ಇತ್ತೀಚೆಗೆ ಇಬ್ಬರು ಸ್ಟ್ಯಾಂಡ್ ಅಪ್ ಕಾಮಿಡಿಯನ್‌ಗಳ ನಿಗದಿತ ಕಾರ್ಯಕ್ರಮಗಳು ಬೆಂಗಳೂರಿನಲ್ಲಿ ರದ್ದು ಆಗಿರುವುದು ಅನಿರೀಕ್ಷಿತ ಏನಲ್ಲ. ಆಶ್ಚರ್ಯಕರವೂ ಅಲ್ಲ. ಕೆಲವು ವರ್ಷಗಳಿಂದ ಭಾರತದ ಅನೇಕ ಸ್ಥಳಗಳಲ್ಲಿ ಇಂತಹ ಘಟನೆಗಳು ಆಗುತ್ತಲೇ ಇವೆ. ನನ್ನ ದೃಷ್ಟಿಯಲ್ಲಿ ಇದರಲ್ಲಿ ಯಾವುದೇ ಘಟನೆಯು ಸಾಂದರ್ಭಿಕವಾಗಿ ಅಥವಾ ತತ್‌ಕ್ಷಣದ ಯಾವುದೇ ಅನಿರೀಕ್ಷಿತ ಕಾರಣದಿಂದ ನಡೆದಿಲ್ಲ. ಮುಂದಾಲೋಚನೆಯಿಂದ ವಿವರವಾಗಿ ಚರ್ಚಿಸಿ ಇಂಥ ಕಾರ್ಯಾಚರಣೆಗಳನ್ನು ಭಾರತದ ಎಲ್ಲ ಪ್ರದೇಶಗಳಲ್ಲಿ ಅವಕಾಶ ಸಿಕ್ಕಾಗ ಮಾಡಬೇಕೆಂದು ಬಲಪಂಥೀಯ ಥಿಂಕ್ ಟ್ಯಾಂಕ್ ನಿರ್ಧರಿಸಿದ ಮೇಲೆ ಎಲ್ಲ ಸರ್ಕಾರಗಳು ಈ ಕಾರ್ಯಾಚರಣೆಗಳಿಗೆ ಅವಶ್ಯಕವಾದ ಆಡಳಿತಾತ್ಮಕ ಕ್ರಮಗಳನ್ನು ಕೈಗೊಂಡಿವೆ. ಯಾವುದೂ ಲಿಖಿತವಾಗಿಲ್ಲದಿದ್ದರೂ ಮುಖ್ಯವಾಗಿ ಪೊಲೀಸ್ ಇಲಾಖೆಗಳಿಗೆ ಸ್ಪಷ್ಟವಾದ ಸಂದೇಶ ಹೋಗಿದೆ. ಇಲ್ಲದಿದ್ದರೆ ಎಲ್ಲ ಸ್ಥಳಗಳಲ್ಲಿ ಅಕ್ಷರಶಃ ಒಂದೇ ಮಾದರಿಯ ಘಟನೆಗಳು ಹೇಗೆ ನಡೆಯುತ್ತಿವೆ?
ಈ ಮಾದರಿಯಲ್ಲಿ ವ್ಯವಸ್ಥಿತವಾದ ಕೆಲವು ಹಂತಗಳಿವೆ. ಮೊದಲನೇ ಹಂತದಲ್ಲಿ ಬಲ ಪಂಥ ಅಥವಾ ಧಾರ್ಮಿಕ ವಿಷಯಗಳನ್ನು ಟೀಕೆ ಮಾಡುವವರನ್ನು ಟ್ರೋಲ್ ಮಾಡಲಾಗುತ್ತದೆ. ಯಾವುದೇ ಆಧಾರ ಇಲ್ಲದೆ ಇಂಥ ವ್ಯಕ್ತಿಗಳು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎನ್ನುವ ಆಪಾದನೆಯೂ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡತೊಡಗುತ್ತದೆ.
