ADVERTISEMENT

ಯುದ್ಧರಂಗದಲ್ಲಿ ಮಹಿಳೆಗೆ ಅವಕಾಶ ಸೇನೆಯ ನಿರ್ಧಾರ ಕ್ರಾಂತಿಕಾರಕ

​ಪ್ರಜಾವಾಣಿ ವಾರ್ತೆ
Published 6 ಜೂನ್ 2017, 19:30 IST
Last Updated 6 ಜೂನ್ 2017, 19:30 IST
ಯುದ್ಧರಂಗದಲ್ಲಿ ಮಹಿಳೆಗೆ ಅವಕಾಶ ಸೇನೆಯ ನಿರ್ಧಾರ ಕ್ರಾಂತಿಕಾರಕ
ಯುದ್ಧರಂಗದಲ್ಲಿ ಮಹಿಳೆಗೆ ಅವಕಾಶ ಸೇನೆಯ ನಿರ್ಧಾರ ಕ್ರಾಂತಿಕಾರಕ   

ಮಹಿಳೆಯರಿಗೆ ಯುದ್ಧರಂಗದಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸಲು ಭೂಸೇನೆಯಲ್ಲಿ  ಅವಕಾಶ ನೀಡಲಾಗುವುದು ಎಂದು ಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.  ಕಳೆದ ವರ್ಷವಷ್ಟೇ ವಾಯುಪಡೆಯ ಯುದ್ಧ ವಿಮಾನಗಳ ಪೈಲಟ್‌ಗಳಾಗಿ  ಮೂವರು ಮಹಿಳೆಯರು ಸೇರ್ಪಡೆಯಾಗಿ ಇತಿಹಾಸ ನಿರ್ಮಿಸಿದ್ದರು.  ಪುರುಷ ಪ್ರಾಬಲ್ಯದ ರಕ್ಷಣಾ ಪಡೆಯಲ್ಲಿ ಲಿಂಗತ್ವ ತಾರತಮ್ಯದ ಗೋಡೆಗಳನ್ನು ಒಡೆಯಲು ಯತ್ನಿಸುವ ಈ ನಿರ್ಧಾರ ಕ್ರಾಂತಿಕಾರಕ ಹೆಜ್ಜೆ ಎಂದೇ ಹೇಳಬೇಕು. ಆರಂಭದಲ್ಲಿ ಸೇನೆಯ ಪೊಲೀಸ್ ವಿಭಾಗದ ಹುದ್ದೆಗಳಿಗೆ ಮಹಿಳೆಯರನ್ನು  ನೇಮಕ ಮಾಡಿಕೊಳ್ಳಲಾಗುವುದು. ಕ್ರಮೇಣ ರಣರಂಗದ ಕಾದಾಟದ  ಕ್ಷೇತ್ರಗಳಲ್ಲಿ ತೊಡಗಿಸುವುದಾಗಿ ಜನರಲ್ ರಾವತ್ ಹೇಳಿದ್ದಾರೆ. ‘ಮಹಿಳೆಯರು ಯೋಧರಾಗುವುದನ್ನು ನೋಡಲು ನಾನು ಕಾಯುತ್ತಿದ್ದೇನೆ’ ಎನ್ನುವ ಬಿಪಿನ್ ರಾವತ್ ಮಾತು, ಭಾರತೀಯ ಸೇನೆಯಲ್ಲಿ ಮನ್ವಂತರಕ್ಕೆ  ನಾಂದಿಯಾಗಲಿದೆ ಎಂಬುದು ಆಶಾದಾಯಕ.

