ಸವರ್ಣೀಯ ಜಾತಿಗಳಲ್ಲಿರುವ ಆರ್ಥಿಕವಾಗಿ ದುರ್ಬಲವಾದ ವರ್ಗಗಳಿಗೆ (ಇಡಬ್ಲ್ಯುಎಸ್) 103ನೇ ಸಂವಿಧಾನ ತಿದ್ದುಪಡಿ ಮೂಲಕ ಶೇ 10ರಷ್ಟು ಮೀಸಲಾತಿ ನೀಡಲಾಗಿದೆ. ಈ ತಿದ್ದುಪಡಿಯು ಸಾಂವಿಧಾನಿಕವಾಗಿ ಸಿಂಧುವಾಗಿದೆ ಎಂದು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠವು ಬಹುಮತದ ತೀರ್ಪು ನೀಡಿದೆ. ಸಿಂಧುತ್ವವನ್ನು ಎತ್ತಿ ಹಿಡಿದ ಮತ್ತು ಭಿನ್ನಮತದ ತೀರ್ಪಿನ ಸಾರಾಂಶ ಇಲ್ಲಿದೆ
-----
ನ್ಯಾಯಮೂರ್ತಿ ಬೇಲಾ ಎಂ. ತ್ರಿವೇದಿ ಅವರ ತೀರ್ಪು ಇಡಬ್ಲ್ಯುಎಸ್ ಮೀಸಲಾತಿಯನ್ನು ಬಲವಾಗಿಯೇ ಸಮರ್ಥಿ ಸಿಕೊಂಡಿದೆ. ಅವರ ತೀರ್ಪಿನ ಸಾರ ಹೀಗಿದೆ:
ಸಂವಿಧಾನವು ಜಾರಿಗೆ ಬಂದಾಗಿನಿಂದಲೂ ಅದರ ಪ್ರಸ್ತಾವನೆಯ ಸ್ಫೂರ್ತಿಯನ್ನು ಜೀವಂತವಾಗಿ ಇರಿಸಲು ಮತ್ತು ಕಲ್ಯಾಣ ರಾಜ್ಯ ಸ್ಥಾಪನೆಯ ಗುರಿಯನ್ನು ಸಾಧಿಸಲು ನಿರಂತರ ಪ್ರಯತ್ನ ನಡೆದಿದೆ. ಈ ಪ್ರಕ್ರಿಯೆಯಲ್ಲಿ, ಸಾಂವಿಧಾನಿಕ ನೈತಿಕತೆ, ನ್ಯಾಯಸಮ್ಮತತೆಯನ್ನು ಕಾಯ್ದುಕೊಳ್ಳಲಾಗಿದೆ. ಹೀಗಾಗಿಯೇ ಸಂವಿಧಾನಕ್ಕೆ ಈವರೆಗೆ 105 ತಿದ್ದುಪಡಿಗಳನ್ನು ತರಲಾಗಿದೆ. 103ನೇ ತಿದ್ದುಪಡಿಯ (ಸವರ್ಣೀಯ ಜಾತಿಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ (ಇಡಬ್ಲ್ಯುಎಸ್) ಮೀಸಲಾತಿ) ಸಾಂವಿಧಾನಿಕ ಸಿಂಧುತ್ವವನ್ನು ಇಲ್ಲಿ ಪರಿಶೀಲನೆಗೆ ಒಳಪಡಿಸಲಾಗಿದೆ.
