‘ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲಿ ಎನ್ನುವವರು ಹಿಂದೂಗಳೇ ಅಲ್ಲ’ ಎಂಬ ಆರ್‌ಎಸ್ಎಸ್ ಮುಖ್ಯಸ್ಥ ಮೋಹನ ಭಾಗವತ್ ಅವರ ಹೇಳಿಕೆಯ ಹಿಂದೆ ‘ಹಿಂದೂಕರಣ’ದ ಅಜೆಂಡಾವೇ ಇದೆ ಎಂಬುದನ್ನು ಬಂಜಗೆರೆ ಜಯಪ್ರಕಾಶ್ ಸ್ಫುಟವಾಗಿ ವಿವರಿಸಿದ್ದಾರೆ (ಪ್ರ.ವಾ., ಜುಲೈ 10).
ಆರ್ಯರು ಸಿಂಧೂ ನಾಗರಿಕತೆಯ ನಿರ್ಮಾತೃಗಳು ಮತ್ತು ಇಲ್ಲಿಯ ಮೂಲನಿವಾಸಿಗಳು ಎಂದು
ಪ್ರತಿಪಾದಿಸುವುದು, ಹಿಂದೂ ಎಂದರೆ ಅದು ಆರ್ಯ ಸಂಸ್ಕೃತಿ ಎಂದು ಸಾರಲು ಹೊರಟಿರುವ ಹುನ್ನಾರವಾಗಿದೆ. ‘ಆರ್ಯಭಾಷಿಕ ಸಮುದಾಯ ಅಥವಾ ವೈದಿಕ ಸಂಸ್ಕೃತಿಯ ಜನರ ವಂಶಾವಳಿಯಲ್ಲಿ ಸಿಂಧೂ ಸಂಸ್ಕೃತಿಯ ಮೂಲನಿವಾಸಿಗಳ ಡಿಎನ್ಎ ಕಂಡುಬರುವುದಿಲ್ಲ, ಬದಲಿಗೆ ಅದು ದಕ್ಷಿಣ ಭಾರತೀಯರ ವರ್ಣತಂತುವಿನಲ್ಲಿ ಕಂಡುಬರುವ ಅಂಶ’ ಎಂದು ವೈಜ್ಞಾನಿಕ ಸಂಶೋಧನೆಗಳು ಹೇಳಿ ದೊಡನೆಯೇ ಗಾಬರಿಗೊಂಡಂತೆ ಎಚ್ಚೆತ್ತ ಸಂಘ ಪರಿವಾರವು ‘ಭಾರತೀಯ ಇತಿಹಾಸದ ಮರು ಸಂಶೋಧನಾ ಮಂಡಳಿ’ ರಚಿಸಲು ಮುಂದಾಯಿತು.
ತಮಾಷೆಯೆಂದರೆ, ಆರ್‌ಎಸ್‌ಎಸ್ ‘ಗುರೂಜಿ’ ಎನ್ನುವ ಎಂ.ಎಸ್.ಗೋಲ್ವಾಲ್ಕರ್ ಅವರು 1960ರ ಮಾರ್ಚ್ 20ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಮಾತನಾಡುತ್ತಾ ‘ಹಿಂದೂ ಮುಸಲ್ಮಾನ ರಿಬ್ಬರೂ ಇಲ್ಲಿ ಜೀವಿಸುತ್ತಾರೆ, ಇದೊಂದು ಸಂಯುಕ್ತ ರಾಷ್ಟ್ರ ಎನ್ನಲಾಗುತ್ತದೆ. ಆದರೆ ಇವರಲ್ಲಿ ಒಬ್ಬ ಆಕ್ರಮಣಕಾರಿ, ಇನ್ನೊಬ್ಬ ಅದನ್ನು
ಪ್ರತಿಭಟಿಸಿದಾತ ಎಂಬುದನ್ನು ಹೇಗೆ ಮರೆಯಲು ಸಾಧ್ಯ? ಇವರಿಬ್ಬರೂ ಸೇರಿ ಒಂದು ರಾಷ್ಟ್ರವಾಗು
ವುದು ಹೇಗೆ? ಇಲ್ಲಿ ಒಂದು ಸಾರ್ವಭೌಮ ಹಿಂದೂ ರಾಷ್ಟ್ರ ಎಂದು ಸ್ಥಾಪನೆಯಾಗುವುದೋ ಅಂದು ಮಾತ್ರ ನಮಗೆ ನೂತನ ಸ್ವಾತಂತ್ರ್ಯ ದಿನ ಉದಯಿಸಲಿದೆ’ ಎಂದು ಆರ್ಭಟಿಸಿದ್ದರು. ಈ ಮಾತಿಗೆ ಪರಿವಾರದವರು ಈಗ ಸಂಪೂರ್ಣ ವ್ಯತಿರಿಕ್ತವಾಗಿ ಮಾತನಾಡುತ್ತಿದ್ದಾರೆ.
