆ ಮಾನ್ಯತೆ ನೀಡಿಯೂ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಬಹುದಿತ್ತು.
ಸೂಕ್ತ ಕಾನೂನುಗಳು ಇಲ್ಲದ ಸಂದರ್ಭಗಳಲ್ಲಿ ಕಡ್ಡಾಯವಾಗಿ ಪಾಲನೆ ಮಾಡಲೇಬೇಕಾದ ಮಾರ್ಗಸೂಚಿಗಳನ್ನು ನ್ಯಾಯಾಲಯ ಈ ಹಿಂದೆ ಹಲವು ಬಾರಿ ಆದೇಶಿಸಿದೆ. ಜೊತೆಗೆ, ಸಾಮಾಜಿಕವಾಗಿ ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳಿಗೆ ಮೀಸಲಾತಿಯನ್ನು ವಿಸ್ತರಿಸಿ ಅವರ ಹಕ್ಕುಗಳು ಉಲ್ಲಂಘನೆ ಆಗದಂತೆ ದೃಢ ನಿರ್ಧಾರ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಒತ್ತಾಯಿಸಿರುವ ಹಲವು ಉದಾಹರಣೆಗಳಿವೆ. ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವುದನ್ನು ಪರಿಶೀಲಿಸಿದ ಸಂದರ್ಭದಲ್ಲಿ ಈ ವಿಚಾರವನ್ನು ಸುಪ್ರೀಂ ಕೋರ್ಟ್ ಗಣನೆಗೆ ತೆಗೆದುಕೊಳ್ಳದ್ದರಿಂದ ಎಲ್‌ಜಿಬಿಟಿಕ್ಯು+ ಸಮುದಾಯಕ್ಕೆ ಸಾಂವಿಧಾನಿಕ ಹಕ್ಕುಗಳನ್ನು ನಿರಾಕರಣೆ ಮಾಡಿದಂತಾಗಿದೆ. ಸಲಿಂಗ ವಿವಾಹವನ್ನು ಮಾನ್ಯ ಮಾಡುವುದನ್ನು ವಿರೋಧಿಸುವವರ ಕೈಗೇ ಎಲ್‌ಜಿಬಿಟಿಕ್ಯು+ ಸಮುದಾಯದವರ ಭವಿಷ್ಯವನ್ನು ಕೊಟ್ಟಂತಾಗಿದೆ.
ಲೇಖಕಿ: ಹಿರಿಯ ರೆಸಿಡೆಂಟ್ ಫೆಲೊ, ವಿಧಿ ಸೆಂಟರ್ ಫಾರ್ ಲೀಗಲ್ ಲೆಗಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.