ADVERTISEMENT

ಚರ್ಚೆ | ನ್ಯಾಯಮೂರ್ತಿ ನೇಮಕಕ್ಕೆ ನ್ಯಾಯಮೂರ್ತಿಗಳೇ ಸೂಕ್ತ

ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆಯಲ್ಲಿ ಕಾರ್ಯಾಂಗದ ಪ್ರಾತಿನಿಧ್ಯ ಇರಬೇಕೇ?

ಉದಯ ಯು.
Published 20 ಜನವರಿ 2023, 22:45 IST
Last Updated 20 ಜನವರಿ 2023, 22:45 IST
   

ಹೈಕೋರ್ಟ್‌ನ ವಕೀಲರ ಪೈಕಿ ಯಾರಲ್ಲಿ ನ್ಯಾಯಮೂರ್ತಿಯಾಗುವ ಗುಣಗಳು ಇವೆ ಎಂಬುದನ್ನು ನಿರ್ಧರಿಸಲು ಆ ಹೈಕೋರ್ಟ್‌ನ ನ್ಯಾಯಮೂರ್ತಿಯೇ ಅತ್ಯಂತ ಸೂಕ್ತ ವ್ಯಕ್ತಿ. ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಕೆಲವೇ ನಿಮಿಷಗಳಲ್ಲಿ ಅಥವಾ ತಾಸುಗಳಲ್ಲಿ ತಿಳಿದುಕೊಳ್ಳುವುದಕ್ಕೂ ಸಾಧ್ಯವಿಲ್ಲ. ಆ ವಕೀಲರ ಜೊತೆಗೆ ಕೆಲವು ಕಾಲದಿಂದ ನೇರವಾಗಿ ಸಂವಹನ ಇರುವ ವ್ಯಕ್ತಿಗಳೇ ವಕೀಲರ ಸಾಮರ್ಥ್ಯವನ್ನು ಅಳೆಯಬಲ್ಲರು. ಹಾಗಾಗಿ, ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡಲು ವಕೀಲರು ಕೆಲಸ ಮಾಡುವ ಹೈಕೋರ್ಟ್‌ನ ನ್ಯಾಯಮೂರ್ತಿಗಳಿಗಿಂತ ಅರ್ಹರಾದವರು ಯಾರೂ ಇಲ್ಲ.

***

ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡುವುದಕ್ಕೆ ಇರುವ ಕೊಲಿಜಿಯಂ ವ್ಯವಸ್ಥೆಯನ್ನು ರದ್ದು ಮಾಡಬೇಕೇ ಮತ್ತು ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗವನ್ನು ಅನುಷ್ಠಾನಕ್ಕೆ ತರುವ ಅಗತ್ಯ ಇದೆಯೇ ಎಂಬ ಕುರಿತು ಮುದ್ರಣ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಜೋರಾಗಿ ಚರ್ಚೆ ನಡೆಯುತ್ತಿದೆ. ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಇರುವ ರಾಜಕೀಯ ವಿಚಾರಗಳ ಕುರಿತು ಚರ್ಚೆ ನಡೆಸಿದರೆ ಅದು ಮುಗಿಯದೆಯೇ ಇರಬಹುದಾದಷ್ಟು ದೀರ್ಘವಾಗಬಹುದು. ಕಾರ್ಯಾಂಗದ ಪಾರಮ್ಯ ಮತ್ತು ನ್ಯಾಯಮೂರ್ತಿಗಳ ಕೊಲಿಜಿಯಂನ ಪಾರಮ್ಯವನ್ನು ತುಲನೆ ಮಾಡಿದರೆ, ಕೊಲಿಜಿಯಂ ಅನ್ನೇ ಎತ್ತಿ ಹಿಡಿಯಬೇಕಾಗುತ್ತದೆ. ವಾಸ್ತವಿಕ ನೆಲೆಗಟ್ಟಿನಿಂದ ನೋಡಿದರೆ ಈಗ ಇರುವ ವ್ಯವಸ್ಥೆಯು ಹೆಚ್ಚು ಸಮಂಜಸವಾದುದು.