ಎರಡನೇ ಹಂತದಲ್ಲಿ ಅವರನ್ನು ಆಹ್ವಾನಿಸುವ ಸಂಸ್ಥೆಗಳ ಮೇಲೆ ವಿವಿಧ ಬಗೆಯ ದಾಳಿಗಳು ಆರಂಭವಾಗುತ್ತವೆ. ಈ ದಾಳಿಗಳಲ್ಲಿ ಪ್ರಮುಖ ಆಯುಧವೆಂದರೆ ಅಂಥ ವ್ಯಕ್ತಿಯನ್ನು ಆಹ್ವಾನಿಸಿದರೆ ಗಲಭೆ, ಹಿಂಸೆ, ಆಗಬಹುದು (ಅಂದರೆ ಮಾಡುತ್ತೇವೆ) ಎಂಬ ಸಂದೇಶವು ಹೋಗುತ್ತದೆ. ನನ್ನ ಗುಮಾನಿಯೆಂದರೆ, ಇಂಥ ಸಂದೇಶ ನೀಡುವ ಮೊದಲೇ ಸಂಬಂಧಪಟ್ಟ ಪೊಲೀಸ್ ಠಾಣೆಗೆ, ಕಚೇರಿಗೆ ಮೌಖಿಕ ಸಂದೇಶ ಹೋಗಿ ಆತ್ಮೀಯವಾದ ಮಾತುಕತೆ ನಡೆದಿರುತ್ತದೆ. ಪೊಲೀಸ್ ಇಲಾಖೆಯು ಮತ್ತೆ ಮತ್ತೆ ನಡೆಯುತ್ತಿರುವ ಈ ಪ್ರಹಸನದಿಂದಾಗಿ ಒಂದು ರೆಡಿಮೇಡ್ ಡೈಲಾಗ್ ಸಿದ್ಧವಿರಿಸಿಕೊಂಡಿದೆ. ಅದೇನೆಂದರೆ, ‘ನಾವು ಕಾರ್ಯಕ್ರಮವನ್ನು ನಿಷೇಧಿಸುವುದಿಲ್ಲ. ಆದರೆ, ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ನಿಮಗೆ ಸಲಹೆ ನೀಡುತ್ತಿದ್ದೇವೆ, ಯೋಚಿಸಿ’ ಎಂಬುದೇ ಆ ಡೈಲಾಗ್.
ಇದರ ಸರಳ ಭಾಷಾಂತರವೆಂದರೆ, ‘ಗಲಭೆ ಆಗುತ್ತದೆ, ನಾವು ನಿಮಗೆ ರಕ್ಷಣೆ ನೀಡುವುದಿಲ್ಲ’ ಎಂದು. ಅಲ್ಲಿಗೆ ಬಹುಪಾಲು ಆತಿಥೇಯ ಸಂಸ್ಥೆಗಳು ನಿಗದಿತ ಕಾರ್ಯಕ್ರಮಗಳನ್ನು ರದ್ದುಪಡಿಸುತ್ತವೆ. ಈ ಸಂಸ್ಥೆಗಳಲ್ಲಿ ಕಾಲೇಜುಗಳು, ವಿಶ್ವವಿದ್ಯಾಲಯಗಳು, ಖಾಸಗಿ ಸಂಸ್ಥೆಗಳು, ಮನರಂಜನಾ ಸಂಸ್ಥೆಗಳು ಹಾಗೂ ವಾಹಿನಿಗಳು ಇವೆಲ್ಲವೂ ಸೇರಿಕೊಂಡಿವೆ.ನಾವು ಕಾರ್ಯಕ್ರಮವನ್ನು ನಿಷೇಧಿಸಿಲ್ಲ. ಅಂಥ ಯಾವುದೇ ಆಜ್ಞೆ, ಸೂಚನೆ ನೀಡಿಲ್ಲ ಎಂದುಪೊಲೀಸರು ಸಮರ್ಥನೆ ಮಾಡಿಕೊಳ್ಳುತ್ತಾರೆ. ಇದು ನಿಜವೂ ಹೌದು.
