ವೇಶ್ಯಾವಾಟಿಕೆಯು ಜಗತ್ತಿನ ಅತಿ ಪುರಾತನ ವೃತ್ತಿಗಳಲ್ಲೊಂದು. ಕೆಲವು ದೇಶಗಳು ಇದನ್ನು ಕಾನೂನುಬದ್ಧಗೊಳಿಸಿದರೆ, ಕೆಲವು ಕಾನೂನುಬಾಹಿರ ಮಾಡಿವೆ. ವಿವಾಹ ಸಂಸ್ಥೆಯ ಜತೆಜತೆಗೇ ಈ ವೃತ್ತಿಯೂ ಅಸ್ತಿತ್ವಕ್ಕೆ ಬಂದಿದೆ. ಜಗತ್ತಿನ ಇತಿಹಾಸ, ಸಾಹಿತ್ಯದ ಪುಟಗಳಲ್ಲಿ ವೇಶ್ಯೆಯರು, ವೇಶ್ಯಾವಾಟಿಕೆಯ ಬಗ್ಗೆ ಹೇರಳ ವರ್ಣನೆಯೂ ಸಿಗುತ್ತದೆ. ಕನ್ನಡದ ಕಾವ್ಯಗಳಲ್ಲಿ ಅಷ್ಟಾದಶ ವರ್ಣನೆಗಳಲ್ಲಿ ವೇಶ್ಯಾವಾಟಿಕೆಯೂ ಸ್ಥಾನ ಪಡೆದಿದೆ.
ಕಾಳಿದಾಸ, ಕಲ್ಹಣ, ಆದಿಕವಿ ಪಂಪ, ಹರಿಹರ, ರಾಘವಾಂಕ, ನೇಮಿಚಂದ್ರ, ಜನ್ನ ಸೇರಿದಂತೆ ಅನೇಕರು ವೇಶ್ಯೆಯರ ಬಗ್ಗೆ ತಮ್ಮ ಕಾವ್ಯಗಳಲ್ಲಿ ಉಲ್ಲೇಖಿಸಿದ್ದಾರೆ. ಶೂದ್ರಕನ ಸಂಸ್ಕೃತ ನಾಟಕ ‘ಮೃಚ್ಛಕಟಿಕ’ವು ಡವೇಶ್ಯೆಯೊಬ್ಬಳ ಸಾಮಾಜಿಕ ಬದುಕನ್ನು ಚಿತ್ರಿಸುತ್ತದೆ. ಅನೇಕ ಕೃತಿಗಳಲ್ಲಿ ವೇಶ್ಯೆಯರ ಸಾಂಸ್ಕೃತಿಕ ಮಹತ್ವವನ್ನು ಮನಗಾಣಿಸಲಾಗಿದೆ. ಹನ್ನೆರಡನೆಯ ಶತಮಾನದಲ್ಲಿ ಶರಣರು ಮಾಡಿದ ಸಾಮಾಜಿಕ ಕ್ರಾಂತಿಯಲ್ಲಿ ಶಿವಶರಣೆ, ವಚನಕಾರ್ತಿ ಸೂಳೆ ಸಂಕವ್ವೆ ಅವರಿಗೂ ಸ್ಥಾನವಿದೆ. ಒಂದೇ ವಚನ ಬರೆದ ಸೂಳೆ ಸಂಕವ್ವೆ ಅವರ ಕುರಿತು ಮುದೇನೂರು ಸಂಗಣ್ಣನವರು ನಾಟಕ ಬರೆದಿದ್ದಾರೆ. ಅಂತೆಯೇ, ಸಂಶೋಧಕ ಚಿದಾನಂದ ಮೂರ್ತಿಯವರು ಕೈಗೊಂಡ ಶಾಸನಗಳ ಸಂಶೋಧನೆಯಲ್ಲೂ ವೇಶ್ಯೆಯರ ಬದುಕಿನ ಬಗ್ಗೆ ಉಲ್ಲೇಖಗಳು ದೊರೆಯುತ್ತವೆ.
