ಕ್ರಿಸ್ತಪೂರ್ವ 776 ರ ಸುಮಾರಿಗೆ ಆರಂಭವಾದ ಒಲಿಂಪಿಕ್ ಕ್ರೀಡೆಗಳಲ್ಲಿ ಜನಪ್ರಿಯವಾಗಿದ್ದ ಸ್ಪರ್ಧೆಗಳೆಂದರೆ ಕುಸ್ತಿ ಮತ್ತು ಬಾಕ್ಸಿಂಗ್. 1896 ರಲ್ಲಿ ಪುನರಾರಂಭವಾದ ಆಧುನಿಕ ಒಲಿಂಪಿಕ್ ಕ್ರೀಡೆಗಳಲ್ಲೂ ಕುಸ್ತಿಗೆ ಮಹತ್ವದ ಸ್ಥಾನ ಇತ್ತು. ಇಂಥ ಪ್ರಾಚೀನ ಹಾಗೂ ಮನುಷ್ಯನ ದೈಹಿಕ ಶಕ್ತಿಗೆ ಸವಾಲಾಗಿದ್ದ ಕುಸ್ತಿಯನ್ನು 2020 ರ ಒಲಿಂಪಿಕ್ ಕ್ರೀಡೆಗಳಿಂದ ಹೊರಗೆ ಹಾಕುವ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ನಿರ್ಧಾರ ನಿಜಕ್ಕೂ ಆಶ್ಚರ್ಯಕರ ಹಾಗೂ ಆಘಾತಕರ.
ಕ್ರೀಡೆಯ ಮನರಂಜನೆಯ ಸ್ವರೂಪ ಬದಲಾದಂತೆ ಕುಸ್ತಿ ಸ್ಪರ್ಧೆಗೂ ಹೊಸ ರೂಪ ನೀಡಲಾಗಿದೆ. ಪ್ರಾಚೀನ ಒಲಿಂಪಿಕ್ ಕ್ರೀಡೆಗಳಲ್ಲಿ ಒಬ್ಬ ಗೆಲ್ಲುವವರೆಗೂ ಹೋರಾಟ ನಡೆಯುತ್ತಿತ್ತು. ಆದರೆ ಆಧುನಿಕ ಒಲಿಂಪಿಕ್ ಕ್ರೀಡೆಗಳಲ್ಲಿ ಕುಸ್ತಿಯನ್ನು ವಿವಿಧ ವಿಭಾಗಗಳಲ್ಲಿ ವಿಂಗಡಿಸಿ ನಿಗದಿತ ಸಮಯದಲ್ಲಿ ಸ್ಪರ್ಧೆ ನಡೆಯುವಂತೆ ಮಾಡಲಾಯಿತು. ಕುಸ್ತಿಯಲ್ಲಿ ವೀಕ್ಷಕರ ಹುಚ್ಚೆಬ್ಬಿಸುವ ಒರಟುತನ ಮಾಯವಾದರೂ ಹೋರಾಟದ ರೋಚಕತೆ ಉಳಿದಿತ್ತು.
ಮನುಷ್ಯನ ಮೂಲ ಸ್ವಭಾವಗಳಾದ ಓಟ, ಜಿಗಿತ ಹಾಗೂ ಸೆಣಸಾಟದ ಆಧಾರದ ಮೇಲೆ ಬುದ್ಧಿಶಕ್ತಿಯ ಲೇಪನದೊಂದಿಗೆ ಕ್ರೀಡೆಗಳು ಆವಿಷ್ಕಾರಗೊಂಡಿವೆ. ಕುಸ್ತಿಯಲ್ಲೂ ಮೂಲಭೂತವಾದ ದೈಹಿಕ ಶಕ್ತಿಯ ಜೊತೆಗೆ ಚುರುಕಾದ ಬುದ್ಧಿಯ ಅಗತ್ಯವೂ ಇದೆ ಎನ್ನುವ ಅಂಶಗಳಿವೆ. ಈ ಸಾಂಪ್ರದಾಯಿಕ ಕ್ರೀಡೆಗೆ ಹೆಚ್ಚಿನ ಮೂಲಸೌಕರ್ಯಗಳು ಹಾಗೂ ತಂತ್ರಜ್ಞಾನಗಳ ಅಗತ್ಯವಿಲ್ಲ. ಶಕ್ತಿಯನ್ನು ಪ್ರದರ್ಶಿಸುವ ಅತ್ಯಂತ ಮೂಲಭೂತ ಹಾಗೂ ಬಡಮಕ್ಕಳೂ ಕಲಿಯಬಹುದಾದಂತಹ ಈ ದೇಸಿ ಕ್ರೀಡೆಯನ್ನು ಒಲಿಂಪಿಕ್ಸ್‌ನಿಂದ ಕೈಬಿಡಲು ಮುಂದಾಗಿರುವುದು ದುರದೃಷ್ಟಕರ.
19ನೇ ಶತಮಾನದಲ್ಲಿ ಸೈನಿಕರಿಗೆ ಅತ್ಯಗತ್ಯವೆನಿಸಿದ ಕತ್ತಿವರಸೆ, ಕುದುರೆ ಸವಾರಿ, ಈಜು, ಓಟ ಹಾಗೂ ಶೂಟಿಂಗ್ ಕೌಶಲವನ್ನು ಸೇರಿಸಿ ಮಾಡರ್ನ್ ಪೆಂಟಾತ್ಲನ್ ಎಂಬ ಹೆಸರಿನ ಸ್ಪರ್ಧೆಯನ್ನು 1912ರ ಒಲಿಂಪಿಕ್ಸ್‌ನಿಂದ ಆರಂಭಿಸಲಾಯಿತು. ಆದರೆ ಈ ಐದರಲ್ಲೂ ಪ್ರತ್ಯೇಕ ಸ್ಪರ್ಧೆಗಳಿರುವುದರಿಂದ ಮಾಡರ್ನ್ ಪೆಂಟಾತ್ಲನ್ ಸ್ಪರ್ಧೆಯನ್ನು ಕೈಬಿಡಬಹುದಿತ್ತು. ಆದರೆ ಇದನ್ನು ಉಳಿಸಿಕೊಂಡು ಕುಸ್ತಿಯನ್ನು ಹೊರಗೆ ಹಾಕುವ ನಿರ್ಧಾರದ ಹಿಂದೆ ಬೇರೆ ಉದ್ದೇಶ ಕಂಡುಬರುತ್ತದೆ.
ಒಲಿಂಪಿಕ್ ಆಂದೋಲನದ ಆರ್ಥಿಕ ಬೆಳವಣಿಗೆಗಾಗಿ ಕ್ರೀಡೆಯ ಜನಪ್ರಿಯತೆ, ಟಿಕೆಟ್ ಮಾರಾಟ ಮತ್ತು ಟಿವಿ ವೀಕ್ಷಕರ ಸಂಖ್ಯೆ ಮುಂತಾದ ಹಲವು ಅಂಶಗಳ ಆಧಾರದ ಮೇಲೆ ನಿರ್ಧಾರ ಮೂಡಿಬರುತ್ತದೆಯಾದರೂ ಹಳೆಯದು ಬಂಗಾರ ಎಂಬ ಅಂಶವನ್ನು ಇಲ್ಲಿ ಮರೆತಿರುವಂತೆ ಕಾಣುತ್ತಿದೆ.
ಕಳೆದ ನೂರು ವರ್ಷಗಳ ಒಲಿಂಪಿಕ್ ಇತಿಹಾಸದಲ್ಲಿ ಕೆಲವೇ ರಾಷ್ಟ್ರಗಳಿಗೆ ಸೀಮಿತವೆನಿಸಿದ್ದ ಹಲವು ಸ್ಪರ್ಧೆಗಳನ್ನು ಕೈಬಿಡಲಾಗಿದೆ. ಒಲಿಂಪಿಕ್ಸ್‌ನಲ್ಲಿ ನಡೆಯುವ ಸ್ಪರ್ಧೆಗೆ ವಿಶ್ವ ರೂಪ ಇರಬೇಕು ಎನ್ನುವ ಮೂಲ ತತ್ವದಲ್ಲಿ ಕುಸ್ತಿಗೆ ಪೂರ್ಣ ಅಂಕ ಸಿಗುತ್ತದೆ. 2016 ರ ಒಲಿಂಪಿಕ್ಸ್‌ನಲ್ಲಿ ಪದಾರ್ಪಣೆ ಮಾಡಲಿರುವ ಗಾಲ್ಫ್ ಮತ್ತು ರಗ್ಬಿಗಿಂತ ಕುಸ್ತಿಯಲ್ಲಿ ಹೆಚ್ಚು ಸ್ಪರ್ಧಿಗಳಿರುವುದು ಖಂಡಿತ.
ಭಾರತದ ಮಟ್ಟಿಗೆ ಹೇಳುವುದಾದರೆ, ಹಾಕಿ ಬಿಟ್ಟರೆ ಮೊದಲ ಪದಕ ಬಂದದ್ದೇ ಕುಸ್ತಿಯಲ್ಲಿ. ಕುಸ್ತಿ ಸ್ಥಾನ ಕಳೆದುಕೊಳ್ಳುವುದರ ಬಗ್ಗೆ ಅಂತಿಮ ನಿರ್ಧಾರವನ್ನು ಬರುವ ಸೆಪ್ಟೆಂಬರ್‌ನಲ್ಲಿ ನಡೆಯುವ ಒಲಿಂಪಿಕ್ ಸಮಿತಿ ಸರ್ವ ಸದಸ್ಯರ ಸಭೆಯಲ್ಲಿ ತೆಗೆದುಕೊಳ್ಳಲಾಗುವುದು. 2020 ರ ಒಲಿಂಪಿಕ್ಸ್‌ನಲ್ಲಿ ಸೇರ್ಪಡೆ ಬಯಸಿರುವ ಬೇಸ್‌ಬಾಲ್, ಸಾಫ್ಟ್‌ಬಾಲ್, ಕರಾಟೆ, ಸ್ಕ್ವಾಷ್, ವುಶುಗಿಂತ ಕುಸ್ತಿಯನ್ನು ಉಳಿಸಿಕೊಳ್ಳುವುದೇ ಸೂಕ್ತ ನಿರ್ಧಾರವೆನಿಸುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.