ಆರಂಭದಲ್ಲಿಯೇ, ಮಹರಾವ್ ಸಾಹಿಬ್ ಶ್ರೀ ಭೀಮ್ ಸಿಂಗ್‌ಜಿ ಮತ್ತು ಕೇಂದ್ರ ಸರ್ಕಾರ ಹಾಗೂ ಇತರರು ಪ್ರಕರಣದಲ್ಲಿಕೃಷ್ಣ ಅಯ್ಯರ್ ಜೆ. ಅವರು ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ಇಲ್ಲಿ ಉಲ್ಲೇಖಿಸಬಹುದು. ‘ಸಮಾನತೆಯ ಪ್ರತಿಯೊಂದು ಉಲ್ಲಂಘನೆಯನ್ನೂ ಸಂವಿಧಾನದ ಮೂಲ ನೆಲೆಗಟ್ಟಿನ ಉಲ್ಲಂಘನೆ ಎಂದು ಪರಿಗಣಿಸಲಾಗದು. ಸಮಾನತೆಯ ದೊಡ್ಡ ಮಟ್ಟದ ಪ್ರಕ್ರಿಯೆಯಲ್ಲಿ ಕೆಲವು ಕಿರಿಯ ಅಸಮಾನತೆಗಳು ಅನಿವಾರ್ಯ. ಕಣ್ಣಿಗೆ ಚುಚ್ಚುವ ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡಲು ಕಾನೂನು ಒಂದನ್ನು ಸಿದ್ಧಪಡಿಸಲುಸುಪ್ರೀಂ ಕೋರ್ಟ್‌ನ ಎಲ್ಲ ನ್ಯಾಯಮೂರ್ತಿಗಳು ಅರ್ಧ ವರ್ಷ ಕುಳಿತು ಪರಿಶೀಲನೆ ನಡೆಸಿದರೂ ಕಿರು ಅಸಮಾನತೆಗಳನ್ನು ತಡೆಯಲು ಸಾಧ್ಯವಾಗದು. ಪ್ರತಿಯೊಂದು ದೊಡ್ಡ ವಿಚಾರವೂ ಹುತಾತ್ಮರನ್ನು ಸೃಷ್ಟಿಸುತ್ತದೆ ಎಂಬುದು ಸಮಾಜಶಾಸ್ತ್ರಜ್ಞರಿಗೆ ತಿಳಿದೇ ಇದೆ. ಹಾಗಾಗಿ, ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯು ಮೂಲ ನೆಲೆಗಟ್ಟಿನ ಉಲ್ಲಂಘನೆ ಎನಿಸಿಕೊಳ್ಳದು. ಸಮಾನ ನ್ಯಾಯದ ಆಘಾತಕರ, ನಿರ್ಲಜ್ಜ ಮತ್ತು ಆತ್ಮಸಾಕ್ಷಿರಹಿತ ಉಲ್ಲಂಘನೆ ಆದಾಗ ಮೂಲ ನೆಲೆಗಟ್ಟು ಉಲ್ಲಂಘನೆ ಆಗುತ್ತದೆ...’
ಇಂದಿರಾ ನೆಹರೂ ಗಾಂಧಿ ಮತ್ತು ರಾಜ್ ನಾರಾಯಣ್ ಪ್ರಕರಣ, ಕೇರಳ ಸರ್ಕಾರ–ಎನ್.ಎಂ. ಥಾಮಸ್ ಮತ್ತು ಇತರರ ಪ್ರಕರಣ, ವಾಮನ ರಾವ್–ಕೇಂದ್ರ ಸರ್ಕಾರ ಮತ್ತು ಇತರರ ಪ್ರಕರಣ, ಎಂ.ನಾಗರಾಜ್ ಮತ್ತು ಇತರರು–ಕೇಂದ್ರ ಸರ್ಕಾರದ ನಡುವಣ ಪ್ರಕರಣಗಳ ತೀರ್ಪಿನಲ್ಲಿ ಸಮಾನತೆ ಮತ್ತು ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದ ಅಭಿಮತಗಳನ್ನು ನ್ಯಾಯಮೂರ್ತಿ ಬೇಲಾ ಎಂ. ತ್ರಿವೇದಿ ಅವರು ಉಲ್ಲೇಖಿಸಿದ್ದಾರೆ.
