‘ಫೈರ್’ ಕೇಳುತ್ತಿರುವುದು ಜೀವಪರವಾಗಿರುವ ವ್ಯವಸ್ಥೆ. ಪುರುಷರ ವಿರುದ್ಧ ಸುಳ್ಳು ದೂರುಗಳು ಬಂದರೆ, ಮಿಥ್ಯಾರೋಪಗಳಿದ್ದರೆ ಅವರೊಟ್ಟಿಗೆ ನಿಲ್ಲುವುದು ಬೇಡವೇ? ಕೇವಲ ಸ್ತ್ರೀ –ಪುರುಷರ ಬಗೆಗೆ ಮಾತಾಡುವುದಲ್ಲ. ಲಿಂಗತ್ವ ಅಲ್ಪಸಂಖ್ಯಾತರನ್ನು ನಮ್ಮ ಸಿನಿಮಾಗಳಲ್ಲಿ ಹೇಗೆ ನಡೆಸಿಕೊಳ್ಳುತ್ತಾರೆ ಎಂಬ ಅಂದಾಜಾದರೂ ಇದೆಯೇ? ‘ಪಾಶ್’ನಂಥ ಸಮಿತಿ ರಚನೆಯಾದರೆ, ಕಲಾವಿದರೆಲ್ಲರಿಗೂ ತಾವು ಸುರಕ್ಷಿತ ವಾತಾವರಣದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂಬ ವಿಶ್ವಾಸ ಮೂಡುತ್ತದೆ. ಅಪಸವ್ಯಗಳಾದಾಗ ಧ್ವನಿ ಎತ್ತಲು ನೈತಿಕ ಸ್ಥೈರ್ಯವಿರುತ್ತದೆ
ಯಾವ ಕ್ಷೇತ್ರದಲ್ಲಿಲ್ಲ ಲೈಂಗಿಕ ಕಿರುಕುಳ? ಅಥವಾ ಅನುಚಿತವಾಗಿ ವರ್ತಿಸೋದು, ನೋಡೋದು...? ಎಲ್ಲ ಕ್ಷೇತ್ರಗಳಲ್ಲಿಯೂ ಇದೆ. ಆದರೆ, ಎಲ್ಲಿಯೂ ಬೆಳಕಿಗೆ ಬರುತ್ತಿಲ್ಲ. ಬೆಳಕಿಗೆ ಬಂದಾಗ ವಾದಗಳು ಎಲ್ಲೆಲ್ಲಿಯೋ ದಾರಿ ತಪ್ಪಿಹೋಗುತ್ತವೆ. ‘ಫೈರ್’ (Film Industry for Right and Equality) ಕೇಳುತ್ತಿರುವುದು ಕನ್ನಡ ಚಿತ್ರೋದ್ಯಮದಲ್ಲಿ ಲೈಂಗಿಕ ದೌರ್ಜನ್ಯ ತಡೆ (ಪಾಶ್‌ನಂತಹ –POSH) ಸಮಿತಿ ಸ್ಥಾಪಿಸಬೇಕು ಎಂದು. ಈ ಸಮಿತಿ ಇದ್ದರೆ ಒಂದು ಎಚ್ಚರ ಎಲ್ಲರ ಮನದಲ್ಲಿ ಇರುತ್ತದೆ. ಯಾರಿಗೆ ದೂರು ಸಲ್ಲಿಸಬೇಕು ಎಂಬುದು ಸಂತ್ರಸ್ತರ ಗಮನದಲ್ಲಿಯೂ ಇರುತ್ತದೆ.
