ಕರ್ನಾಟಕ ಸರ್ಕಾರವು ಪಠ್ಯಪುಸ್ತಕಗಳ ಪರಿಷ್ಕರಣೆ ಗಾಗಿ ರಚಿಸಿದ ಸಮಿತಿಯು ಬಹಳಷ್ಟು ಚಿಂತನ– ಮಂಥನ ಬಳಿಕ ಸಿದ್ಧಪಡಿಸಿದ ಪುಸ್ತಕಗಳನ್ನು ಈಗ ವಿವಾದಿತಗೊಳಿಸಲಾಗಿದೆ. ಈ ಹಿಂದಿನ ಪರಿಷ್ಕರಣಾ ಸಮಿತಿಯಿಂದ ಆಗಿರುವ ಲೋಪದೋಷಗಳನ್ನು ಸರಿಪಡಿಸಲು ಪ್ರಸ್ತುತ ಸಮಿತಿ ಪರಿಶ್ರಮಿಸಿದೆ. ವಿದ್ಯಾರ್ಥಿಗಳ ವಯೋಮಾನ, ಕಲಿಕಾ ಸಾಮರ್ಥ್ಯ ಮತ್ತು ಕಲಿಕೆಯ ಉದ್ದೇಶಿತ ಗುರಿಯನ್ನು ಕಣ್ಮುಂದೆ ಇರಿಸಿಕೊಂಡು ಸೂಕ್ತ ತಿದ್ದುಪಡಿಗಳನ್ನು ಮಾಡಿದೆ.
ಹೀಗಿದ್ದರೂ ಕನ್ನಡದ ಕೆಲವು ಲೇಖಕರು, ಸಾಹಿತಿಗಳು ಪಠ್ಯದಲ್ಲಿ ಕೆಲವು ಹಿರಿಯ ಲೇಖಕರಿಗೆ ಸರಿಯಾದ ಪ್ರಾತಿನಿಧ್ಯ ದೊರಕಿಲ್ಲ, ಕೆಲವರನ್ನು ರಾಜಕೀಯ, ಸೈದ್ಧಾಂತಿಕ ಕಾರಣಗಳಿಗಾಗಿ ಕೈಬಿಡಲಾಗಿದೆ ಎಂದು ಆರೋಪಿಸಿ, ಈಗಾಗಲೇ ಪ್ರಕಟ ವಾಗಿರುವ ಪಠ್ಯದಲ್ಲಿ ಸೇರ್ಪಡೆಯಾಗಿರುವ ತಮ್ಮ ಲೇಖನ, ಕವಿತೆಗಳನ್ನು ಹಿಂಪಡೆಯುವ, ಅನುಮತಿ ನಿರಾಕರಿಸುವ ಅಭಿಯಾನವೊಂದು ಆರಂಭವಾಗಿದೆ. ಆದರೆ ಈ ಪಠ್ಯ ಹಿಂಪಡೆತ ನಡೆಯು ಅವರುಗಳೇ ಮಾಡುತ್ತಿರುವ ಆರೋಪದ ವಿರುದ್ಧವಾಗಿದೆ.
ಪ್ರಗತಿಪರರ, ಸರ್ಕಾರದ ಜೊತೆಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರುವ ವ್ಯಕ್ತಿಗಳ ಬರಹವನ್ನು ಕೈಬಿಡಲಾಗಿದೆ ಎನ್ನುವುದು ಆರೋಪ. ಆದರೆ ಈಗ ಅನೇಕರು ಪ್ರಗತಿಪರರೆಂದು ಕರೆದುಕೊಳ್ಳುತ್ತಿರುವ ಬರಹಗಾರರು ಪಠ್ಯ ಹಿಂಪಡೆಯುವ ಆಂದೋಲನದಲ್ಲಿ ಭಾಗಿಯಾಗಿದ್ದಾರೆ. ಅಂದರೆ ಪಠ್ಯಪುಸ್ತಕಗಳಲ್ಲಿ ಈ ಎಲ್ಲಾ ಪ್ರಗತಿಪರರ ಬರಹಗಳಿದ್ದವು ಎಂದಾಯಿತು. ಹೀಗಾಗಿ ಹೆಚ್ಚು ಹೆಚ್ಚು ಜನ ಕವಿಗಳು, ಸಾಹಿತಿಗಳು ತಮ್ಮ ಬರಹ ಪಠ್ಯಪುಸ್ತಕದಲ್ಲಿ ಇರುವುದು ಬೇಡ ಎಂದು ಹಿಂಪಡೆದಷ್ಟೂ ಪಠ್ಯ ಪರಿಷ್ಕರಣೆಯ ಪ್ರಕ್ರಿಯೆ ನಿಷ್ಪಕ್ಷ ಪಾತವಾಗಿ, ಪೂರ್ವಗ್ರಹರಹಿತವಾಗಿ, ಜಾತಿ, ಪಕ್ಷ, ಸಿದ್ಧಾಂತಗಳ ಗೋಜಲುಗಳಿಲ್ಲದೆ ಗುಣಾತ್ಮಕವಾಗಿಯೇ
ನಡೆದಿದೆ ಎನ್ನುವುದು ಸಾಬೀತಾಗುತ್ತಿದೆ. ಯಾಕೆಂದರೆ
ಈ ಪರಿಷ್ಕರಣೆಯು ಪೂರ್ವಗ್ರಹಪೀಡಿತವಾಗಿ,
ನಿರ್ದಿಷ್ಟ ಸಿದ್ಧಾಂತ, ಜಾತಿಗಳ ವಿರುದ್ಧವಾಗಿ ನಡೆದಿದ್ದರೆ ಇಷ್ಟೊಂದು ಜನರಿಗೆ ತಮ್ಮ ಬರಹಗಳನ್ನು ಹಿಂಪಡೆಯುವ ಅವಕಾಶವೇ ಇರುತ್ತಿರಲಿಲ್ಲ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪಠ್ಯ ಪರಿಷ್ಕರಣೆ ನಡೆದಿರುವುದರಿಂದಲೇ ಅವರೆಲ್ಲರ ಬರಹಗಳು ಪಠ್ಯದಲ್ಲಿ ಉಳಿದಿರುವುದು.