ADVERTISEMENT

ಜೀವನ ಎಷ್ಟು ವೈವಿಧ್ಯಪೂರ್ಣವಾಗಿದೆಯೋ ದಾವೆಗಳು ಕೂಡ ಅಷ್ಟೇ ವೈವಿಧ್ಯಮಯವಾಗಿವೆ. ಹಾಗಾಗಿಯೇ ವಿಶೇಷವಾಗಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ ನೀಡುವ ತೀರ್ಪುಗಳು ಮತ್ತು ಆದೇಶಗಳು ಸಾಮಾನ್ಯ ಜನರ ಜೀವನದ ಮೇಲೆ ಅಪಾರವಾದ ಪರಿಣಾಮವನ್ನು ಬೀರುತ್ತವೆ. ವೈವಿಧ್ಯಮಯ ಮತ್ತು ಜಟಿಲ ಸ್ವರೂಪದ ವಿವಾದಗಳ ಕುರಿತು ನ್ಯಾಯಮೂರ್ತಿಗಳು ತೀರ್ಪು ನೀಡುತ್ತಾರೆ. ಆದ್ದರಿಂದಲೇ ಪ್ರಾಮಾಣಿಕ, ಬದ್ಧತೆ ಇರುವ ಮತ್ತು ದಕ್ಷ ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡುವುದು ಅಗತ್ಯವಾಗಿದೆ. ನ್ಯಾಯಾಮೂರ್ತಿಗಳಾಗಿ ಯಾರನ್ನು ಆಯ್ಕೆ ಮಾಡಬೇಕು ಎಂಬುದನ್ನು ದಕ್ಷವಾಗಿರುವ ಜನರು ನಿರ್ಧರಿಸಿದಾಗ ಮಾತ್ರ ಇದು ಸಾಧ್ಯ.

1. ಹೈಕೋರ್ಟ್‌ನಲ್ಲಿ ಕನಿಷ್ಠ ಐದು ವರ್ಷ ನ್ಯಾಯಮೂರ್ತಿ ಯಾಗಿರಬೇಕು ಅಥವಾ ಹೈಕೋರ್ಟ್‌ನಲ್ಲಿ ಕನಿಷ್ಠ 10 ವರ್ಷ ವಕೀಲರಾಗಿರಬೇಕು ಎಂಬುದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಯಾಗಿ ನೇಮಕವಾಗಲು ಬೇಕಾದ ಅರ್ಹತೆ. ಹೈಕೋರ್ಟ್‌ನಲ್ಲಿ ಕನಿಷ್ಠ 10 ವರ್ಷ ವಕೀಲರಾಗಿರಬೇಕು ಎಂಬುದು ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕವಾಗಲು ಇರಬೇಕಾದ ಅರ್ಹತೆ.

2. ಹಾಗಾಗಿ, ವಕೀಲರು ಅಥವಾ ಈ ಹಿಂದೆ ವಕೀಲರಾಗಿ ಕೆಲಸ ಮಾಡಿದ್ದ ನ್ಯಾಯಮೂರ್ತಿಗಳನ್ನು ಮಾತ್ರ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲು ಸಾಧ್ಯವಿದೆ. ಪ್ರಾಮಾಣಿಕತೆ, ಬದ್ಧತೆ ಮತ್ತು ನ್ಯಾಯಮೂರ್ತಿಯಾಗಲು ಬೇಕಾದ ಇತರ ಗುಣಗಳನ್ನು ಹೊಂದಿರುವ ದಕ್ಷ ವಕೀಲರು ಮಾತ್ರ ನ್ಯಾಯಮೂರ್ತಿಯಾಗಿ ನೇಮಕವಾಗಲು ಸೂಕ್ತ ವ್ಯಕ್ತಿಗಳಾಗಿದ್ದಾರೆ.

