ಹಳದಿ ಲೋಹದ (ಚಿನ್ನ) ಬೆಲೆಯು ಇತ್ತೀಚಿನ ದಿನಗಳಲ್ಲಿ ಗಮನಾರ್ಹ ಕುಸಿತ ಕಾಣುತ್ತಿದೆ. 2015-16ನೇ ಹಣಕಾಸು ವರ್ಷದಲ್ಲಿ ದೇಶಿ ಮಾರುಕಟ್ಟೆಯಲ್ಲಿ ಬೆಲೆ ತಲಾ 10 ಗ್ರಾಂಗೆ ₨ 20,500ರಿಂದ 24 ಸಾವಿರದ ಮಟ್ಟದಲ್ಲಿ ಇರಲಿದೆ ಎಂದು ಮಾನದಂಡ ನಿಗದಿ ಮಾಡುವ ಇಂಡಿಯಾ ರೇಟಿಂಗ್ ಮತ್ತು ರಿಸರ್ಚ್ ಸಂಸ್ಥೆ ಅಂದಾಜಿಸಿರುವುದು ಗ್ರಾಹಕರು ಮತ್ತು ದೇಶಿ ಅರ್ಥವ್ಯವಸ್ಥೆ ದೃಷ್ಟಿಯಿಂದ ಆಶಾದಾಯಕ.
ಚಿನ್ನದ ಬೆಲೆಯ ಏರುಗತಿ ಪ್ರವೃತ್ತಿಗೆ ಹೋಲಿಸಿದರೆ ಇದು ಅಚ್ಚರಿದಾಯಕ ವಿದ್ಯಮಾನ. ಅಮೆರಿಕದ ಅರ್ಥ ವ್ಯವಸ್ಥೆಯಲ್ಲಿ ಸುಧಾರಣೆ, ವಿದೇಶಿ ಕರೆನ್ಸಿಗಳ ಎದುರು ಡಾಲರ್ ಬಲವರ್ಧನೆ, ಅಮೆರಿಕದ ಫೆಡರಲ್ ಬ್ಯಾಂಕ್, ದಶಕದಲ್ಲಿ ಇದೇ ಮೊದಲ ಬಾರಿಗೆ ಬಡ್ಡಿ ದರ ಹೆಚ್ಚಿಸುವ ಸಾಧ್ಯತೆ ಮತ್ತು ಚೀನಾದ ಚಿನ್ನದ ಬೇಡಿಕೆ ಕುಸಿತ ಚಿನ್ನದ ಬೆಲೆ ಇಳಿಕೆಗೆ ಕಾರಣಗಳಾಗಿವೆ.
ಸಾಮಾನ್ಯವಾಗಿ ಅಮೆರಿಕದ ಡಾಲರ್ ದುರ್ಬಲಗೊಂಡಾಗಲೆಲ್ಲ ಚಿನ್ನಕ್ಕೆ ಬೇಡಿಕೆ ಹೆಚ್ಚುತ್ತಿತ್ತು. ಜಾಗತಿಕ ಹೂಡಿಕೆದಾರರು ಖರೀದಿಗೆ ಮುಗಿ ಬೀಳುತ್ತಿದ್ದರಿಂದ ಸಹಜವಾಗಿ ಬೆಲೆ ಏರುಗತಿಯಲ್ಲಿಯೇ ಇರುತ್ತಿತ್ತು, ಈಗ ಪರಿಸ್ಥಿತಿ ತಿರುಗು ಮುರುಗಾಗಿದೆ. ಹೂಡಿಕೆದಾರರು ಚಿನ್ನದ ಬದಲಿಗೆ ಡಾಲರ್‌ನತ್ತ ಗಮನ ಕೇಂದ್ರೀಕರಿಸಿದ್ದರಿಂದ ಚಿನ್ನದ ಹೊಳಪು ಮಸುಕಾಗುತ್ತಿದೆ. ಇದುವರೆಗೆ ಏರುಗತಿಯಲ್ಲಿಯೇ ಸಾಗಿ ಜನಸಾಮಾನ್ಯರ ಕೈಗೆಟುಕದ ಮಟ್ಟ ತಲುಪಿದ್ದ ದರ, ಅನಿರೀಕ್ಷಿತವಾಗಿ ಹಿಮ್ಮುಖವಾಗಿ ಚಲಿಸುತ್ತಿರುವುದು ದೇಶಿ ಚಿನಿವಾರ ಪೇಟೆಯಲ್ಲಿ ಸಂಚಲನ ಮೂಡಿಸಿರುವುದೂ ನಿಜ.
