ADVERTISEMENT

ವಿದ್ಯಾರ್ಥಿನಿಯರ ಹೊಡೆದಾಟ ಅನಪೇಕ್ಷಿತ ಬೆಳವಣಿಗೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2016, 4:48 IST
Last Updated 28 ಮಾರ್ಚ್ 2016, 4:48 IST

ಬೆಂಗಳೂರಿನ ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಶನಿವಾರ ವಿದ್ಯಾರ್ಥಿನಿಯರ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿ, ಪ್ರಜ್ಞಾವಂತರು ತಲೆ ತಗ್ಗಿಸುವಂತೆ ಮಾಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಮಾದರಿ ಎನಿಸಿಕೊಂಡಿದ್ದ ನಮ್ಮ ರಾಜ್ಯದಲ್ಲಿ ಇಂಥ ಘಟನೆ ನಡೆಯಬಾರದಾಗಿತ್ತು.

ಓದುವುದಕ್ಕಾಗಿ ಕಾಲೇಜಿಗೆ ಬರುವ ಯುವತಿಯರು ಗುಂಪು ಕಟ್ಟಿಕೊಂಡು ಜಡೆ ಹಿಡಿದು ಎಳೆದಾಡಿದ್ದು, ಹೊಡೆದಾಡಿಕೊಂಡಿದ್ದು, ಒಬ್ಬರ ಮೇಲೊಬ್ಬರು ಬೈಗುಳದ ಮಳೆ ಸುರಿಸಿದ್ದನ್ನು ನೋಡಿದರೆ ದಿಗ್ಭ್ರಮೆಯಾಗುತ್ತದೆ. ಇಂಥ ನಡವಳಿಕೆಯನ್ನು ಯಾವ ರೀತಿಯಲ್ಲೂ ಸಮರ್ಥಿಸಲು ಸಾಧ್ಯವಿಲ್ಲ. ಅಷ್ಟಕ್ಕೂ, ಇವರೇನಾದರೂ ಶೈಕ್ಷಣಿಕ ಸೌಲಭ್ಯಗಳ ಕೊರತೆ ಬಗ್ಗೆ ಪ್ರತಿಭಟಿಸಿ ಧರಣಿ, ರ್‍ಯಾಲಿ ಮಾಡಿದ್ದರೆ ಮೆಚ್ಚಬಹುದಿತ್ತು.

ಆದರೆ ಇದು ನಡೆದದ್ದು ಪ್ರಾಂಶುಪಾಲರು ಮತ್ತು ಇಬ್ಬರು ಅಧ್ಯಾಪಕರ ವರ್ಗಾವಣೆ, ನಿಯೋಜನೆಗೆ ಸಂಬಂಧಪಟ್ಟ ವಿಚಾರಕ್ಕೆ. ವಾಣಿಜ್ಯ ವಿಭಾಗದ ಒಬ್ಬ ಪ್ರಾಧ್ಯಾಪಕ ಮತ್ತು ಕಲಾ ವಿಭಾಗದ ಒಬ್ಬ ಪ್ರಾಧ್ಯಾಪಕಿಯನ್ನು ಬೇರೆಡೆ ನಿಯೋಜಿಸಿದ ನಂತರ ಕಾಲೇಜಿನಲ್ಲಿ ಆರಂಭವಾದ ಕಿತ್ತಾಟ ಹಾದಿಬೀದಿ ರಂಪವಾಗಿದೆ. ಈ ನಿಯೋಜನೆಯನ್ನು ರದ್ದು ಮಾಡಬೇಕು ಎನ್ನುವ ಬೇಡಿಕೆ ಇಟ್ಟುಕೊಂಡು ಹುಡುಗಿಯರ ಒಂದು ಗುಂಪು ಧರಣಿ, ಪ್ರತಿಭಟನೆ ಮಾರ್ಗ ತುಳಿದಿದೆ. ಈ  ಬೆಳವಣಿಗೆಗಳ ನಡುವೆಯೇ 3–4 ದಿನಗಳ ಹಿಂದೆ ಮಹಿಳಾ ಪ್ರಾಂಶುಪಾಲರನ್ನೂ ಬೇರೊಂದು ಕಾಲೇಜಿಗೆ ವರ್ಗಾವಣೆ ಮಾಡಲಾಗಿದೆ.

