ದಲಿತ ಮಹಿಳೆ ಅಡುಗೆ ತಯಾರಿಸುತ್ತಾರೆಂಬ ಕಾರಣಕ್ಕಾಗಿ ಮೈಸೂರು ತಾಲ್ಲೂಕಿನ ಕುಪ್ಪೇಗಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಸವರ್ಣೀಯ ಮಕ್ಕಳು ಬಿಸಿಯೂಟ ತಿನ್ನಲು ನಿರಾಕರಿಸಿರುವುದು ವರದಿಯಾಗಿದೆ. ಕಾಕತಾಳೀಯ ಸಂಗತಿ ಎಂದರೆ ಇದೇ ಶಾಲೆಯಲ್ಲಿ ಓದಿದ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಜಾತಿ ಪ್ರಜ್ಞೆಯನ್ನು ಎಳೆಯ ಮನಸ್ಸುಗಳಲ್ಲಿ ಬಿತ್ತುವಂತಹ ಇಂತಹ ವಿವಾದಗಳು ವಿಷಾದನೀಯ. ಜಾತಿ–ಮತ ಭೇದಭಾವಗಳಿಲ್ಲದ ಸಾಮರಸ್ಯದ ವಾತಾವರಣದಲ್ಲಿ ಮಕ್ಕಳು ಕಲಿಯಬೇಕಾದುದು ಶಿಕ್ಷಣದ ಗುರಿ ಹಾಗೂ ಆದರ್ಶ.
ಹಿರಿಯರ ಜಾತಿ ಪೂರ್ವಗ್ರಹಗಳು ಶಾಲೆಯೊಳಗೆ ನುಸುಳಲು ಅವಕಾಶ ನೀಡಬಾರದು. ಆದರೆ ಊಟದಂತಹ ವಿಚಾರವನ್ನು ಕಡ್ಡಾಯಗೊಳಿಸುವುದು ಕಾನೂನಿನಿಂದ ಸಾಧ್ಯವಿಲ್ಲ ಎಂಬುದನ್ನು ಸಮಾಜಕಲ್ಯಾಣ ಸಚಿವ ಎಚ್. ಆಂಜನೇಯ ಅವರು ಹೇಳಿರುವುದು ಸರಿಯಾಗಿಯೇ ಇದೆ. ಹೀಗಿದ್ದೂ ಅಸ್ಪೃಶ್ಯತೆ ಆಚರಣೆ, ಕಾನೂನಿಗೆ ವಿರುದ್ಧ ಎಂಬುದನ್ನು ಮಕ್ಕಳ ತಂದೆತಾಯಿಗಳಿಗೆ ಮನಗಾಣಿಸುವುದು ಅವಶ್ಯ. ಸಂವಿಧಾನದ 17ನೇ ವಿಧಿ ಅಸ್ಪೃಶ್ಯತೆಯನ್ನು ನಿಷೇಧಿಸುತ್ತದೆ. 1955ರ ಅಸ್ಪೃಶ್ಯತೆ (ಅಪರಾಧಗಳು) ಕಾಯಿದೆಯು 1976ರಲ್ಲಿ ನಾಗರಿಕ ಹಕ್ಕುಗಳ ರಕ್ಷಣೆ ಕಾಯಿದೆ ಎಂದು ಪುನರ್ ನಾಮಕರಣಗೊಂಡು ಚಾಲ್ತಿಯಲ್ಲಿದೆ. ಹೀಗಿದ್ದೂ ಸಮಾಜದ ಮನೋಭಾವಗಳಲ್ಲಿ ಬದಲಾವಣೆಗಳಾಗಿಲ್ಲ ಎಂಬುದಕ್ಕೆ ಪ್ರಸಕ್ತ ವಿದ್ಯಮಾನ ದೊಡ್ಡ ಉದಾಹರಣೆ.
