ADVERTISEMENT

ಪೆಗಾಸಸ್‌| ಕೇಂದ್ರದ ನಡೆ ಶಂಕಾಸ್ಪದ: ಸಂವಾದದಲ್ಲಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 19:13 IST
Last Updated 16 ಸೆಪ್ಟೆಂಬರ್ 2021, 19:13 IST
ಪೆಗಾಸಸ್‌ ಪ್ರಕರಣ ಬಹಿರಂಗಗೊಂಡಾಗ ಕೇಂದ್ರದ ವಿರುದ್ಧ ನಡೆದಿದ್ದ ಪ್ರತಿಭಟನೆಗಳು
ಪೆಗಾಸಸ್‌ ಪ್ರಕರಣ ಬಹಿರಂಗಗೊಂಡಾಗ ಕೇಂದ್ರದ ವಿರುದ್ಧ ನಡೆದಿದ್ದ ಪ್ರತಿಭಟನೆಗಳು   

ಬೆಂಗಳೂರು: ‘ಪೆಗಾಸಸ್‌ ಗೂಢಚರ್ಯೆ ಪ್ರಕರಣದಲ್ಲಿ ಕೇಂದ್ರ ಸರ್ಕಾರದ ನಡೆಯೇ ಶಂಕಾಸ್ಪದವಾಗಿದೆ. ರಾಷ್ಟ್ರೀಯ ಭದ್ರತೆಯ ಕಾರಣ ನೀಡಿ ಗೂಢಚರ್ಯೆಗೆ ಸಂಬಂಧಿಸಿದ ಮಾಹಿತಿ ಬಹಿರಂಗಪಡಿಸದಿರುವ ಧೋರಣೆ ಸರಿಯಲ್ಲ’ ಎಂಬ ಅಭಿಪ್ರಾಯ ‘ಪ್ರಜಾವಾಣಿ’ ಬಹುಮಾಧ್ಯಮ ವೇದಿಕೆಯಲ್ಲಿಗುರುವಾರ ನಡೆದ ಸಂವಾದದಲ್ಲಿ ವ್ಯಕ್ತವಾಯಿತು.

‘ವ್ಯಕ್ತಿಗತ ಸ್ವಾತಂತ್ರ್ಯ, ಮೂಲಭೂತ ಹಕ್ಕುಗಳು, ರಾಷ್ಟ್ರೀಯ ಹಿತಾಸಕ್ತಿ, ದೇಶದ ಭದ್ರತೆಗಿಂತಲೂ ದೊಡ್ಡದಲ್ಲ. ಭದ್ರತೆ ದೃಷ್ಟಿಯಿಂದ ಗೂಢಚರ್ಯೆ ಸರಿ’ ಎಂಬ ಸಮರ್ಥನೆಯೂ ಕೇಳಿಬಂದಿತು. ‘ಪೆಗಾಸಸ್‌ ಗೂಢಚರ್ಯೆ: ಕೇಂದ್ರ ಸರ್ಕಾರದ ನಿಲುವು ಸರಿಯೇ?’ ವಿಷಯ ಕುರಿತು ಈ ಸಂವಾದ ನಡೆಯಿತು. ಭಾಗವಹಿಸಿದ್ದ ಪ್ರಮುಖರ ಅಭಿಪ್ರಾಯಗಳು ಇಲ್ಲಿವೆ.

‘ಸಂವಿಧಾನಕ್ಕೆ ತೋರಿದ ಅಗೌರವ’

ADVERTISEMENT

ಪೆಗಾಸಸ್‌ ವಿದೇಶದ ಖಾಸಗಿ ಕಂಪನಿಯೊಂದರ ತಂತ್ರಾಂಶ. ವಿಪಕ್ಷಗಳ ಮೂವರು ನಾಯಕರು, 40 ಪತ್ರಕರ್ತರು, ಸಂಪುಟದ ಇಬ್ಬರು ಸಚಿವರು, ಸುಪ್ರೀಂ ಕೋರ್ಟ್‌ನ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಸೇರಿ ಪ್ರಮುಖರ ಚಲನವಲನ ಗುರುತಿಸಲು ಕೇಂದ್ರ ಸರ್ಕಾರ ಇದನ್ನು ಪ್ರಯೋಗಿಸಿದೆ ಎಂಬುದು ಪ್ರಬಲ ಆರೋಪ. ಈ ಬಗ್ಗೆ ವರದಿ ಸಲ್ಲಿಸಲು ಸುಪ್ರೀಂ ಕೋರ್ಟ್‌ ಕೇಂದ್ರಕ್ಕೆ ನೋಟಿಸ್ ನೀಡಿರುವುದು ಸ್ವಾಗತಾರ್ಹ. ಆದರೆ, ಕೇಂದ್ರ ಸರ್ಕಾರ ರಾಷ್ಟ್ರೀಯ ಭದ್ರತೆ ನೆಪಮಾಡಿ ಪ್ರಮಾಣಪತ್ರ ಸಲ್ಲಿಸದಿರುವುದು ಖಂಡನಾರ್ಹ. ಇದು, ಕೇಂದ್ರ ಸರ್ಕಾರದ ಅಧಃಪತನದ ಹೆಜ್ಜೆ. ಹೀಗೇ ನಿರಾಕರಣೆ ಮಾಡುವ ಮೂಲಕ ಸುಪ್ರೀಂ ಕೋರ್ಟ್‌ ಮತ್ತು ಸಂವಿಧಾನ ಎರಡಕ್ಕೂ ಕೇಂದ್ರ ಸರ್ಕಾರ ಅಗೌರವ ತೋರಿದೆ.

