ADVERTISEMENT

ಅಪಾಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ

​ಪ್ರಜಾವಾಣಿ ವಾರ್ತೆ
Published 31 ಜನವರಿ 2013, 19:59 IST
Last Updated 31 ಜನವರಿ 2013, 19:59 IST

ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಪೂರಕವಾದ ಅಭಿವ್ಯಕ್ತಿ ಸ್ವಾತಂತ್ರ್ಯ ಇಂದು ತೀವ್ರ ಅಪಾಯದಲ್ಲಿದೆ. ಕೆಲ ದಿನಗಳಿಂದ ನಡೆಯುತ್ತಿರುವ ಮೂರು ಘಟನೆಗಳನ್ನು ಅವಲೋಕಿಸಿದರೆ ಸಾರ್ವಜನಿಕರ ಮೂಲಭೂತ ಹಕ್ಕು ಹೇಗೆ ದಮನವಾಗುತ್ತಿದೆ ಎನ್ನುವ ಚಿತ್ರಣ ದೊರಕುತ್ತದೆ.

ನಟ, ನಿರ್ದೇಶಕ ಕಮಲಹಾಸನ್ ಅವರ `ವಿಶ್ವರೂಪಂ' ಚಲನಚಿತ್ರವನ್ನು ತಮಿಳುನಾಡು ಸರ್ಕಾರ ನಿಷೇಧಿಸಿದೆ.
ಅಲ್ಪಸಂಖ್ಯಾತ ಸಂಘಟನೆಯೊಂದು ಚಿತ್ರದಲ್ಲಿನ ಆಕ್ಷೇಪಾರ್ಹ ಎನ್ನಲಾದ ಅಂಶವೊಂದರ ಬಗ್ಗೆ ದೂರು ನೀಡಿದ್ದೇ ಕಾರಣವಾಗಿ ಚಿತ್ರ ಪ್ರದರ್ಶನವಾಗದಂತೆ ಸರ್ಕಾರ ತಡೆದಿದೆ. ಭದ್ರತೆಯ ಕಾರಣಗಳಿಂದ ವಿವಾದಾತ್ಮಕ ಲೇಖಕ ಸಲ್ಮಾನ್ ರಶ್ದಿ ಅವರ ಕೋಲ್ಕತ್ತ ಭೇಟಿ ರದ್ದಾಗಿದೆ. ಅವರಿಗೆ ಭದ್ರತೆ ನೀಡಲು ಪಶ್ಚಿಮ ಬಂಗಾಳ ಸರ್ಕಾರ ನಿರಾಕರಿಸಿದ್ದು ಒಂದು ರೀತಿಯಲ್ಲಿ ಪ್ರವಾಸವನ್ನು ಬಲವಂತವಾಗಿ ನಿಲ್ಲಿಸುವಂತೆ ಮಾಡಿದೆ. ಜೈಪುರದ ಸಾಹಿತ್ಯ ಸಮ್ಮೇಳನದಲ್ಲಿ ಚಿಂತಕ ಆಶಿಶ್ ನಂದಿ ಅವರು ಮಾಡಿದ ಭಾಷಣದ ವಿರುದ್ಧ ತೀವ್ರ ಆಕ್ಷೇಪಗಳು ವ್ಯಕ್ತವಾಗಿವೆ.

ಆಶಿಶ್ ಹೇಳಿಕೆಗೆ ಸಂಬಂಧಿಸಿದಂತೆ ಅವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಮೂರು ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಸಂವಿಧಾನದತ್ತ ಅಭಿವ್ಯಕ್ತಿ ಸ್ವಾತಂತ್ರ್ಯ ನಮ್ಮ ಪಾಲಿಗೆ ಇನ್ನೂ ಮರೀಚಿಕೆ ಎನ್ನುವುದನ್ನು ಈ ಮೂರು ಪ್ರಕರಣಗಳು ಮತ್ತೆ ನೆನಪಿಸುತ್ತಿವೆ.

ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಲು ಎಲ್ಲರಿಗೂ ಹಕ್ಕಿದೆ. ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುವಂತಹ ಪ್ರಸಂಗಗಳಿದ್ದರೂ ಆ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಲು, ಚರ್ಚಿಸಲು ಕ್ರಮಗಳಿವೆ. ಆದರೆ ಧರ್ಮದ ಹೆಸರಿನಲ್ಲಿ ಒಮ್ಮೆಲೇ ವಿವೇಚನಾರಹಿತವಾಗಿ ಬೀದಿಗೆ ಬಂದು ಪ್ರತಿಭಟಿಸುವುದು, ಚಿತ್ರಮಂದಿರಗಳ ಮೇಲೆ ದಾಳಿ ನಡೆಸಿ ಹಲ್ಲೆ ನಡೆಸುವುದು ಅನಾಗರಿಕ ಕೃತ್ಯವೆನಿಸುತ್ತದೆ.