ಆನ್ವಯಿಕ ಆರ್ಥಿಕ ಸಂಶೋಧನೆ ರಾಷ್ಟ್ರೀಯ ಮಂಡಳಿ (ಎನ್‌ಸಿಎ ಇಆರ್) ಹಾಗೂ ಅಮೆರಿಕದ ಮೇರಿಲ್ಯಾಂಡ್ ವಿಶ್ವವಿದ್ಯಾಲಯ ಇತ್ತೀಚೆಗೆ ಭಾರತದ 42,000 ಮನೆಗಳಲ್ಲಿ ನಡೆಸಿರುವ ಸಮೀಕ್ಷೆ ಹೊರಹಾಕಿರುವ ಅಂಶಗಳು ಆಘಾತಕಾರಿಯಾಗಿವೆ. ಅಸ್ಪೃಶ್ಯತೆ ಆಚರಣೆಯನ್ನು ಸಂವಿಧಾನ ನಿಷೇಧಿಸಿ 64 ವರ್ಷಗಳು ಕಳೆದಿದ್ದರೂ ನಾಲ್ವರು ಭಾರತೀಯರಲ್ಲಿ ಒಬ್ಬರು ಈಗಲೂ ಅಸ್ಪೃಶ್ಯತೆ ಆಚರಿಸುತ್ತಿದ್ದಾರೆ ಎಂದು ಈ ಸಮೀಕ್ಷೆ ಹೇಳಿದೆ. ಇಂತಹ ಅಸ್ಪೃಶ್ಯತೆ ಆಚರಿಸುವವರಲ್ಲಿ ಕ್ರೈಸ್ತರು, ಮುಸ್ಲಿಮರು, ಬ್ರಾಹ್ಮಣರು, ಬ್ರಾಹ್ಮಣೇತರರು, ಹಿಂದುಳಿದ ಜಾತಿಗಳವರು ಹಾಗೂ ಸ್ವತಃ ಪರಿಶಿಷ್ಟ ಜಾತಿ, ವರ್ಗಗಳವರು ಸೇರಿದಂತೆ ಎಲ್ಲಾ ಧರ್ಮ, ಜಾತಿಗಳಿಗೆ ಸೇರಿದವರೂ ಇದ್ದಾರೆ.
ಸಮಾನತೆ ಹಾಗೂ ಸಮಾನ ಅವಕಾಶಗಳು ಮೂಲಭೂತ ಹಕ್ಕಾಗಿರುವ ರಾಷ್ಟ್ರದಲ್ಲಿ ಇಂತಹದೊಂದು ಸ್ಥಿತಿ ಇನ್ನೂ ಜೀವಂತವಾಗಿರುವುದು ವಿಪರ್ಯಾಸ. ಆಧುನಿಕ ಪ್ರಜಾಪ್ರಭುತ್ವ ರಾಷ್ಟ್ರ ಎನಿಸಿಕೊಳ್ಳುವ ಭಾರತದಲ್ಲಿ ಈಗಲೂ ಅಂತರ್ಜಾತಿ ವಿವಾಹಗಳಿಗೆ ಮುಂದಾಗುತ್ತಿರುವವರ ಪ್ರಮಾಣ ಶೇ 5ರಷ್ಟು ಮಾತ್ರ. ಹಾಗೆಯೇ, ಸ್ವಾತಂತ್ರ್ಯೋತ್ತರ ಭಾರತದ ರಾಜಕಾರಣದಲ್ಲಿ ಜಾತಿ ಅಸ್ಮಿತೆಗಳೇ ಪ್ರಧಾನ ಪಾತ್ರ ವಹಿಸುತ್ತಾ ಬಂದಿವೆ.
ಚುನಾವಣಾ ಉದ್ದೇಶದ ಜಾತಿ ರಾಜಕಾರಣದ ಒತ್ತಡಗಳಲ್ಲಿ ಸಾಮಾಜಿಕ ನ್ಯಾಯದ ರಾಜಕಾರಣ ದುರ್ಬಲವಾಗಿರುವುದು ಸೂರ್ಯಸ್ಪಷ್ಟ. ಸಾಮಾಜಿಕವಾಗಿ ತಾರತಮ್ಯದ ಆಚರಣೆಗಳು ಅಸ್ತಿತ್ವದಲ್ಲಿರುವವರೆಗೆ ನಾಗರಿಕ ಸಮಾಜ ಎಂಬ ಪರಿಕಲ್ಪನೆಗೆ ಅರ್ಥವಿರುವುದಿಲ್ಲ. ಇಂತಹ ಆಚರಣೆಗಳನ್ನು ಪ್ರಗತಿಪರ ಕಾನೂನುಗಳಿಂದ ಮಾತ್ರವೇ ಅಂತ್ಯಗೊಳಿಸುವುದು ಸಾಧ್ಯವಿಲ್ಲ. ಮನೋಧರ್ಮಗಳು ಬದಲಾಗಬೇಕು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ಸಾಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.