ರೈತರು ಎದುರಿಸುತ್ತಿರುವ ಸಂಕಷ್ಟ ಮತ್ತು ಸಾಲಬಾಧೆ ಗುರುವಾರ ಇನ್ನಿಬ್ಬರು ರೈತರನ್ನು ಬಲಿ ತೆಗೆದುಕೊಂಡಿದೆ. ಆರು ಎಕರೆ ಜಮೀನಿನ ಮಾಲೀಕ, ಜೇವರ್ಗಿ ತಾಲ್ಲೂಕು ನೆಲೋಗಿಯ ರತನ್‌ಚಂದ್ ವಿಷ ಸೇವಿಸಿ ಸಾವನ್ನಪ್ಪಿದ್ದಾರೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕು ಗಾಣದ ಹೊಸೂರಿನ ನಿಂಗೇಗೌಡ ಎಂಬುವವರು ಕಬ್ಬು ಬೆಳೆಗೆ ಕೈಯಾರೆ ಬೆಂಕಿ ಹಚ್ಚಿ ತಾವೂ ಅದರಲ್ಲಿ ಹಾರಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮನೆಮಂದಿಯೆಲ್ಲ ಪರಿಶ್ರಮ ಪಟ್ಟು ಬೆಳೆದ ಬೆಳೆಗೆ ಬೆಂಕಿ ಹಚ್ಚಬೇಕು ಎಂದರೆ ಆ ರೈತ ಎಷ್ಟೊಂದು ಅಸಹಾಯಕ ಸ್ಥಿತಿಯಲ್ಲಿದ್ದರು ಎನ್ನುವುದನ್ನು ಊಹಿಸಬಹುದು. ಕಾಕತಾಳೀಯ ಎಂದರೆ ಅತ್ತ ಉತ್ತರ ಕರ್ನಾಟಕದಲ್ಲಿ 11 ಸಕ್ಕರೆ ಕಾರ್ಖಾನೆಗಳ ಸಕ್ಕರೆ ಜಪ್ತಿಯ ಬೆನ್ನಲ್ಲೇ ಈ ದುರಂತಗಳು ನಡೆದಿವೆ.
ಇವರ ಆತ್ಮಹತ್ಯೆಗೆ ಒಂದು ದಿನ ಮೊದಲು ಅಂದರೆ ಬುಧವಾರ ಮುಖ್ಯಮಂತ್ರಿಗಳು ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ಸಭೆ ನಡೆಸಿದ್ದರು. ಹಳೆಯ ಬಾಕಿ ₨ 925 ಕೋಟಿ ತಕ್ಷಣ ಪಾವತಿಸಲು ಸೂಚಿಸಿದ್ದರು. ಇದು ಸಾಧ್ಯವೇ ಇಲ್ಲ ಎಂಬ ಮಾಲೀಕರ ಪ್ರತ್ಯುತ್ತರದಿಂದ ಕೆರಳಿ ಸಕ್ಕರೆ ದಾಸ್ತಾನು ಜಪ್ತಿಗೆ ಆದೇಶಿಸಿದ್ದರು. ಅಂದರೆ ಸರ್ಕಾರ ಕೈಗೊಳ್ಳುತ್ತಿರುವ ನಿರ್ದಾಕ್ಷಿಣ್ಯ ಕ್ರಮಗಳು ಕೂಡ ರೈತರಲ್ಲಿ ಭರವಸೆ ಮೂಡಿಸಲು ವಿಫಲವಾಗುತ್ತಿವೆ.
ಅಧಿವೇಶನ ಹತ್ತಿರ ಬರುವಾಗ ಮಾತ್ರ ಸರ್ಕಾರ ಎಚ್ಚೆತ್ತುಕೊಳ್ಳುತ್ತದೆ ಎಂಬ ಅನುಮಾನ ರೈತರಲ್ಲಿ ಮಾತ್ರವಲ್ಲ ಸಾರ್ವಜನಿಕರಲ್ಲೂ ಮೂಡುತ್ತಿದೆ. ಕಳೆದ ಸಲ ಬೆಳಗಾವಿಯಲ್ಲಿ ಅಧಿವೇಶನದ ಹೊತ್ತಿನಲ್ಲಿಯೇ ಅಲ್ಲಿನ ವಿಧಾನಸೌಧ ಕಟ್ಟಡದ ಮುಂದೆ ಕಬ್ಬು ಬೆಳೆಗಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಲವೂ ಅಧಿವೇಶನ ಆರಂಭಕ್ಕೆ ಬರೀ ನಾಲ್ಕು ದಿನ ಮೊದಲು ಈ ಆತ್ಮಹತ್ಯೆಗಳು ನಡೆದಿವೆ. ನಾಡಿಗೆ ಅನ್ನ ಹಾಕುವ ಜೀವಗಳು ಮುರುಟಿ ಹೋಗುವಂತಹ ಸ್ಥಿತಿ ವಿಷಾದನೀಯ.