‘ಫೈರ್’ ಅಧಿಕಾರ ಕೇಳುತ್ತಿಲ್ಲ. ನಮ್ಮ ಬೇಡಿಕೆ ಬಲು ಸ್ಪಷ್ಟವಾಗಿದೆ. ಲಿಂಗಸಂವೇದನೆ ಇರುವವರು ಸಮಿತಿಯಲ್ಲಿರಬೇಕು. ಚಳವಳಿಕಾರರು, ಲಿಂಗಸಂವೇದನೆಯಲ್ಲಿ ಕೆಲಸ ಮಾಡುತ್ತಿರುವ ತಜ್ಞರು, ಫಿಲ್ಮ್ ಚೇಂಬರ್‌ನವರು, ವಕೀಲರು, ಮಾನವ ಹಕ್ಕು ಹೋರಾಟಗಾರರು ಹೀಗೆ ಎಲ್ಲರೂ ಆ ಸಮಿತಿಯಲ್ಲಿರಲಿ. ನ್ಯಾಯಮೂರ್ತಿ ಹೇಮಾ ಸಮಿತಿಯ ತನಿಖೆಯಿಂದಲೇ ಮಲಯಾಳ ಸಿನಿಮಾ ರಂಗದ ಹಲವಾರು ಕಿರುಕುಳದ ಪ್ರಕರಣಗಳು ಬೆಳಕಿಗೆ ಬಂದವು. ಮಹಿಳಾ ಆಯೋಗದ ಆಯುಕ್ತರಾದ ನಾಗಲಕ್ಷ್ಮಿ ಚೌಧರಿ ಅವರು ಈ ಬಗ್ಗೆ ಒಂದು ಗೋಪ್ಯ ಸಮೀಕ್ಷೆ ನಡೆಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆಗ ಏನೆಲ್ಲ ಆಗಿವೆ, ಆಗಿಹೋಗಿವೆ ಎಂಬುದೂ ಬೆಳಕಿಗೆ ಬರುತ್ತದೆ. ಕನ್ನಡ ಚಿತ್ರೋದ್ಯಮದಲ್ಲಿಯೂ ‘ಪಾಶ್'ನಂತಹ (ಲೈಂಗಿಕ ದೌರ್ಜನ್ಯ ತಡೆ) ವ್ಯವಸ್ಥೆ ಜಾರಿಗೆ ತರಬೇಕು. ಮತ್ತಿತರ ಸಮಸ್ಯೆಗಳ ಚರ್ಚೆಯಾಗಬೇಕು.
ಸಿನಿಮಾ ರಂಗದ ದೊಡ್ಡ ದುರಂತವೆಂದರೆ, ಕಿರುಕುಳದ ಪ್ರಕರಣ ಬೆಳಕಿಗೆ ಬಂದ ತಕ್ಷಣ ಆ ಮಹಿಳೆಯ ಚಾರಿತ್ರ್ಯ ಹನನ ಮಾಡಲಾಗುತ್ತದೆ. ‘ಹೊಂದಾಣಿಕೆ ಮಾಡಿಕೊಂಡು ಹೋಗಬೇಕಿತ್ತು’ ಎಂಬ ಮಾತುಗಳು ಕೇಳಿಬರುತ್ತವೆ. ‘ಸಿನಿಮಾ ಅಂದ್ರೇನೆ ಗ್ಲಾಮರಸ್ ಜಗತ್ತು, ಇಲ್ಲಿ ಇದೆಲ್ಲ ಸಾಮಾನ್ಯವಾದುದು, ತುಸು ಹೊಂದಿಕೊಳ್ಳಲು ಏನಾಗುತ್ತದೆ? ಇಷ್ಟೆಲ್ಲ ಮಡಿವಂತಿಕೆ ಇದ್ದರೆ ಈ ಕ್ಷೇತ್ರಕ್ಕೇ ಕಾಲಿಡಬಾರದು’ ಎಂದೆಲ್ಲ ಮಾತಾಡುತ್ತಾರೆ.