ಭಾರತದಲ್ಲಿ ಬ್ರಿಟಿಷ್ ವಸಾಹತುಶಾಹಿ ಕಾಲದಿಂದಲೂ ಪೊಲೀಸರು ನ್ಯಾಯದ ಪರವಾಗಿ, ಸ್ವತಂತ್ರವಾಗಿ ಕಾರ್ಯನಿರ್ವಹಿಸಿದ ಉದಾಹರಣೆಯೇ ಇಲ್ಲ. ಅವರು ಶಿಸ್ತಿನ ಸಿಪಾಯಿಗಳಾಗಿದ್ದರಿಂದ ಸರ್ಕಾರದ ಆಜ್ಞೆಗಳನ್ನು ಪಾಲಿಸಿ ಸಮಾಜವನ್ನು ರಕ್ಷಿಸುತ್ತಾರೆ ಎಂಬ ನಂಬಿಕೆ ಈಗಲೂ ಬಲವಾಗಿದೆ. ಈ ಭ್ರಮೆಯು ಸುಲಭವಾಗಿ ಅಳಿದು ಹೋಗುವುದಿಲ್ಲ. ಮುಖ್ಯವಾಗಿ, ಪೊಲೀಸ್ ಇಲಾಖೆಯು ಸರ್ಕಾರದ ನಿಲುವುಗಳ ಬಗ್ಗೆ ಅತ್ಯಂತ ಸೂಕ್ಷ್ಮ ಸಂವೇದಿಯಾಗಿರುತ್ತದೆ. ಅದು ಪಿತೂರಿಯನ್ನು ಮಾಡುವುದಿಲ್ಲ. ಬದಲಾಗಿ, ಸರ್ಕಾರದ ಒಲವುಗಳನ್ನು ಗುರುತಿಸಿ ಆ ಪ್ರಕಾರ ನಡೆದುಕೊಳ್ಳುತ್ತದೆ. ಕರ್ನಾಟಕ ರಾಜ್ಯ ಸರ್ಕಾರವು ಖಚಿತವಾದ ಸಂದೇಶವನ್ನು ಆಡಳಿತಾಂಗಕ್ಕೆ ನೀಡಿದೆ. ಅದು ಅಭಿವ್ಯಕ್ತಿ ಸ್ವಾತಂತ್ರ್ಯ, ಸಂವಿಧಾನಾತ್ಮಕ ಹಕ್ಕುಗಳನ್ನು ಮಾನ್ಯ ಮಾಡುವುದಿಲ್ಲ. ಗಲಭೆ, ಬೆದರಿಕೆ ಹಾಗೂ ಹಿಂಸೆಯ ಮೂಲಕ ಸಾರ್ವಜನಿಕ ಕಾರ್ಯಕ್ರಮಗಳನ್ನು ನಿಲ್ಲಿಸುವವರವಿರುದ್ಧ ತಾನು ಯಾವ ಕ್ರಮವನ್ನೂ ತೆಗೆದುಕೊಳ್ಳುವುದಿಲ್ಲವೆಂದು ಸ್ಪಷ್ಟವಾಗಿ, ಆದರೆ ಪರೋಕ್ಷವಾಗಿ ತಿಳಿಸಿದೆ. ಹೇಗಿದ್ದರೂ ದೇಶದ್ರೋಹದ ಆಪಾದನೆಯ ಅಸ್ತ್ರವಿರುವುದರಿಂದಾಗಿ, ಪ್ರಜಾಪ್ರಭುತ್ವದಲ್ಲಿ ಬಹುಮುಖ್ಯವಾದ ಅಕೌಂಟೆಬಿಲಿಟಿಯನ್ನು ಅದು ಅಲಕ್ಷಿಸುತ್ತದೆ. ನಮ್ಮ ನಾಗರಿಕರು ಈಗಲೂ ಕೂಡ ಪೊಲೀಸರು ಅಮಾಯಕರು, ಅವರು ಅನಿವಾರ್ಯವಾಗಿ ಹೀಗೆ ಮಾಡಬೇಕಾಗುತ್ತದೆ. ಅಲ್ಲದೆ ಅವರ ಕಾರ್ಯವಿಧಾನಕ್ಕೂ ಸರ್ಕಾರದ ಸೈದ್ಧಾಂತಿಕ ಒಲವುಗಳಿಗೂ ಏನೂ ಸಂಬಂಧವಿಲ್ಲವೆಂದು ನಂಬುತ್ತಾರೆ. ಒಟ್ಟಾರೆ ದೇಶದಲ್ಲಿ ಎಷ್ಟು ಭಾಷಣಗಳನ್ನು, ಕಾರ್ಯಕ್ರಮಗಳನ್ನು ಇದೇ ರೀತಿಯಲ್ಲಿ ನಿಲ್ಲಿಸಲಾಗಿದೆ ಎನ್ನುವ ಪಟ್ಟಿಯನ್ನು ಮಾಡಿಕೊಂಡರೆ ಈ ಭ್ರಮೆ ಸ್ವಲ್ಪವಾದರೂ ಕಡಿಮೆಯಾಗಬಹುದು.
