ಭಾರತದ ಕುಟುಂಬ ವ್ಯವಸ್ಥೆಯೊಳಗೆ ಸಮಾನತೆ ಸಾಧನೆ ಮಹಿಳೆಗೆ ಈಗಲೂ ಕ್ಲಿಷ್ಟಕರ. ವಿವಾಹ, ವಿಚ್ಛೇದನ, ಆಸ್ತಿಹಕ್ಕು, ಜೀವನಾಂಶ, ಮಕ್ಕಳ ಪೋಷಕತ್ವ ಹಾಗೂ ದತ್ತು ನಿಯಮಗಳಿಗೆ ಸಂಬಂಧಿಸಿದಂತೆ ವಿವಿಧ ಧರ್ಮಗಳ ವೈಯಕ್ತಿಕ ಕಾನೂನುಗಳು ಅಸ್ತಿತ್ವದಲ್ಲಿವೆ. ಈ ಕಾನೂನುಗಳಲ್ಲಿರುವ ಅನೇಕ ನಿಯಮಗಳು ಗಂಡು - ಹೆಣ್ಣಿನ ಮಧ್ಯದ ಅಸಮಾನತೆಯನ್ನು ಪೋಷಿಸುವಂತಹವು. ಇಂತಹ ಅಸಮಾನತೆಯನ್ನು ಕನಿಷ್ಠ ಕಾನೂನಿನ ನೆಲೆಯಲ್ಲಾದರೂ ಸರಿಪಡಿಸುವ ನಿಟ್ಟಿನಲ್ಲಿ ಹಿಂದೂ ಹಾಗೂ ಕ್ರೈಸ್ತ ವೈಯಕ್ತಿಕ ಕಾನೂನುಗಳಿಗೆ ಒಂದಿಷ್ಟು ಸುಧಾರಣೆಗಳನ್ನು ತರಲಾಗಿದೆ. ಆದರೆ ಮುಸ್ಲಿಂ ಕಾನೂನಿನಲ್ಲಿ ಇಂತಹ ಸುಧಾರಣೆಗಳೂ ಸಾಧ್ಯವಾಗಿರಲಿಲ್ಲ. ಇಂತಹ ಸನ್ನಿವೇಶದಲ್ಲಿ ಮುಸ್ಲಿಂ ಮಹಿಳೆಯರ ವೈವಾಹಿಕ ಬದುಕಲ್ಲಿ ಅಭದ್ರತೆಯನ್ನು ತುಂಬುತ್ತಿದ್ದ ತ್ರಿವಳಿ ತಲಾಖ್ ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಪೀಠ ತೀರ್ಪಿತ್ತಿರುವುದು ಮಹತ್ವದ್ದು. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಒಳಗೊಂಡಂತೆ ಐವರು ನ್ಯಾಯಮೂರ್ತಿಗಳ ಪೀಠ 3ಃ2 ಅನುಪಾತದಲ್ಲಿ ಬಹುಮತದೊಂದಿಗೆ ತ್ರಿವಳಿ ತಲಾಖ್ ರದ್ದುಪಡಿಸಿದೆ. ಈ ಸಂಬಂಧದಲ್ಲಿ ಆರು ತಿಂಗಳೊಳಗೆ ಕಾನೂನು ರಚಿಸಬೇಕೆಂದೂ ಕೇಂದ್ರ ಸರ್ಕಾರಕ್ಕೆ ಕೋರ್ಟ್ ಸೂಚಿಸಿದೆ. ಈಗ, ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಕಾನೂನು ರಚನೆಗೆ ಕೇಂದ್ರ ಸರ್ಕಾರಕ್ಕೆ ನೆರವಾ ಗಬೇಕಾದುದು ಎಲ್ಲಾ ರಾಜಕೀಯ ಪಕ್ಷಗಳ ಕರ್ತವ್ಯ.
