ಭೂಸೇನೆಯ ಮುಖ್ಯಸ್ಥರ ಹುದ್ದೆಗೆ ಲೆ.ಜ. ಬಿಪಿನ್ ರಾವತ್ ಅವರನ್ನು ಎನ್‌ಡಿಎ ಸರ್ಕಾರ ನೇಮಕ ಮಾಡಿದೆ. ಈ ಪ್ರಕ್ರಿಯೆಯಲ್ಲಿ ಇಬ್ಬರ ಸೇವಾ ಹಿರಿತನ ಕಡೆಗಣನೆಯಾಗಿದೆ ಎಂದು ಕಾಂಗ್ರೆಸ್ ಹಾಗೂ ಸಿಪಿಐ ಆಕ್ಷೇಪ ವ್ಯಕ್ತಪಡಿಸಿವೆ.
ರಾವತ್ ಅವರಿಗಿರುವ ಕಾರ್ಯಾಚರಣೆ ಅನುಭವ ಹಾಗೂ ಸಾಮರ್ಥ್ಯ ಪರಿಗಣಿಸಿ ಈ ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ. ಸದ್ಯಕ್ಕೆ ರಾಷ್ಟ್ರ ಎದುರಿಸುತ್ತಿರುವ ಭದ್ರತಾ ಸವಾಲುಗಳಿಗೆ ರಾವತ್ ಹೊಂದಿರುವಂತಹ ಅನುಭವಗಳ ಹಿನ್ನೆಲೆ ಮುಖ್ಯ ಎಂದು ಅದು ಹೇಳಿದೆ. ಭವಿಷ್ಯದಲ್ಲಿ ರಾಷ್ಟ್ರದ ರಕ್ಷಣೆ ಹಾಗೂ ಭದ್ರತಾ ಆದ್ಯತೆಗಳ ದೃಷ್ಟಿಯಿಂದ ಇದು ಅಗತ್ಯ ಎಂದೂ ಹೇಳಲಾಗಿದೆ.
ವಿಶೇಷವಾಗಿ ಪಾಕಿಸ್ತಾನ ಹಾಗೂ ಕಾಶ್ಮೀರ ವಿಚಾರಕ್ಕೆ ಇದು ಸಂಬಂಧಿಸಿದಂತಿದೆ. ಯಾವುದೇ ಇಲಾಖೆ ಮುಖ್ಯಸ್ಥರನ್ನು ನೇಮಕ ಮಾಡುವ ವಿಶೇಷ ಹಕ್ಕು ಸರ್ಕಾರಕ್ಕೆ ಇದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಕಟ್ಟಾ ಶ್ರೇಣೀಕೃತ ವ್ಯವಸ್ಥೆಗೆ ಕಟಿಬದ್ಧವಾಗಿರುವ ಸೇನೆಯಲ್ಲಿ ಸೇವಾ ಹಿರಿತನಕ್ಕೆ ಮಾನ್ಯತೆ ನೀಡುವ ಪರಂಪರೆಗೆ ಈಗ ತಿಲಾಂಜಲಿ ನೀಡಿದಂತಾಗಿದೆ.
ಹೀಗಿದ್ದೂ ಸೇವಾ ಹಿರಿತನ ಕಡೆಗಣಿಸಿ ಸೇನಾ ಮುಖ್ಯಸ್ಥರನ್ನು ನೇಮಕ ಮಾಡುವುದು ಈ ಹಿಂದೆಯೂ ನಡೆದಿತ್ತು. 1983ರಲ್ಲಿ ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಲೆ.ಜ. ಎಸ್.ಕೆ. ಸಿನ್ಹಾ ಅವರ ಸೇವಾ ಹಿರಿತನವನ್ನು ಕಡೆಗಣಿಸಿ ಲೆ.ಜ. ಎ.ಎಸ್. ವೈದ್ಯ ಅವರನ್ನು ಭೂಸೇನಾ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿತ್ತು. ಆ ನಂತರ, ಸಿನ್ಹಾ ಅವರು ತಮ್ಮ ಹುದ್ದೆಗೆ ರಾಜೀನಾಮೆಯನ್ನೂ ನೀಡಿದ್ದರು.
ತಮ್ಮ ಸರ್ಕಾರದ ವಿರುದ್ಧ ‘ಸಂಪೂರ್ಣ ಕ್ರಾಂತಿ’ ಆಂದೋಲನ ಆರಂಭಿಸಿದ ಜಯಪ್ರಕಾಶ್ ನಾರಾಯಣ್ ಅವರ ಜೊತೆ ಲೆ.ಜ. ಸಿನ್ಹಾ ಅವರು ನಿಕಟವಾಗಿದ್ದರೆಂಬುದು ಪ್ರಧಾನಿ ಇಂದಿರಾ ಅವರ ಭಾವನೆಯಾಗಿತ್ತು. ಆ ಅರ್ಥದಲ್ಲಿ ಆ ನೇಮಕಾತಿಗೆ ಆಗ ರಾಜಕೀಯ ಪರಿಗಣನೆಗಳ ಆಯಾಮವೂ ವ್ಯಕ್ತವಾಗಿತ್ತು.