ತನ್ನ ಜನರ ಅಗತ್ಯಗಳನ್ನು ಶಾಸಕಾಂಗವು ಅರ್ಥ ಮಾಡಿಕೊಳ್ಳಬೇಕು ಎಂಬುದು ಒಪ್ಪಿತ ವಿಚಾರವೇ ಆಗಿದೆ. ಅದು ರೂಪಿಸುವ ಕಾನೂನುಗಳು ಅನುಭವಕ್ಕೆ ಬಂದ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದ್ದಾಗಿರುತ್ತದೆ. ಕಾನೂನುಗಳು ಮಾಡುವ ತಾರತಮ್ಯಕ್ಕೆ ಸಮರ್ಪಕವಾದ ಸಮರ್ಥನೆಗಳು ಇರುತ್ತವೆ. ಹಾಗಾಗಿಯೇ, ಈ ಸಂವಿಧಾನ ತಿದ್ದುಪಡಿಯನ್ನು ಸಮರ್ಥಿಸುವ ಕಾರಣಗಳನ್ನು ಸರ್ಕಾರವು ಮುಂದಿಟ್ಟರೆ, ತಿದ್ದುಪಡಿಯು ತಾರತಮ್ಯದಿಂದ ಕೂಡಿದೆ ಎಂದು ರದ್ದುಪಡಿಸಲು ಸಾಧ್ಯವಿಲ್ಲ. ಪರಿಶಿಷ್ಟ ಜಾತಿ, ಪಂಗಡಗಳು ಮತ್ತು ಒಬಿಸಿಗೆ ನೀಡಿರುವ ಮೀಸಲಾತಿಯಿಂದ ಸವರ್ಣೀಯ ಜಾತಿಗಳ ಆರ್ಥಿಕವಾಗಿ ಹಿಂದುಳಿದವರನ್ನು ಹೊರಗಿರಿಸಲಾಗಿದೆ ಎಂಬುದು ಶಾಸಕಾಂಗದ ಅರಿವಿನಲ್ಲಿದೆ. ಹಾಗಾಗಿಯೇ, ಸವರ್ಣೀಯ ಜಾತಿಗಳ ಜನರ (ಸಂವಿಧಾನದ 15ನೇ ವಿಧಿಯ 4 ಮತ್ತು 5ನೇ ಖಂಡಗಳಲ್ಲಿ ಉಲ್ಲೇಖವಾಗದೇ ಇರುವ ಜಾತಿಗಳು) ಅಭಿವೃದ್ಧಿಗಾಗಿ ವಿಶೇಷ ಅವಕಾಶವನ್ನು ಸರ್ಕಾರವು ಸೃಷ್ಟಿಸಿಕೊಂಡಿದೆ. ಇದು ಆರ್ಥಿಕವಾಗಿ ದುರ್ಬಲವಾದ ವರ್ಗವನ್ನು ಸಶಕ್ತೀಕರಿಸಲು ಸರ್ಕಾರ ಕೈಗೊಂಡ ಕ್ರಮ ಎಂದು ಪರಿಗಣಿಸಬೇಕಾಗುತ್ತದೆ.
ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳನ್ನು ಪ್ರತ್ಯೇಕ ವರ್ಗ ಎಂದು ಪರಿಗಣಿಸುವುದು ಸಮರ್ಥನೀಯವೇ ಆಗಿದೆ. ಇದನ್ನು ಸಂವಿಧಾನದ 14ನೇ ವಿಧಿ ಅಥವಾ ಸಂವಿಧಾನದ ಮೂಲ ನೆಲೆಗಟ್ಟಿನ ಉಲ್ಲಂಘನೆ ಎಂದು ಪರಿಗಣಿಸಲಾಗದು. ಈ ಕೋರ್ಟ್ ಈ ಹಿಂದೆ ಹೇಳಿದಂತೆ, ಸಮಾನರನ್ನು ಅಸಮಾನರೊಂದಿಗೆ ಹೋಲಿಸುವುದು, ಅಸಮಾನರನ್ನು ಸಮಾನರೊಂದಿಗೆ ಹೋಲಿಸುವುದು, ಅಸಮಾನರನ್ನು ಸಮಾನರೊಂದಿಗೆ ಹೋಲಿಸುವುದು ಸಂವಿಧಾನದ 14 ಮತ್ತು 16ನೇ ವಿಧಿ ಅಥವಾ ಸಮಾನತೆಯ ತತ್ವದ ಉಲ್ಲಂಘನೆ ಆಗುತ್ತದೆ. ಪರಿಶಿಷ್ಟ ಜಾತಿ/ಪಂಗಡ ಮತ್ತು ಒಬಿಸಿಯನ್ನು ಸಂವಿಧಾನದ ವಿಧಿಗಳಾದ15 (4), 15 (5) ಮತ್ತು 16 (4) ಅಡಿಯಲ್ಲಿ ವಿಶೇಷ ವರ್ಗ ಎಂದು ಪರಿಗಣಿಸಲಾಗಿದೆ. ಹಾಗಾಗಿಯೇ ಅವರನ್ನು ಸಾಮಾನ್ಯ ವರ್ಗ ಅಥವಾ ಮೀಸಲಾತಿರಹಿತ ವರ್ಗಕ್ಕೆ ಸಮಾನವಾಗಿ ನೋಡಲಾಗದು. ಇಡಬ್ಲ್ಯುಎಸ್‌ಗೆ ನೀಡಿರುವ ಮೀಸಲಾತಿಯು ಪರಿಶಿಷ್ಟ ಜಾತಿ/ಪಂಗಡ ಮತ್ತು ಒಬಿಸಿ ಮೀಸಲಾತಿಯನ್ನು ಬಾಧಿಸುವುದಿಲ್ಲ. ಹಾಗಾಗಿಯೇ,ಈ ವರ್ಗವನ್ನು ಇಡಬ್ಲ್ಯುಎಸ್ ಮೀಸಲಾತಿಯಿಂದ ಹೊರಗೆ ಇರಿಸಿರುವುದು ತಾರತಮ್ಯ ಎಂದು ಹೇಳಲಾಗದು.