ಬಹುಮುಖ್ಯವೆಂದರೆ ವಿಶ್ವದ ಎಲ್ಲಾ ಸ್ಥಳಗಳಲ್ಲಿರುವಂತೆ ಭಾರತದಲ್ಲೂ ವ್ಯಂಗ್ಯಚಿತ್ರಕಾರರು, ವಿಡಂಬನೆಕಾರರು ವ್ಯವಸ್ಥೆಯನ್ನು ಅಣಕಿಸಿ, ಲೇವಡಿ ಮಾಡಿ, ವಿಮರ್ಶೆ ಮಾಡಿ ನಮ್ಮನ್ನು ಎಚ್ಚರಿಸುತ್ತಾ ಬಂದಿದ್ದಾರೆ. ಆದರೆ ಪ್ರಜಾಪ್ರಭುತ್ವವಾದಿ ನಂಬಿಕೆಗಳು ಕ್ರಮೇಣವಾಗಿ ನಾಶವಾಗುತ್ತಾ, ಸರ್ವಾಧಿಕಾರಿ ಪ್ರವೃತ್ತಿಗಳು ಪ್ರಬಲವಾದಂತೆ ಅವರು ಕಿಡಿಗೇಡಿಗಳಾಗಿ ಮತ್ತು ಅಪರಾಧಿಗಳಾಗಿ ಕಾಣುತ್ತಾರೆ. ಅದನ್ನೇ ನಾವು ಒಂದು ಕಾಲದಲ್ಲಿ ಉದಾರವಾದಿ, ಆಧುನಿಕ ರಾಜ್ಯವಾಗಿದ್ದ ಕರ್ನಾಟಕದಲ್ಲಿಯೂ ಕಾಣುತ್ತಿದ್ದೇವೆ.
ಒಂದು ಅದ್ಭುತವಾದ ಜೋಕ್ ಈ ವಿದ್ಯಮಾನಗಳ ಬಗ್ಗೆ ನಮ್ಮ ಕಣ್ಣು ತೆರೆಯುತ್ತದೆ. ಸರ್ವಾಧಿಕಾರಿ ಆಳ್ವಿಕೆಯ ಒಂದು ದೇಶದಲ್ಲಿ ಒಬ್ಬನು ರಸ್ತೆಯಲ್ಲಿ ‘ನಮ್ಮ ಸರ್ವಾಧಿಕಾರಿಯೊಬ್ಬ ಮೂರ್ಖ’ ಎಂದು ಕೂಗುತ್ತಾ ಹೋದನಂತೆ. ಅವನನ್ನು ಸೆರೆಹಿಡಿದು ನ್ಯಾಯಾಲಯದಲ್ಲಿ ವಿಚಾರಿಸಿ ಶಿಕ್ಷೆ ನೀಡಲಾಯಿತು. ಶಿಕ್ಷೆ ಏನೆಂದರೆ ಆರು ತಿಂಗಳು ಮತ್ತು 20 ವರ್ಷಗಳ ಸಜೆ. ಇದೇನು ಎಂದು ಆಶ್ಚರ್ಯದಿಂದ ಅವನು ಕೇಳಿದಾಗ ‘ಆರು ತಿಂಗಳು ಶಿಕ್ಷೆ ನೀನು ಸರ್ವಾಧಿಕಾರಿಯ ಮಾನನಷ್ಟ ಮಾಡಿದ್ದಕ್ಕಾಗಿ; 20 ವರ್ಷ ಶಿಕ್ಷೆ, ರಾಷ್ಟ್ರೀಯ ರಹಸ್ಯವನ್ನು ಹೀಗೆ ಬಯಲು ಮಾಡಿದ್ದಕ್ಕಾಗಿ’ ಎಂದು ತಿಳಿಸಲಾಗುತ್ತದೆ.
