ADVERTISEMENT

ಎಚ್ಚರಿಕೆ ಗಂಟೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2013, 19:59 IST
Last Updated 28 ಮಾರ್ಚ್ 2013, 19:59 IST

ಬೆಂಗಳೂರಿನಲ್ಲಿ ಗುಬ್ಬಚ್ಚಿಗಳ ಸಂಖ್ಯೆ ತೀವ್ರವಾಗಿ ಇಳಿಮುಖವಾಗುತ್ತಿರುವುದು ಮುಂದುವರೆದಿದೆ. ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (ಬಿಎನ್‌ಎಚ್‌ಎಸ್) ರಾಷ್ಟ್ರದಾದ್ಯಂತ ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಪ್ರಕಾರ, ಚೆನ್ನೈನಲ್ಲೂ ಇದೇ ಪ್ರವೃತ್ತಿ ಮುಂದುವರೆದಿದೆ.  ಎಂದರೆ ಈ ವಲಯಗಳಲ್ಲಿನ ಪರಿಸರ ವಿನಾಶಕ್ಕೆ ಇದು ಸಂಕೇತ. ಏಕೆಂದರೆ ಗುಬ್ಬಚ್ಚಿಗಳಿದ್ದಲ್ಲಿ ಪರಿಸರ ಆರೋಗ್ಯಕರವಾಗಿದೆ ಎಂದರ್ಥ ಎಂಬುದು   ತಜ್ಞರ ಮಾತು. ಆದರೆ ನಗರೀಕರಣದ ನಾಗಾಲೋಟದಲ್ಲಿ ಸ್ವಸ್ಥ ಪರಿಸರದ ಕಾಳಜಿಯೇ ಮರೆಯಾಗುತ್ತಿದೆ. ಗಿಡಮರಗಳಿಲ್ಲದ ಕಾಂಕ್ರೀಟ್ ಕಾಡುಗಳು ಪರಿಸರದ ಮೇಲೆ ಇನ್ನಿಲ್ಲದಂತೆ ಒತ್ತಡಗಳನ್ನು ಹೇರುತ್ತಿವೆ. 2005ಕ್ಕೆ ಹೋಲಿಸಿದರೆ ಗುಬ್ಬಚ್ಚಿಗಳ ಸಂಖ್ಯೆ ಇಳಿಮುಖದ ಹಾದಿಯ್ಲ್ಲಲೇ ಸಾಗಿರುವುದು ಎಚ್ಚರಿಕೆಯ ಗಂಟೆ. 

ದೊಡ್ಡ ನಗರಗಳ ಪೈಕಿ, ಚೆನ್ನೈ ಹಾಗೂ ಬೆಂಗಳೂರುಗಳಿಗೆ ಹೋಲಿಸಿದರೆ ಮುಂಬೈನಲ್ಲಿ ಹೆಚ್ಚಿನ ಸಂಖ್ಯೆಯ ಗುಬ್ಬಚ್ಚಿಗಳಿವೆ ಎಂಬುದು ಅಚ್ಚರಿಯ ಸಂಗತಿ.  ಹಾಗೆಯೇ ಹೈದರಾಬಾದ್ ಹಾಗೂ  ದೆಹಲಿಗೆ ಹೋಲಿಸಿದರೆ ಕೊಯಮತ್ತೂರು ಮತ್ತು ಪುಣೆಯಲ್ಲಿ ಹೆಚ್ಚಿನ ಸಂಖ್ಯೆಯ ಗುಬ್ಬಚ್ಚಿಗಳಿವೆ ಎಂಬುದು ವಿಶೇಷ.ಮನುಷ್ಯರ ಜೊತೆ ಸಹಬಾಳ್ವೆ ನಡೆಸಿಕೊಂಡೇ ಬಂದ ಈ ಪುಟ್ಟ ಗುಬ್ಬಚ್ಚಿಗಳು ಮಾಯವಾಗುತ್ತಾ ಸಾಗಿರುವುದು ವಿಷಾದದ ಸಂಗತಿ. ಹೆಂಚಿನ ಮನೆಗಳು ಮರೆಯಾಗುತ್ತಾ ಸಾಗಿದಂತೆಯೇ ಗುಬ್ಬಚ್ಚಿ ಗೂಡುಗಳಿಗೆ ನೆಲೆ ಇಲ್ಲದಂತಾಯಿತು.  ಗುಬ್ಬಚ್ಚಿಗಳ ಸಂಖ್ಯೆ ಭಾರತದಲ್ಲಿ ಮಾತ್ರ ಇಳಿಮುಖವಾಗುತ್ತಿಲ್ಲ. ವಿಶ್ವದ ಇತರ ನಗರಗಳಲ್ಲೂ ಈ ಪ್ರವೃತ್ತಿ ಕಂಡು ಬರುತ್ತಿದೆ. ನೆದರ್‌ಲ್ಯಾಂಡ್‌ನಲ್ಲಂತೂ ಗುಬ್ಬಚ್ಚಿಗಳ ಸಂಖ್ಯೆ ಎಷ್ಟೊಂದು ಕ್ಷೀಣಿಸಿದೆ ಎಂದರೆ  ಇವಗಳನ್ನು ಅಳಿವಿನಂಚಿನಲ್ಲಿರುವ ಪಕ್ಷಿ ಎಂದು ಪಟ್ಟಿ ಮಾಡಲಾಗಿದೆ.

