ADVERTISEMENT

ಪ್ರಜಾವಾಣಿ ಚರ್ಚೆ: ಐರಾವತದ ಹೊಟ್ಟೆಗೆ ಅರೆಜೀವಿತ ಶರಾವತಿ!

ಶರಾವತಿ ನೀರನ್ನು ಬೆಂಗಳೂರಿಗೆ ತರುವ ಯೋಜನೆ

ನಾಗೇಶ ಹೆಗಡೆ
Published 23 ಆಗಸ್ಟ್ 2024, 23:30 IST
Last Updated 23 ಆಗಸ್ಟ್ 2024, 23:30 IST
   
ಶರಾವತಿ ನೀರನ್ನು ಬೆಂಗಳೂರಿಗೆ ತರುವ ಯೋಜನೆ ಜಾರಿಗೆ ಬಂದಿದ್ದೇ ಆದರೆ ಅತ್ತ ಶರಾವತಿ ಕೊಳ್ಳಕ್ಕೂ ಅದರಾಚಿನ ಸಮುದ್ರಕ್ಕೂ ಅನ್ಯಾಯ, ಗುಡ್ಡಬೆಟ್ಟಗಳ ಪರಿಸರಕ್ಕೂ ಅನ್ಯಾಯ, ಇತ್ತ ಬೆಂಗಳೂರಿಗೂ ಅನ್ಯಾಯ ಆಗುವುದು ಗ್ಯಾರಂಟಿ. ಈಗಾಗಲೇ ಸೋತು ಸತ್ವಹೀನಳಾದ ಶರಾವತಿಯಿಂದ ನೀರನ್ನು ಎತ್ತಿ ಬೇರೆಡೆ ರವಾನಿಸಿದರೆ, ಸಮುದ್ರ ಇನ್ನಷ್ಟು ಒಳಕ್ಕೆ ನುಗ್ಗುವುದು ಗ್ಯಾರಂಟಿ

ಕಾವೇರಿಯನ್ನು ‘ಜೀವನದಿ’ ಎನ್ನುವುದಾದರೆ ಶರಾವತಿಯನ್ನು ಈ ರಾಜ್ಯದ ‘ನಿರ್ಜೀವ ನದಿ’ ಎನ್ನಬಹುದು.

ಒಂದು ಕಾಲದಲ್ಲಿ ಸಮೃದ್ಧ ಜೀವಖಜಾನೆಯಾಗಿದ್ದ ಸುಂದರ ಶರಾವತಿ ಕೊಳ್ಳವನ್ನು ನಾವು ಕಳೆದ 60 ವರ್ಷಗಳಿಂದ ಚಿಂದಿಚಿಂದಿ ಮಾಡುತ್ತಲೇ ಬಂದಿದ್ದೇವೆ. ಅದು ಈಗ ‘ನದಿ’ಯಾಗಿ ಉಳಿದಿಲ್ಲ. ಅಂಕುಡೊಂಕಿನ ತುಂಡುಗಳಾಗಿ, ಅಲ್ಲಲ್ಲಿ ನಿಂತ ನೀರಿನ ಬೃಹತ್‌ ಹೊಂಡಗಳಾಗಿ, ಬೇಸಿಗೆಯಲ್ಲಿ ನಗ್ನ ಐಲ್ಯಾಂಡ್‌ಗಳ ಮಾಲೆ ಹೊತ್ತು ನಿಲ್ಲುತ್ತದೆ. ಸಾವಿರಾರು ವರ್ಷಗಳಿಂದ ಅದು ತನ್ನ ಒಡಲಲ್ಲಿ ಜಲಚರಗಳನ್ನು ಪೋಷಿಸುತ್ತಲೇ ಸಮುದ್ರದಂಚಿನ ಅಳಿವೆಗೂ ಅದರಾಚಿನ ಸಮುದ್ರಕ್ಕೂ ಪೋಷಕಾಂಶಗಳನ್ನು ಪೂರೈಸುತ್ತ ಬಂದಿತ್ತು. ಈಗ ವರ್ಷದ ಬಹುಪಾಲು ಅವಧಿಯಲ್ಲಿ ಅದು ‘ಫಿಲ್ಟರ್ಡ್‌’ ನೀರನ್ನು ಅದೂ, ದಿನಕ್ಕೆ ಕೆಲವು ಗಂಟೆಗಳ ಕಾಲ ಸಮುದ್ರದತ್ತ ಮೆಲ್ಲಗೆ ತಳ್ಳಲು ಸೆಣಸುತ್ತಿದೆ. ಸಾಗರ ಜಲಚರಗಳಿಗೆ ಬೇಕಾದ ಪೋಷಕಾಂಶಗಳೆಲ್ಲ ಅಣೆಕಟ್ಟುಗಳ ಹಿಂಭಾಗದಲ್ಲಿ ಹೂಳಿನ ಖಜಾನೆಯಾಗಿದೆ.