ವಕೀಲರು ಮತ್ತು ಅವರ ದಕ್ಷತೆಯ ಕುರಿತು ಸಾಮಾನ್ಯ ಜನರಲ್ಲಿ ತಪ್ಪು ಗ್ರಹಿಕೆ ಇದೆ. ಅದೆಂದರೆ, ಹೆಚ್ಚು ಕೂಗಾಡಲು ಗೊತ್ತಿರುವವರೇ ಅತ್ಯುತ್ತಮ ವಕೀಲರು ಎಂಬುದೇ ಆ ಗ್ರಹಿಕೆ. ಸಿನಿಮಾದಲ್ಲಿ ಇರುವ ವಕೀಲರ ಪಾತ್ರಗಳ ರೀತಿಯಲ್ಲಿ ವಾಸ್ತವದ ವಕೀಲರ ಸಾಮರ್ಥ್ಯ ಮತ್ತು ದಕ್ಷತೆ ನಿರ್ಧಾರ ಆಗುವುದಿಲ್ಲ.

ನ್ಯಾಯಮೂರ್ತಿಯಾಗಲು ಇರಬೇಕಾದ ಗುಣಗಳು ಹೀಗಿವೆ: ಪ್ರಾಮಾಣಿಕತೆ ಮತ್ತು ಬದ್ಧತೆ, ಪಾಂಡಿತ್ಯ, ಜ್ಞಾನ, ಸಮಾಧಾನ ಚಿತ್ತ, ಸಂಯಮ, ವಿಶ್ಲೇಷಣೆ ಮತ್ತು ಸಂಶೋಧನಾ ಕೌಶಲ, ತಾರ್ಕಿಕ ಚಿಂತನೆ, ಸೃಜನಶೀಲತೆ, ಬರವಣಿಗೆ ಕೌಶಲ, ಪ್ರೌಢ ವ್ಯಕ್ತಿತ್ವ ಇತ್ಯಾದಿ. ವಕೀಲರಲ್ಲಿ ನ್ಯಾಯಮೂರ್ತಿ ಹುದ್ದೆಗೇರಬಹುದಾದ ಸಾಮರ್ಥ್ಯಗಳೇನು ಇವೆ ಎಂಬುದನ್ನು ನ್ಯಾಯಮೂರ್ತಿಗಳು ಪ್ರತಿ ದಿನವೂ ಗಮನಿಸುತ್ತಿರುತ್ತಾರೆ. ಹಾಗಾಗಿಯೇ ವಕೀಲರ ದಕ್ಷತೆ ಮತ್ತು ಸಮಂಜಸತೆಯನ್ನು ನಿರ್ಧರಿಸಲು ನ್ಯಾಯಮೂರ್ತಿಗಳೇ ಸೂಕ್ತ.

ಭಾರತದ ಕ್ರಿಕೆಟ್‌ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಲು ಕ್ರಿಕೆಟ್‌ನಲ್ಲಿ ಪರಿಣತರಾದ ವ್ಯಕ್ತಿಗಳೇ ಸೂಕ್ತ ಅಲ್ಲವೇ? ಹವ್ಯಾಸಿ ಕ್ರಿಕೆಟಿಗರನ್ನು ಆಯ್ಕೆಗಾರರನ್ನಾಗಿ ಮಾಡುವುದಕ್ಕಿಂತ ಪರಿಣತ ಕ್ರಿಕೆಟಿಗರನ್ನೇ ಆಯ್ಕೆಗಾರರನ್ನಾಗಿ ಮಾಡುವುದು ಉತ್ತಮವಲ್ಲವೇ? ಭಾರತದ ಕ್ರಿಕೆಟ್‌ ತಂಡಕ್ಕೆ ಕ್ರಿಕೆಟಿಗರನ್ನು ಆಯ್ಕೆ ಮಾಡುವುದಕ್ಕಿಂತ ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡುವುದು ಹೆಚ್ಚು ಕಷ್ಟಕರವಾದ ಮತ್ತು ಹೆಚ್ಚು ಹೊಣೆಗಾರಿಕೆಯ ಕೆಲಸ.