ಭಾರತವನ್ನು ಮೊದಲು ಪ್ರವೇಶಿಸಿದ ಎರಡು ಪಂಗಡಗಳೆಂದರೆ ಪ್ರೋಟೋ ಆಸ್ಟ್ರೋಲಾಯಿಡ್‍ರು ಮತ್ತು ದ್ರಾವಿಡರು. ಪ್ರೋಟೋಗಳು ಮೆಡಿ ಟರೇನಿಯನ್ ಪ್ರಾಂತದ ಪೂರ್ವ ಭಾಗದ ಪ್ಯಾಲೆಸ್ಟೀನ್ ಸಮೀಪದಿಂದ ಬಂದ ಕಪ್ಪುಜನರಾದರೆ, ದ್ರಾವಿಡರು ಅದೇ ಪ್ರಾಂತ್ಯದ ಹೆಚ್ಚು ನಾಗರಿಕರಾದ ಕಪ್ಪು
ಚರ್ಮದವರು. ಆರ್ಯರಿಗಿಂತ ಮೊದಲೇ ಇಲ್ಲಿ ಬೇರುಬಿಟ್ಟಿದ್ದ ದ್ರಾವಿಡರು ತಮ್ಮ ಆದಿಮಾನವ ಗುಣ ಗಳಿಂದ ಹೊರಬಂದು, ಪ್ರಗತಿಯ ಹಾದಿಯಲ್ಲಿ ಮುನ್ನಡೆದಿದ್ದರು. ಆದರೆ ಕ್ರೂರ ಆಕ್ರಮಣಕಾರಿಗಳಾಗಿದ್ದ ಆರ್ಯರು ಭೂಮಿಗಾಗಿ ನಡೆದ ಸೆಣಸಾಟದಲ್ಲಿ ಗೆಲುವು ಪಡೆದು, ತಮ್ಮ ಶತ್ರುಗಳಾದ ಮೂಲನಿವಾಸಿ ದ್ರಾವಿಡರನ್ನು ಕಪ್ಪುಚರ್ಮದವರು, ಆಚಾರಹೀನರು, ಲಿಂಗಾರಾಧಕರು ಎಂದೆಲ್ಲ ತುಚ್ಛವಾಗಿ ಸಂಬೋಧಿಸು ತ್ತಿದ್ದರು. ಆದರೆ ಕ್ರಮೇಣ ಅವರಲ್ಲಿ ಆಕ್ರಮಣಕಾರಿ ಮನೋಭಾವ ಕುಂದಿ, ಅವರೂ ನಮ್ಮ ಸಿಂಧೂ ನದಿಬಯಲಿನ ನಾಗರಿಕತೆಗೆ ಶರಣುಹೋದರು. ಮೊದಮೊದಲು ದ್ರಾವಿಡರ ಪೂಜೆ–ಪುನಸ್ಕಾರಗಳನ್ನು ಅಸಹ್ಯವಾಗಿ ಕಾಣುತ್ತಿದ್ದ ಆರ್ಯರು, ಶಿವನ ಪ್ರಾಧಾನ್ಯತೆ ಯನ್ನು ಒಪ್ಪಿಕೊಂಡರು. ಆರ್ಯರ ಜಾತಿ ಪದ್ಧತಿಯೊಳಕ್ಕೆ ದ್ರಾವಿಡರು ಗುಂಪುಗುಂಪಾಗಿ
ಸೇರಿದ್ದರಿಂದ ಶೂದ್ರವರ್ಗವು ಬಲಿಷ್ಠವಾಗಿ ಬೆಳೆಯಿತು. ಇವೆಲ್ಲವೂ ಬೆಸೆದುಕೊಂಡು ಹಿಂದೂ ಸಂಸ್ಕೃತಿಯ ನಿರ್ಮಾಣವಾಯಿತು.
ಮುಸಲ್ಮಾನರು, ಕ್ರೈಸ್ತರನ್ನು ಆಕ್ರಮಣ
ಕಾರರು ಎನ್ನುವವರು ಭಾರತವನ್ನು ಆಳಿದ ಶಕರು, ಕುಷಾಣರನ್ನು ಏನೆನ್ನುತ್ತಾರೆ? ಶಕರು ಮೂಲತಃ ಈಗಿನ ಪೂರ್ವ ಇರಾನ್ ಮತ್ತು ದಕ್ಷಿಣ ಆಫ್ಘಾನಿಸ್ತಾನದ ವ್ಯಾಪ್ತಿಯ ಸಿಯೆಸ್ಟಾನ್ ಪ್ರಾಂತದವರು. ಭಾರತದ ಜೈನ ಆಚಾರ್ಯ ಕಲಕನು, ತನ್ನ ಸುಂದರ ಸನ್ಯಾಸಿ ತಂಗಿಯ ಶೀಲಭಂಗ ಮಾಡಿದ ಉಜ್ಜಯಿನಿ ದೊರೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ಶಕರನ್ನು ಕರೆತಂದನು. ಹೀಗೆ ಬಂದ ಶಕರು ಸೌರಾಷ್ಟ್ರ, ಗುಜರಾತ್‍ಗಳನ್ನು ಗೆದ್ದು ಆಡಳಿತ ನಡೆಸಿದರು. ಅವರಿಂದಲೇ ಶಕ ಸಂವತ್ಸರ ಎಂಬುದು ಬಳಕೆಗೆ ಬಂದಿತು. ವಿಕ್ರಮ ಸಂವತ್ಸರಕ್ಕಿಂತ ಹೆಚ್ಚು ಪವಿತ್ರವೆಂದು ಪರಿಗಣಿತವಾಗಿರುವ ಇದನ್ನು ಭಾರತೀಯ ಪಂಚಾಂಗ, ಜಾತಕಗಳಲ್ಲಿ ಬಳಸಲಾಗುತ್ತಿದೆ. ಭಾರತ ಸರ್ಕಾರವು ತನ್ನ ದಾಖಲೆಗಳಲ್ಲಿ ಬಳಸುತ್ತಾ ಅದಕ್ಕೆ ರಾಷ್ಟ್ರೀಯ ಮಾನ್ಯತೆ ನೀಡಿದೆ.