ಅತ್ತ ಅಳಿವೆ ಸೊರಗುತ್ತಿದೆ. ಸಮುದ್ರದಿಂದ ನುಗ್ಗಿ ಬರುವ ಉಪ್ಪುನೀರನ್ನು ಮತ್ತು ಮರಳನ್ನು ಶರಧಿಗೆ ಹಿಂದಕ್ಕೆ ತಳ್ಳಲಾರದೆ ಶರಾವತಿ ಸೋಲುತ್ತಿದೆ. ಸಮುದ್ರವನ್ನೇ ತನ್ನ ಮೈಮೇಲೆ ಎಳೆದುಕೊಳ್ಳುತ್ತಿದೆ.

ADVERTISEMENT

‘ಹಿಂದೆಲ್ಲ ಆ ಅಳಿವೆಯ ಸಿಹಿಯುಪ್ಪು ನೀರಿನತ್ತ ಸಹಸ್ರಾರು ಬಗೆಯ ಜೀವಜಂತುಗಳು ಸಮುದ್ರದಿಂದ ಬಂದು ಮರಿ ಮಾಡಿ ಹಿಂದಿರುಗುತ್ತಿದ್ದವು. ಸುಮಾರು 40 ಬಗೆಯ ಕಪ್ಪೆಚಿಪ್ಪುಗಳು, ಸಿಗಡಿ ಮೀನುಗಳು ಅಳಿವೆಯಲ್ಲಿ ಸಿಗುತ್ತಿದ್ದವು. ದಡವಾಸಿಗಳಿಗೆ ಅದು ಜೀವನದಿಯಾಗಿತ್ತು. ಪಕ್ಕದ ಅಘನಾಶಿನಿ ಅಳಿವೆಯಲ್ಲಿ ಈಗಲೂ ಅಷ್ಟೇ ವೆರೈಟಿ ಚಿಪ್ಪುಗಳಿವೆ. ಏಕೆಂದರೆ ಅದು ಈಗಲೂ ಮುಕ್ತಧಾರೆ. ಆದರೆ ಶರಾವತಿ ಅಳಿವೆಯಲ್ಲಿ ಕೇವಲ ಒಂದು ಜಾತಿಯ ಕಪ್ಪೆಚಿಪ್ಪು ಮಾತ್ರ ಉಳಿದಿದೆ’ ಎನ್ನುತ್ತಾರೆ ಸಾಗರ ಜೀವವಿಜ್ಞಾನಿ ಡಾ.ಸುಭಾಷ್ ಚಂದ್ರ.

ಶರಾವತಿಯ ನೀರು ಗೇರುಸೊಪ್ಪ ಜಲಾಶಯದಿಂದ ಜಿಗಿದ ನಂತರ 35 ಕಿ.ಮೀ. ದೂರ ಹರಿದು ಸಮುದ್ರ ಸೇರುತ್ತದೆ. ಆ ತೀರಗಳ ಉದ್ದಕ್ಕೂ ಕೃಷಿಗೆ, ಕುಡಿಯಲಿಕ್ಕೆ ನೀರುಣ್ಣಿಸುತ್ತ ಇದು ಮೆಲ್ಲಗೆ ಸಾಗುತ್ತಿತ್ತು. ಮಧ್ಯೆ ಅಲ್ಲಲ್ಲಿ ಸಣ್ಣಪುಟ್ಟ ಅಡ್ಡಗಟ್ಟೆ ಕಟ್ಟಿ, ನೀರನ್ನು ಪಂಪ್‌ ಮಾಡಿ ಅನೇಕ ಗ್ರಾಮ ಪಂಚಾಯ್ತಿಗಳಿಗೂ ಹೊನ್ನಾವರಕ್ಕೂ ಕುಡಿಯುವ ನೀರನ್ನು ಪೂರೈಸುವ ಯೋಜನೆಗಳು ಜಾರಿಯಲ್ಲಿವೆ. ಆದರೆ ಸಮುದ್ರದಿಂದ ಉಪ್ಪುನೀರು ಶರಾವತಿಯನ್ನು ಹಿಂದಕ್ಕೆ ತಳ್ಳುತ್ತ 15-20 ಕಿ.ಮೀ. ಗುಂಡಬಾಳದವರೆಗೂ ಒಳಕ್ಕೆ ನುಗ್ಗುತ್ತಿದೆ. ಕ್ರಮೇಣ ಅದು ಇನ್ನೂ ಒಳಕ್ಕೆ ನುಗ್ಗಿ ಅಳ್ಳಂಕಿ, ಸಂಶಿವರೆಗೂ ನುಗ್ಗಬಹುದು. ರೈತರ ಬದುಕು ದುಸ್ತರವಾದೀತು. ಏಕೆಂದರೆ,