‘ಪ್ರಾಚೀನ ಕಾಲದಲ್ಲಿ ವೇಶ್ಯೆಯರಿಗೆ ಉನ್ನತ ಸ್ಥಾನಮಾನಗಳಿದ್ದವು. ಅನೇಕ ದೇವಾಲಯಗಳಲ್ಲಿ ಪೂಜಾರಿ, ಧರ್ಮಗುರುಗಳೊಂದಿಗೆ ವೇಶ್ಯೆಯರು ಸಂಬಂಧ ಹೊಂದಿರುತ್ತಿದ್ದರು. ಸಿರಿಯಾದ ದೇವಾಲಯಗಳಲ್ಲಿ ವೇಶ್ಯಾವೃತ್ತಿಯೂ ಒಂದು ಸಂಪ್ರದಾಯವಾಗಿತ್ತು. ಪ್ರಾಚೀನ ಸಮಾಜದಲ್ಲಿ ವೇಶ್ಯಾವಾಟಿಕೆಯು ಒಪ್ಪಿತ ಮೌಲ್ಯವೇ ಆಗಿತ್ತು’ ಎನ್ನುತ್ತಾರೆ ಪ್ರೊ.ಶಿವರಾಮಯ್ಯ. (ಕೃತಿ: ವೇಶ್ಯೆಯರು ಮತ್ತು ಲೈಂಗಿಕ ಅಲ್ಪಸಂಖ್ಯಾತರು)
ಸಾಮಾಜಿಕ ಬದ್ಧತೆ:ಇತಿಹಾಸ ಮತ್ತು ವರ್ತಮಾನದ ಪುಟಗಳಲ್ಲಿ ವೇಶ್ಯೆಯರಿಗೆ ಸಾಮಾಜಿಕ ಕಳಕಳಿ ಇತ್ತು ಎನ್ನುವ ಉಲ್ಲೇಖಗಳೂ ದೊರೆಯುತ್ತವೆ. ದೇವನಾಂಪ್ರಿಯ ಅಶೋಕನ ಕಾಲದಲ್ಲಿ ಒಮ್ಮೆ ಗಂಗಾ ನದಿಯ ಪ್ರವಾಹ ಉಕ್ಕೇರಿದಾಗ, ಅದನ್ನು ಇಳಿಸುವವರು ಯಾರೂ ಇಲ್ಲವೇ ಎಂಬ ಪ್ರಶ್ನೆ ಎದುರಾಗುತ್ತದೆ. ಮಹಾಮಂತ್ರಿ ಸೇರಿದಂತೆ ಘಟಾನುಘಟಿಗಳೇ ಕೈಚೆಲ್ಲಿದಾಗ ಬಿಂದುಮತಿ ಎಂಬ ವೇಶ್ಯೆ ತನ್ನ ವೃತ್ತಿಯಲ್ಲಿನ ನಿಷ್ಠೆ, ಶ್ರದ್ಧೆ, ಪ್ರಾಮಾಣಿಕತೆಯನ್ನು ಪಣಕ್ಕಿಟ್ಟು, ಪ್ರವಾಹ ಇಳಿಸಿದ ಉಲ್ಲೇಖ ದೊರೆಯುತ್ತದೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನಲ್ಲಿ ಸೂಳೆಯೊಬ್ಬರು ಕಟ್ಟಿಸಿದ ಕೆರೆ ‘ಸೂಳೆಕೆರೆ’ ಅಂತಲೇ ಪ್ರಸಿದ್ಧಿ ಪಡೆದಿದೆ. ‘ಸೂಳೆ’ ಅನ್ನುವ ಹೆಸರು ಕೇಳಲು ಸರಿಯಲ್ಲವೆಂದು ಕೆಲವರು ಆ ಕೆರೆಯನ್ನು ‘ಶಾಂತಿ ಸಾಗರ’ ಎಂದು ಬದಲಾಯಿಸಿದ್ದೂ ಉಂಟು. ತಮ್ಮ ದೇಹದ ಹಸಿವಿಗೆ ಸೂಳೆ ಬೇಕೆನ್ನುವವರಿಗೆ ಆಕೆ ಕಟ್ಟಿಸಿದ ಕೆರೆಗೆ ಆಕೆಯ ಹೆಸರಿಡುವುದು ಮುಜುಗರದ ಸಂಗತಿ ಎನ್ನುವುದು ಸೋಗಲಾಡಿತನವಲ್ಲದೆ ಮತ್ತೇನು? ಎಂ. ಚಿದಾನಂದ ಮೂರ್ತಿ ಅವರು ತಮ್ಮ ಸಂಶೋಧನೆಯಲ್ಲಿ ಉಲ್ಲೇಖಿಸಿರುವಂತೆ ಸೂಳೆಯರು ಕೂಡಾ ತೆರಿಗೆ ಕಟ್ಟುತ್ತಿದ್ದರಂತೆ. ಮಹಾರಾಷ್ಟ್ರದ ಗಂಗೂಬಾಯಿ ಕಾಠಿಯಾವಾಡಿ ಅವರ ಸಾಮಾಜಿಕ ಬದ್ಧತೆಯನ್ನು ಮರೆಯಲಾದೀತೇ.