ಸರ್ಕಾರದ ಟ್ರಸ್ಟ್‌ಗಳ ಅಧ್ಯಕ್ಷರು, ಸದಸ್ಯರನ್ನಾಗಿ ಭಿನ್ನ ಸೈದ್ಧಾಂತಿಕ ಹಿನ್ನೆಲೆಯ ವ್ಯಕ್ತಿಗಳನ್ನು ಉಳಿಸಿಕೊಂಡಿ ದ್ದಾರೆ ಎನ್ನುವುದಕ್ಕೆ ಅವರುಗಳ ರಾಜೀನಾಮೆಯೇ ಸಾಕ್ಷಿ. ಸಾಧ್ಯವಾದರೆ ಅಸಹನೆ ಇರುವ ಇನ್ನಷ್ಟು ಜನ ತಮ್ಮ ಬರಹಗಳನ್ನು ಹಿಂಪಡೆಯಲಿ, ಸರ್ಕಾರದಿಂದ ಪಡೆದ ಹುದ್ದೆಗಳಿಗೆ ರಾಜೀನಾಮೆ ನೀಡಲಿ. ಈ ಮೂಲಕ ಈ ಸರ್ಕಾರ ಹಾಗೂ ಸರ್ಕಾರದಿಂದ ನೇಮಕ ವಾಗಿರುವ ಪರಿಷ್ಕರಣಾ ಸಮಿತಿಯು ನಡೆಸಿದ ಪಠ್ಯ ಪರಿಷ್ಕರಣೆ ಪ್ರಕ್ರಿಯೆಯ ನಿಷ್ಪಕ್ಷಪಾತಿತನವನ್ನು ಜಗತ್ತಿಗೆ ಸಾರಿ ಹೇಳಲಿ.
ಡಾ. ರೋಹಿಣಾಕ್ಷ ಶಿರ್ಲಾಲು, ಸದಸ್ಯ, ಪಠ್ಯ ಪರಿಷ್ಕರಣೆ ಸಮಿತಿ, ಕಲಬುರಗಿ
ನಡೆಯಲಿ ಚಿಂತನೆ
ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದ ಗೊಂದಲಗಳು ದಿನೇ ದಿನೇ ಬೇರೆ ಸ್ವರೂಪಗಳನ್ನು ಪಡೆದುಕೊಳ್ಳುತ್ತಿವೆ. ಬಸವಣ್ಣನವರಿಗೂ ಅವಮಾನ ಮಾಡಲಾಗಿದೆ ಎಂದು ಕೆಲ ಸ್ವಾಮೀಜಿಗಳು ಧ್ವನಿಯೆತ್ತಿದ್ದಾರೆ. ಪಠ್ಯಪುಸ್ತಕದ ಪರಿಷ್ಕರಣೆಯಂತಹ ಮಹತ್ಕಾರ್ಯಕ್ಕೆ ಪೂರ್ವಗ್ರಹಪೀಡಿತರನ್ನು ನೇಮಿಸಿ ಸರ್ಕಾರ ತಪ್ಪು ಮಾಡಿತು. ಹಿಂದೆ ನಾಡಗೀತೆಗೆ ಅಪಪ್ರಚಾರ ಮಾಡಿ ಬರೆದ ಸಾಲುಗಳನ್ನು ಈಗ ನೆನಪಿಸಿ ರಾಜಕೀಯಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ರೋಹಿತ್ ಚಕ್ರತೀರ್ಥ ಅವರ ಸಮರ್ಥನೆಗೆ ಕಿಮ್ಮತ್ತು ಇಲ್ಲ. ತಪ್ಪು ಯಾವಾಗ ಮಾಡಿದ್ದರೂ ತಪ್ಪೇ. ಪಠ್ಯಪುಸ್ತದಲ್ಲಿ ನನ್ನದೂ ಒಂದು ಕಥೆ, ಲೇಖನ, ಕವಿತೆ, ಪಠ್ಯ ಇರಲೆಂದು ಬಯಸುತ್ತಿದ್ದ ವ್ಯಕ್ತಿಗಳು ಇಂದು ಬೇಡ ಎಂದು ಮನವಿ ಮಾಡುತ್ತಿದ್ದಾರೆ. ಸಾಹಿತಿಗಳು ಕೆಲವರು ಮಹತ್ವದ ಸ್ಥಾನಗಳಿಗೆ ರಾಜೀನಾಮೆ ನೀಡಿ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಗಂಭೀರವಾದ ಚಿಂತನೆ ನಡೆಸಬೇಕಿದೆ.
