ನರೇಂದ್ರ ಮೋದಿ ನೇತೃತ್ವದ ಹೊಸ ಸರ್ಕಾರ ಪ್ರಮಾಣ ವಚನ ಸ್ವೀಕಾರ ಮಾಡಿದೆ. ಈ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿತರಾಗಿದ್ದರೂ ಅದರಲ್ಲಿ ಪಾಲ್ಗೊಳ್ಳದೇ ಇರುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ತಪ್ಪು ಹೆಜ್ಜೆ ಇಟ್ಟಿದ್ದಾರೆ. ಕೇಂದ್ರದ ಜೊತೆಗೆ ಸೌಹಾರ್ದದ ಸಂಕೇತವನ್ನು ಪ್ರದರ್ಶಿಸುವ ಸದವಕಾಶವೊಂದನ್ನು ಕಳೆದುಕೊಂಡ ಅವರು, ಆ ಮೂಲಕ ತಪ್ಪು ಸಂದೇಶವನ್ನೂ ರವಾನಿಸಿದ್ದಾರೆ.
ಈ ಸಮಾರಂಭಕ್ಕೆ ಮುಖ್ಯಮಂತ್ರಿ ಗೈರುಹಾಜರಿ ಬಗ್ಗೆ ಮುಖ್ಯಮಂತ್ರಿ ಕಚೇರಿಯಿಂದ ಯಾವುದೇ ಕಾರಣವನ್ನಾಗಲೀ, ವಿವರಣೆಯನ್ನಾಗಲೀ ನೀಡಿಲ್ಲ. ಹೀಗಾಗಿ ಬಿಜೆಪಿ ಮತ್ತು ವಿಶೇಷವಾಗಿ ಮೋದಿಯವರ ಬಗ್ಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿರುವುದರಿಂದ ಅವರು ಹೋಗಿಲ್ಲ ಎಂದು ವ್ಯಾಖ್ಯಾನಿಸಬಹುದಾಗಿದೆ.
ಒಂದು ವೇಳೆ ಇದು ನಿಜವೇ ಆಗಿದ್ದರೆ ಅದು ತರ್ಕಹೀನ. ಏಕೆಂದರೆ ಅವರದೇ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್‌ನ ಅನೇಕ ಮುಖ್ಯಮಂತ್ರಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಅವರ್‍ಯಾರಿಗೂ ಎದುರಾಗದ ಸೈದ್ಧಾಂತಿಕ ಇಕ್ಕಟ್ಟು ಸಿದ್ದರಾಮಯ್ಯನವರಿಗೆ ಎದುರಾಯಿತೇ? ಅಲ್ಲದೆ, ಸಿದ್ದರಾಮಯ್ಯನವರು ರಾಜ್ಯವೊಂದರ ಮುಖ್ಯಮಂತ್ರಿ. ಅದೇ ಕಾರಣಕ್ಕಾಗಿ ಅವರನ್ನು ಆಹ್ವಾನಿಸಲಾಗಿತ್ತೇ ಹೊರತು ವೈಯಕ್ತಿಕ ನೆಲೆಯಿಂದ ಅಲ್ಲ.
ಮುಖ್ಯಮಂತ್ರಿಯಾದವರು ರಾಜ್ಯದ ಹಿತರಕ್ಷಣೆ ವಿಷಯ ಬಂದಾಗ ತಮ್ಮ ಸ್ವಂತ ನಿಲುವು ಬದಿಗಿಟ್ಟು ಕರ್ತವ್ಯ ನಿರ್ವಹಿಸಬೇಕು. ಅತ್ಯಂತ ಪ್ರಭಾವಶಾಲಿಯಾದ ಸೇನೆ ಮತ್ತು ಉಗ್ರಗಾಮಿ ಸಂಘಟನೆಗಳಿಂದ ಸದಾ ಬೆದರಿಕೆ ಎದುರಿಸುತ್ತಿರುವ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರೇ ಅನೇಕ ಇರಿಸುಮುರಿಸುಗಳ ನಡುವೆಯೂ ಅಷ್ಟು ದೂರದ ಇಸ್ಲಾಮಾಬಾದ್‌ನಿಂದ ಬಂದಿದ್ದಾರೆ. ಸಾರ್ಕ್ ದೇಶಗಳ ಮುಖ್ಯಸ್ಥರೂ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ತಮ್ಮ ಪೂರ್ವ ನಿಯೋಜಿತ ಕಾರ್ಯಕ್ರಮಗಳನ್ನೆಲ್ಲಾ ಬದಿಗಿಟ್ಟು ಈ ಮುಖಂಡರು ಹಾಜರಾಗಿರುವುದು ಈ ಸಮಾರಂಭಕ್ಕೆ ಅವರು ನೀಡಿದ ಮಹತ್ವಕ್ಕೆ ದ್ಯೋತಕ. ಹೀಗಿರುವಾಗ ಇದು ಸಂಘರ್ಷದ ಸಮಯ ಅಲ್ಲ ಮತ್ತು ಮೋದಿ ಅವರಿಗೆ ಜನಾದೇಶ ಸಿಕ್ಕಿದೆ ಎನ್ನುವುದು ಮುಖ್ಯಮಂತ್ರಿಯವರ ಗಮನದಲ್ಲಿ ಇರಬೇಕಾಗಿತ್ತು.