ಸಮಾಜವು ಹಾಕಿರುವ ಇಂಥ ಚೌಕಟ್ಟಿನಿಂದಾಗಿ ಮಹಿಳೆಯರು ಎಲ್ಲವನ್ನೂ ನುಂಗಿಕೊಂಡಿರಬೇಕಾದ ವಾತಾವರಣ ಇದೆ. ಹೇಳಿದಷ್ಟೂ ತಾವೇ ಬಯಲಾಗುವ ಭೀತಿಯೊಡನೆ ಮಹಿಳೆಯರು ಬಾಯಿಬಿಡುತ್ತಿಲ್ಲ. ಮುಟ್ಟಿದರೆ, ಕೆಟ್ಟದಾಗಿ ಮಾತನಾಡಿದರೆ ಮಾತ್ರವಲ್ಲ; ಕೆಲವೊಮ್ಮೆ ನೋಟಗಳು, ಮಾತುಗಳು, ಮೇಲ್ನೋಟಕ್ಕೆ ತೀರ ಸಹಜವೆನಿಸಿದರೂ ಅಸಹ್ಯವೆನಿಸುವ ವ್ಯಾವಹಾರಿಕ ಸ್ಪರ್ಶಗಳೂ ಇದರಲ್ಲಿ ಸೇರಿವೆ. ಇವುಗಳ ಬಗ್ಗೆ ಯಾರಲ್ಲಿ ಹೇಳಬೇಕು? ಕೇವಲ ಅತ್ಯಾಚಾರ, ಕಿರುಕುಳ, ಸಹಮತವಿಲ್ಲದ ಶಾರೀರಿಕ ಸಂಬಂಧ ಇವುಗಳಿಗೆ ಮಾತ್ರ ದೂರು ಸಲ್ಲಿಸಬೇಕೆ? ಮತ್ತೆ ಇಂಥವುಗಳಿಗೆ ಸಾಕ್ಷ್ಯ ಒದಗಿಸುವುದು ಹೇಗೆ?
ಮಹಿಳೆಯರನ್ನು ಒಂದು ವಸ್ತುವಿನಂತೆ ಕಾಣಕೂಡದು. ಮಾತುಗಳಲ್ಲಿ, ಜೋಕುಗಳೆಂದು ಮಾತು ತೇಲಿಬಿಡುವಲ್ಲಿ ಮಹಿಳೆಯರನ್ನು ಹೀಗಳೆಯುವ ಅಥವಾ ಜರೆಯುವಂತಹ ಸಂಭಾಷಣೆಗಳಿರಬಾರದು. ಅವರ ಆಕಾರವನ್ನುದ್ದೇಶಿಸಿ ಕೆಟ್ಟಕೆಟ್ಟದಾಗಿ ಉದ್ಗರಿಸುವ, ಸಂಬೋಧಿಸುವ ಕೆಲವು ಅಭ್ಯಾಸಗಳಿವೆ. ಮಹಿಳೆಯರು ಹೊಂದಾಣಿಕೆ ಮಾಡಿಕೊಂಡು ಹೋಗಲಿ ಎಂಬ ವಾತಾವರಣದಿಂದಲೇ ಅಸಹಜಗಳೆಲ್ಲವೂ ಸಹಜವಾಗಿವೆ. ನಾವು ಕೇಳುತ್ತಿರುವುದು ಸುರಕ್ಷಿತ ವಾತಾವರಣ. ದೂರು ಸಲ್ಲಿಸಲು ಒಂದು ಸಮಿತಿ ಅಷ್ಟೇ ಅಲ್ಲ.