ಮಲ್ಲತ್ತಹಳ್ಳಿ ಡಾ. ಎಚ್.ತುಕಾರಾಂ, ಬೆಂಗಳೂರುವಾಸ್ತವ ಅರಿಯಿರಿ
ಪರಿಷ್ಕೃತ ಪಠ್ಯಪುಸ್ತಕವು ಚಕ್ರತೀರ್ಥದ ಮಡುವಿನ ಸುಳಿಯಂತೆ ದಿನಕ್ಕೊಂದರಂತೆ ತಿರುವನ್ನು ಪಡೆಯುತ್ತಿರುವುದರಿಂದ ಶಿಕ್ಷಣದ ಪಾವಿತ್ರ್ಯಕ್ಕೆ ಕುಂದುಂಟಾಗುತ್ತಿದೆ. ಪಕ್ಷರಾಜಕಾರಣ, ಸಿದ್ಧಾಂತಗಳ ಮೇಲಾಟ, ಸಾಹಿತಿಗಳ ಪ್ರತಿಷ್ಠೆ, ಸ್ವಾಮೀಜಿಗಳ ಆಗ್ರಹ, ನಿರ್ಧಾರ ತೆಗೆದುಕೊಳ್ಳುವಲ್ಲಿ ಸರ್ಕಾರ ತೋರಿದ ವಿಳಂಬ ನೀತಿಯು ವಿಷಯವನ್ನು ಇನ್ನಷ್ಟು ಗೋಜಲುಗೊಳಿಸುತ್ತಿದೆ. ಕುವೆಂಪು ಅವರನ್ನು ಕುರಿತ ವಿವಾದ ಮುಗಿಯುತ್ತಿದ್ದಂತೆ ಇಂದು ಬಸವೇಶ್ವರ ನಾಳೆ ಮತ್ತೆ ಯಾರೋ? ಹೀಗೆ, ಪರಿಸ್ಥಿತಿ ಗೊಂದಲವನ್ನು ಸೃಷ್ಟಿಸುತ್ತಿದೆ.
ಇತ್ತ ವಿಚಾರವಾದಿ ಲೇಖಕರು ತಮ್ಮ ಪಾಠಗಳನ್ನು ಪಠ್ಯಪುಸ್ತಕಗಳಿಂದ ಹಿಂಪಡೆಯಲು ತೆಗೆದುಕೊಂಡ ನಿರ್ಧಾರ ಈ ಪರಿಸ್ಥಿತಿಯಲ್ಲಿ ಅದರ ಔಚಿತ್ಯವನ್ನು ಪ್ರಶ್ನಿಸುವಂತಿದೆ. ಈಗಿರುವ ಪಾಠಗಳನ್ನು ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದ ಸಮಿತಿ ಸಿದ್ಧಪಡಿಸಿದ್ದರೂ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಸಿದ್ಧಪಡಿಸಿದ್ದರೂ ಓದುವವರು ಮಾತ್ರ ಅದೇ ವಿದ್ಯಾರ್ಥಿಗಳು. ಪರಿಷ್ಕೃತ ಪಠ್ಯಪುಸ್ತಕದ ಮುದ್ರಣ ಕಾರ್ಯ ಪೂರ್ಣಗೊಂಡು ಈಗಾಗಲೇ ಶಾಲೆಗಳಿಗೆ ಕಳುಹಿಸಿಕೊಡಲಾಗಿದೆ ಎಂದು ಸರ್ಕಾರ ಹೇಳಿದೆ. ಹಿಂಪಡೆಯಲು ಬಯಸುತ್ತಿರುವವರ ಬರಹಗಳನ್ನು ಈ ಹಂತದಲ್ಲಿ ಪಠ್ಯದಿಂದ ತೆಗೆದುಹಾಕಲು ಸಾಧ್ಯವಾಗದು ಎಂಬುದು ವಾಸ್ತವ. ಅವಾಂತರ ಅಂತ್ಯಗೊಳ್ಳಲಿ.
ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ, ಸಿಂಧನೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.