ADVERTISEMENT

ವ್ಯಕ್ತಿಯ ಖಾಸಗಿತನದೊಳಕ್ಕೆ ಇಣುಕುವ ಪ್ರವೃತ್ತಿಗೆ ತಡೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2017, 19:30 IST
Last Updated 27 ಆಗಸ್ಟ್ 2017, 19:30 IST
ವ್ಯಕ್ತಿಯ ಖಾಸಗಿತನದೊಳಕ್ಕೆ ಇಣುಕುವ ಪ್ರವೃತ್ತಿಗೆ ತಡೆ
ವ್ಯಕ್ತಿಯ ಖಾಸಗಿತನದೊಳಕ್ಕೆ ಇಣುಕುವ ಪ್ರವೃತ್ತಿಗೆ ತಡೆ   

ಐತಿಹಾಸಿಕ ಎಂದು ಬಣ್ಣಿಸಬಹುದಾದ ತೀರ್ಪಿನ ಮೂಲಕ ಭಾರತದ ಅತ್ಯುನ್ನತ ನ್ಯಾಯಾಲಯ ‘ಖಾಸಗಿತನವನ್ನು ಸಂವಿಧಾನದತ್ತವಾದ ಮೂಲಭೂತ ಹಕ್ಕು’ ಎಂದು ಮಾನ್ಯ ಮಾಡಿದೆ. ತಂತ್ರಜ್ಞಾನವು ಜಗತ್ತನ್ನೇ ಕುಗ್ಗಿಸುತ್ತಿರುವ ಮತ್ತು ವೈಯಕ್ತಿಕ ಮಾಹಿತಿಯ ಮೇಲೆ ವ್ಯಕ್ತಿಯ ನಿಯಂತ್ರಣವೇ ತಪ್ಪಿ ಹೋಗುತ್ತಿರುವ ಭಾವ ಮನೆ ಮಾಡಿರುವ ಸಂದರ್ಭದಲ್ಲಿ ಹೊರಬಿದ್ದಿರುವ ಈ ತೀರ್ಪು, ನಾಗರಿಕ ಹಕ್ಕೊಂದನ್ನು ಮರುಸ್ಥಾಪಿಸಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಖಾಸಗಿತನಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಹಳಷ್ಟು ಚರ್ಚೆಗಳು ನಡೆದಿವೆ. ಸ್ಪಷ್ಟ ವ್ಯಾಖ್ಯಾನಗಳು ರೂಪುಗೊಂಡಿವೆ. ಅಭಿವೃದ್ಧಿಶೀಲ ದೇಶಗಳಲ್ಲಿ ಈ ಹಕ್ಕನ್ನು ನಿರ್ವಚಿಸುವುದಿರಲಿ ಅಂಥದ್ದೊಂದು ಇದೆ ಎಂಬುದನ್ನು ಒಪ್ಪಿಕೊಳ್ಳುವುದಕ್ಕೇ ಸರ್ಕಾರಗಳು ಸಿದ್ಧವಿಲ್ಲ. ಈಗ ಸುಪ್ರೀಂ ಕೋರ್ಟ್ ತೀರ್ಪಿಗೆ ಕಾರಣವಾಗಿರುವ ಮೊಕದ್ದಮೆಯ ವಿಚಾರಣೆಯ ಸಂದರ್ಭದಲ್ಲಿ ಕೇಂದ್ರ ಹಾಗೂ ಕೆಲವು ರಾಜ್ಯ ಸರ್ಕಾರಗಳು ಮಂಡಿಸಿದ ವಾದಗಳು ವಿಚಿತ್ರವಾಗಿದ್ದವು. ಕೇಂದ್ರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ಒಬ್ಬರು ‘ಖಾಸಗಿತನ ಮೂಲಭೂತ ಹಕ್ಕಲ್ಲ’ ಎಂದು ಪ್ರತಿಪಾದಿಸಿದ್ದರು. ಅವರ ನಂತರ ಬಂದ ಸಾಲಿಸಿಟರ್ ಜನರಲ್ ‘ಖಾಸಗಿತನ ಎಂಬುದು ಅನಿರ್ಬಂಧಿತ ಹಕ್ಕಲ್ಲ’ ಎಂಬ ವಾದ ಮಂಡಿಸಿದ್ದರು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ದತ್ತವಾಗುವ ಎಲ್ಲಾ ಹಕ್ಕುಗಳೂ ಕೆಲವು ನಿರ್ಬಂಧಗಳ ಜೊತೆಗೇ ಬರುತ್ತವೆಯೇ ಹೊರತು ಅನಿರ್ಬಂಧಿತ ವಾಗಿ ಅಲ್ಲ. ವಾಕ್ ಸ್ವಾತಂತ್ರ್ಯವಿದೆ ಎಂಬ ಕಾರಣಕ್ಕೆ ವಿನಾಕಾರಣ ಒಬ್ಬರನ್ನು ದೂಷಿಸಲು ಸಾಧ್ಯವಿಲ್ಲ. ಹಾಗೆ ಮಾಡಿದವರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳುವುದಕ್ಕೆ ಬೇಕಿರುವ ನಿಯಮಗಳು ನಮ್ಮಲ್ಲಿವೆ. ಖಾಸಗಿತನದ ಹಕ್ಕು ಇದೆ ಎಂದು ಪ್ರತಿಪಾದಿಸಿದ ಯಾರೂ ಇದನ್ನು ಅನಿರ್ಬಂಧಿತ ಹಕ್ಕನ್ನಾಗಿ ನೀಡಬೇಕು ಎಂದು ಕೇಳಿರಲೂ ಇಲ್ಲ. ಆದರೂ ಸಾಲಿಸಿಟರ್ ಜನರಲ್ ಹೀಗೊಂದು ವಾದಮಂಡಿಸಿದ್ದರ ಹಿಂದೆ ಸರ್ಕಾರಗಳಿಗೆ ವ್ಯಕ್ತಿಯ ಖಾಸಗಿತನದ ಬಗ್ಗೆ ಇರುವ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ. ನ್ಯಾಯಾಲಯದ ತೀರ್ಪು, ವ್ಯಕ್ತಿಯ ಖಾಸಗಿತನದ ಬಗ್ಗೆ ಪ್ರಭುತ್ವಗಳಿಗೆ ಇರುವ ಉಪೇಕ್ಷೆಯನ್ನು ದೂರಮಾಡುವುದರ ಜೊತೆಗೆ ಪ್ರಜಾಪ್ರಭುತ್ವದ ಮೂಲಭೂತ ಘಟಕವಾಗಿರುವ ಪ್ರಜೆಯ ಪರವಾಗಿ ನಿಂತಿದೆ.

ಖಾಸಗಿತನದ ಹಕ್ಕನ್ನು ಮೂಲಭೂತ ಹಕ್ಕೆಂದುದೃಢೀಕರಿಸಿದ ಮಾತ್ರಕ್ಕೆ ಖಾಸಗಿತನವನ್ನು ಉಲ್ಲಂಘಿಸುವ ಸಮಸ್ಯೆಗಳೆಲ್ಲವೂ ನಿವಾರಣೆಯಾಗುತ್ತವೆ ಎಂದು ಭಾವಿಸಬೇಕಾಗಿಲ್ಲ. ಮಾಹಿತಿ ತಂತ್ರಜ್ಞಾನದ ಸಾಧ್ಯತೆಗಳು ಖಾಸಗಿ ಮಾಹಿತಿ ಮತ್ತು ಸಾರ್ವಜನಿಕ ಮಾಹಿತಿಯ ನಡುವಣ ಗೆರೆಯನ್ನು ತೆಳುವಾಗಿಸಿರುವ ಸಂದರ್ಭದಲ್ಲಿ ಈ ತೀರ್ಪಿನ ಪರಿಣಾಮಗಳನ್ನುಎದುರು ನೋಡಬೇಕಾಗುತ್ತದೆ. ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಫಲಾನುಭವಿಯಾಗುವುದಕ್ಕೆ ಆಧಾರ್ ಸಂಖ್ಯೆಯನ್ನು ಹೊಂದಿರಲೇಬೇಕು ಎಂಬ ಷರತ್ತು ಈ ಅಸಂಗತಕ್ಕೆ ಅತ್ಯುತ್ತಮ ಉದಾಹರಣೆ. ಪ್ರಜೆಯ ಆಹಾರದ ಹಕ್ಕನ್ನು ಖಾತರಿಪಡಿಸುವುದಕ್ಕೆ ಸರ್ಕಾರ ಪಡಿತರ ವಿತರಿಸುತ್ತದೆ. ಈ ಹಕ್ಕನ್ನು ಪಡೆದುಕೊಳ್ಳುವುದಕ್ಕೆ ವ್ಯಕ್ತಿ ಖಾಸಗಿತನದ ಹಕ್ಕನ್ನು ಬಿಟ್ಟುಕೊಡಬೇಕಾದ ವಿಚಿತ್ರ ತರ್ಕವೊಂದು ಇಲ್ಲಿದೆ.