ಆದರೂ ಅವರು ಮತ್ತೆ ಕಾಲೇಜಿಗೆ ಬರುತ್ತಿದ್ದಾರೆ ಎನ್ನುವುದು ಕೆಲ ವಿದ್ಯಾರ್ಥಿನಿಯರ ಕೋಪಕ್ಕೆ ಕಾರಣ. ಇವರಿಗೆ ವಿರುದ್ಧವಾಗಿ ವಿದ್ಯಾರ್ಥಿನಿಯರ ಇನ್ನೊಂದು ಬಣ ಪ್ರಾಂಶುಪಾಲರ ಬೆಂಬಲಕ್ಕೆ ನಿಂತಿದೆ. ಇಂಥ ಅವಕಾಶಕ್ಕೆ ಹೊಂಚು ಹಾಕುತ್ತಿದ್ದ ಕಾಂಗ್ರೆಸ್‌ನ ಎನ್‌ಎಸ್‌ಯುಐ ಮತ್ತು ಸಂಘ ಪರಿವಾರದ ಎಬಿವಿಪಿ ವಿದ್ಯಾರ್ಥಿ ಸಂಘಟನೆಗಳು ವಿದ್ಯಾರ್ಥಿನಿಯರ ನಡುವೆ ಗುಂಪುಗಾರಿಕೆ ಬೆಳೆಸಿ ಪ್ರತಿಭಟನೆಗೆ ಪ್ರಚೋದನೆ ನೀಡಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿವೆ.

ವರ್ಗಾವಣೆಯಾದವರು ಕೂಡ ತಮ್ಮೊಳಗಿನ ವೈಮನಸ್ಸು, ಸೇಡು ತೀರಿಸಿಕೊಳ್ಳಲು ವಿದ್ಯಾರ್ಥಿನಿಯರನ್ನು ದಾಳವಾಗಿ ಬಳಸಿಕೊಂಡಿದ್ದಾರೆ. ಇಡೀ ಕಾಲೇಜಿನ ಘನತೆ, ಗೌರವ ವನ್ನು ಮಣ್ಣುಪಾಲು ಮಾಡಿದ್ದಾರೆ. ವಿದ್ಯಾರ್ಥಿನಿಯರಿಗೆ ಪಾಠ ಹೇಳಿಕೊಟ್ಟು ಅವರ ಬದುಕನ್ನು ಹಸನು ಮಾಡಬೇಕಾದ  ಕರ್ತವ್ಯವನ್ನು ಮರೆತಿದ್ದಾರೆ. ಆ ಸ್ಥಾನದಲ್ಲಿ ಮುಂದುವರಿಯಲು ಇವರು ಅರ್ಹರೇ? ಇಂಥವರ ಕೆಟ್ಟ ಪ್ರವೃತ್ತಿಯನ್ನು ಈಗಲೇ ಹೊಸಕಿ ಹಾಕಬೇಕು. ವಿದ್ಯಾರ್ಥಿನಿಯರ ಮನಸ್ಸಿನಲ್ಲಿ ದ್ವೇಷ ತುಂಬಿದವರನ್ನು ಶಿಕ್ಷಿಸಬೇಕು.

ಇಲ್ಲದಿದ್ದರೆ ಉಳಿದ ಕಡೆಯೂ ಒತ್ತಡ ತಂತ್ರ ಹೇರಲು ಇದು ಪ್ರೇರಣೆ ನೀಡಬಹುದು. ಈಗಾಗಲೆ  ಹೆಸರು ಕೆಡಿಸಿಕೊಂಡಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಅಧಃಪತನಕ್ಕೆ ನೂಕಬಹುದು.

ರಾಜ್ಯದ ಆಡಳಿತದ ಕೇಂದ್ರ ವಿಧಾನಸೌಧದ ಸಮೀಪದಲ್ಲಿನ ಕಾಲೇಜೊಂದರಲ್ಲಿ ಇಷ್ಟೆಲ್ಲ ಅಸಹ್ಯಕರ ವಿದ್ಯಮಾನಗಳು ನಡೆಯುತ್ತಿದ್ದರೂ ಏನೂ ಆಗಿಯೇ ಇಲ್ಲ ಎಂಬಂತಿರುವ ಉನ್ನತ ಶಿಕ್ಷಣ ಇಲಾಖೆಯ ವೈಫಲ್ಯವಂತೂ ಇಲ್ಲಿ ಎದ್ದು ಕಾಣುತ್ತದೆ. ವಿದ್ಯಾರ್ಥಿನಿಯರ ಕೋಪ-ತಾಪ, ಪರ- ವಿರೋಧದ ಪರಿಣಾಮಗಳನ್ನು ಅರಿತುಕೊಂಡು ಮುಂದಿನ ಬೆಳವಣಿಗೆಗಳನ್ನು ಊಹಿಸುವಲ್ಲಿ ಅದು ಸೋತಿದೆ.

ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸದೆ ಎಡವಿದೆ. ಅಶಿಸ್ತು ಸಹಿಸಿಕೊಳ್ಳುವುದಿಲ್ಲ, ರಾಜಕೀಯ ಮೇಲಾಟಕ್ಕೆ ಅವಕಾಶ ಕೊಡುವುದಿಲ್ಲ ಎಂದು ಇಲಾಖೆಯ ಹೊಣೆ ಹೊತ್ತವರು ಆರಂಭದಲ್ಲಿಯೇ ದೃಢವಾಗಿ ಹೇಳಿದ್ದರೆ, ಅದೇ ರೀತಿ ನಡೆದುಕೊಂಡಿದ್ದರೆ ಈ ರಾದ್ಧಾಂತ ಇಷ್ಟು ವಿಕೋಪಕ್ಕೆ ಹೋಗುತ್ತಿರಲಿಲ್ಲ, ಬೀದಿಗೆ ಬರುತ್ತಿರಲಿಲ್ಲ. ಎಬಿವಿಪಿ, ಎನ್‌ಎಸ್‌ಯುಐ ಅಥವಾ ಇನ್ಯಾವುದೇ ವಿದ್ಯಾರ್ಥಿ ಸಂಘಟನೆ, ಕಾಲೇಜುಗಳ ಶೈಕ್ಷಣಿಕ ವಾತಾವರಣವನ್ನು ಹೊಲಸು ಮಾಡಲು ಹೋಗಬಾರದು.

ವಿದ್ಯಾರ್ಥಿನಿಯರು ಕೂಡ ಯಾರದೋ ಕುಮ್ಮಕ್ಕಿನಿಂದ ತಮ್ಮದೇ ಸಹಪಾಠಿಗಳ ಬಗ್ಗೆ ದ್ವೇಷ ಬೆಳೆಸಿಕೊಳ್ಳಬಾರದು. ತಾವು ಬಂದಿರುವುದು ಜ್ಞಾನ ಸಂಪಾದನೆಗಾಗಿ ಎಂಬ ಎಚ್ಚರ ಸದಾ ಇರಬೇಕು. ಸರ್ಕಾರ ಈ ವಿದ್ಯಮಾನವನ್ನು ಗಂಭೀರವಾಗಿ ಪರಿಗಣಿಸಿ ತುರ್ತು ಕ್ರಮ ತೆಗೆದುಕೊಳ್ಳಬೇಕು. ಶೈಕ್ಷಣಿಕ ವರ್ಷದ ನಡುವೆ ಪ್ರಾಧ್ಯಾಪಕರನ್ನು ಬೇರೆ ಕಡೆಗೆ ನಿಯೋಜನೆ ಮೇಲೆ ಕಳಿಸುವ ಇಲ್ಲವೇ ವರ್ಗಾವಣೆ ಮಾಡುವ ತುರ್ತು ಏನಿತ್ತು? ಇದಕ್ಕೆ ಕಾರಣವಾದ ಅಂಶಗಳನ್ನು ಬಹಿರಂಗಪಡಿಸಬೇಕು.

ಬೇಕೆನಿಸಿದಾಗ ವರ್ಗಾವಣೆ ಮಾಡಿದರೆ ಅದರಿಂದ ವಿದ್ಯಾರ್ಥಿಗಳ ಕಲಿಕಾ ಪ್ರಕ್ರಿಯೆಯಲ್ಲಿ ಏರುಪೇರು ಆಗುವುದಿಲ್ಲವೇ? ಶೈಕ್ಷಣಿಕ ವರ್ಷದ ನಡುವಿನಲ್ಲಿ ವಿನಾಕಾರಣ ನಿಯೋಜನೆ ಮೇರೆಗೆ ಬೇರೆಡೆ ಕಳುಹಿಸುವ ಇಲ್ಲವೇ ವರ್ಗಾವಣೆ ಮಾಡುವ ಪ್ರವೃತ್ತಿ ಸಲ್ಲದು. ಶೈಕ್ಷಣಿಕ ವಾತಾವರಣ ಕೆಡಿಸುವ ಶಕ್ತಿಗಳನ್ನು ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.