ರವಿವರ್ಮ ಕುಮಾರ್, ನಿವೃತ್ತ ಅಡ್ವೊಕೇಟ್‌ ಜನರಲ್‌.

***

‘ಸುಪ್ರೀಂ’ಗೆ ವರದಿ ನೀಡಲಿ’

ಗುಪ್ತಚರ ಕಾರ್ಯ ಇದೇ ಮೊದಲಲ್ಲ. ಹಿಂದೆ ನಡೆದಿದೆ. ಮುಂದೆಯೂ ನಡೆಯುತ್ತದೆ. ರಾಷ್ಟ್ರೀಯ ಅಖಂಡತೆ, ಭದ್ರತೆಗೆ ಧಕ್ಕೆ, ಸಂಭವನೀಯ ಅಪರಾಧ ತಡೆಗೆ ಕೆಲವರ ಚಲನವಲನ ಗಮನಿಸುವುದು ಅಗತ್ಯ. ಆದರೆ, ದೂರವಾಣಿ ಕದ್ದಾಲಿಕೆಗಿಂತಲೂ ಈಗಿನ ಗೂಢಚರ್ಯೆ ಭಿನ್ನವಾದುದು. ಕದ್ದಾಲಿಕೆಗೂ ಮೊದಲು ನಿರ್ದಿಷ್ಟ ವ್ಯಕ್ತಿಯ ವಿವರ ನೀಡಿ ಅನುಮತಿ ಪಡೆದಿದ್ದು, ಬಳಿಕ ವರದಿಯನ್ನು ಸಲ್ಲಿಸಬೇಕು. ಆದರೆ, ಈಗ ಗೂಢಚರ್ಯೆ ನಡೆದಿದೆ ಎಂದು ಸಮಾಜದ ಕೆಲ ಪ್ರಮುಖರ, ಗಣ್ಯರ ಹೆಸರುಗಳು ಕೇಳಿಬಂದಿವೆ. ಅವರ ವಿರುದ್ಧ ಗೂಢಚರ್ಯೆ ಮಾಡಲಾಗಿದೆಯೇ, ಏಕೆ ಮಾಡಲಾಗಿದೆ ಎಂಬುದು ನಾಗರಿಕರಿಗೆ ತಿಳಿಯಬೇಕು. ರಾಷ್ಟ್ರದ ಭದ್ರತೆಯ ದೃಷ್ಟಿಯಿಂದಲೇ ಮಾಡಲಾಗಿದೆ ಎನ್ನುವುದಾದರೆ ಕೇಂದ್ರ ಸರ್ಕಾರ ಅದನ್ನು ಮುಚ್ಚಿದ ಲಕೋಟೆಯಲ್ಲಿಯಾದರೂ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಬೇಕು. ಆಗ ಸರ್ಕಾರದ ಮೇಲೆ ವಿಶ್ವಾಸ ಮೂಡಲಿದೆ.

ಡಿ.ವಿ.ಗುರುಪ್ರಸಾದ್, ನಿವೃತ್ತ ಡಿಜಿಪಿ

***

‘ಕೇಂದ್ರ ಸರ್ಕಾರ ಉತ್ತರ ನೀಡಬೇಕು’