ಸಾಲದ ಹೊರೆ, ಸರಿಯಾದ ಬೆಲೆ ಸಿಗದೇ ಇರುವುದು, ಬೆಳೆ ಮಾರಾಟ ಮಾಡಿದ ನಂತರವೂ ಸಕಾಲಕ್ಕೆ ಹಣ ಕೈಗೆ ದಕ್ಕದೇ ಇರುವುದು ಇತ್ಯಾದಿ ಸಮಸ್ಯೆಗಳು ಇಡೀ ರೈತ ಸಮುದಾಯವನ್ನೇ ಬಾಧಿಸುತ್ತಿವೆ. ಜೀವನೋಪಾಯಕ್ಕೆ ಮಳೆ ಆಧಾರಿತ ಕೃಷಿಯೊಂದನ್ನೇ ಅವಲಂಬಿಸಿರುವ ಕುಟುಂಬಗಳ ಸಂಕಷ್ಟಗಳಿಗಂತೂ ಕೊನೆಯೇ ಇಲ್ಲ. ನಿತ್ಯದ ಬದುಕು ನಡೆಸಬೇಕು, ಹಳೆ ಸಾಲ ತೀರಿಸಬೇಕು, ಹೊಸ ಹಂಗಾಮಿನಲ್ಲಿ ಮತ್ತೆ ಬಂಡವಾಳ ಹಾಕಿ ಬೆಳೆ ತೆಗೆಯಬೇಕು. ಇಷ್ಟೆಲ್ಲ ಆದ ನಂತರವೂ ಬೆಳೆ ಕೈಗೆ ಬರುತ್ತದೆ, ಒಂದಿಷ್ಟು ಪ್ರತಿಫಲ ಸಿಗುತ್ತದೆ ಎಂಬ ಖಾತರಿಯಾದರೂ ಇದೆಯೇ? ಅದೂ ಇಲ್ಲ. ಲಾಭದಾಯಕ ಬೆಲೆ, ಒಳ್ಳೆಯ ಮಾರುಕಟ್ಟೆ ವ್ಯವಸ್ಥೆ ನಿರ್ಮಾಣ ಆಗುವ ವರೆಗೂ ರೈತರ ಸಮಸ್ಯೆಗಳಿಗೆ ಪರಿಹಾರವೇ ಇಲ್ಲ.
ಇದರ ಜತೆಗೆ ರೈತರು ಕೂಡ ಯಾವ ಬೆಳೆ ಇಡಬೇಕು, ಅದಕ್ಕೆ ಬೇಡಿಕೆ ಇದೆಯೇ ಎಂಬ ಬಗ್ಗೆ ಹೆಚ್ಚು ಆಲೋಚನೆ ಮಾಡಬೇಕು. ನಮ್ಮ ರಾಜ್ಯದ ಉದಾಹರಣೆಯನ್ನೇ ತೆಗೆದುಕೊಂಡರೆ ಈ ಸಲ ನಮ್ಮಲ್ಲಿ ಬೇಡಿಕೆಗಿಂತ ಹೆಚ್ಚು ಮೆಕ್ಕೆಜೋಳ ಬೆಳೆಯಲಾಗಿದೆ. ಅದರಲ್ಲಿ ಒಂದಿಷ್ಟನ್ನು ಸರ್ಕಾರ ಖರೀದಿಸಿದ್ದರೂ ವಿಲೇವಾರಿ ಮಾಡುವುದು ಹೇಗೆ ಎಂಬ ಸಮಸ್ಯೆ ಎದುರಾಗಿದೆ. ಕಬ್ಬಿನ ಬೆಳೆಯದೂ ಇದೇ ಸ್ಥಿತಿ. ಆದ್ದರಿಂದ ಒಂದೇ ಬೆಳೆಯನ್ನೇ ನೆಚ್ಚಿಕೊಳ್ಳುವ ಬದಲು ಮಿಶ್ರ ಬೆಳೆಗಳನ್ನು ಬೆಳೆಯಬೇಕು. ಕೃಷಿ ವೆಚ್ಚಗಳನ್ನು ಕಡಿಮೆ ಮಾಡುವ ವಿವಿಧ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ನಮ್ಮ ಹಿರಿಯರು ಅದನ್ನೇ ಅನುಸರಿಸಿಕೊಂಡು ಬಂದಿದ್ದರು. ಆದರೆ ಅದನ್ನು ನಾವು ಮರೆತು ಕಷ್ಟಗಳನ್ನು ಆಹ್ವಾನಿಸಿಕೊಳ್ಳುತ್ತಿದ್ದೇವೆ. ಸರ್ಕಾರಗಳು ಕೂಡ ಬಾಯುಪಚಾರದ ಸಾಂತ್ವನ ಬಿಟ್ಟು ನಿರ್ದಿಷ್ಟ ಕ್ರಮಗಳಿಗೆ ಮುಂದಾಗಬೇಕು. ಆದರೂ ರೈತರು ಒಂದು ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಅದೇನೆಂದರೆ ‘ಆತ್ಮಹತ್ಯೆಯೇ ಎಲ್ಲದಕ್ಕೂ ಪರಿಹಾರ ಅಲ್ಲ’.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.