ಲೈಂಗಿಕತೆಯ ಹಿಂದಿನ ಪರಂಪರೆಯನ್ನು ಗಮನಿಸಿದಾಗ ಅನೇಕ ದೇವಾಲಯಗಳಲ್ಲಿ ಹೆಣ್ಣು–ಗಂಡು, ಹೆಣ್ಣು–ಹೆಣ್ಣು, ಗಂಡು–ಗಂಡಿನ ನಡುವಿನ ಮಿಥುನ ಶಿಲ್ಪಗಳಿವೆ. ಇಂಥ ಶಿಲ್ಪಗಳನ್ನು ಕೆತ್ತನೆ ಮಾಡಿದ್ದಾರೆ ಎಂದರೆ ಆ ಕಾಲದಲ್ಲಿ ಇಂಥ ವಿಚಾರಗಳ ಕುರಿತು ಮುಕ್ತವಾಗಿ ಚರ್ಚೆ ಆಗುತ್ತಿತ್ತು ಅಂತಲೇ ಅರ್ಥವಲ್ಲವೇ? ಒಬ್ಬ ವೇಶ್ಯೆಯ ಜತೆಗೆ ರಾಜ ಸಂಪರ್ಕ ಇಟ್ಟುಕೊಂಡಿದ್ದರೆ ರಾಜ ಆಕೆಯನ್ನು ಗೌರವಯುತವಾಗಿ ನಡೆಸಿಕೊಂಡು, ಆಕೆಯ ಜೀವನಕ್ಕೆ ಬೇಕಾಗುವಷ್ಟು ಧನ–ಸಂಪತ್ತನ್ನು ನೀಡುತ್ತಿದ್ದ. ಹಲವು ರಾಜರು ವೇಶ್ಯೆಯರ ಹೆಸರಿನಲ್ಲಿ ಸಾಮಾಜಿಕ ಕಾರ್ಯಗಳನ್ನೂ ಕೈಗೊಂಡಿದ್ದಾರೆ.
ಆಗಿನ ಸಮಾಜದಲ್ಲಿ ವೇಶ್ಯಾವಾಟಿಕೆ ಒಪ್ಪಿತ ಮೌಲ್ಯವೇ ಆಗಿದ್ದರೂ ಬಹುತೇಕ ಕೆಳವರ್ಗದ ಮಹಿಳೆಯರೇ ವೇಶ್ಯೆಯಾಗಿರುವುದು ಕಂಡು ಬರುತ್ತದೆ. ಮೇಲ್ವರ್ಗದ ಪುರುಷರು ಕೆಳವರ್ಗದ ಸ್ತ್ರೀಯರನ್ನು ಇಷ್ಟಪಟ್ಟರೂ ವಿವಾಹವಾಗದೇ, ಅವರನ್ನು ತಮ್ಮ ವೇಶ್ಯೆಯರನ್ನಾಗಿಟ್ಟುಕೊಳ್ಳುವುದೇ ಪುರುಷಾಧಿ ಪತ್ಯದ ಸಂಕೇತವಾಗಿತ್ತು. ಆ ಪರಿಪಾಟ ಈಗಲೂ ಬದಲಾಗಿಲ್ಲ. ಅದಕ್ಕಾಗಿಯೇ ದೇವದಾಸಿಯಂಥ ಅನಿಷ್ಟ ಪದ್ಧತಿಗಳು ಜಾರಿಗೆ ಬಂದವು.