ಸಂವಿಧಾನದ ಪ್ರಸ್ತಾವನೆಯಲ್ಲಿ ಅಡಕವಾಗಿರುವ ಅಂಶಗಳು ಮತ್ತು ಸಂವಿಧಾನದ ಭಾಗ–3 ಮತ್ತು ಭಾಗ–4ರಲ್ಲಿ ಅನುಮತಿ ನೀಡಲಾದ ವಿಚಾರಗಳು ಮೂಲನೆಲೆಗಟ್ಟಿನ ಉಲ್ಲಂಘನೆ ಆಗುವುದು ಸಾಧ್ಯವಿಲ್ಲ. ಸಂವಿಧಾನವು ನೀಡಿರುವ ಯಾವುದೇ ಅವಕಾಶವನ್ನು ತೊಡೆದು ಹಾಕಲಾಗಿಲ್ಲ. ಅಥವಾ ಈಗಾಗಲೇ ಇರುವ ಸಮಾನತೆಯ ಸಂಹಿತೆ ಅಥವಾ ಸಂವಿಧಾನದ ಮೂಲ ನೆಲೆಗಟ್ಟಿನ ಉಲ್ಲಂಘನೆಯೂ ಆಗಿಲ್ಲ. ಹಾಗಾಗಿಯೇ ಇಡಬ್ಲ್ಯುಎಸ್‌ಗೆ ಮೀಸಲಾತಿ ನೀಡುವ 103ನೇ ತಿದ್ದುಪಡಿ ಸಿಂಧುವಾಗಿದೆ.
‘ಮೀಸಲಾತಿಗೆ ಗಡುವು ಬೇಕು’
ಮೀಸಲಾತಿಗೆ ಗಡುವು ಹಾಕಿಕೊಳ್ಳಬೇಕು ಎಂಬುದು ಸಂವಿಧಾನ ರಚನೆಕಾರರು ಮತ್ತು 1985ರ ಸಂವಿಧಾನ ಪೀಠದ ಆಶಯವಾಗಿತ್ತು. ಸಂವಿಧಾನ ಜಾರಿಗೆ ಬಂದು 50 ವರ್ಷಗಳಲ್ಲಿ ಮೀಸಲಾತಿಯ ಉದ್ದೇಶ ಸಾಧನೆ ಆಗಬೇಕು ಎಂದು ಬಯಸಲಾಗಿತ್ತು. ಆದರೆ, ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಅದು ಸಾಧ್ಯವಾಗಿಲ್ಲ. ನಮ್ಮ ದೇಶದಲ್ಲಿ ಬಹಳ ಹಿಂದಿನಿಂದಲೂ ಇರುವ ಜಾತಿ ವ್ಯವಸ್ಥೆಯಿಂದಾಗಿಯೇ ಮೀಸಲಾತಿಯ ಅಗತ್ಯ ಉಂಟಾಯಿತು. ಚಾರಿತ್ರಿಕವಾದ ಅನ್ಯಾಯವನ್ನು ಸರಿಪಡಿಸುವುದಕ್ಕಾಗಿಯೇ ಮೀಸಲಾತಿ ನೀಡಲಾಯಿತು. ಹಾಗಿದ್ದರೂ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿರುವ ಈ ಸಂದರ್ಭದಲ್ಲಿ ಮೀಸಲಾತಿ ವ್ಯವಸ್ಥೆಯನ್ನು ಸಮಾಜದ ಒಟ್ಟು ಹಿತದೃಷ್ಟಿಯಿಂದ ಮರುಪರಿಶೀಲನೆಗೆ ಒಳಪಡಿಸುವ ಅಗತ್ಯ ಇದೆ ಎಂದು ತಮ್ಮ ತೀರ್ಪಿನಲ್ಲಿ ನ್ಯಾಯಮೂರ್ತಿ ಬೇಲಾ ಎಂ. ತ್ರಿವೇದಿ ಹೇಳಿದ್ದಾರೆ.