  1. ಸಮುದ್ರದ ಮಟ್ಟ ಮೆಲ್ಲಗೆ ಏರುತ್ತಿದೆ,

  2. ಶರಾವತಿಯ ನೂಕುಬಲ ಕಡಿಮೆಯಾಗುತ್ತಿದೆ.

ಬೆಂಗಳೂರಿಗೆ ಅದೇ ಶರಾವತಿಯ ನೀರನ್ನು ಸಾಗಿಸಿ ತರುವ ಯೋಜನೆಯನ್ನು ನೋಡೋಣ. ಇಲ್ಲಿ 2014ರಲ್ಲೇ ಲಿಂಗನಮಕ್ಕಿಯಿಂದ 30 ಟಿಎಂಸಿ ಅಡಿ ನೀರನ್ನು ತರುವ ಯೋಜನೆಯನ್ನು ಜಲಮಂಡಳಿಯ ಅಂದಿನ ಅಧ್ಯಕ್ಷ ಬಿ.ಎನ್‌.ತ್ಯಾಗರಾಜ್‌ ನೇತೃತ್ವದ ಸಮಿತಿ ರೂಪಿಸಿತ್ತು. ಯಡಿಯೂರಪ್ಪ ಸರ್ಕಾರ ಆ ಯೋಜನೆಯನ್ನು ಘೋಷಿಸಿದಾಗ ಶಿವಮೊಗ್ಗ, ಉತ್ತರ ಕನ್ನಡ ಎರಡೂ ಜಿಲ್ಲೆಗಳಲ್ಲಿ ಪ್ರತಿಭಟನೆಯ ಕೂಗೆದ್ದಿತ್ತು. ಕಡತ ಬೆದರಿ ಮುದುಡಿ ಕೂತಿತ್ತು. ಮತ್ತೆ 2018ರಲ್ಲಿ ಜೆಡಿಎಸ್‌, ಕಾಂಗ್ರೆಸ್‌ ಮೈತ್ರಿ ಸರ್ಕಾರದ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅದೇ ಪ್ರಸ್ತಾವವನ್ನು ಮುಂದಿಟ್ಟರು. ಅಷ್ಟರಲ್ಲಿ ಸರ್ಕಾರವೇ ಬಿದ್ದಿದ್ದರಿಂದ ಕಡತ ಮತ್ತೆ ಕಪಾಟು ಸೇರಿತ್ತು. ಈಗ ಕಡತಕ್ಕೆ ಮತ್ತೆ ಜೀವ ಬಂದಿದೆ. ಈ ಬಾರಿ ಇನ್ನೊಂದು ಮಾರ್ಗದಲ್ಲಿ, ಅಂದರೆ ಎತ್ತಿನಹೊಳೆಗೆ ಲಿಂಗನಮಕ್ಕಿಯ ನೀರನ್ನು ಸುರುವಿ ಅಲ್ಲಿಂದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಹರಿಸುತ್ತಾರಂತೆ. ಸಮುದ್ರಮಟ್ಟದಿಂದ ಲಿಂಗನಮಕ್ಕಿ 520 ಮೀಟರ್‌ ಎತ್ತರದಲ್ಲಿದೆ; ಬೆಂಗಳೂರು 920 ಮೀಟರ್‌ ಎತ್ತರದಲ್ಲಿದೆ.