ಹಸನಾದೀತೇ ಬದುಕು?: ಪುರಾಣ, ಇತಿಹಾಸ ಮತ್ತು ವರ್ತಮಾನ ಈ ಮೂರು ಕಾಲಘಟ್ಟಗಳಲ್ಲೂ ಲೈಂಗಿಕ ವೃತ್ತಿನಿರತ ಮಹಿಳೆಯರ ಬದುಕು ಹಸನಾಗಿಲ್ಲ. ಲೈಂಗಿಕ ಕಾರ್ಯಕರ್ತೆಯರ ಮೇಲಿನ ದೌರ್ಜನ್ಯ ಮತ್ತು ಹಿಂಸೆಗೆ ಶತಮಾನಗಳ ಇತಿಹಾಸವಿದೆ. ಆದರೆ, ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿರುವ ತೀರ್ಪು ಕಗ್ಗತ್ತಲಲ್ಲಿ ಬೆಳ್ಳಿಯ ಕೋಲ್ಮಿಂಚಿನಂತೆ ಗೋಚರಿಸುತ್ತಿದೆ.
‘ಲೈಂಗಿಕ ಕಾರ್ಯಕರ್ತೆಯರನ್ನು ಪೊಲೀಸರು ದೈಹಿಕವಾಗಿ ಅಥವಾ ಮೌಖಿಕವಾಗಿ ಹೀಗಳೆಯುವಂತಿಲ್ಲ ಹಾಗೂ ಈ ಕಾರ್ಯಕರ್ತೆಯರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬೇಡಿ’ ಎಂದು ಕೋರ್ಟ್ (ಬುದ್ಧದೇವ್ ಕರ್ಮಾಸ್ಕರ್ ವರ್ಸಸ್ ಪಶ್ಚಿಮ ಬಂಗಾಳ ರಾಜ್ಯ ಮತ್ತು ಇತರರು ಪ್ರಕರಣ) ಪುನರುಚ್ಚರಿಸಿರುವುದು ಮಹತ್ವದ ಸಂಗತಿ. ಈ ತೀರ್ಪು ಬರೀ ಲೈಂಗಿಕ ಕಾರ್ಯಕರ್ತೆಯರಿಗಷ್ಟೇ ಅಲ್ಲ, ಈ ವೃತ್ತಿಯಲ್ಲಿರುವ ಲೈಂಗಿಕ ಅಲ್ಪಸಂಖ್ಯಾತರಿಗೂ ಅನ್ವಯಿಸುತ್ತದೆ.
ಈ ವೃತ್ತಿಯಲ್ಲಿ ಭಾಗಿಯಾಗಿರುವ ಮಹಿಳೆಯರಲ್ಲಿ ಹಿಂದುಳಿದ, ತುಳಿತಕ್ಕೊಳ ಗಾದವರೇ ಹೆಚ್ಚು. ಮೇಲ್ವರ್ಗದವರು ಕಮ್ಮಿ. ಮನೆಗಳು, ಅಪಾರ್ಟ್‌ಮೆಂಟ್, ಯೂನಿಸೆಕ್ಸ್ ಪಾರ್ಲರ್‌ಗಳಲ್ಲಿ ವೇಶ್ಯಾವಾಟಿಕೆಯ ಹೆಸರಲ್ಲಿ ಲಕ್ಷಾಂತರ ರೂಪಾಯಿಯ ವಹಿವಾಟು ನಡೆಯುತ್ತಿರುವುದು ತಿಳಿಯದ ಸಂಗತಿಯೇನಲ್ಲ. ಸಾಮಾಜಿಕ ರಕ್ಷಣೆ ಮತ್ತು ಭದ್ರತೆ ದೊರೆಯದ ಬಹುತೇಕ ಮಹಿಳೆಯರಿಗೆ ಈ ವೃತ್ತಿ ಅನಿವಾರ್ಯ ಆಯ್ಕೆಯಾಗಿದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿ ಯೆಂದರೆ ಮಾನವ ಕಳ್ಳ ಸಾಗಣೆಯನ್ನು ನೇರವಾಗಿ ಲೈಂಗಿಕ ವೃತ್ತಿಯೊಂದಿಗೆ ತಳಕು