ನ್ಯಾಯಮೂರ್ತಿಗಳ ಆಯ್ಕೆಯು ಸಂದರ್ಶನದ ಆಧಾರದಲ್ಲಿ ಆಗಬಾರದು. ಏಕೆಂದರೆ, ನ್ಯಾಯಮೂರ್ತಿಯಾಗಲು ಬೇಕಾದ ಗುಣಗಳು ವ್ಯಕ್ತಿಯಲ್ಲಿ ಇವೆಯೇ ಎಂಬುದನ್ನು ಸಂದರ್ಶನವು ತಿಳಿಸಲು ಸಾಧ್ಯವಿಲ್ಲ. ವಿವಿಧ ರಾಜ್ಯಗಳಲ್ಲಿ ನ್ಯಾಯಮೂರ್ತಿಗಳಾಗಿ ನೇಮಕ ಆಗಬೇಕಾದ ವಕೀಲರಲ್ಲಿ ನ್ಯಾಯಮೂರ್ತಿಗೆ ಬೇಕಾದ ಗುಣಗಳು ಇವೆಯೇ ಎಂಬುದು ದೆಹಲಿಯಲ್ಲಿ ಅಥವಾ ದೂರದ ಇನ್ನೊಂದು ಸ್ಥಳದಲ್ಲಿ ಕುಳಿತಿರುವ ನ್ಯಾಯಾಂಗ ನೇಮಕ ಆಯೋಗಕ್ಕೆ ತಿಳಿಯುವುದು ಸಾಧ್ಯವಿಲ್ಲ. ಹೈಕೋರ್ಟ್‌ನ ವಕೀಲರ ಪೈಕಿ ಯಾರಲ್ಲಿ ನ್ಯಾಯಮೂರ್ತಿಯಾಗುವ ಗುಣಗಳು ಇವೆ ಎಂಬುದನ್ನು ನಿರ್ಧರಿಸಲು ಆ ಹೈಕೋರ್ಟ್‌ನ ನ್ಯಾಯಮೂರ್ತಿಯೇ ಅತ್ಯಂತ ಸೂಕ್ತ ವ್ಯಕ್ತಿ. ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಕೆಲವೇ ನಿಮಿಷಗಳಲ್ಲಿ ಅಥವಾ ತಾಸುಗಳಲ್ಲಿ ತಿಳಿದುಕೊಳ್ಳುವುದಕ್ಕೂ ಸಾಧ್ಯವಿಲ್ಲ. ಆ ವಕೀಲರ ಜೊತೆಗೆ ಕೆಲವು ಕಾಲದಿಂದ ನೇರವಾಗಿ ಸಂವಹನ ಇರುವ ವ್ಯಕ್ತಿಗಳೇ ವಕೀಲರ ಸಾಮರ್ಥ್ಯವನ್ನು ಅಳೆಯಬಲ್ಲರು. ಹಾಗಾಗಿ, ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡಲು ವಕೀಲರು ಕೆಲಸ ಮಾಡುವ ಹೈಕೋರ್ಟ್‌ನ ನ್ಯಾಯಮೂರ್ತಿಗಳಿಗಿಂತ ಅರ್ಹರಾದವರು ಯಾರೂ ಇಲ್ಲ.

ನ್ಯಾಯಾಂಗ ವ್ಯವಸ್ಥೆಯ ಕುರಿತು, ಕಾನೂನು ಪ್ರಕಾರ ನಿರ್ಧಾರ ಕೈಗೊಳ್ಳುವಿಕೆಯ ಸೂಕ್ಷ್ಮಗಳ ಕುರಿತು, ನ್ಯಾಯಮೂರ್ತಿಯಾಗಲು ಬೇಕಾದ ಸಾಮರ್ಥ್ಯಗಳೇನು ಎಂಬುದೆಲ್ಲ ತಿಳಿದಿಲ್ಲದವರಿಗೆ ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡುವ ಅರ್ಹತೆ ಇರುವುದಿಲ್ಲ. ಹಾಗಾಗಿಯೇ ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡಲು ಕೊಲಿಜಿಯಂ ಎಂಬ ವ್ಯವಸ್ಥೆ ಇರಬೇಕು ಎಂಬ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಬಂತು (ಸೆಕೆಂಡ್ ಜಡ್ಜ್‌ ಕೇಸ್‌). ಈ ನಿರ್ಧಾರದ ಹಿಂದಿನ ತರ್ಕ ಮತ್ತು ಕಾರಣವನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