‘ಅಷ್ಟು ದೊಡ್ಡ ಪ್ರಮಾಣದ ನೀರನ್ನು 400 ಮೀಟರ್‌ ಎತ್ತರಕ್ಕೆ ಏರಿಸಲು ಅಪಾರ ಪ್ರಮಾಣದ ವಿದ್ಯುತ್‌ ಶಕ್ತಿ ಬೇಕಾಗುತ್ತದೆ’ ಎನ್ನುತ್ತಾರೆ, ವಿದ್ಯುತ್‌ ಮಂಡಳಿಯಲ್ಲೇ ಕೆಲಸ ಮಾಡಿ ನಿವೃತ್ತರಾದ ಸಾಹಿತಿ ಗಜಾನನ ಶರ್ಮಾ. ತ್ಯಾಗರಾಜ ಸಮಿತಿ ತನ್ನ ವರದಿಯನ್ನು ಬಹಿರಂಗ ಮಾಡಿಲ್ಲವಾದರೂ ನೀರನ್ನು ಕನಿಷ್ಠ ಅಷ್ಟೆತ್ತರಕ್ಕೆ ಪಂಪ್‌ ಮಾಡಲೇಬೇಕು. ಅಲ್ಲಿಂದ 350 ಕಿ.ಮೀ. ದೂರದವರೆಗೆ ಗುಡ್ಡ, ಬೆಟ್ಟ, ಬೇಣದಲ್ಲಿ ಗಿಡಮರ ಕಡಿಯುತ್ತ, ಡೈನಮೈಟ್‌ ಸಿಡಿಸಿ ಅಗೆಯುತ್ತ, ಜಲಾಶಯ ನಿರ್ಮಿಸುತ್ತ ಆನೆಗಾತ್ರದ ಪೈಪ್‌ಲೈನನ್ನು ಬೆಂಗಳೂರಿಗೆ ಸಾಗಿಸಿ ತರಬೇಕು. ಯೋಜನೆಯ ಪ್ರಕಾರ ಮೊದಲ ಹಂತದಲ್ಲಿ ಹತ್ತೇ ಟಿಎಂಸಿ ಅಡಿ ನೀರನ್ನು ತಂದು ಕ್ರಮೇಣ ಹೆಚ್ಚಿಸುತ್ತ 30 ಟಿಎಂಸಿ ಅಡಿಗೆ ಏರಿಸಬೇಕು.

ಈ ಯೋಜನೆ ಜಾರಿಗೆ ಬಂದಿದ್ದೇ ಆದರೆ ಅತ್ತ ಶರಾವತಿ ಕೊಳ್ಳಕ್ಕೂ ಅದರಾಚಿನ ಸಮುದ್ರಕ್ಕೂ ಅನ್ಯಾಯ, ಗುಡ್ಡಬೆಟ್ಟಗಳ ಪರಿಸರಕ್ಕೂ ಅನ್ಯಾಯ, ಇತ್ತ ಬೆಂಗಳೂರಿಗೂ ಅನ್ಯಾಯ ಆಗುವುದು ಗ್ಯಾರಂಟಿ. ಈಗಾಗಲೇ ಸೋತು ಸತ್ವಹೀನಳಾದ ಶರಾವತಿಯಿಂದ ನೀರನ್ನು ಎತ್ತಿ ಬೇರೆಡೆ ರವಾನಿಸಿದರೆ, ಸಮುದ್ರ ಇನ್ನಷ್ಟು ಒಳಕ್ಕೆ ನುಗ್ಗುವುದು ಗ್ಯಾರಂಟಿ.

‘ನಾವೇನು, ಕುಡಿಯುವ ನೀರಿಗಾಗಿ ಬೆಂಗಳೂರಿಗೆ ಬರಬೇಕಾ’ ಎಂದು ಕೇಳುತ್ತಾರೆ ಹೊನ್ನಾವರದ ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ್‌.

ಬೆಂಗಳೂರೆಂಬ ಬಕಾಸುರನಿಗೆ ನೀರಿನ ಬಾಯಾರಿಕೆ ಹೆಚ್ಚುತ್ತಲೇ ಇದೆ ನಿಜ. ಆದರೆ, ‘ಇಲ್ಲಿ ಬೀಳುವ ಸರಾಸರಿ 900 ಮಿ.ಮೀ. ಮಳೆನೀರನ್ನು ಕೆರೆಗಳಲ್ಲಿ ತುಂಬಿಸಿದರೆ 15 ಟಿಎಂಸಿ ಅಡಿ ನೀರು ಇಲ್ಲೇ ಸಿಗುತ್ತದೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞ ಪ್ರೊ.ಟಿ.ವಿ. ರಾಮಚಂದ್ರ ಹೇಳುತ್ತಲೇ ಬಂದಿದ್ದಾರೆ. ಈ ಜಿಲ್ಲೆಯ ಅಜಮಾಸು 400 ಕೆರೆಗಳ ಹೂಳೆತ್ತಿಸಿ ಮಳೆನೀರನ್ನು ತುಂಬಿಸಿದರೆ, ಇದು ಚೀನಾದ ವೂಹಾನ್‌ ನಗರದ ಮಾದರಿಯಲ್ಲಿ ಇನ್ನೊಂದು ಸ್ಪಾಂಜ್‌ ಸಿಟಿ ಆಗಲು ಸಾಧ್ಯವಿದೆ. ಬೆಂಗಳೂರು ದಿನವೂ ಕೊಳೆ ಮಾಡಿ ಚೆಲ್ಲುತ್ತಿರುವ ನೀರನ್ನು ಸಿಂಗಪುರ ಮಾದರಿಯಲ್ಲಿ ಸಂಸ್ಕರಣೆ ಮಾಡಿದರೆ ‘ಮತ್ತೆ 16 ಟಿಎಂಸಿ ಅಡಿ ನೀರು ಸಿಗುತ್ತದೆ’ ಎಂದು ಪ್ರೊ. ಟಿವಿಆರ್‌ ಹೇಳುತ್ತಾರೆ. ‘ಅದಕ್ಕೆ ₹2,200 ಕೋಟಿ ಸಾಕು’ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಹಿಂದಿನ ಕಾರ್ಯದರ್ಶಿ ಶ್ರೀನಿವಾಸುಲು 2022ರಲ್ಲಿ ಹೇಳಿದ್ದರು. ಸಮುದ್ರಮಟ್ಟದಿಂದ ಇಷ್ಟೆತ್ತರದಲ್ಲಿ 31 ಟಿಎಂಸಿ ನೀರಿನ ನಿಧಿಯೇ ಇದ್ದಾಗ ಮೇಕೆದಾಟು, ಲಿಂಗನಮಕ್ಕಿಯ ನೀರಿಗಾಗಿ ಯೋಜನೆ ಹಾಕುವುದು ಯಾರ ಹಿತಾಸಕ್ತಿಗೊ?

ಇಡೀ ಜಗತ್ತೇ ಬಿಸಿಪ್ರಳಯದ ಬಾಗಿಲಲ್ಲಿದೆ. ಹಿಂದೆಯೂ ಲಿಂಗನಮಕ್ಕಿಯಲ್ಲಿ ನೀರು ತುಂಬಿದ್ದೇ ಅಪರೂಪ. ಮುಂದಿನ 10 ವರ್ಷಗಳಲ್ಲಿ ಅಲ್ಲಿ ಬರಗಾಲ ಬಂದರೆ, ಸಮುದ್ರದ ನೀರನ್ನೇ ಅಲ್ಲಿಗೆ ಎತ್ತಿ ಸುರಿಯುವ ‘ಪಂಪ್ಡ್‌ ಸ್ಟೋರೇಜ್‌’ ಯೋಜನೆ ಬೇಕಾದೀತು.

ಜೋಗ ಜಲಪಾತದಲ್ಲಿ ಧುಮುಕುವ ನೀರನ್ನು ನೋಡಿ, ಎಂಜಿನಿಯರ್‌ ವಿಶ್ವೇಶ್ವರಯ್ಯನವರು ‘ಶಕ್ತಿಯ ಎಂಥಾ ಅಪವ್ಯಯ’ ಎಂದು ಉದ್ಗರಿಸಿದ್ದರಂತೆ. ಈಗ ಅವರಿದ್ದಿದ್ದರೆ ಶರಾವತಿಯ ನೀರನ್ನು ಬೆಂಗಳೂರಿಗೆ ತರುವ ಯೋಜನೆಯನ್ನು ನೋಡಿ ‘ಎಂಜಿನಿಯರಿಂಗ್‌ ಬುದ್ಧಿಶಕ್ತಿಯ ಎಂಥಾ ಅಪವ್ಯಯ’ ಎನ್ನುತ್ತಿದ್ದರೇನೊ.

ಲೇಖಕ: ಪತ್ರಕರ್ತ, ವಿಜ್ಞಾನ ಲೇಖಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.