ಈ ಬಗೆಯ ಗೊಂದಲಗಳು ಇನ್ನೂ ಅನೇಕ ಸಂದರ್ಭಗಳಲ್ಲಿ ಸೃಷ್ಟಿಯಾಗುವ ಸಾಧ್ಯತೆಗಳಿವೆ. ಸಲಿಂಗ ಸಂಬಂಧಗಳನ್ನು ಭಾರತೀಯ ದಂಡ ಸಂಹಿತೆಯು ಅಪರಾಧ ಎಂದು ಪರಿಗಣಿಸುತ್ತದೆ. ವಯಸ್ಕರ ಒಪ್ಪಿತ ಸಂಬಂಧ ಖಾಸಗಿತನದ ವ್ಯಾಪ್ತಿಯೊಳಗೆ ಬರುತ್ತದೆ. ಗರ್ಭಪಾತ, ದಯಾಮರಣ ಹಾಗೂ ಅಪರಾಧ ಪ್ರಕರಣಗಳಲ್ಲಿ ಡಿಎನ್ಎ ಆಧಾರಿತ ತಂತ್ರಜ್ಞಾನ ಬಳಕೆಮುಂತಾದವುಗಳನ್ನು ಹೇಗೆ ನಿರ್ವಚಿಸಿಕೊಳ್ಳಬೇಕು ಎಂಬ ಪ್ರಶ್ನೆಯೂ ಇಲ್ಲಿದೆ. ಈ ಎಲ್ಲಾಪ್ರಶ್ನೆಗಳು ಸದ್ಯಕ್ಕೆ ಬಹಳ ಸಂಕೀರ್ಣವಾಗಿ ಕಂಡರೂ ಇವುಗಳನ್ನು ಪರಿಹರಿಸಿಕೊಳ್ಳುವ ಪ್ರಬುದ್ಧತೆ ನಮ್ಮ ಪ್ರಜಾಪ್ರಭುತ್ವ ಮತ್ತು ನ್ಯಾಯಾಂಗಕ್ಕೆ ಇದೆ. ಬಹುಕಾಲದಿಂದ ಕೊಳೆಯುತ್ತಿರುವ ‘ವಿದ್ಯುನ್ಮಾನ ರೂಪದಲ್ಲಿರುವ ವೈಯಕ್ತಿಕ ಮಾಹಿತಿ ಸಂರಕ್ಷಣೆಗೆ ಸಂಬಂಧಿಸಿದ ಕಾಯ್ದೆ’ ಇನ್ನಾದರೂ ಜೀವ ಪಡೆದುಕೊಳ್ಳಬಹುದು ಎಂಬ ನಿರೀಕ್ಷೆಯನ್ನು ಈ ತೀರ್ಪು ಬಲಪಡಿಸಿದೆ. ಈಗ ವೈಯಕ್ತಿಕ ಮಾಹಿತಿಯ ಸಂಗ್ರಹ ಎಂಬುದು ಕೇವಲ ಸರ್ಕಾರದ ಕಣ್ಗಾವಲಿನ ಮಾರ್ಗವಾಗಿಯಷ್ಟೇ ಉಳಿದಿಲ್ಲ. ಖಾಸಗಿ ಉದ್ಯಮಗಳಿಗೆ ತಮ್ಮ ಗ್ರಾಹಕರ ಇಷ್ಟಾನಿಷ್ಟಗಳನ್ನು ಅರಿಯುವ ಮಾರ್ಗವೂ ಆಗಿದೆ. ಸುಪ್ರೀಂ ಕೋರ್ಟ್‌ನ ತೀರ್ಪು, ವಾಣಿಜ್ಯ ಉದ್ದೇಶದಿಂದ ಖಾಸಗಿತನದೊಳಕ್ಕೆ ನುಸುಳುವ ಪ್ರವೃತ್ತಿಯನ್ನು ತಡೆಯುವಲ್ಲಿ ಬಹುಮುಖ್ಯ ಪಾತ್ರ ವಹಿಸುವ ಸಾಧ್ಯತೆ ಇದೆ. ವ್ಯಕ್ತಿಯ ಖಾಸಗಿತನದೊಳಕ್ಕೆ ಇಣುಕುವ ಪ್ರಭುತ್ವದ ಗುಣವನ್ನು ಇದು ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದೇ ಹೊರತು ಸಂಪೂರ್ಣ ನಿವಾರಿಸುವುದಿಲ್ಲ. ಖಾಸಗಿತನ ರಕ್ಷಣೆಗೆ ಬಹಳ ಕಠಿಣವಾದ ಶಾಸನಗಳಿರುವ ದೇಶಗಳಲ್ಲೇ ಇದು ಸಾಬೀತಾಗಿಬಿಟ್ಟಿದೆ. ರಾಷ್ಟ್ರೀಯ ಭದ್ರತೆಯಂಥ ನೆಪಗಳ ಮೂಲಕ ಸರ್ಕಾರ, ಖಾಸಗಿತನದೊಳಕ್ಕೆ ನುಸುಳುವ ಅವಕಾಶವನ್ನು ಯಾವಾಗಲೂ ಇಟ್ಟುಕೊಂಡಿರುತ್ತದೆ. ಈ ನೆಪದಲ್ಲಿ ಖಾಸಗಿತನ ಹಕ್ಕಿನ ಉಲ್ಲಂಘನೆ ಆಗದಂತೆ ಜನರು ಎಚ್ಚರ ವಹಿಸಬೇಕಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.