ಕೋರ್ಟ್‍ಗಳಲ್ಲಿ ಹಲವು ದಶಕಗಳಿಂದ ಮುಸ್ಲಿಂ ಮಹಿಳೆಯರ ಹಕ್ಕುಗಳ ಪರವಾಗಿ ಹೋರಾಟಗಳು ನಡೆಯುತ್ತಲೇ ಇವೆ. ವಿಚ್ಛೇದಿತ ಪತಿಯಿಂದ ಜೀವನಾಂಶ ಪಡೆಯಲು 62 ವರ್ಷದ ಶಾ ಬಾನೊ ಅವರು ತಮ್ಮ ಪತಿ ಎಂ. ಅಹ್ಮದ್ ಖಾನ್ ವಿರುದ್ಧ 1985ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ್ದರು. ಆಗ ಸಿಆರ್ ಪಿಸಿ ಸೆಕ್ಷನ್ 125ರ ಅನ್ವಯ ಮುಸ್ಲಿಂ ಮಹಿಳೆಯರೂ ಜೀವನಾಂಶ ಪಡೆಯಲು ಅರ್ಹರು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಅಲ್ಲದೆ ‘ಏಕಪಕ್ಷೀಯವಾಗಿ ತ್ರಿವಳಿ ತಲಾಖ್ ಮೂಲಕ ಮಹಿಳೆಯರಿಗೆ ವಿಚ್ಛೇದನ ನೀಡಲಾಗುತ್ತಿದ್ದು ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನು ಸುಧಾರಣೆಯಾಗಬೇಕಿದೆ’ ಎಂದೂ ಆಗಲೇ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು. ಆದರೆ ಈ ತೀರ್ಪಿಗೆ ಮುಸ್ಲಿಮರಿಂದ ತೀವ್ರ ವಿರೋಧ ವ್ಯಕ್ತವಾದ ನಂತರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರವು ‘ಮುಸ್ಲಿಂ ಮಹಿಳೆಯರ (ವಿಚ್ಛೇದನೆಗೆ ಸಂಬಂಧಿಸಿದ ಹಕ್ಕುಗಳ ರಕ್ಷಣೆ) ಕಾಯ್ದೆ 1986’ ಜಾರಿಗೆ ತಂದಿದ್ದು ಇತಿಹಾಸ. ಮತ ಬ್ಯಾಂಕ್ ತುಷ್ಟೀಕರಣದ ರಾಜಕಾರಣದಲ್ಲಿ ಮಹಿಳೆಯ ಹಿತ ಹಿನ್ನೆಲೆಗೆ ಸರಿದಿತ್ತು. ಆದರೆ ಈಗ ಮತ್ತೆ ತ್ರಿವಳಿ ತಲಾಖ್‍ನಿಂದ ನೊಂದಿರುವ ಶಾಯರಾ ಬಾನೊ ಸೇರಿದಂತೆ ಹಲವು ಮಹಿಳೆಯರು ನಡೆಸಿದ ಕಾನೂನು ಸಮರದಲ್ಲಿ ಜಯ ಸಿಕ್ಕಿರುವುದು ಚರಿತ್ರಾರ್ಹ. ‘ಮುಸ್ಲಿಂ ರಾಷ್ಟ್ರ ಗಳಲ್ಲೇ ಇಲ್ಲದ ಈ ಆಚರಣೆಯನ್ನು ಭಾರತವೇಕೆ ಕೈಬಿಡಬಾರದು’ ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ಸರಿಯಾಗಿಯೇ ಇದೆ.