ಗುಬ್ಬಚ್ಚಿಗಳ ಸಂರಕ್ಷಣೆಗಾಗಿ ಜಾಗೃತಿ ಅಭಿಯಾನಗಳೂ ನಡೆಯುತ್ತಿವೆ. ಪ್ರತಿ ವರ್ಷ ಮಾರ್ಚ್ 20ರಂದು ವಿಶ್ವ ಗುಬ್ಬಚ್ಚಿ ದಿನವನ್ನೂ ಆಚರಿಸಲಾಗುತ್ತಿದೆ. ಗುಬ್ಬಚ್ಚಿಯನ್ನು ದೆಹಲಿ ರಾಜ್ಯ ಪಕ್ಷಿಯಾಗಿ ದೆಹಲಿ ರಾಜ್ಯ ಸರ್ಕಾರ ಘೋಷಿಸಿದೆ. ಈ ಪ್ರಯತ್ನಗಳಿಂದ ಹೆಚ್ಚಿನ ಫಲ ಕಂಡುಬರುತ್ತಿಲ್ಲ. ಗುಬ್ಬಚ್ಚಿಗಳಷ್ಟೇ ಅಲ್ಲದೆ ನಗರಗಳಲ್ಲಿ ಮಾಯವಾಗುತ್ತಿರುವ ಇನ್ನೂ ಅನೇಕ ಪಕ್ಷಿಗಳ  ಕುರಿತೂ ನಾಗರಿಕ ಸಮಾಜ ಚಿಂತನೆ ನಡೆಸುವುದು ಅಗತ್ಯ. 90ರ ದಶಕದಲ್ಲಿ ರಣಹದ್ದುಗಳ ಸಂಖ್ಯೆಯಲ್ಲಿ ಏಕಾಏಕಿ ಕುಸಿತದ ಪ್ರವೃತ್ತಿ ಗೋಚರವಾಗಿತ್ತು.ಇದಕ್ಕೆಲ್ಲಾ ಮತ್ತೆ ಕಾರಣಗಳು ನಗರಗಳ ಜೀವನಶೈಲಿಗಳೇ ಎಂಬುದು ಅಧ್ಯಯನಗಳಲ್ಲಿ ವ್ಯಕ್ತವಾಗಿವೆ.  ಈ ಕುರಿತಂತೆ ತೀವ್ರ ಕಾಳಜಿ ವಹಿಸುವುದು ಇಂದಿನ ತುರ್ತು. ಆ ಮೂಲಕ  ನಮ್ಮ ನಗರಗಳ ಜೀವ ವೈವಿಧ್ಯ ಸಂಪತ್ತನ್ನು ಕಾಪಾಡುವುದು ಎಲ್ಲರ ಕರ್ತವ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT