ಮಠಗಳಿಗೆ ಲಗಾಮು ಹಾಕುವ ‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಮಸೂದೆ’ ವಾಪಸ್ ಪಡೆಯಬೇಕು ಎಂದು ರಾಜ್ಯ ಸಚಿವ ಸಂಪುಟ ಅಭಿಪ್ರಾಯಪಟ್ಟಿದೆ. ಸಂಪುಟ ಸಭೆಯಲ್ಲಿ ಈ ಬಗ್ಗೆ ನಡೆದಿದೆ ಎನ್ನಲಾದ ಚರ್ಚೆಯ ಧಾಟಿ, ಕೇಳಿಬಂದ ವಿರೋಧವನ್ನು ಗಮನಿಸಿದರೆ ‘ಇಂಥದೊಂದು ಮಸೂದೆ ಮಂಡನೆಯಾಗುತ್ತದೆ ಎಂಬುದು ಬಹುಪಾಲು ಸಚಿವರಿಗೇ ಗೊತ್ತಿರಲಿಲ್ಲ’.
ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ‘ಇದೊಂದು ತಪ್ಪು ನಿರ್ಧಾರ. ಈ ವಿವಾದ ಏಕೆ ಬೇಕಿತ್ತು’ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರನ್ನು ಪ್ರಶ್ನಿಸಿದರು ಎಂದು ವರದಿಯಾಗಿದೆ. ಇದು ನಿಜವೇ ಆಗಿದ್ದರೆ ಸಂಪುಟ ಮತ್ತು ಅದರ ಸಾಮೂಹಿಕ ಹೊಣೆಗಾರಿಕೆಯ ತತ್ವಕ್ಕೆ ತಿಲಾಂಜಲಿ ಕೊಟ್ಟು ಬೆಳಗಾವಿ ವಿಧಾನಮಂಡಲ ಅಧಿವೇಶನದ ಕೊನೆಯ ದಿನ ಆತುರಾತುರವಾಗಿ ಈ ಮಸೂದೆ ಮಂಡಿಸಲಾಯಿತು ಎನ್ನುವುದು ಸಾಬೀತಾಗುತ್ತದೆ.
ಇದು ದೊಡ್ಡ ಲೋಪ ಹಾಗೂ ಹೊಣೆಗೇಡಿತನ. ಮುಂದಾಲೋಚನೆಯ ಕೊರತೆ ಮತ್ತು ಆತುರ ಎದ್ದು ಕಾಣುತ್ತದೆ. ಈ ಮಸೂದೆ ಮೂಲಕ ಸರ್ಕಾರ ವಿನಾಕಾರಣ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಂತಾಯಿತಷ್ಟೆ. ಬಿಜೆಪಿ ಮಾತ್ರವಲ್ಲದೆ ನಾಡಿನ ಮಠಾಧೀಶರು, ಮಠದ ಅಭಿಮಾನಿಗಳಿಗೆಲ್ಲ ತನ್ನನ್ನು ಹಣಿಯುವ ಅಸ್ತ್ರವೊಂದನ್ನು ಸರ್ಕಾರವೇ ಕೊಟ್ಟಿತ್ತು. ಕಾನೂನು ಸಚಿವರೇನೋ, ‘ಇದರಲ್ಲಿ ಯಾವುದೇ ದುರುದ್ದೇಶ ಇರಲಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಆಗಬಹುದಾದ ಮುಜುಗರ ತಪ್ಪಿಸಿಕೊಳ್ಳಬೇಕಾಗಿತ್ತು.
ಇದರ ಪೂರ್ಣ ಹೊಣೆ ಹೊರುತ್ತೇನೆ’ ಎಂದು ಹೇಳಿದ್ದಾರೆ. ಆದರೆ ಕೋರ್ಟ್‌ನಲ್ಲಿ ಆಗುವುದಕ್ಕಿಂತ ದೊಡ್ಡ ಮುಜುಗರ ಇಲ್ಲಿ ಇಡೀ ಸರ್ಕಾರಕ್ಕೆ ಆಗಿದೆ. ಮಸೂದೆ ಅನಿವಾರ್ಯವೇ ಆಗಿದ್ದರೆ ಸಾರ್ವಜನಿಕರ ಗಮನಕ್ಕೆ ತರಬೇಕಿತ್ತು. ಜನವರಿ 13ರಂದು ವಿಷಯ ಸುಪ್ರೀಂಕೋರ್ಟ್ ಮುಂದೆ ಬರುತ್ತದೆ ಎನ್ನುವುದು ಮೊದಲೇ ಗೊತ್ತಿತ್ತು. ಪೂರ್ವ ತಯಾರಿ ಮಾಡಬಹುದಿತ್ತು.
