ADVERTISEMENT

ಎಚ್ಚರಿಕೆಯ ನಡೆ

​ಪ್ರಜಾವಾಣಿ ವಾರ್ತೆ
Published 19 ಮೇ 2013, 19:59 IST
Last Updated 19 ಮೇ 2013, 19:59 IST

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ನಿರೀಕ್ಷೆಯಂತೆಯೇ ವಿಸ್ತರಣೆಯಾಗಿದೆ. ಖಾತೆಗಳ ಹಂಚಿಕೆಯೂ ಆಗಿದೆ. ವಿಧಾನಸಭಾ ಚುನಾವಣೆಯಲ್ಲಿ ಮೂರು-ನಾಲ್ಕು ಸಲ ಗೆಲುವು ಕಂಡವರ ಸಂಖ್ಯೆ ಕಾಂಗ್ರೆಸ್‌ನಲ್ಲಿ ಹೆಚ್ಚಿಗಿರುವುದರಿಂದ ಸಚಿವ ಸ್ಥಾನಕ್ಕಾಗಿ ವಿಪರೀತ ಪೈಪೋಟಿ ಇತ್ತು. ಅಳೆದು ತೂಗಿ 28 ಮಂದಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.

ಇದರಿಂದ ಮುಖ್ಯಮಂತ್ರಿ ಸೇರಿ ಸಂಪುಟದ ಬಲ 29ಕ್ಕೆ ಏರಿದೆ. ವಾಸ್ತವವಾಗಿ ಸಂಪುಟದಲ್ಲಿ 34 ಮಂದಿಗೆ ಸ್ಥಾನ ಕಲ್ಪಿಸಲು ಅವಕಾಶ ಇದೆ. ಹೀಗಿದ್ದೂ ಐದು ಸ್ಥಾನಗಳನ್ನು ಖಾಲಿ ಉಳಿಸಿರುವುದು ಅರ್ಥವಾಗದ ನಡೆ.

ಮುಖ್ಯಮಂತ್ರಿಯೊಬ್ಬರ ಬಳಿಯೇ 11 ಪ್ರಮುಖ ಖಾತೆಗಳು ಕೇಂದ್ರೀಕೃತಗೊಂಡಿರುವುದೂ ಆಡಳಿತದ ದೃಷ್ಟಿಯಿಂದ ಸಮರ್ಪಕವಲ್ಲ. ಎಷ್ಟೇ ದಕ್ಷತೆ ಇದ್ದರೂ ವ್ಯಕ್ತಿಯ ಸಾಮರ್ಥ್ಯಕ್ಕೆ ಮಿತಿ ಎಂಬುದು ಇದ್ದೇ ಇರುತ್ತದೆ. ಹೀಗಾಗಿ  ಸುಗಮ ಆಡಳಿತ ದೃಷ್ಟಿಯಿಂದ ಖಾತೆಗಳನ್ನು ಹಂಚಿ ಮಂತ್ರಿಗಳಿಂದ ಕೆಲಸ ತೆಗೆಯುವುದು ಮುಖ್ಯ.

ತಿಂಗಳುಗಟ್ಟಲೆ, ವರ್ಷಗಟ್ಟಲೆ  ಪ್ರಮುಖ ಖಾತೆಗಳನ್ನು ಹಂಚದೆ ತಮ್ಮ ಬಳಿಯೇ ಇಟ್ಟುಕೊಳ್ಳುವಂತಹ ಕಾರ್ಯತಂತ್ರ ಒಳ್ಳೆಯ ಸಂದೇಶ ನೀಡುವುದಿಲ್ಲ. ಖಾಲಿ ಉಳಿದಿರುವ ಐದು ಸ್ಥಾನಗಳನ್ನು ಶೀಘ್ರ ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು. ಆ ಮೂಲಕ ಜನ ಹಿತ ಕಾಪಾಡುವುದು ನೂತನ ಸರ್ಕಾರದ  ಆದ್ಯತೆಯಾಗಬೇಕು.

