ADVERTISEMENT

ಚರ್ಚೆ: ವೇಶ್ಯಾವಾಟಿಕೆ ಮತ್ತು ಘನತೆಯ ಬದುಕು

ಈ ದಂಧೆಯನ್ನು ನಿರ್ನಾಮಗೊಳಿಸಿ ಮಹಿಳೆಯರ ಘನತೆಯನ್ನು ಎತ್ತಿ ಹಿಡಿದಿದ್ದ ಸೋವಿಯತ್ ಒಕ್ಕೂಟದ ನಡೆ ನಮಗೆ ಮಾದರಿ ಆಗಬಾರದೇಕೆ?

ಡಾ.ಸುಧಾ ಕೆ.
Published 6 ಜೂನ್ 2022, 19:30 IST
Last Updated 6 ಜೂನ್ 2022, 19:30 IST
   

ವೇಶ್ಯಾವಾಟಿಕೆ ಕುರಿತು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ನೀಡಿದ ತೀರ್ಪಿನ ನಂತರ ಈ ಬಗೆಗಿನ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಇದೊಂದು ಅನಾದಿ ಕಾಲದಿಂದ ಬಂದಂಥ ವೃತ್ತಿ, ಸ್ವಯಿಚ್ಛೆಯಿಂದ ಆರಿಸಿ ಕೊಂಡವರಿಗೆ ಅದರಲ್ಲಿ ಮುಂದುವರಿಯುವ ಅವಕಾಶ ಇರಬೇಕು ಎಂಬಂಥ ವಾದವೂ ಕೇಳಿಬರುತ್ತಿದೆ. ಹಾಗಿದ್ದಲ್ಲಿ, ಹೆಣ್ಣುಮಕ್ಕಳು ವಿದ್ಯಾಭ್ಯಾಸದ ಬಳಿಕ ಯಾವ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದಾಗ, ಅವರ ಹೆತ್ತವರಾಗಲೀ ಶಿಕ್ಷಕರು ಅಥವಾ ಬಂಧು-ಮಿತ್ರರಾಗಲೀ ಸಾಮಾನ್ಯವಾಗಿ ಕೊಡುವ ಸಲಹೆಗಳಾದ ಡಾಕ್ಟರ್, ಎಂಜಿನಿಯರ್, ಶಿಕ್ಷಕಿ, ಕಲಾವಿದೆ ಮುಂತಾದವುಗಳ ಜೊತೆಗೆ ಈ ವೃತ್ತಿಯನ್ನೂ ಸೇರಿಸುತ್ತಾರೆಯೇ? ಯಾವುದೇ ಹೆಣ್ಣುಮಗಳು ವೇಶ್ಯಾವೃತ್ತಿಯೇ ತನ್ನ ಆಯ್ಕೆ ಎಂದು ಹೇಳಬಯಸುತ್ತಾಳೆಯೇ? ಈ ಪ್ರಶ್ನೆಯಿಂದ ಬಹುತೇಕರು ಕೆಂಡಾ ಮಂಡಲ ಆಗುವುದಂತೂ ಖಂಡಿತ!