‘ಪಟ್ಟಭದ್ರ ಹಿತಾಸಕ್ತಿ ಆಗದಿರಲಿ’
‘ಈ ತಿದ್ದುಪಡಿ ಸರಿಯಿದೆ ಎಂಬ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಅವರ ಅಭಿಪ್ರಾಯಕ್ಕೆ ನನ್ನ ಸಹಮತ ಇದೆ. ಇಡೀ ವಿಷಯವನ್ನು ನಾನು ಬೇರೊಂದು ದೃಷ್ಟಿಕೋನದಲ್ಲಿ ನೋಡಲು ಬಯಸುತ್ತೇನೆ’ ಎಂದು ನ್ಯಾಯಮೂರ್ತಿ ಜೆ.ಬಿ. ಪಾರ್ದೀವಾಲಾ ಅವರು ಹೇಳಿದ್ದಾರೆ.
‘ದೋಷಪೂರಿತ ಎನ್ನಲಾದ ತಿದ್ದುಪಡಿ ಮಸೂದೆಯು ಸರಿಯಾಗಿದೆ. ಅದರಿಂದ ಸಂವಿಧಾನದ ಮೂಲ ನೆಲೆಗಟ್ಟಿಗೆ ಯಾವುದೇ ಧಕ್ಕೆಯಾಗುವುದಿಲ್ಲ. ನನ್ನ ಪ್ರಕಾರ, ತಿದ್ದುಪಡಿ ಮಸೂದೆಯನ್ನು ಪ್ರಶ್ನಿಸಿದ್ದ ಅರ್ಜಿಗಳಲ್ಲಿ ತಥ್ಯವಿಲ್ಲ.ಮೀಸಲಾತಿ ಎಂಬುದು ಕೊನೆಯಲ್ಲ. ಆದರೆ, ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ಸೌಲಭ್ಯ ಪಡೆಯಲು ಇರುವ ಮಾರ್ಗವಾಗಿದೆ. ಮೀಸಲಾತಿಯು ಪಟ್ಟಭದ್ರ ಹಿತಾಸಕ್ತಿಯಾಗಲು
ಅವಕಾಶ ಮಾಡಿಕೊಡಬಾರದು’ ಎಂದು ಪಾರ್ದೀವಾಲಾ ಅವರು ಹೇಳಿದ್ದಾರೆ.
ಸಮಾಜದ ದುರ್ಬಲ ವರ್ಗದವರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವಿಕೆಗೆ ಕಾರಣವಾಗುವ ಅಂಶಗಳನ್ನು ನಿವಾರಣೆ ಮಾಡುವುದೇ ಮೀಸಲಾತಿಯ ಉದ್ದೇಶ. ದೇಶಕ್ಕೆ ಸ್ವಾತಂತ್ರ್ಯ ದೊರೆತ ತಕ್ಷಣವೇ, ಹಿಂದುಳಿದಿರುವಿಕೆಗೆ ಕಾರಣವಾಗುವ ಅಂಶಗಳನ್ನು ತೊಡೆದುಹಾಕುವ ಪ್ರಕ್ರಿಯೆಗಳು ಶುರುವಾದವು. ಸುಮಾರು ಏಳು ದಶಕಗಳ ಹಿಂದೆ ಶುರುವಾದ ಈ ಪ್ರಕ್ರಿಯೆ ಈಗಲೂ ಮುಂದುವರಿದಿದೆ ಎಂದು ಹೇಳಿದ್ದಾರೆ.
ಸಮಾಜದ ವಿವಿಧ ವರ್ಗಗಳ ನಡುವೆ ಇದ್ದ ಅಸಮಾನತೆಯ ಪ್ರಮಾಣವನ್ನು ತಗ್ಗಿಸುವಲ್ಲಿ ಅಭಿವೃದ್ಧಿ ಕೆಲಸಗಳು ಹಾಗೂ ಶಿಕ್ಷಣದ ಪ್ರಸರಣ ದೊಡ್ಡ ಕೊಡುಗೆ ನೀಡಿವೆ. ಹಿಂದುಳಿದ ವರ್ಗಗಳಿಗೆ ಸೇರಿದ ಅಪಾರ ಪ್ರಮಾಣದ ಜನರು ಇಂದು ಅತ್ಯುತ್ತಮ ಶಿಕ್ಷಣ ಹಾಗೂ ಉದ್ಯೋಗ ಪಡೆದಿದ್ದಾರೆ. ಹೀಗಾಗಿ, ಈ ಸೌಲಭ್ಯಗಳಿಂದ ವಂಚಿತವಾಗಿರುವ ಇತರ ಸಮುದಾಯಗಳ ಜನರತ್ತಲೂ ಗಮನ ಹರಿಸಬೇಕಿದೆ ಎಂದು ನ್ಯಾಯಮೂರ್ತಿ ಪ್ರತಿಪಾದಿಸಿದ್ದಾರೆ.
ಹಿಂದುಳಿದ ವರ್ಗಗಳನ್ನು ಗುರುತಿಸುವ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಅತ್ಯಗತ್ಯವಾಗಿ ಪರಿಶೀಲನೆ ನಡೆಸಬೇಕಿದೆ. ಯಾರು ಹಿಂದುಳಿದವರು ಎಂದು ನಿರ್ಣಯಿಸುವ ವಿಧಾನವೂ ಪರಿಶೀಲನೆಗೆ ಒಳಪಡಬೇಕು. 117 ಹಿಂದುಳಿದ ಸಮುದಾಯಗಳನ್ನು ಗುರುತಿಸಲು ಅಳವಡಿಸಿಕೊಂಡಿರುವ ವಿಧಾನವು, ಈಗಿನ ಪರಿಸ್ಥಿತಿಯಲ್ಲೂ ಪ್ರಸ್ತುತವಾಗಿದೆಯೇ ಎಂದು ಆಲೋಚಿಸಬೇಕಿದೆ ಎಂದು ನ್ಯಾಯಮೂರ್ತಿ ಹೇಳಿದ್ದಾರೆ.
ಸಾಮಾಜಿಕ ಸಾಮರಸ್ಯ ಸಾಧಿಸಲು ಮೀಸಲಾತಿ ತರುವುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಇದು 10 ವರ್ಷ ಇದ್ದರಷ್ಟೆ ಸಾಕು ಎಂದು ಅವರು ಬಯಸಿದ್ದರು. ಆದರೆ, ಏಳು ದಶಕಗಳಾದರೂ ಅದು ಮುಂದುವರಿದಿದೆ. ಅದು ಅನಿರ್ದಿಷ್ಟ ಅವಧಿಗೆ ಮುಂದುವರಿಯಬಾರದು. ಮುಂದುವರಿದರೆ ಅದು ಪಟ್ಟಭದ್ರ ಹಿತಾಸಕ್ತಿಯಾಗಿ ಕೆಲಸ ಮಾಡುತ್ತದೆ ಎಂದುಪಾರ್ದೀವಾಲಾ ಅವರು ಹೇಳಿದ್ದಾರೆ.
ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಅವರೂ ಬಹುತೇಕ ಇದೇ ರೀತಿಯ ತೀರ್ಪು ಕೊಟ್ಟಿದ್ದಾರೆ.