ಹಾಕಲಾಗುತ್ತಿದೆ. ಆದರೆ, ಇಷ್ಟಪಟ್ಟು ಈ ವೃತ್ತಿಗೆ ಬರುವವರನ್ನೂ ಕಳ್ಳ ಸಾಗಣೆಯ ಕಾಯ್ದೆಯಡಿ ತರುವುದು ತಪ್ಪು ಎನ್ನುವುದು ನನ್ನ ಅಭಿಪ್ರಾಯ. ಲೈಂಗಿಕ ವೃತ್ತಿಯೇ ನನ್ನ ಜೀವನ ಆಗಿರುವಾಗ ಅದು ನನ್ನ ಹಕ್ಕಾಗಿರುತ್ತದೆ. ಈ ಕಾರ್ಯಕರ್ತೆಯರನ್ನು ಪುನರ್ವಸತಿ ಮಾಡುವುದಾಗಿ ಹೇಳಿ ನಡೆಸುವ ದೌರ್ಜನ್ಯಗಳು ಸಾಕು. ಯಾರಿಗೆ ಈ ವೃತ್ತಿ ಇಷ್ಟವಿಲ್ಲವೋ ಅವರಿಗೆ ಪುನರ್ವಸತಿ ಮಾಡಲಿ. ಆದರೆ, ಇದೇ ವೃತ್ತಿ ಇಷ್ಟಪಟ್ಟು ಮಾಡುವವರಿಗೆ ಯಾರೂ ಅಡ್ಡಿಪಡಿಸಬಾರದು. ಅವರ ಹಕ್ಕುಗಳನ್ನು ಕಾಪಾಡುವ ಹೊಣೆ ಸರ್ಕಾರಗಳದ್ದು.
ಸಬಲೀಕರಣದ ಸವಾಲು: ಕೋರ್ಟಿನ ಈ ತೀರ್ಪನ್ನು ನಮ್ಮ ಸಮಾಜ ಹೇಗೆ ಸ್ವೀಕರಿಸುತ್ತದೆ? ಸರ್ಕಾರಗಳು ಹೇಗೆ ನೋಡುತ್ತವೆ ಎಂಬುದು ದೊಡ್ಡ ಪ್ರಶ್ನೆ. ಅಂತೆಯೇ ಲೈಂಗಿಕ ಕಾರ್ಯಕರ್ತೆಯರ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಸಬಲೀಕರಣವು ಸವಾಲಾಗಿ ಪರಿಣಮಿಸುತ್ತದೆ.
ಈ ಹಿಂದೆ ಲೈಂಗಿಕ ಕಾರ್ಯಕರ್ತೆಯರನ್ನು ನಮ್ಮ ಸಮಾಜ ತನ್ನ ಸಂಸ್ಕೃತಿಯ ಭಾಗವಾಗಿಯೇ ಪರಿಗಣಿಸಿತ್ತು. ಆದರೆ, ಈಗ ಅವರನ್ನು ಸಂಸ್ಕೃತಿಯ ಭಾಗವನ್ನಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೂಡಾ ಪರಿಗಣಿಸುತ್ತಿಲ್ಲ. ವೈವಿಧ್ಯವೇ ನಮ್ಮ ಸಂಸ್ಕೃತಿ ಆಗಿರುವಾಗ ಕನಿಷ್ಠ ಗೌರವವೂ ದಕ್ಕಿಲ್ಲ. ಇವೆಲ್ಲವನ್ನೂ ಬೇರೆ ಬೇರೆ ಆಯಾಮಗಳಲ್ಲಿ ನೋಡಿದಾಗ ಅವುಗಳಿಗೆ ಇದುವರೆಗೆ ಯಾರಿಂದಲೂ ಉತ್ತರ ಕಂಡುಕೊಳ್ಳಲು ಆಗಿಲ್ಲ.
- ಲೇಖಕಿ: ಲೈಂಗಿಕ ಅಲ್ಪಸಂಖ್ಯಾತರ⇒ಹಕ್ಕುಗಳ ಪರ ಹೋರಾಟಗಾರ್ತಿ
- ನಿರೂಪಣೆ: ಮಂಜುಶ್ರೀ ಎಂ. ಕಡಕೋಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.