ಇದು ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ– ಜೆಡಿಎಸ್ ಸಮ್ಮಿಶ್ರ ಸರ್ಕಾರದ ಕೂಸು ಎನ್ನುವುದನ್ನು ಮನವರಿಕೆ ಮಾಡಿಕೊಡುವ ಅವಕಾಶ ಇತ್ತು. ಅವೆಲ್ಲ ಬಿಟ್ಟು ಏನೋ ಮಾಡಲು ಹೋಗಿ ಕೈಸುಟ್ಟುಕೊಂಡಿದೆ. ಸಿದ್ದರಾಮಯ್ಯನವರ ಸರ್ಕಾರಕ್ಕೆ ಇದು ಹೊಸತೇನಲ್ಲ. ಮೌಢ್ಯ ನಿಷೇಧ ಮಸೂದೆ ತರುವುದಾಗಿ ಹೇಳಿ ದಾಗಲೂ ಇದೇ ಬಗೆಯಲ್ಲಿ ವಿವಾದ ಸೃಷ್ಟಿಗೆ ಅವಕಾಶ ನೀಡಿತ್ತು. ಹಾಗೆಯೇ ಭಾರೀ ವಿರೋಧಕ್ಕೆ ಕಾರಣವಾದ ಲೋಕಾಯುಕ್ತ ಕಾಯ್ದೆ ತಿದ್ದುಪಡಿಯನ್ನು ಸರ್ಕಾರ ಕೈಬಿಟ್ಟಿತ್ತು. ಜೊತೆಗೆ ಸಿಇಟಿ ತಿದ್ದುಪಡಿ ಕಾಯ್ದೆ ನನೆಗುದಿಗೆ ಸಿಲುಕಿದೆ.
ಹಿಂದೆಲ್ಲ ಮಸೂದೆಯೊಂದನ್ನು ಮಂಡಿಸುವ ಮುನ್ನ ಪಕ್ಷದ ಶಾಸಕಾಂಗ ಸಭೆಯಲ್ಲಿ ಮತ್ತು ಸಂಪುಟದಲ್ಲಿ ಚರ್ಚಿಸುವ ಪರಿಪಾಠ ಇತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಇದು ಮಾಯವಾಗುತ್ತಿದೆ. ಸಾಧಕ ಬಾಧಕ ಊಹಿಸದೆ ಮಸೂದೆ ಮಂಡಿಸುವುದು, ಶಾಸನ ಸಭೆಗಳಲ್ಲೂ ಚರ್ಚೆಯಿಲ್ಲದೆ ಅಂಗೀಕರಿಸುವುದು ಒಳ್ಳೆಯ ಬೆಳವಣಿಗೆಯಲ್ಲ.
ಶಾಸನಸಭೆಗಳಲ್ಲಿ ಆಗಬೇಕಾದ ಚರ್ಚೆಗಳ ಮಹತ್ವವನ್ನು ಇನ್ನಾದರೂ ಅರಿಯಬೇಕು. ನೈತಿಕವಾಗಿ ಮಾತ್ರವಲ್ಲ, ರಾಜಕೀಯವಾಗಿಯೂ ಇದು ಅನಾಹುತಕಾರಿ. ಇದನ್ನೆಲ್ಲ ನೋಡಿದರೆ ಸೂಕ್ಷ್ಮವಾದ, ಜನರನ್ನು ಬೇಗ ಕೆರಳಿಸಬಹುದಾದ ಧಾರ್ಮಿಕ ಮತ್ತು ಭಾವನಾತ್ಮಕ ವಿಷಯಗಳನ್ನು ನಿರ್ವಹಿಸುವಾಗ ಮೈಯೆಲ್ಲ ಕಣ್ಣಾಗಿದ್ದರೂ ಸಾಲದು ಎನ್ನುವ ಪಾಠವನ್ನು ಈ ಸರ್ಕಾರ ಕಲಿಯಬೇಕಿದೆ, ಆಡಳಿತದಲ್ಲಿ ಸಾಕಷ್ಟು ಪಳಗಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.