ಕೇಂದ್ರ ಸರ್ಕಾರ, ರಾಷ್ಟ್ರೀಯ ಭದ್ರತೆಯ ಕಾರಣ ನೀಡಿ ಮಾಹಿತಿ ಬಹಿರಂಗಪಡಿಸಲು ನಿರಾಕರಿಸುತ್ತಿದೆ. ಹಾಗಿದ್ದರೆ, ಗೂಢಚರ್ಯೆ ಮಾಡಲಾಗಿರುವ ಪಟ್ಟಿಯಲ್ಲಿ ಯಾವ ಉಗ್ರರ ಹೆಸರುಗಳಿವೆ? ಈಗ ಕೇಳಿಬಂದಿರುವಂತೆ ರಾಹುಲ್‌ ಗಾಂಧಿ, ಸುಪ್ರೀಂ ಕೋರ್ಟ್ ನಿವೃತ್ತ ಸಿಜೆಐ, ಪ್ರಮುಖ ಪತ್ರಕರ್ತರ ಚಲನವಲನಗಳ ಕುರಿತು ಗೂಢಚರ್ಯೆ ನಡೆದಿದೆ. ಈ ಕುರಿತು ಸರ್ಕಾರ ಸ್ಪಷ್ಟಪಡಿಸಬೇಕು. ಗೂಢಚರ್ಯೆ ನಡೆದಿದ್ದರೆ ಯಾವ ಕಾರಣಕ್ಕಾಗಿ ಎಂದು ತಿಳಿಸಬೇಕು. ಒಂದು ವೇಳೆ ಕೇಂದ್ರ ಮಾಡಿಲ್ಲವೆಂದಾದರೆ ಶತ್ರು ರಾಷ್ಟ್ರ ಮಾಡಿಸಿರಬೇಕು. ಆಗಲೂ ಕೇಂದ್ರದ ಹೊಣೆ ಹೆಚ್ಚಿದೆ. ಒಟ್ಟಿನಲ್ಲಿ ಕೇಂದ್ರ ಸರ್ಕಾರ ತಪ್ಪಿಸಿಕೊಳ್ಳುವಂತೆ ಇಲ್ಲ. ಚಲನವಲನ ಗಮನಿಸುವುದು ಕಾನೂನಿಗೆ ವಿರುದ್ಧ. ಈಗ ದೊಡ್ಡ ತಪ್ಪಾಗಿದೆ. ಸರ್ಕಾರ ಇದಕ್ಕೆ ಉತ್ತರ ನೀಡಬೇಕು. ಮುಂದೆ ಹೀಗಾಗದಂತೆ ಎಲ್ಲರೂ ಚಿಂತಿಸಬೇಕು.

– ಬಿ.ಆರ್.ಮಂಜುನಾಥ್‌, ಸಾಮಾಜಿಕ ಕಾರ್ಯಕರ್ತ

***

‘ರಾಷ್ಟ್ರದ ಹಿತಕ್ಕಿಂತ ದೊಡ್ಡದಲ್ಲ’

ದೇಶದ ಹಿತ ಮತ್ತು ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಕೆಲವರ ಚಲನವಲನ ಕುರಿತು ಕಣ್ಗಾವಲು ಇರಿಸುವುದು ಅಗತ್ಯ. ಯಾರ ಬಗ್ಗೆ ಮಾಡುತ್ತಿದ್ದಾರೆ ಎಂಬುದು ಪ್ರಶ್ನೆ. ‘ಪೊಲೀಸರು ಮತ್ತು ನಾಯಿಗಳನ್ನು ಕಂಡಾಗ ಓಡಬಾರದು ಎಂಬ ಮಾತಿದೆ. ಓಡಲು ಶುರುಮಾಡಿದಾಗಲೇ ಬೆನ್ನು ಹತ್ತುವುದು. ಚಲನವಲನ ಅನುಮಾನಾಸ್ಪದ ರೀತಿಯಲ್ಲಿ ಇರುವವರ ಬಗ್ಗೆ, ಚೀನಾ–ಪಾಕ್‌ ಜೊತೆಗೆ ಸಂಪರ್ಕವುಳ್ಳವರ ಬಗ್ಗೆ ನಿಗಾವಹಿಸುವುದು ಅಗತ್ಯ. ದೇಶದ್ರೋಹಿಗಳ ಪತ್ತೆಗೆ ಗೂಢಚರ್ಯೆ ಬೆಂಬಲಿಸಬೇಕು. ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ಟೀಕಿಸಬೇಕು ಎಂಬ ಕಾರಣಕ್ಕೇ ಪ್ರಶ್ನಿಸುವುದು ಸರಿಯಲ್ಲ. ಮೂಲಭೂತ ಹಕ್ಕುಗಳು ರಾಷ್ಟ್ರದ ಹಿತಕ್ಕಿಂತ ದೊಡ್ಡದಲ್ಲ. ಈಗ ಗೂಢಚರ್ಯೆ ನಡೆದಿದೆ ಎನ್ನಲಾದ ಹೆಸರುಗಳನ್ನು ಕೇಂದ್ರ ತಿಳಿಸಿಲ್ಲ. ಅದು, ವೆಬ್‌ಸೈಟ್‌ನಲ್ಲಿ ಬಂದ ಸಂಗತಿ. ಪ್ರಸ್ತುತ ಆ ವೆಬ್‌ಸೈಟ್‌ನ ನಡೆಯೂ ಪ್ರಶ್ನಾರ್ಹವಾಗಿಯೇ ಇದೆ.

ಗೋ.ಮಧುಸೂದನ್‌, ಮಾಜಿ ಶಾಸಕ, ಬಿಜೆಪಿ

ಸಂವಾದ ವೀಕ್ಷಣೆಗೆ ಯೂಟ್ಯೂಬ್‌ ಲಿಂಕ್‌ ಇಲ್ಲಿದೆ: https://bit.ly/39eqAzo

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.