ಅದೆಷ್ಟೋ ಸಲ ಕಡಿಮೆ ಬಜೆಟ್‌ನ ನೆಪ ಹೇಳಿ, ಮಹಿಳೆಯರಿಗೆ ಬಟ್ಟೆ ಬದಲಿಸಲೂ ಹೆಚ್ಚಿನ ಸೌಕರ್ಯ ನೀಡಿರುವುದಿಲ್ಲ. ಸಹಕಲಾವಿದರು ನಾಲ್ಕು ದಿಕ್ಕಿಗೂ ಸೀರೆ ಹಿಡಿದು, ಮರೆ ಮಾಡಿರುತ್ತಾರೆ. ಅಂಥ ಮರೆಯಲ್ಲಿ ಬಟ್ಟೆ ಬದಲಿಸಿ ಶೂಟಿಂಗ್ ಪೂರೈಸಿದ ಅದೆಷ್ಟೋ ಜನ ಹಿರಿಕಿರಿಯ ಕಲಾವಿದೆಯರಿದ್ದಾರೆ. ಎಲ್ಲರಿಗೂ ವ್ಯಾನಿಟಿ ವ್ಯಾನ್ ಬೇಕೆಂದು ಬೇಡಿಕೆ ಇಡುತ್ತಿಲ್ಲ. ಆದರೆ ಸಮಾಧಾನದಿಂದ ಬಟ್ಟೆ ಬದಲಿಸುವಷ್ಟು ಮೂಲ ಸೌಕರ್ಯವನ್ನೂ ಕೇಳಬಾರದೇ? ಶೌಚಾಲಯಗಳಿರುವುದಿಲ್ಲ. ನೈರ್ಮಲ್ಯ ಇರುವುದಿಲ್ಲ. ಹೀಗೊಮ್ಮೆ ಏನಾದರೂ ಕೇಳಿದರೆ ‘ಕಂಡಿದೀವಿ ಬಾರಮ್ಮ...’ ಎಂಬ ತಾತ್ಸಾರದ ನುಡಿಗಳೇ ಸಿಗುತ್ತವೆ. ಮನಸಿಗೆ ಆಗುವ ಕಿರಿಕಿರಿಯೊಂದಿಗೆ ಈ ಅವಮಾನವನ್ನೂ ಅವರು ಸಹಿಸಿಕೊಳ್ಳಬೇಕಲ್ಲ... ಇಂಥ ಸೌಕರ್ಯಗಳನ್ನೆಲ್ಲ ಚಿತ್ರೋದ್ಯಮ ಬಿಟ್ಟು ಯಾರ ಬಳಿ ಕೇಳುವುದು?
ನಮ್ಮ ಪೀಳಿಗೆಯವರಿಗೆ ಯಾರೂ ಗುಡ್ ಟಚ್, ಬ್ಯಾಡ್ ಟಚ್‌ಗಳಂಥದ್ದನ್ನು ಹೇಳಿಕೊಟ್ಟಿರಲಿಲ್ಲ. ‘ಏನಿದ್ದರೂ ಮಾತಾಡಕೂಡದು, ಸಹಿಸಿಕೊಂಡು ಸುಮ್ನಿರು’ ಎಂದೇ ಬೆಳೆಸಿದರು. ನಮ್ಮ ಮುಂದಿನ ತಲೆಮಾರು ಸಹ ಇಂಥದ್ದೇ ಪರಿಸರದಲ್ಲಿ ಬೆಳೆಯಬೇಕೆ? ಈ ಪ್ರಶ್ನೆಗಳನ್ನು ಎತ್ತಿದಾಗಲೆಲ್ಲ, ‘ಗ್ಲಾಮರಸ್ ಲೋಕಕ್ಕೆ ಬರುವಾಗ ಗೊತ್ತಿರಲಿಲ್ಲವೇ... ಈ ಕಷ್ಟಗಳೆಲ್ಲ ಇವೆಯೆಂದು ತಿಳಿದಿರಲಿಲ್ಲವೇ...’ ಎಂದು ಮರು ಪ್ರಶ್ನಿಸುತ್ತಾರೆ. ‘ಹಣ ಬೇಕು, ಹೆಸರು ಬೇಕು, ಅವಕಾಶಗಳು ಬೇಕು ಎನ್ನುವುದಾದರೆ ಇಂಥವನ್ನು ಸಹಿಸಲೇಬೇಕು’ ಎಂಬಂಥ ಶರಾ ಬರೆಯುತ್ತಾರೆ.