ಹಾಗಾದರೆ, ಇದು ಆರ್ಥಿಕ ಅವಶ್ಯಕತೆಯಿಂದಾಗಿ ಮತ್ತು ಆರ್ಥಿಕವಾಗಿ ಕೆಳಸ್ತರದಲ್ಲಿರುವ, ಕಳಂಕಿತ ಹಣೆಪಟ್ಟಿ ಕಟ್ಟಿಸಿಕೊಂಡ ಮನೆತನದ ಅಸಹಾಯಕ ಹೆಣ್ಣುಮಕ್ಕಳೇ ಹೆಚ್ಚಾಗಿ ಅವಲಂಬಿಸು ತ್ತಿರುವ ಒಂದು ಸಾಮಾಜಿಕ ಕಳಂಕದ ಕೆಲಸ ಎಂದಾಯಿತಲ್ಲ. ಅವರನ್ನು ಮುಖ್ಯವಾಹಿನಿಗೆ ತರುವ, ಅವರಿಗೆ ಆರ್ಥಿಕ ಸುಭದ್ರತೆ ಒದಗಿಸುವ ಜವಾಬ್ದಾರಿಯನ್ನು ಆಳುವ ಸರ್ಕಾರ ಹೊತ್ತುಕೊಳ್ಳಬೇಕು ಎಂದು ಒತ್ತಾಯಿಸುವ ಬದಲಿಗೆ, ಈ ವೃತ್ತಿಯಲ್ಲೇ ಅವರನ್ನು ಮುಂದುವರಿಸುವ ಮಾತುಗಳನ್ನು ಆಡುವುದು ಎಷ್ಟು ಸರಿ? ಸಮಾಜದ ಸ್ವಾಸ್ಥ್ಯ ಕಾಪಾಡಲು ಅವರ ಅವಶ್ಯಕತೆ ಇದೆ ಎನ್ನುವ ವಾದ, ನಮ್ಮ ಮನೆಯ ಹೆಣ್ಣುಮಕ್ಕಳು ಕ್ಷೇಮದಿಂದಿರಲಿ, ಬದಲಿಗೆ, ಬೇರೆ ಯಾರೋ ಹೆಣ್ಣುಮಕ್ಕಳು ಕಾಮುಕರಿಗೆ ಬಲಿಯಾದರೆ ಆಗಲಿ ಎನ್ನುವುದು ನೈತಿಕವೇ?