ಅಷ್ಟಕ್ಕೂ ಪ್ರಮಾಣವಚನ ಸಮಾರಂಭಕ್ಕೆ ಹೋಗದೆ ಸಿದ್ದರಾಮಯ್ಯನವರು ಬೆಂಗಳೂರಿನಲ್ಲಿ ಮಾಡಿದ ಘನ ಕೆಲಸ ಎಂದರೆ ನಿಗದಿತ ಗಡುವಿಗಿಂತ ಮೂರು ವರ್ಷ ತಡವಾಗಿ ಪೂರ್ಣಗೊಂಡ ಕೆಳಸೇತುವೆಯೊಂದರ ಉದ್ಘಾಟನೆ. ನಂತರ ಹೋಗಿದ್ದು ಕಿತ್ತೂರು ಚನ್ನಮ್ಮ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ. ಆದ್ಯತೆಗಳ ಅನುಸಾರ ಯೋಜಿತ ರೀತಿಯಲ್ಲಿ ಮುಖ್ಯಮಂತ್ರಿಗಳು ಕೆಲಸ ಮಾಡಬೇಕಾದುದು ಅವಶ್ಯ. ನಮ್ಮದು ಒಕ್ಕೂಟ ವ್ಯವಸ್ಥೆ ಎಂಬುದು ಸಿದ್ದರಾಮಯ್ಯನವರಿಗೆ ನೆನಪಿರಬೇಕಾಗಿತ್ತು. ಹೀಗಾಗಿ ರಾಜ್ಯದ ಅಭ್ಯುದಯದ ದೃಷ್ಟಿಯಿಂದ ಕೂಡ ಸಿದ್ದರಾಮಯ್ಯನವರದ್ದು ಅನಾಹುತಕಾರಿ ನಡೆ. ಇದನ್ನೆಲ್ಲ ನೋಡಿದರೆ ಅವರ ಆಪ್ತ ವಲಯದಿಂದ ಅವರಿಗೆ ಸರಿಯಾದ ಮಾರ್ಗದರ್ಶನ ಸಿಗುತ್ತಿಲ್ಲ ಅಥವಾ ಅವರೇ ಹೊಂದಿಕೊಂಡು , ಜನಾಭಿಪ್ರಾಯವನ್ನು ಗೌರವಿಸಿ ನಡೆಯಲು ತಯಾರಿಲ್ಲ ಎಂದೆನಿಸುತ್ತದೆ.
ಈ ಕೆಟ್ಟ ಮತ್ತು ಅಸಮರ್ಥನೀಯ ನಿಲುವಿನಿಂದಾಗಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜತೆ ರಾಜ್ಯದ ಸಂಬಂಧ ಕೆಟ್ಟರೆ ಅದಕ್ಕೆ ಸಿದ್ದರಾಮಯ್ಯನವರೇ ಹೊಣೆ ಹೊರಬೇಕಾಗುತ್ತದೆ. ಒಳ್ಳೆಯ ಬಾಂಧವ್ಯ ಬೆಸೆಯುವ ಅವಕಾಶವನ್ನು ಈಗ ಬಿಟ್ಟುಕೊಟ್ಟು ಮುಂದೆ ‘ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ತೋರಿಸುತ್ತಿದೆ’ ಎಂದು ಗೋಳಾಡುವುದರಿಂದ ಯಾವ ಪ್ರಯೋಜನವೂ ಇಲ್ಲ ಎನ್ನುವುದನ್ನು ಅವರು ತಿಳಿದುಕೊಳ್ಳುವುದು ಒಳ್ಳೆಯದು.
ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಒಡಿಶಾ ಮುಖ್ಯಮಂತ್ರಿಗಳು ಕೂಡ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ ಎಂಬ ನೆಪದಲ್ಲಿ ಸಿದ್ದರಾಮಯ್ಯನವರ ನಿಲುವನ್ನು ಸಮರ್ಥಿಸುವುದಕ್ಕೂ ಆಗುವುದಿಲ್ಲ. ಏಕೆಂದರೆ ಆ ಮುಖ್ಯಮಂತ್ರಿಗಳ ಧೋರಣೆಗಳೂ ಸರಿಯಲ್ಲ. ಅಂತೂ ಸಂಕುಚಿತ ರಾಜಕೀಯವನ್ನು ಮೀರಿ ಮುತ್ಸದ್ದಿತನ ಪ್ರದರ್ಶಿಸಬೇಕಾದ ಅವಕಾಶ ಕೈತಪ್ಪಿದಂತಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.