ತಲಾಖ್ ಬಗ್ಗೆ ಹಲವು ನೆಲೆಗಳಲ್ಲಿ ಈಗಾಗಲೇ ಚರ್ಚೆಗಳು ನಡೆದಿವೆ. ಇದು ಧಾರ್ಮಿಕ ಹಕ್ಕು ಎಂದು ಕೆಲವು ಮುಸ್ಲಿಂ ಸಂಘಟನೆಗಳು ವಾದಿಸಿವೆ. ವೈಯಕ್ತಿಕ ಕಾನೂನುಗಳಲ್ಲಿ ಅನಗತ್ಯವಾಗಿ ಮಧ್ಯಪ್ರವೇಶಿಸುವ ಈ ಪ್ರಯತ್ನವನ್ನು ಜಾತ್ಯತೀತ ರಾಷ್ಟ್ರದಲ್ಲಿ ಸಹಿಸಲಾಗದು ಎಂದೂ ಕೆಲವು ಮುಸ್ಲಿಂ ವಿದ್ವಾಂಸರು ವಾದಿಸಿದ್ದರು. ಆದರೆ ಲಿಂಗ ಸಮಾನತೆ, ಸಾಂವಿಧಾನಿಕ ನೈತಿಕತೆ ಮತ್ತು ಆತ್ಮಸಾಕ್ಷಿಯ ದೃಷ್ಟಿಯಿಂದ ಪರಿಶೀಲನೆಗೆ ಒಳಪಡಿಸಬೇಕು ಎಂದು ಕೇಂದ್ರ ಸರ್ಕಾರ ಒತ್ತಾಯಿಸಿತ್ತು. ‘ತ್ರಿವಳಿ ತಲಾಖ್ ಎಂಬುದು ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರ ನಡುವಣ ಸಂಘರ್ಷ ಅಲ್ಲ. ಇದು ಮುಸ್ಲಿಂ ಸಮುದಾಯದೊಳಗಿನ ಗಂಡಸರು ಮತ್ತು ಹೆಂಗಸರ ನಡುವಣ ಸಂಘರ್ಷ’ ಎಂದೂ ಸರ್ಕಾರ ಹೇಳಿತ್ತು. ದೀರ್ಘ ಕಾಲದಿಂದ ವಿವಾದದ ಕೇಂದ್ರಬಿಂದುವಾಗಿದ್ದ ಈ ವಿಚಾರದಲ್ಲಿ ಮಾನವಹಕ್ಕುಗಳು, ಜಾತ್ಯತೀತತೆ ಹಾಗೂ ಲಿಂಗತ್ವ ನ್ಯಾಯದ ಪ್ರಶ್ನೆಗಳು ಬೆಸೆದುಕೊಂಡಿವೆ. ಇಂತಹದೊಂದು ಕಾನೂನು ಹೋರಾಟದಲ್ಲಿ ಭಾರತೀಯ ಮುಸ್ಲಿಂ ಮಹಿಳಾ ಆಂದೋಲನದಂತಹ ಸಂಘಟನೆಯಷ್ಟೇ ಅಲ್ಲದೆ ಮುಸ್ಲಿಂ ಮಹಿಳೆಯರೂ ಮುಂಚೂಣಿಯಲ್ಲಿದ್ದು ಸಕ್ರಿಯವಾಗಿ ಭಾಗವಹಿಸಿ ಮಹಿಳಾ ಪರ ವಾದಗಳನ್ನು ಮಂಡಿಸಿರುವುದಂತೂ ವಿಶೇಷವಾದುದು. ಜೀವನಾಂಶ, ವಿಚ್ಛೇದನದಂತಹ ವಿಚಾರಗಳಲ್ಲಿ ಇತರ ಧರ್ಮದ ಮಹಿಳೆಯರು ಹಾಗೂ ಮುಸ್ಲಿಂ ಮಹಿಳೆಯರ ಮಧ್ಯೆ ಇರುವ ತಾರತಮ್ಯ ಇನ್ನಾದರೂ ನಿವಾರಣೆಯಾಗಬೇಕು. ಬಹುಶಃ ಏಕ ರೂಪ ನಾಗರಿಕ ಸಂಹಿತೆಯತ್ತ ಸಾಗಲು ಈ ಹೋರಾಟದ ಯಶಸ್ಸು ದಿಕ್ಸೂಚಿಯಾಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.