ಸಚಿವ ಸ್ಥಾನ ಸಿಗದವರಲ್ಲಿ ಅತೃಪ್ತಿ ಕುಡಿಯೊಡೆದಿರುವುದು ಸಹಜ ಬೆಳವಣಿಗೆ. ಮುಖ್ಯಮಂತ್ರಿ ಸ್ಥಾನಕ್ಕೆ ತಾವೂ ಸ್ಪರ್ಧೆಯಲ್ಲಿ ಇದ್ದೇವೆ ಎಂದು ಬಹಿರಂಗವಾಗಿ ಘೋಷಿಸಿಕೊಂಡಿದ್ದವರು ಹಾಗೂ ಸತತ ಗೆಲುವು ಕಂಡಿರುವ ಹಿರಿಯ ಶಾಸಕರಿಗೂ ಅವಕಾಶ ದೊರೆತಿಲ್ಲ. ಆದಕಾರಣ ಈ ಅಸಮಾಧಾನ ಇಷ್ಟಕ್ಕೇ ನಿಲ್ಲುವ ಸಾಧ್ಯತೆ ಕಡಿಮೆ. ಹಾಗೆಯೇ ಹತ್ತು ಜಿಲ್ಲೆಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬಂತಹ ಕೊರಗೂ ವ್ಯಕ್ತವಾಗಿದೆ.

ವಾಸ್ತವವಾಗಿ ಸಚಿವ ಪಟ್ಟ ಎಂಬುದು ಇಡೀ ರಾಜ್ಯವನ್ನೇ ಪ್ರತಿನಿಧಿಸುವಂತಹದ್ದು. ಹೀಗಾಗಿ ಖಾತೆಗಳ ನಿರ್ವಹಣೆಯಲ್ಲಿ ಇಡೀ ರಾಜ್ಯದ ದೃಷ್ಟಿಯನ್ನು ಪ್ರತಿಫಲಿಸುವಂತಹ ದಕ್ಷತೆಯನ್ನು ಸಚಿವರು  ತೋರ್ಪಡಿಸುವುದು ಅಗತ್ಯ. ಎಲ್ಲಾ ಜಿಲ್ಲೆಗಳನ್ನು ಸರಿಸಮಾನವಾಗಿ ಪರಿಗಣಿಸುವಂತಹ ಪ್ರಬುದ್ಧತೆಯನ್ನು ಸಚಿವರು ತೋರಿದಾಗ ಜಿಲ್ಲಾವಾರು ಪ್ರಾತಿನಿಧ್ಯ ಎಂಬ ಮಾನದಂಡ ಅಪ್ರಸ್ತುತವಾಗುತ್ತದೆ. ಸಂಪುಟದಲ್ಲಿ  ಏಕೈಕ ಮಹಿಳೆಗಷ್ಟೇ ಸ್ಥಾನ ಸಿಕ್ಕಿದೆ. ರಾಜ್ಯ ಸಚಿವರಿಗೆ ಮಹತ್ವದ ಖಾತೆಗಳನ್ನು ಕೊಟ್ಟು ಪ್ರಯೋಗ ಮಾಡಿರುವುದು ಮೆಚ್ಚಬಹುದಾದ ನಡೆ.

ಹಾಗೆಯೇ ಗಂಭೀರ ಪ್ರಕರಣಗಳಲ್ಲಿ ಸಿಲುಕಿದ ಕಳಂಕಿತರನ್ನು ಸಂಪುಟದಿಂದ ದೂರ ಇಡುವ ತೀರ್ಮಾನ ಮೆಚ್ಚುವಂತಹದು. ಇಂತಹ ದೃಢ ನಿಲುವನ್ನು ಯಾವುದೇ ಪಕ್ಷ ತಳೆದರೂ ಅದೊಂದು ಆಶಾದಾಯಕ ಬೆಳವಣಿಗೆ. ಯುಪಿಎ ನೇತೃತ್ವದ ಕೇಂದ್ರ ಸರ್ಕಾರ ಹಗರಣಗಳಿಂದ  ಮುಜುಗರಕ್ಕೆ ಒಳಗಾಗುತ್ತಲೇ ಇದೆ.

ರಾಜ್ಯದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಲು ಇದೂ ಕಾರಣವಿರಬಹುದು. ಅನುಭವಿಗಳ ಜತೆ ಹೊಸ ಮುಖಗಳಿಗೂ ಸಂಪುಟದಲ್ಲಿ ಸ್ಥಾನ ದೊರೆತಿದೆ. ಆದರೆ, ಹಿಂದುಳಿದ ವರ್ಗಕ್ಕೆ ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾದ ಪ್ರಾತಿನಿಧ್ಯ ಕಾಣುತ್ತಿಲ್ಲ.

ಮುಂದಿನ ವರ್ಷ ಲೋಕಸಭಾ ಚುನಾವಣೆ ಎದುರಾಗಲಿದೆ. ಸಣ್ಣ ಎಡವಟ್ಟು ಕೂಡ ದೊಡ್ಡ ಪರಿಣಾಮಕ್ಕೆ ದಾರಿ ತೆಗೆಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.