ಕಲಾವಿದೆಯರು ಆಸಕ್ತಿಯಿಂದ ಬರುತ್ತಾರೆ. ಜಾಣ್ಮೆ ಇದ್ದಲ್ಲಿ, ಪ್ರತಿಭೆ ಇದ್ದಲ್ಲಿ ನೆಲೆ ನಿಲ್ಲುತ್ತಾರೆ ಎನ್ನುವಂಥ ವಾತಾವರಣ ಬರಬೇಕಿದೆ. ಸ್ಪಷ್ಟವಾದ ಒಪ್ಪಂದಗಳಾಗಬೇಕು. ಶೃಂಗಾರದಂಥ ದೃಶ್ಯಗಳಲ್ಲಿ ನಟಿಸುವಾಗಲೂ ನಟನೆ ಮತ್ತು ಅನುಭೂತಿಯ ನಡುವೆ ತೆಳ್ಳಗಿನ ಗೆರೆ ಇರುತ್ತದೆ. ಅದು ಸ್ಪಷ್ಟವಾಗಬೇಕು. ಬಾಲಿವುಡ್‌ನಲ್ಲಿ, ಹಾಲಿವುಡ್‌ನಲ್ಲಿ ಇಂಥ ವಿಶೇಷ ಒಪ್ಪಂದಗಳಾಗುತ್ತವೆ. ಇಲ್ಲಿಯೂ ಆಗಲಿ. ಬೋಲ್ಡ್ ಸೀನುಗಳಿವೆ ಎಂದು ಮಾತಿನಲ್ಲಿ ತೇಲಿಸುವುದಲ್ಲ. ಅದೆಷ್ಟು ಬಯಲಾಗಬೇಕು, ಬೆತ್ತಲಾಗಬೇಕು, ಅದೆಷ್ಟು ಅನಿವಾರ್ಯ ಎಂಬುದೆಲ್ಲವೂ ಒಪ್ಪಂದದ ಮೊದಲಿನ ಚರ್ಚೆಯಲ್ಲಿ ಮತ್ತು ಲಿಖಿತವಾಗಿ ದಾಖಲಾಗಬೇಕು.
ಈಗ ‘ಫೈರ್’ ಮುಂದಿಟ್ಟಿರುವ ಬೇಡಿಕೆಯನ್ನು ಕೇವಲ ನಟ, ನಟಿಯರು ಮತ್ತು ಕಿರುಕುಳದ ದೃಷ್ಟಿಯಿಂದ ನೋಡಲಾಗುತ್ತಿದೆ. ಸಹಕಲಾವಿದರು, ಕಲಾವಿದೆಯರಲ್ಲಿ ತಂತ್ರಜ್ಞರಲ್ಲಿ, ಸಹಾಯಕರಲ್ಲಿ ಎ, ಬಿ, ಸಿ ಎಂದು ಗ್ರೇಡುಗಳನ್ನು ಮಾಡಿದ್ದಾರೆ. ಇಲ್ಲಿ ವಯಸ್ಸು, ಬಣ್ಣ, ಗಾತ್ರ ಎಲ್ಲವೂ ಪರಿಗಣಿಸಲಾಗುತ್ತಿದೆ. ಆದರೆ ಇವೆಲ್ಲವೂ ಅಲಿಖಿತವಾಗಿವೆ. ಎಲ್ಲ ನಿಯಮಗಳೂ ಮಹಿಳೆಯರನ್ನು ಶೋಷಿಸುವ ದಿಸೆಯಲ್ಲಿ ಅನುಕೂಲಸಿಂಧುವಾಗಿರುವಂತೆ ನೋಡಿಕೊಳ್ಳಲಾಗುತ್ತಿದೆ. ‘ಫೈರ್’ ಕೇಳುತ್ತಿರುವುದು ಜೀವಪರವಾಗಿರುವ ವ್ಯವಸ್ಥೆ. ಪುರುಷರ ವಿರುದ್ಧ ಸುಳ್ಳು ದೂರುಗಳು ಬಂದರೆ, ಮಿಥ್ಯಾರೋಪಗಳಿದ್ದರೆ ಅವರೊಟ್ಟಿಗೆ ನಿಲ್ಲುವುದು ಬೇಡವೇ? ಕೇವಲ ಸ್ತ್ರೀ ಪುರುಷರ ಬಗೆಗೆ ಮಾತಾಡುವುದಲ್ಲ, ಲಿಂಗತ್ವ ಅಲ್ಪಸಂಖ್ಯಾತರನ್ನು ನಮ್ಮ ಸಿನಿಮಾಗಳಲ್ಲಿ ಹೇಗೆ ನಡೆಸಿಕೊಳ್ಳುತ್ತಾರೆ ಎಂಬ ಅಂದಾಜಾದರೂ ಇದೆಯೇ? ಒಂದೋ ಎರಡೂ ಒಳ್ಳೆಯ ಸಿನಿಮಾಗಳು ಬಂದಿವೆ. ಆದರೆ ಬಹುತೇಕ ಸಿನಿಮಾಗಳಲ್ಲಿ ಅವರಿಗೆ ನೀಡುವ ಪಾತ್ರಗಳು, ಸಂಭಾಷಣೆ, ಸಂಭಾವನೆ, ಅವರಿಗೆ ನೀಡುವ ಸೌಕರ್ಯ... ಇವೆಲ್ಲ ಚರ್ಚೆಯಾಗಬೇಕಿದೆ.
‘ಪಾಶ್’ನಂಥ ಸಮಿತಿ ರಚನೆಯಾದರೆ, ಕಲಾವಿದರೆಲ್ಲರಿಗೂ ತಾವು ಸುರಕ್ಷಿತ ವಾತಾವರಣದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂಬ ವಿಶ್ವಾಸ ಮೂಡುತ್ತದೆ. ಅಪಸವ್ಯಗಳಾದಾಗ ಧ್ವನಿ ಎತ್ತಲು ನೈತಿಕ ಸ್ಥೈರ್ಯವಿರುತ್ತದೆ. ಈ ಹಿಂದೆ ನನ್ನ ಸಿನಿಮಾ ಒಂದರಲ್ಲಿ ನಟಿಸಿದ, ನಟಿಯೊಬ್ಬಳು ಬಂದು, ‘ನಿಮ್ಮ ಸೆಟ್‌ನಲ್ಲಿ ಅದೆಷ್ಟು ಸುರಕ್ಷಿತ ಮತ್ತು ಬೆಚ್ಚನೆಯ ವಾತಾವರಣವಿದೆ. ಎಲ್ಲ ಕಡೆಯೂ ಹೀಗಿದ್ದರೆ ನಾವಿನ್ನೂ ಅದೆಷ್ಟು ಚೆನ್ನಾಗಿ ಕೆಲಸ ಮಾಡಬಹುದು’ ಎಂದಿದ್ದರು. ಈ ಮೆಚ್ಚುಗೆಗಿಂತಲೂ, ಹೇಳದ ದೂರುಗಳೆಷ್ಟು ಇದ್ದವೋ.. ಇದು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿರುವ ವಿಷಯ. ಆ ಮೆಚ್ಚುಗೆಯಂಥ ವಾತಾವರಣ ನಿರ್ಮಿಸುವುದು ‘ಫೈರ್’ ಗುರಿ.
ಲೇಖಕಿ: ‘ಫೈರ್‘ ಅಧ್ಯಕ್ಷೆ, ಚಿತ್ರ ನಿರ್ದೇಶಕಿ
ನಿರೂಪಣೆ: ರಶ್ಮಿ ಎಸ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.