‘ಸಂವಿಧಾನಬಾಹಿರ,ಮೂಲ ನೆಲೆಗಟ್ಟಿಗೆ ಧಕ್ಕೆ’
‘103ನೇ ತಿದ್ದುಪಡಿಯ ಮೂಲಕ ಆರ್ಥಿಕವಾಗಿ ದುರ್ಬಲ ವರ್ಗಗಳು (ಇಡಬ್ಲ್ಯುಎಸ್) ಎಂಬ ಹೊಸ ವರ್ಗವನ್ನು ಸೃಷ್ಟಿಸಿರುವುದು ಸಂವಿಧಾನ ವಿರೋಧಿಯಲ್ಲ. ಆದರೆ, ಈ ಹೊಸ ವರ್ಗದಿಂದ ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ) ಮತ್ತು ಇತರೆ ಹಿಂದುಳಿದ ವರ್ಗಗಳನ್ನು (ಒಬಿಸಿ) ಹೊರಗಿಟ್ಟಿರುವುದು ಸಂವಿಧಾನ ಬಾಹಿರ’ ಎಂದು ನ್ಯಾಯಮೂರ್ತಿ ಎಸ್.ರವೀಂದ್ರ ಭಟ್ ಮತ್ತು ಅಂದಿನ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ತೀರ್ಪು ನೀಡಿದ್ದಾರೆ. ಐವರು ಸದಸ್ಯರ ಸಂವಿಧಾನ ಪೀಠದಲ್ಲಿ ಈ ಇಬ್ಬರು ಮಾತ್ರ ಈ ರೀತಿಯ ತೀರ್ಪು ನೀಡಿದ ಕಾರಣ, ಇದನ್ನು ಅಲ್ಪಮತದ ತೀರ್ಪು ಎಂದು ಪರಿಗಣಿಸಲಾಗಿದೆ.
ಇಡಬ್ಲ್ಯುಎಸ್ ಮೀಸಲಾತಿಯಿಂದ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಯನ್ನು ಹೊರಗಿಟ್ಟಿರುವುದರಿಂದ ಸಂವಿಧಾನದ ಮೂಲ ನೆಲೆಗಟ್ಟಿಗೆ ಧಕ್ಕೆಯಾಗಿದೆಯೇ ಎಂಬುದು, ಈ ಪೀಠದ ಎದುರು ಇದ್ದ ಮೂರನೇ ಪ್ರಶ್ನೆ.ನ್ಯಾಯಮೂರ್ತಿ ರವೀಂದ್ರ ಭಟ್ ಮತ್ತು ಯು.ಯು.ಲಲಿತ್, ಈ ತಿದ್ದುಪಡಿಯಿಂದ ಸಂವಿಧಾನದ ಮೂಲ ನೆಲೆಗಟ್ಟಿಗೆ ಧಕ್ಕೆಯಾಗುತ್ತದೆ ಎಂದೇ ತೀರ್ಪು ನೀಡಿದ್ದಾರೆ.
ಇಡಬ್ಲ್ಯುಎಸ್ ಎಂಬ ಹೊಸ ವರ್ಗವನ್ನು ಸೃಷ್ಟಿಸುವ ಮತ್ತು ಅದಕ್ಕೆ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಸಂವಿಧಾನಕ್ಕೆ ತಿದ್ದುಪಡಿ ತರಲಾಗಿದೆ. ಈ ತಿದ್ದುಪಡಿಯ ಮೂಲಕ ಸಂವಿಧಾನದ 15 ಮತ್ತು 16ನೇ ವಿಧಿಗಳಿಗೆ ಹಲವು ಉಪವಿಧಿಗಳನ್ನು ಸೇರಿಸಲಾಗಿದೆ. ಆದರೆ ಸಂವಿಧಾನದ ಮೂಲ ನೆಲೆಗಟ್ಟಿಗೆ ಧಕ್ಕೆ ತರುವ ವಿಧಿಗಳೆಂದರೆ, 15(6) ಮತ್ತು 16(6)ನೇ ವಿಧಿಗಳು. ಈ ಮೀಸಲಾತಿಯು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ಅನ್ವಯವಾಗುವುದಿಲ್ಲ ಎಂದು ಈ ವಿಧಿಗಳಲ್ಲಿ ಹೇಳಲಾಗಿದೆ. ಈ ಮೀಸಲಾತಿ ಅನ್ವಯವಾಗುವುದು ಮುಂದುವರಿದ ವರ್ಗಗಳಿಗೆ (ಫಾರ್ವಾರ್ಡ್ ಕ್ಲಾಸಸ್) ಮಾತ್ರ ಎಂದು ಇವರ ತೀರ್ಪಿನಲ್ಲಿ ವಿವರಿಸಲಾಗಿದೆ.