ಪ್ರಮುಖ ಹಬ್ಬ ಹರಿದಿನಗಳು ಇನ್ನೂ ದೂರ ಇರುವುದರಿಂದ ಬೇಡಿಕೆ ಅಷ್ಟಾಗಿ ಇಲ್ಲದಿರುವುದೂ ಬೆಲೆ ಕುಸಿತಕ್ಕೆ ಪುಷ್ಟಿ ನೀಡುತ್ತಿದೆ. ಭಾರತವು ಅಂತರರಾಷ್ಟ್ರೀಯ ಚಿನ್ನದ ಬೆಲೆ ವ್ಯವಸ್ಥೆ ಅನುಸರಿಸುತ್ತಿರುವುದರಿಂದ ಮತ್ತು ಬೇಡಿಕೆಯ ಬಹುಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿನ ಬೆಲೆ ಕುಸಿತ ಇಲ್ಲಿಯೂ ಪ್ರತಿಫಲನಗೊಳ್ಳುತ್ತಿದೆ.
ಚಿನ್ನದ ದರ ನಾಗಾಲೋಟದಲ್ಲಿ ಏರಿಕೆ ಹಾದಿಯಲ್ಲಿದ್ದಾಗ ಲಾಭದಾಸೆಯಿಂದ ಗಟ್ಟಿ ಚಿನ್ನ, ನಾಣ್ಯ ಖರೀದಿ ಮತ್ತು ಚಿನ್ನದ ಇಟಿಎಫ್‌ನಲ್ಲಿ ಹಣ ತೊಡಗಿಸಿದವರಿಗೆ, ಸಂಗ್ರಹಕಾರರಿಗೆ ಈಗ ಭಾರಿ ನಷ್ಟವಾಗಿದೆ. ಬೆಲೆ ಮತ್ತೆ ಏರುಗತಿಯ ಹಾದಿಗೆ ಮರಳುವವರೆಗೆ ಕಾಯುವುದರ ಹೊರತಾಗಿ ಅವರಿಗೆ ಅನ್ಯ ಮಾರ್ಗ ಇಲ್ಲ. ಚಿನ್ನ ಆಮದಿಗೆ ಮಾಡಲಾಗುವ ವೆಚ್ಚ ಕಡಿಮೆಯಾಗಿ ಅರ್ಥ ವ್ಯವಸ್ಥೆಯ ಸ್ಥಿರತೆಗೆ ಬೆದರಿಕೆ ಒಡ್ಡಿದ್ದ ಚಾಲ್ತಿ ಖಾತೆ ಕೊರತೆ ತಗ್ಗಲಿರುವುದು ಒಳ್ಳೆಯ ಬೆಳವಣಿಗೆ. ಬೆಲೆ ಕುಸಿತದಿಂದ ತಮ್ಮ ಬಳಿ ಹೆಚ್ಚುವರಿ ಚಿನ್ನ ಹೊಂದಿದ ಗ್ರಾಹಕರು ಆತಂಕಪಡಬೇಕಾಗಿಲ್ಲ. ಕೇಂದ್ರ ಸರ್ಕಾರ ‘ಚಿನ್ನದ ನಗದೀಕರಣ’ ಯೋಜನೆ ಪರಿಚಯಿಸಿರುವುದರಿಂದ ಬ್ಯಾಂಕ್‌ಗಳಲ್ಲಿ ಚಿನ್ನ ಠೇವಣಿ ಇಟ್ಟು ಬಡ್ಡಿ ಪಡೆಯಬಹುದಾಗಿದೆ. ಖರೀದಿದಾರರು ಮತ್ತು ಚಿನ್ನಾಭರಣ ಮಾರಾಟಗಾರರಿಗೆ ಬೆಲೆಯು ಸದಾ ಕಾಲ ‘ಬಂಗಾರದ ಮಾಯಾ ಜಿಂಕೆ’ಯಂತೆ ಕಾಡುತ್ತಲೇ ಇರುತ್ತದೆ.