ಮಾಧ್ಯಮಗಳು, ಸಮೂಹ ಮಾಧ್ಯಮಗಳು ಮತ್ತು ಜಾಲತಾಣಗಳು ಅಭಿಪ್ರಾಯವನ್ನು ರೂಪಿಸುವುದರಲ್ಲಿ ನಿರ್ಣಾಯಕ ಪಾತ್ರವಹಿಸುತ್ತಿರುವ ಇಂದಿನ ಸಂದರ್ಭದಲ್ಲಿ ಸರ್ಕಾರಗಳು ಬಹು ಎಚ್ಚರಿಕೆಯಿಂದ ನಡೆದುಕೊಳ್ಳಬೇಕಾಗಿತ್ತು. ಪ್ರಜಾಪ್ರಭುತ್ವದ ಮಾದರಿಯಲ್ಲಿ ಬಹುಮತವನ್ನು ಪಡೆದು ಅಧಿಕಾರದಲ್ಲಿರುವ ಸರ್ಕಾರವು ತನ್ನ ಪರಿವಾರದ ಹತ್ತಾರು ಸಂಘಟನೆಗಳು ಹಾಗೂ ಸಂಸ್ಥೆಗಳಿಗೆ ಅನೈತಿಕವಾದ, ಸಂವಿಧಾನ ಹಾಗೂ ಆಡಳಿತ ವ್ಯವಸ್ಥೆಯನ್ನು ಮೀರಿದ ಅಧಿಕಾರವನ್ನು ಕೊಟ್ಟು ಅಭಿಪ್ರಾಯ, ವಿಮರ್ಶೆ, ಟೀಕೆ ಇವುಗಳನ್ನು ಒತ್ತಾಯದಿಂದ ನಿಲ್ಲಿಸುವಂತೆ ಮಾಡಿದರೆ ಅದು ಅಂತಿಮವಾಗಿ ಎರಡು ಪರಿಣಾಮಗಳಿಗೆ ಕಾರಣವಾಗುತ್ತದೆ. ಒಂದು ಅರಾಜಕತೆ, ಎರಡನೆಯದು ಹಿಂಸೆ. ಇವೆರಡನ್ನೂ ವಿಶ್ವದ ಯಾವುದೇ ಬಲಾಢ್ಯ ರಾಷ್ಟ್ರವು ಎದುರಿಸಿ ಗೆದ್ದ ಉದಾಹರಣೆಯಿಲ್ಲ. ಇದರ ಬದಲಾಗಿ ಎಷ್ಟೇ ದುರ್ಬಲವಾಗಿ ಕಂಡರೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ತಾಳಿಕೆಯ ಗುಣವಿದೆ. ಅವುಗಳನ್ನು ತಿರಸ್ಕರಿಸಿ ಅಧಿಕಾರದಲ್ಲಿ ಉಳಿಯುತ್ತೇವೆ ಎನ್ನುವುದು ಇನ್ನೇನಲ್ಲದಿದ್ದರೂ ರಾಜಕೀಯವಾಗಿ ಅಪಾಯಕಾರಿ ದಡ್ಡತನವಾಗುತ್ತದೆ.
ಲೇಖಕ: ಸಾಂಸ್ಕೃತಿಕ ಚಿಂತಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.