ಹೀಗೆ ಇಸ್ಲಾಂ ಮತ್ತು ಯುರೋಪಿಯನ್ ಸಂಸ್ಕೃತಿಗೆ ಮೊದಲೇ ಪ್ರೋಟೋ ಆಸ್ಟ್ರೋಲಾಯಿಡ್, ದ್ರಾವಿಡ, ಆರ್ಯನ್, ಪರ್ಷಿಯನ್, ಗ್ರೀಕ್ ಮೊದಲಾದ ಸಂಸ್ಕೃತಿಗಳು ಈ ನೆಲಕ್ಕೆ ದಾಳಿಯಿಟ್ಟಿ ದ್ದವು. ಇದರಿಂದಾಗಿ ಭಾರತೀಯ ಸಂಸ್ಕೃತಿಯು ಅನೇಕ ಜನಾಂಗಿಕ ಘಟಕಗಳ ಬೆಸುಗೆಯಾಯಿತು. ಪ್ರತಿಯೊಂದು ಸಾಂಸ್ಕೃತಿಕ ಸಂಪರ್ಕವೂ ಭಾರತವನ್ನು ಹೊಸ ಹೊಸ ಆಲೋಚನೆಗೆ ಹಚ್ಚಿತು. ಹೀಗಿರುವಾಗ, ನಾವು ಅಭಿಮಾನದಿಂದ ಹೇಳಿಕೊಳ್ಳುವ ಹಿಂದೂ ಸಂಸ್ಕೃತಿಯಲ್ಲಿ, ದಾಳಿಕೋರರನ್ನು ಹೊರದಬ್ಬಿ ಮೂಲನಿವಾಸಿಗಳನ್ನಷ್ಟೇ ಉಳಿಸಿಕೊಳ್ಳಬೇಕೆಂಬ ಆರ್‌ಎಸ್ಎಸ್ ವಾದವನ್ನು ಅನುಷ್ಠಾನಕ್ಕೆ ತರಲು ಹೊರಟಲ್ಲಿ, ನಮ್ಮಲ್ಲಿ ಬಹುಸಂಖ್ಯಾತರು ಈ ದೇಶವನ್ನು ಬಿಟ್ಟು ಹೊರನಡೆಯಬೇಕಾದೀತೇನೊ!
ಭಗವತ್‍ಶರಣ ಉಪಾಧ್ಯಾಯರು ಹೇಳುವಂತೆ, ‘ಉತ್ಪ್ರೇಕ್ಷಿತ ರಾಷ್ಟ್ರೀಯತೆಯೇ ಆಕ್ರಮಣಶೀಲ ಅಂಧಾಭಿಮಾನವಾಗಿ ಹಿಂಸಾಚಾರ, ಸಾರ್ವಜನಿಕ ಸುಳ್ಳುಗಳಿಗೆ ದಾರಿಯಾಗುತ್ತದೆ. ಹಾಗಾಗಿ ರಾಷ್ಟ್ರೀಯ ಅಂಧಾಭಿಮಾನದಿಂದ ಇತಿಹಾಸಕಾರರು ದೂರವಿರ ಬೇಕು’. ಆದುದರಿಂದ ಸಂಘ ಪರಿವಾರದವರು ಈಗ ಮುಸಲ್ಮಾನರ ಬಗ್ಗೆ ಉತ್ತರಪ್ರದೇಶದ ಚುನಾವಣೆಯ ಸಂದರ್ಭದಲ್ಲಿ ತಳೆದಿರುವ ಮೃದು ಧೋರಣೆಯನ್ನು ನಾವು ಬಹಳಷ್ಟು ಅನುಮಾನದಿಂದ ಅಪಾಯಕಾರಿ ಎಂದೇ ಎಚ್ಚರ ತಾಳಬೇಕಾಗಿದೆ.
ಲೇಖಕ: ರಾಜಕೀಯ ವಿಶ್ಲೇಷಕ, ಜೆಡಿಎಸ್ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.