ಹಾಗೆ ನೋಡಿದರೆ ಸೇನಾರಂಗದಲ್ಲಿ ಮಹಿಳಾ ಪಾಲ್ಗೊಳ್ಳು­ವಿಕೆಯ ಭಾರತದ ಇತಿಹಾಸ ಶ್ರೀಮಂತ­ವಾದುದು. 1857ರಲ್ಲಿ ಭಾರತದ ಮೊದಲ ಸ್ವಾತಂತ್ರ್ಯ ಸಮರದಲ್ಲಿ ಸೇನೆಯನ್ನು ಮುನ್ನಡೆಸಿದ ವೀರರಾಣಿ ಝಾನ್ಸಿ ಲಕ್ಷ್ಮಿಬಾಯಿಯನ್ನು ನಾವು ಇಲ್ಲಿ ನೆನೆದುಕೊಳ್ಳಬೇಕು. ನಂತರ ನೇತಾಜಿ­ ಸುಭಾಷ್ ಚಂದ್ರ ಬೋಸ್ ಅವರು ಸ್ಥಾಪಿಸಿದ  ಇಂಡಿಯನ್ ನ್ಯಾಷನಲ್ ಆರ್ಮಿಯ ಮಹಿಳಾ ಘಟಕಕ್ಕೆ  ‘ಝಾನ್ಸಿ ರಾಣಿ ರೆಜಿಮೆಂಟ್’ ಎಂಬ ಹೆಸರೇ ಇತ್ತು. ಹಾಗೆಯೇ ಕರ್ನಾಟಕದ ಕಿತ್ತೂರು ಚೆನ್ನಮ್ಮನನ್ನೂ ನಾವು ಮರೆಯಲಾಗದು. ಇಂತಹ ಪರಂಪರೆ ಇರುವ ಭಾರತದಲ್ಲಿ 1993ರಿಂದಷ್ಟೇ  ಭಾರತೀಯ ಸೇನೆಗೆ ಅಲ್ಪಾವಧಿ  ಸೇವಾ ನೇಮಕಾತಿಯಡಿ ಮಹಿಳಾ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭವಾಯಿತು. 5ರಿಂದ 14 ವರ್ಷಗಳವರೆಗಷ್ಟೇ  ಸಶಸ್ತ್ರ ಪಡೆಗಳಲ್ಲಿ ಕಾರ್ಯ ನಿರ್ವಹಿಸಲು ಇದರಿಂದ ಮಹಿಳೆಗೆ ಅವಕಾಶ ಸಿಗುತ್ತದೆ. 14 ವರ್ಷಗಳ ಸೇವೆ ಪೂರೈಕೆ ನಂತರ ಈ ಮಹಿಳೆಯರನ್ನು ಸೇವೆಯಿಂದ ತೆಗೆದು ಹಾಕಲಾಗುತ್ತದೆ.  ಸೇನೆಯಲ್ಲಿ ಕಾಯಂ ನೇಮಕಾತಿಗೆ ಮಹಿಳೆಗೆ ಅವಕಾಶವೇ ಇರಲಿಲ್ಲ. ಆದರೆ  ಈಗ ಹಲವು ವರ್ಷಗಳ ಹೋರಾಟದ ಫಲವಾಗಿ  ಸಶಸ್ತ್ರ ಪಡೆಗಳ ಆಯ್ದ ಶಾಖೆಗಳಲ್ಲಿ  ಮಹಿಳೆಗೆ ಕಾಯಂ ನೇಮಕಾತಿಯ ಅವಕಾಶವೂ ಸಿಕ್ಕಿದೆ.  ಹೀಗಿದ್ದೂ ಸೇನೆಯ ವೈದ್ಯಕೀಯ, ಕಾನೂನು, ಶಿಕ್ಷಣ, ಎಂಜಿನಿಯರಿಂಗ್ ವಿಭಾಗಗಳಲ್ಲಿ ಮಾತ್ರ ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಈಗ ಯುದ್ಧಭೂಮಿಯಲ್ಲೂ ಜವಾಬ್ದಾರಿ ನಿಭಾಯಿಸುವ ಅವಕಾಶಗಳನ್ನು ಮಹಿಳೆಯರಿಗೆ ನೀಡಲು ಮುಂದಾಗುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಮಹಿಳೆ ಯುದ್ಧ ಕೈದಿಯಾಗಬಹುದಾದಂತಹ ಸನ್ನಿವೇಶವನ್ನು ಹೇಗೆ ನಿರ್ವಹಿಸ­ಬೇಕೆಂಬ ಸಮಸ್ಯೆ, ಮಹಿಳೆಯನ್ನು ಕಾದಾಡುವ ಘಟಕಕ್ಕೆ ನಿಯುಕ್ತಿ ಮಾಡುವ ವಿಚಾರದಲ್ಲಿ ಈವರೆಗೆ ಭಾವನಾತ್ಮಕ ತಡೆಯಾಗಿತ್ತು. ಜೊತೆಗೆ ಯುದ್ಧಭೂಮಿಯಲ್ಲಿ ಕಾರ್ಯ ನಿರ್ವಹಿಸಲು ಅಗತ್ಯವಾದ ಅರ್ಹತೆಗಳನ್ನು ಪುರುಷ, ಮಹಿಳೆ ಎಂಬ ಭೇದಭಾವವಿಲ್ಲದೆ ಒಂದೇ ಅಳತೆಗೋಲಿನಲ್ಲೇ ಅಳೆಯಬೇಕಾಗುತ್ತದೆ. ಇದರಲ್ಲಿ ಯಾವುದೇ ರಾಜಿ ಇಲ್ಲ.  ಇಂತಹ ಅರ್ಹತೆಗಳನ್ನು ಮಹಿಳೆಯರು ಪ್ರದರ್ಶಿಸಿದ್ದಾರೆ ಎಂಬುದು ಸಕಾರಾತ್ಮಕವಾದದ್ದು.

ADVERTISEMENT

ಅಮೆರಿಕ,  ರಷ್ಯಾ, ಟರ್ಕಿ ಹಾಗೂ ಪಾಕಿಸ್ತಾನದಂತಹ ರಾಷ್ಟ್ರಗಳಲ್ಲಿ ಬಹಳ ದಿನಗಳಿಂದಲೇ ಮಹಿಳಾ ಫೈಟರ್ ಪೈಲಟ್‌­ಗಳಿದ್ದಾರೆ. ಹಾಗೆಯೇ ಮಲೇಷ್ಯಾ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಸಹ ಯುದ್ಧ ನೌಕೆ­ಗಳಲ್ಲಿ ಮಹಿಳೆಯರನ್ನು ನಿಯೋಜಿಸಿಕೊಂಡಿವೆ. ಅಮೆರಿಕವಂತೂ ಸಬ್ ಮೆರಿನ್‌ಗಳಲ್ಲೂ ಮಹಿಳೆಗೆ ಅವಕಾಶ ನೀಡಿದೆ.  ಈಗ ಭಾರತದಲ್ಲೂ  ಯುದ್ಧ ನೌಕೆಗಳಲ್ಲಿ ಸೇವೆ ಸಲ್ಲಿಸಲು ಮಹಿಳೆಗೆ ಅವಕಾಶ ಸಿಗುವಂತಾಗಬೇಕು ಎಂಬುದು ಮುಂದಿನ ನಡೆಯಾಗಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.