ಸಾಂವಿಧಾನಿಕ ವಿಚಾರಗಳು ಮಾತ್ರವಲ್ಲದೆ ರಾಜಕೀಯಕ್ಕೆ ಸಂಬಂಧಿಸಿದ ವಿವಾದಗಳನ್ನು ಕುರಿತು ಕೂಡ ನ್ಯಾಯಮೂರ್ತಿಗಳು ತೀರ್ಪು ನೀಡುತ್ತಾರೆ ಎಂಬುದು ವಾಸ್ತವ ಸತ್ಯ. ನ್ಯಾಯಮೂರ್ತಿಗಳ ರಾಜಕೀಯ ಸಿದ್ಧಾಂತಗಳು ಕೂಡ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯೊಳಗೆ ಪಸರಿಸಿಕೊಳ್ಳುತ್ತವೆ. ಇದರಿಂದಾಗಿಯೇ ಸಾಮಾಜಿಕ ಬದ್ಧತೆ ಇರುವಂತಹವರನ್ನೇ ನ್ಯಾಯಮೂರ್ತಿಗಳಾಗಿ ನೇಮಿಸಬೇಕು ಎಂಬ ಒತ್ತಾಯ ಇದೆ. ಹಾಗೆಯೇ, ವ್ಯಕ್ತಿಯ ಸಾಮಾಜಿಕ ಗ್ರಹಿಕೆ, ಒಲವು ಮತ್ತು ನಂಬಿಕೆಯ ಆಧಾರದಲ್ಲಿ ನೇಮಕ ನಡೆಯಬೇಕು ಎಂದೂ ಹೇಳಲಾಗುತ್ತಿದೆ. ಆದ್ದರಿಂದ, ಸುಪ್ರೀಂ ಕೋರ್ಟ್‌ ಕೊಲಿಜಿಯಂನಲ್ಲಿ ಸರ್ಕಾರದ ಒಬ್ಬರು ಪ್ರತಿನಿಧಿಗೆ ಸ್ಥಾನ ಇರಬೇಕು ಎಂದು ಕೇಂದ್ರ ಕಾನೂನು ಸಚಿವರು ಹೇಳಿದ್ದನ್ನೂ ಸುಲಭವಾಗಿ ಅಲ್ಲಗಳೆಯಲಾಗದು.

ನ್ಯಾಯಮೂರ್ತಿಗಳು ಹೊಂದಿರುವ ರಾಜಕೀಯ ಮತ್ತು ವೈಯಕ್ತಿಕ ಗ್ರಹಿಕೆಯು ಅವರು ನೀಡುವ ತೀರ್ಪಿನಲ್ಲಿ ಸ್ವಲ್ಪ ಮಟ್ಟಿನ ಪ್ರಭಾವ ಬೀರುತ್ತದೆ ಎಂಬುದು ನಿಜ. ಆದರೆ, ನ್ಯಾಯಮೂರ್ತಿಗಳು ರಾಜಕೀಯವಾಗಿ ತಟಸ್ಥರಾಗಿರಬೇಕು ಮತ್ತು ಅವರ ನಿಷ್ಠೆಯು ಸಂವಿಧಾನಕ್ಕೆ ಮಾತ್ರ ಇರಬೇಕು. ಕಾನೂನು ಮತ್ತು ದೇಶದ ಜನರಿಗಷ್ಟೇ ಅವರು ನಿಷ್ಠೆ ಹೊಂದಿರಬೇಕು. ಈ ತುಡಿತ ಮತ್ತು ತಮ್ಮ ಮೇಲೆ ಇರುವ ಬಹುದೊಡ್ಡ ಹೊಣೆಗಾರಿಕೆ ಹಾಗೂ ಸಹವರ್ತಿ ನ್ಯಾಯಮೂರ್ತಿಗಳ ಒತ್ತಡದಿಂದಾಗಿ ಇಂತಹ ಗುಣಗಳು ತನ್ನಿಂತಾನಾಗೇ ನ್ಯಾಯಮೂರ್ತಿಗಳಲ್ಲಿ ಮೂಡುತ್ತವೆ.

_____________________________________

ಲೇಖಕ: ಮಾಜಿ ಅಡ್ವೊಕೇಟ್‌ ಜನರಲ್‌ ಮತ್ತು ಕರ್ನಾಟಕ ಹೈಕೋರ್ಟ್‌ನ ಹಿರಿಯ ವಕೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.