ನೇಮಕಾತಿ ಕುರಿತಂತೆ ವಿವರಣೆಯನ್ನೇನೂ ಸರ್ಕಾರ ನೀಡಬೇಕಿಲ್ಲ ಎಂಬುದು ನಿಜ. ಆದರೆ ಸಶಸ್ತ್ರ ಪಡೆಗಳ ಬಗ್ಗೆ ವಿವಾದ ಎಬ್ಬಿಸುವುದು ರಾಷ್ಟ್ರಭಕ್ತಿ ಅಲ್ಲ ಎಂಬಂಥ ಬಿಜೆಪಿ ವಕ್ತಾರರ ವ್ಯಾಖ್ಯಾನ ಅರ್ಥರಹಿತವಾದದ್ದು. ಎಲ್ಲಾ ಪ್ರಶ್ನೆಗಳನ್ನೂ ರಾಷ್ಟ್ರಭಕ್ತಿಯ ಪ್ರದರ್ಶನದ ವಿವಾದವಾಗಿಸುವುದು ಸರಿಯಲ್ಲ. ಇಲ್ಲಿ ಮುಖ್ಯವಾದ ಸಂಗತಿ ಎಂದರೆ ಉನ್ನತ ಮಟ್ಟದ ನೇಮಕಾತಿಗಳನ್ನು ಸಕಾಲದಲ್ಲಿ ಘನತೆಯುಕ್ತವಾಗಿ ಮಾಡುವುದರ ಪ್ರಸ್ತುತತೆ. ಏಕೆಂದರೆ, ಒಂದು ತಿಂಗಳ ಮುಂಚೆಯೇ ಸೇನಾ ಮುಖ್ಯಸ್ಥರ ನೇಮಕಾತಿ ಪ್ರಕಟಿಸುವ ಪರಂಪರೆಗೂ ಈಗ ವಿದಾಯ ಹೇಳಲಾಗಿದೆ.
ಹುದ್ದೆಗೆ ನೇಮಕಗೊಂಡವರು ವ್ಯವಸ್ಥೆಗೆ ಹೊಂದಿಕೊಳ್ಳುವ ಅವಕಾಶದ ದೃಷ್ಟಿಯಿಂದ ಈ ಪರಂಪರೆ ಅನುಕರಣೀಯವಾದದ್ದೇ. ಆದರೆ, ಸಂಸತ್ ಅಧಿವೇಶನ ಕೊನೆಗೊಂಡ ಮರುದಿನ ಲೆ.ಜ. ಬಿಪಿನ್ ರಾವತ್ ಅವರ ನೇಮಕಾತಿ ವಿಚಾರ ಪ್ರಕಟಿಸಿದ್ದು ಕಾಕತಾಳೀಯವೇ ಎಂಬುದು ಪ್ರಶ್ನೆ. ಇಂತಹ ಕ್ರಮಗಳಿಂದ ವಿವಾದ ಸೃಷ್ಟಿಯಾಗುವುದಕ್ಕೆ ಅವಕಾಶ ಮಾಡಿಕೊಡುವುದು ಆಯ್ಕೆಯಾದ ವ್ಯಕ್ತಿಗಳು ಹಾಗೂ ಅವರು ನೇತೃತ್ವ ವಹಿಸುವ ಸಂಸ್ಥೆಗಳ ದೃಷ್ಟಿಯಿಂದಲೂ ಸರಿಯಲ್ಲ.
ಹಾಗೆಯೇ ಸಶಸ್ತ್ರ ಪಡೆಗಳಲ್ಲಿ ಉನ್ನತ ಆಡಳಿತ ವ್ಯವಸ್ಥೆ ಪುನರ್ ರಚನೆ ಬಹಳ ದಿನಗಳಿಂದ ಬಾಕಿ ಉಳಿದುಕೊಂಡು ಬಂದಿದೆ. ಸದ್ಯದ ಭದ್ರತಾ ಸವಾಲುಗಳಿಗೆ ಈಗ ಸೈಬರ್ ಆಯಾಮವೂ ಇದೆ. ಇಂತಹ ಸಂದರ್ಭದಲ್ಲಿ ಮೂರೂ ಸೇನಾ ಪಡೆಗಳ ನಡುವೆ ಜಂಟಿ ಸಹಯೋಗ ತರುವ ಸೇನಾ ಸುಧಾರಣೆಗಳಿಗೆ ಆದ್ಯತೆ ದೊರೆಯಬೇಕಿದೆ. ಇದರ ಅನ್ವಯ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ (ಸಿಡಿಎಸ್) ಹುದ್ದೆ ಸೃಷ್ಟಿಯಾಗಬೇಕಿದ್ದು ಇದು ನನೆಗುದಿಗೆ ಸಿಲುಕಿರುವುದು ಸರಿಯಲ್ಲ. ಸರ್ಕಾರ ಈ ವಿಚಾರದತ್ತಲೂ ಗಮನ ಹರಿಸಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.