ಸಾಂಸ್ಕೃತಿಕ ಮಾಧ್ಯಮವನ್ನು ಅನುಮಾನಿಸಿದಂತೆಯೂ ಅಗುತ್ತದೆ. ಸಂಧಾನದ ಮೂಲಕ ಬಗೆಹರಿಸಬಹುದಾಗಿದ್ದ ಸಮಸ್ಯೆಯನ್ನು ವೈಭವೀಕರಿಸಿ ಒಮ್ಮೆಲೇ `ವಿಶ್ವರೂಪಂ' ಚಿತ್ರವನ್ನು ನಿಷೇಧಿಸುವಂತಹ ಕ್ರಮಕ್ಕೆ ಮುಂದಾದ ತಮಿಳುನಾಡು ಸರ್ಕಾರದ ಕ್ರಮವೂ ಅವಸರದ್ದು.

ಈ ಘಟನೆಯನ್ನೇ ಮುಂದು ಮಾಡಿಕೊಂಡು `ವಿಶ್ವರೂಪಂ' ವಿಷಯದಲ್ಲಿ ರಾಜಕೀಯ ಶಕ್ತಿಗಳು ಹಸ್ತಕ್ಷೇಪ ಮಾಡಿರುವುದು ಸಾಂಸ್ಕೃತಿಕ ಕ್ಷೇತ್ರದ ಮೇಲೆ ನಡೆಯುತ್ತಿರುವ ದಾಳಿ. ಈ ಮೂರೂ ಘಟನೆಗಳಲ್ಲಿ ಆಯಾ ರಾಜ್ಯ ಸರ್ಕಾರಗಳು ಹಿತಾಹಿತಗಳನ್ನು ನೋಡದೆ, ಒಮ್ಮೆಲೇ ನಿಷೇಧದಂತಹ ಕ್ರಮಕ್ಕೆ, ಮೊಕದ್ದಮೆ ದಾಖಲೆಯಂತಹ ಕ್ರಮಕ್ಕೆ ಮುಂದಾಗಿರುವುದು ಅವಸರದ ಕ್ರಮ.

ಸಂವಿಧಾನದತ್ತ ಹಕ್ಕುಗಳನ್ನು ಸಂರಕ್ಷಿಸಬೇಕಾದ ಕೇಂದ್ರಸರ್ಕಾರವೂ ಈ ಎಲ್ಲ ಘಟನೆಗಳ ಬಗ್ಗೆ ಮೌನ ತಾಳಿರುವುದು ಜಾಣ ಕುರುಡು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಮಾಡುವ ಪ್ರವೃತ್ತಿ ವ್ಯವಸ್ಥಿತವಾಗಿ ಮೇಲಿಂದ ಮೇಲೆ ನಡೆಯುತ್ತಲೇ ಇದೆ. ಈ ಹಿಂದೆ ಸಲ್ಮಾನ್ ರಶ್ದಿ ಅವರ `ಸಟಾನಿಕ್ ವರ್ಸಸ್' ಕೃತಿ ನಿಷೇಧಿಸಲಾಗಿತ್ತು. ರಾಜಕೀಯ ಕಾರಣದಿಂದ ಅಮೀರ್‌ಖಾನ್ ನಿರ್ಮಿಸಿದ್ದ `ಫನಾ' ಚಿತ್ರವನ್ನು ಗುಜರಾತ್ ಸರ್ಕಾರ ನಿಷೇಧಿಸಿತ್ತು.

ಕ್ಯಾಥೋಲಿಕ್ ಸಮುದಾಯದವರು ಆಕ್ಷೇಪಿಸಿದ ಕಾರಣದಿಂದ `ಡಾವಿಂಚಿ ಕೋಡ್' ಆಂಗ್ಲ ಚಿತ್ರವನ್ನೂ ನಿಷೇಧಿಸಲಾಗಿತ್ತು. ವ್ಯಂಗ್ಯ ಚಿತ್ರಕಾರ ಅಸೀಂ ತ್ರಿವೇದಿಯವರ ಮೇಲೂ ರಾಷ್ಟ್ರದ್ರೋಹದ ಮೊಕದ್ದಮೆಯನ್ನೇ ಹೂಡಲಾಗಿತ್ತು. ಸಂವಿಧಾನದತ್ತವಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ನಿರ್ಬಂಧಗೊಳಿಸುವ ಇಂತಹ ಬೆಳವಣಿಗೆಗಳು ಆತಂಕಕಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.