ಸಂವಿಧಾನದ 15, 16, 17ನೇ ವಿಧಿಗಳು ಮತ್ತು ಅವುಗಳ ಉಪವಿಧಿಗಳು ಒಟ್ಟಾರೆಯಾಗಿ ಸಮಾನತೆಯ ಸಂಹಿತೆಗಳಾಗಿವೆ. 15 ಮತ್ತು 16ನೇ ವಿಧಿಗಳಿಗೆ ಪ್ರತ್ಯೇಕವಾಗಿ (6)ನೇ ಉಪವಿಧಿಯನ್ನು ಸೇರಿಸುವ ಮೂಲಕ ಅಸಮಾನತೆಗೆ ಆಸ್ಪದ ನೀಡಲಾಗಿದೆ. ಆರ್ಥಿಕವಾಗಿ ದುರ್ಬಲ ವರ್ಗಗಳು ಎಂಬ ಹೊಸ ವರ್ಗವನ್ನು ಸೃಷ್ಟಿಸುವಾಗ, ಆರ್ಥಿಕ ಸ್ಥಿತಿಯನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗಿದೆ. ಆದರೆ, ಇದೇ ಮೀಸಲಾತಿಯಿಂದ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಯನ್ನು ಹೊರಗೆ ಇಡುವಾಗ ಜಾತಿಯನ್ನು ಆಧಾರವಾಗಿ ಇಟ್ಟುಕೊಳ್ಳಲಾಗಿದೆ. ಜಾತಿ ಆಧಾರದಲ್ಲಿ ಇಲ್ಲಿ ಅಸಮಾನತೆಗೆ ಆಸ್ಪದ ನೀಡಲಾಗಿದೆ. ಈ 6ನೇ ಉಪವಿಧಿಯು ಈ ಮೂಲಕ ಸಂವಿಧಾನದ ಸಮಾನತೆಯ ಸಂಹಿತೆಯನ್ನು ಉಲ್ಲಂಘಿಸುತ್ತದೆ. ಈ ಕಾರಣದಿಂದ 15(6) ಮತ್ತು 16(6)ನೇ ಉಪವಿಧಿಗಳನ್ನು ರದ್ದುಪಡಿಸಬೇಕು ಎಂದು ಈ ಇಬ್ಬರು ನ್ಯಾಯಮೂರ್ತಿಗಳು ತೀರ್ಪು ನೀಡಿದ್ದಾರೆ.
ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರವೇಶದಲ್ಲಿಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶೇ 10ರಷ್ಟು ಮೀಸಲಾತಿಯನ್ನು ಈ ತಿದ್ದುಪಡಿಯು ನೀಡುತ್ತದೆ. ಈ ಇಬ್ಬರುನ್ಯಾಯಮೂರ್ತಿಗಳು ತಿದ್ದುಪಡಿಯ ಈ ಭಾಗವೂ ಸಂವಿಧಾನಬಾಹಿರ ಮತ್ತು ಇದು ಸಂವಿಧಾನದ ಮೂಲ ನೆಲೆಗಟ್ಟಿಗೆ ಧಕ್ಕೆ ತರುತ್ತದೆ. ಈ ರೀತಿಯ ಮೀಸಲಾತಿಯಿಂದ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗದವರನ್ನು ಹೊರಗೆ ಇಡಲಾಗಿದೆ. ಆ ಮೂಲಕ ಅಸಮಾನತೆಗೆ ಆಸ್ಪದ ಮಾಡಿಕೊಡಲಾಗಿದೆ ಮತ್ತು ಇದರಿಂದ ಸಂವಿಧಾನದಮೂಲ ನೆಲೆಗಟ್ಟಿಗೆ ಧಕ್ಕೆಯಾಗುತ್ತದೆ. ಈ ಕಾರಣದಿಂದ, ತಿದ್ದುಪಡಿಯ ಈ ಭಾಗವನ್ನೂ ತೆಗೆದುಹಾಕಬೇಕು ಎಂದು ಈ ಇಬ್ಬರು ನ್ಯಾಯಮೂರ್ತಿಗಳು ತೀರ್ಪು ನೀಡಿದ್ದಾರೆ.
ಆಧಾರ: ಇಡಬ್ಲ್ಯುಎಸ್ ಮೀಸಲಾತಿ ಪ್ರಶ್ನಿಸಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ನೀಡಿದ ತೀರ್ಪು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.