ಒಂದು ಕಾಲದಲ್ಲಿ `ಸಭ್ಯರ ಆಟ' ಎಂದು ಕರೆಸಿಕೊಳ್ಳುತ್ತಿದ್ದ ಕ್ರಿಕೆಟ್ ಇತ್ತೀಚೆಗೆ ನೈತಿಕ ಅಧಃಪತನದ ಹಾದಿ ಹಿಡಿದಿದೆ. ಐಪಿಎಲ್‌ಕ್ರಿಕೆಟ್ ಪಂದ್ಯಾಟಗಳಲ್ಲಿ ನಡೆದಿರುವ `ಸ್ಪಾಟ್ ಫಿಕ್ಸಿಂಗ್' ಕಳ್ಳಾಟ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಲ್ಲಿ ತಳಮಳ ಉಂಟು ಮಾಡಿದೆ. ಗುಟ್ಟಾಗಿ ಲಕ್ಷಾಂತರ ರೂಪಾಯಿ ಹಣ ಪಡೆದು, ಜೂಜುಕೋರರಿಗೆ ಅನುಕೂಲವಾಗುವಂತೆ ಆಟವಾಡುತ್ತಿದ್ದ ಮೂವರು ಆಟಗಾರರ ಬಂಧನದ ಬಳಿಕ, ವಂಚನೆಯಲ್ಲಿ ಪಾಲ್ಗೊಳ್ಳದ ಸಭ್ಯ ಕ್ರಿಕೆಟಿಗರೂ ಮುಖ ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಉಂಟಾಗಿದೆ.
ಚಾಂಪಿಯನ್ಸ್ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಲು ಆಯ್ಕೆಯಾದ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಪತ್ರಿಕಾಗೋಷ್ಠಿಯಲ್ಲಿ ಸ್ಪಾಟ್ ಫಿಕ್ಸಿಂಗ್‌ಗೆ ಸಂಬಂಧಿಸಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಮೌನ ವಹಿಸಿದ್ದು ನೋಡಿದರೆ, ಈ ವಂಚನೆಯ ಆಳ-ಅಗಲದ ಅರಿವಾಗುತ್ತದೆ.
ಇಡೀ ದೇಶವನ್ನು ಪ್ರತಿನಿಧಿಸುವ ಕ್ರಿಕೆಟ್ ತಂಡದ ನಾಯಕನೊಬ್ಬ, ಪತ್ರಕರ್ತರ ಜತೆ ಮನಬಿಚ್ಚಿ ಮಾತನಾಡಲಾಗದಂತಹ ಸ್ಥಿತಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೃಷ್ಟಿ ಮಾಡಿದೆಯೆ? ಇಲ್ಲವಾದಲ್ಲಿ, ಪತ್ರಕರ್ತರ ಪ್ರಶ್ನೆಗಳಿಗೆ ದೋನಿ ಉತ್ತರಿಸಲು ಹೊರಟಾಗ ಬಿಸಿಸಿಐನ ಮಾಧ್ಯಮ ಮ್ಯಾನೇಜರ್ ತಡೆ ಒಡ್ಡಿದ್ದೇಕೆ? ಸ್ಪಾಟ್ ಫಿಕ್ಸಿಂಗ್‌ನಲ್ಲಿ ಸ್ವತಃ ದೋನಿಯವರ ಪತ್ನಿ ಸಾಕ್ಷಿಯವರ ಬಗ್ಗೆಯೇ ಅನುಮಾನಗಳು ಇರುವಾಗ ದೋನಿ ವೈಯಕ್ತಿಕವಾಗಿಯೂ ಸ್ಪಷ್ಟೀಕರಣ ನೀಡಬೇಕಾದ ಅಗತ್ಯ ಇತ್ತಲ್ಲವೆ? ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ಬಂಧಿತರಾಗಿರುವ ಬಾಲಿವುಡ್ ನಟ ವಿಂದೂ ದಾರಾಸಿಂಗ್ ಜತೆಗೆ ಮೈದಾನದಲ್ಲಿ ನಿಕಟವಾಗಿ ಓಡಾಡುತ್ತಿದ್ದ ಸಾಕ್ಷಿ ಅವರೂ ಈ ಹಗರಣದಲ್ಲಿ ಖಂಡಿತಾ ಶಾಮೀಲಾಗಿಲ್ಲ ಎಂದು ಹೇಳಬೇಕಾದವರು ಯಾರು?
ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರ ಅಳಿಯ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಓ ಗುರುನಾಥ ಮೇಯಪ್ಪನ್‌ಗೆ ಬುಕ್ಕೀಗಳ ಜತೆ ಇರುವ ಸಂಬಂಧದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸ್ಪಾಟ್ ಫಿಕ್ಸಿಂಗ್‌ನಲ್ಲಿ `ಭೂಗತ ಪಾತಕಿ' ದಾವೂದ್ ಇಬ್ರಾಹಿಂ ಕೈವಾಡದ ಬಗ್ಗೆಯೂ ಸುಳಿವು ಸಿಕ್ಕಿದೆ. ಅನುಮಾನದ ಬೆರಳುಗಳು ಸ್ವತಃ ಶ್ರೀನಿವಾಸನ್ ಕಡೆಗೂ ತೋರುತ್ತಿವೆ. ಪರಿಸ್ಥಿತಿ ಹೀಗಿರುವಾಗ ನಿಜಕ್ಕೂ ನೈತಿಕತೆ ಇದ್ದಿದ್ದರೆ ಬಿಸಿಸಿಐ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ಕೊಟ್ಟು ಶ್ರೀನಿವಾಸನ್ ನಿಷ್ಪಕ್ಷಪಾತ ತನಿಖೆಗೆ ಅನುವು ಮಾಡಬೇಕಿತ್ತು.
ಆದರೆ ಶ್ರೀನಿವಾಸನ್ ಬೆಂಬಲಕ್ಕೆ ಕಾಂಗ್ರೆಸ್, ಬಿಜೆಪಿ ಸಹಿತ ಬಹುತೇಕ ಎಲ್ಲ ಪಕ್ಷಗಳ ಪ್ರಭಾವಶಾಲಿ ರಾಜಕಾರಣಿಗಳೂ ನಿಂತಿದ್ದಾರೆ. ಈ ಹಿಂದೆ ಕೇಂದ್ರ ಕ್ರೀಡಾ ಸಚಿವ ಅಜಯ್ ಮಾಕನ್, ಬಿಸಿಸಿಐಯನ್ನು ಆರ್‌ಟಿಇ ಕಾಯ್ದೆಯ ವ್ಯಾಪ್ತಿಗೆ ತರಲು ಯತ್ನಿಸಿದಾಗ ಇದೇ ರಾಜಕಾರಣಿಗಳು ಅದಕ್ಕೆ ತಡೆಯೊಡ್ಡಿದ್ದರು. ಪ್ರತಿವರ್ಷ ್ಙ 1000 ಕೋಟಿಗೂ ಹೆಚ್ಚು ಆದಾಯ ಗಳಿಸುವ, ಖಾಸಗಿ ಸಂಸ್ಥೆಯೊಂದು ಹೀಗೆ ಕಾನೂನುಬಾಹಿರ ಕೆಲಸಗಳನ್ನು ಮಾಡುತ್ತಿದ್ದರೆ, ಅದಕ್ಕೆ ಸಕಲ ಸೌಲಭ್ಯಗಳನ್ನೂ ಒದಗಿಸುತ್ತಿರುವ ಸರ್ಕಾರ ಸುಮ್ಮನೆ ಕುಳಿತು ನೋಡುವುದು ಸರಿಯಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.