ಭಾರತದಲ್ಲಿನ ಹಾಲ್‌ಮಾರ್ಕ್, ಚಿನ್ನದ ಸಂಪೂರ್ಣ ಶುದ್ಧತೆಯನ್ನು (ಅಪರಂಜಿ ಗುಣ) ಖಾತರಿಪಡಿಸುವುದಿಲ್ಲ ಎಂದು ವಿಶ್ವ ಚಿನ್ನದ ಮಂಡಳಿಯು ಮೊನ್ನೆಯಷ್ಟೇ ಅಭಿಪ್ರಾಯಪಟ್ಟಿರುವುದೂ ಖರೀದಿದಾರರಿಗೆ ಎಚ್ಚರಿಕೆಯ ಪಾಠವಾಗಬೇಕಾಗಿದೆ. ಹಾಲ್‌ಮಾರ್ಕ್ ಕೇಂದ್ರಗಳ ಗುಣಮಟ್ಟ ಮತ್ತು ವಿಶ್ವಾಸಾರ್ಹತೆ ಬಗ್ಗೆಯೂ ಡಬ್ಲ್ಯುಜಿಸಿ ಅನುಮಾನ ವ್ಯಕ್ತಪಡಿಸಿರುವುದು ಚಿನ್ನಾಭರಣ ಮಾರಾಟಗಾರರಿಗೆ ಆತ್ಮಾವಲೋಕನ ಮಾಡಿಕೊಳ್ಳಲು ಸಕಾಲವಾಗಿದೆ.ಗ್ರಾಹಕರಲ್ಲಿ ಮೂಡುವ ಅನುಮಾನ ನಿವಾರಿಸದಿದ್ದರೆ ವಹಿವಾಟಿಗೆ ಪೆಟ್ಟು ಬೀಳಲಿದೆ ಎನ್ನುವುದನ್ನು ದೇಶಿ ಚಿನಿವಾರ ಪೇಟೆ ಮರೆಯಬಾರದು.
ಸದ್ಯಕ್ಕೆ ಚಿನ್ನದ ಬೆಲೆಯನ್ನು ಲಂಡನ್ನಿನ ಚಿನ್ನಾಭರಣ ಮಾರುಕಟ್ಟೆ ಸಂಘವು ನಿರ್ಧರಿಸುತ್ತದೆ. ಭಾರತದಲ್ಲಿ ಚಿನ್ನದ ವಹಿವಾಟು ಗಮನಾರ್ಹ ಪ್ರಮಾಣದಲ್ಲಿ ನಡೆಯುತ್ತಿರುವುದರಿಂದ ಜಾಗತಿಕವಾಗಿ ಬೆಲೆ ನಿಗದಿಯಲ್ಲಿ ಭಾರತ ಪ್ರಭಾವಿ ಪಾತ್ರ ನಿರ್ವಹಿಸಬೇಕು ಎಂದು ಮುಂಬೈನ ಚಿನ್ನಾಭರಣ ವರ್ತಕರ ಸಂಘವು ನಿಲುವು ತಳೆದಿರುವುದು ಸರಿಯಾದ ನಡೆ. ಚಿನ್ನವು ಆಪತ್ ಕಾಲದ ಆಪತ್ಬಾಂಧವ (ಆರ್ಥಿಕ ಅನಿಶ್ಚಿತತೆ ವಿರುದ್ಧ ರಕ್ಷಣೆ) ಎಂದೇ ಪರಿಗಣಿಸಲಾಗಿದ್ದರೂ, ಜಾಗತಿಕ ಆರ್ಥಿಕ ಬೆಳವಣಿಗೆಯ ಚಿತ್ರಣ ಸ್ಪಷ್ಟಗೊಳ್ಳುವವರೆಗೆ ಈ ಬೆಲೆ ಕುಸಿತ ಪ್ರವೃತ್ತಿ ಮುಂದುವರಿಯಲಿದ್ದು, ಖರೀದಿದಾರರು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಷ್ಟೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.