ಈ ವೃತ್ತಿ ಹಳೆಯ ಊಳಿಗಮಾನ್ಯ ಸಮಾಜದಲ್ಲಿ, ರಾಜ- ಜಮೀನ್ದಾರ ವ್ಯವಸ್ಥೆಯಲ್ಲಿ ಮನ್ನಣೆ ಪಡೆದಿತ್ತು, ಹಾಗಾಗಿ ಈಗಲೂ ಹಾಗೆಯೇ ಮುಂದುವರಿಯಲಿ ಎನ್ನುವವರು ಸ್ತ್ರೀಯನ್ನು ಒಂದು ಭೋಗದ ವಸ್ತು ವನ್ನಾಗಿ ಕಾಣುವ ಮನಃಸ್ಥಿತಿಯನ್ನು ಹೊಂದಿಲ್ಲವೇ? ಹಾಗಿದ್ದರೆ ಇದಕ್ಕೆ ಪರಿಹಾರವೇನು? ಇದನ್ನು ಈ ಹಿಂದಿನ ಸಮಾಜವಾದಿ ಸೋವಿಯತ್ ಒಕ್ಕೂಟ ಪ್ರಾಯೋಗಿಕವಾಗಿಯೇ ತೋರಿಸಿಕೊಟ್ಟಿದ್ದನ್ನು ಅನೇಕ ಸಮಾಜಶಾಸ್ತ್ರಜ್ಞರು, ಲೇಖಕರು ವಿವರಿಸಿದ್ದಾರೆ. ಕೆನಡಾದ ಡೈಸನ್ ಕಾರ್ಟರ್‌ ಅವರು, ‘ಸಿನ್ ಆ್ಯಂಡ್ ಸೈನ್ಸ್’ ಎಂಬ ತಮ್ಮ ಪುಸ್ತಕದಲ್ಲಿ ಈ ಕುರಿತು ವಿಸ್ತಾರ ವಾಗಿ ಚರ್ಚಿಸಿದ್ದಾರೆ. ಕರ್ನಾಟಕದ ಸಾಹಿತಿ ತರಾಸು, ಈ ಕುರಿತು ತಮ್ಮ ‘ಮಸಣದ ಹೂವು’ ಕಾದಂಬರಿಯ ಮುನ್ನುಡಿಯಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ಲೈಂಗಿಕ ರೋಗಗಳು ವ್ಯಾಪಕವಾಗಿ ಹಬ್ಬುತ್ತಿ ದ್ದಂಥ ಇಡೀ ಯುರೋಪು, ಅಮೆರಿಕದಂಥ ದೇಶ ಗಳಲ್ಲಿ ವೇಶ್ಯಾವಾಟಿಕೆಯನ್ನು ತೊಡೆದುಹಾಕಲು ಸಮ ರೋಪಾದಿಯಲ್ಲಿ ಕ್ರಮಗಳನ್ನು ತೆಗೆದುಕೊಂಡರು. ವೇಶ್ಯೆಯರನ್ನು ಪ್ರತ್ಯೇಕಿಸುವುದು, ಈ ರೋಗಗಳಿಗೆ ನೀಡಿದ ಚಿಕಿತ್ಸೆ, ವಿಟಪುರುಷರಿಗೆ ಈ ಕುರಿತ ಒಳ್ಳೆಯ ಬೋಧನೆ- ಇದ್ಯಾವುದರಿಂದಲೂ ಪ್ರಯೋಜನವಾಗಲಿಲ್ಲ. ಆದರೆ, ಸೋವಿಯತ್ ಒಕ್ಕೂಟ ಮಾತ್ರವೇ ಸಮಾಜವಾದಿ ಕ್ರಾಂತಿಯ ಬಳಿಕ ಇದಕ್ಕೆ ವೈಜ್ಞಾನಿಕ ಪರಿಹಾರ ಕಂಡುಕೊಂಡಿತು. ವೇಶ್ಯಾವೃತ್ತಿಯ ಪ್ರಮುಖ ಕಾರಣ ಆರ್ಥಿಕ ಸಮಸ್ಯೆ. ಜೊತೆಗೆ, ವೇಶ್ಯಾವಾಟಿಕೆ ಯನ್ನು ಒಂದು ದಂಧೆ ಮಾಡಿ ಅದರಿಂದ ಹಣ ಮಾಡುತ್ತಿದ್ದ ದಲ್ಲಾಳಿಗಳ ಮೋಸದಿಂದ ಈ ವೃತ್ತಿಗೆ ಎಳೆಯಲ್ಪಟ್ಟ ಹೆಣ್ಣುಮಕ್ಕಳು. ಇವರು ವೇಶ್ಯೆಯರಾಗಿ ದುಡಿಯುವ ಹಣ ಅಲ್ಪ ಮಾತ್ರ. ಹೆಚ್ಚಿನಂಶ ತಲೆ ಹಿಡುಕರಿಗೆ, ಪೊಲೀಸರು ಮತ್ತಿತರರಿಗೆ. ಅವರಲ್ಲಿ ಬಹುಪಾಲು ಹೆಣ್ಣುಮಕ್ಕಳು ಈ ವೃತ್ತಿಯನ್ನು ತೊರೆದು ಬೇರೆ ಉದ್ಯೋಗಗಳನ್ನು ಹಿಡಿದು ಗೌರವಯುತವಾಗಿ ಬಾಳಲು ಸಿದ್ಧರಿದ್ದರು. ತಮ್ಮ ಮಕ್ಕಳು, ತಾಯಂದಿರು ನೈತಿಕವಾಗಿ ಸಮಾಜದಿಂದ ಹೊರದೂಡಲ್ಪಟ್ಟವರೆಂದು ಕುಗ್ಗಬಾರದು ಎಂದು ಆಶಿಸಿದ್ದರು.

1925ರಲ್ಲಿ ಸೋವಿಯತ್ ಸರ್ಕಾರವು ವೇಶ್ಯಾ ವಾಟಿಕೆಯ ನಿರ್ಮೂಲನಕ್ಕಾಗಿ, ಹೆಣ್ಣುಮಕ್ಕಳ ಆರ್ಥಿಕ ಸಬಲತೆಗಾಗಿ ವ್ಯಾಪಕ ಕ್ರಮಗಳನ್ನು ತೆಗೆದುಕೊಂಡಿತು. ನಿರಾಶ್ರಿತ ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷೆ ಖಚಿತ ಪಡಿಸಲಾಯಿತು. ಜೊತೆಗೆ ಮೂರು ಶಾಸನಗಳನ್ನು- ‘ಜಾರ್ ಆಡಳಿತದಲ್ಲಿ ವೇಶ್ಯೆಯರ ವಿರುದ್ಧ ದಮನಕಾರಿಯಾಗಿದ್ದ ಎಲ್ಲ ಕಾನೂನು ಹಾಗೂ ಪೊಲೀಸ್ ಕ್ರಮಗಳ ನಿರ್ಮೂಲನೆ, ವೇಶ್ಯಾವಾಟಿಕೆ ದಂಧೆ ನಡೆಸಿ ಲಾಭ ಗಳಿಸುತ್ತಿದ್ದವರ ಮೇಲೆ ನಿರ್ದಯ ಸಮರ, ಲೈಂಗಿಕ ಸೋಂಕುರೋಗಗಳಿಂದ ಬಳಲುತ್ತಿದ್ದವರಿಗೆ ಎಲ್ಲ ವೈದ್ಯಕೀಯ ಅನುಕೂಲಗಳು’- ಜಾರಿಗೆ ತರಲಾಯಿತು. ಈ ಅನಿಷ್ಟ ವೃತ್ತಿಗೆ ಬಲಿಯಾದವರ ಕುರಿತು ಸರ್ಕಾರ ಅತ್ಯಂತ ಮಾನವೀಯ ಧೋರಣೆ ಹೊಂದಿದ್ದು, ವೇಶ್ಯೆಯರನ್ನು ಯಾವುದೇ ರೀತಿಯ ಅವಮಾನಕ್ಕೆ ಗುರಿಪಡಿಸುತ್ತಿರಲಿಲ್ಲ. ಅವರನ್ನು ಬಂಧಿಸುತ್ತಿರಲಿಲ್ಲ. ಗೌರವದಿಂದ, ಸಭ್ಯತೆಯಿಂದ ಹಾಗೂ ವೈಯಕ್ತಿಕವಾಗಿ ಅಗೌರವವಾಗದಂತೆ ನೋಡಿಕೊಳ್ಳಲಾಯಿತು. ವೇಶ್ಯಾವಾಟಿಕೆ ಜಾಲ ನಡೆಸುತ್ತಿದ್ದವರ ಮೇಲೆ ಸದಾ ಕಣ್ಣಿಟ್ಟು, ಅವರ ಮೇಲೆ ಉಗ್ರ ಕ್ರಮ ತೆಗೆದು ಕೊಳ್ಳಲಾಯಿತು. ಜೊತೆಗೆ, ‘ಒಬ್ಬ ಹೆಣ್ಣಿನ ಘನತೆಯನ್ನು ನಾಶಪಡಿಸಿ ಅವಳಿಂದ ಇಂಥಾ ಸೇವೆ ಖರೀದಿಸುವಾತ ಅಪರಾಧಿ’ ಎಂಬ ಅಂಶವನ್ನೂ ಸಾರ್ವಜನಿಕವಾಗಿ ಘೋಷಿಸಲಾಯಿತು. ಅಂಥಾ ವಿಟರಿಗೆ ಸಾಮಾಜಿಕ ಬಹಿಷ್ಕಾರವನ್ನೂ ಹಾಕಲಾಯಿತು.

ಇದರ ಪ್ರತಿಫಲ ದೊರೆತು, 1938ರ ಹೊತ್ತಿಗೆ ದೇಶದಲ್ಲಿ ವೇಶ್ಯಾವಾಟಿಕೆ ಸಂಪೂರ್ಣವಾಗಿ ನಿರ್ನಾಮವಾಗಿದ್ದೇ ಅಲ್ಲದೆ, ವ್ಯಾಪಕವಾಗಿ ಹರಡಿದ್ದ ಲೈಂಗಿಕ ಸೋಂಕು ರೋಗಗಳು ಸಣ್ಣ ಆರೋಗ್ಯ ಸಮಸ್ಯೆಗಳಾಗಿ ಮಾತ್ರ ಉಳಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.