ADVERTISEMENT

ಸಮ್ಮೇಳನ ಮುಂದೂಡಿಕೆಯಿಂದ ಯಾವ ಸಾಧನೆಯೂ ಆಗದು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2015, 19:51 IST
Last Updated 6 ಆಗಸ್ಟ್ 2015, 19:51 IST

ರಾಯಚೂರಿನಲ್ಲಿ ನಡೆಸಲು ಉದ್ದೇಶಿಸಿರುವ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅಕ್ಟೋಬರ್‌ ತಿಂಗಳಲ್ಲಿ ನಡೆಸಬೇಕೆ ಅಥವಾ ಮುಂದೂಡಬೇಕೆ ಎನ್ನುವ ದ್ವಂದ್ವ ಸಂಘಟಕರನ್ನು ಕಾಡುತ್ತಿದೆ.

ರಾಜ್ಯದಲ್ಲಿ ನಡೆಯುತ್ತಿರುವ ರೈತರ ಸರಣಿ ಆತ್ಮಹತ್ಯೆ ಪ್ರಕರಣಗಳು ಹಾಗೂ ಬರದ ಛಾಯೆಯ ಸಂದರ್ಭದಲ್ಲಿ ಸಮ್ಮೇಳನ ನಡೆಯುವುದು ವಿಹಿತವಲ್ಲ ಎನ್ನುವುದು ಕೆಲವರ ಅನಿಸಿಕೆ. ಸೂತಕದ ಸಮಯದಲ್ಲಿ ಸಾಹಿತ್ಯದ ಸಂಭ್ರಮಾಚರಣೆ ಸೂಕ್ತವಲ್ಲ ಎಂದು ಕೆಲವು ಬರಹಗಾರರು ಹಾಗೂ ರೈತಸಂಘದ ಮುಖಂಡರು ಹೇಳಿದ್ದಾರೆ. ಅವರ ಕಳಕಳಿ ಸರಿಯಾದುದೇ. ಆದರೆ, ಸಮ್ಮೇಳನವನ್ನು ಮುಂದೂಡುವುದರಿಂದ ರೈತರ ಕಷ್ಟಗಳು ಬಗೆಹರಿಯುವುದಿಲ್ಲ.

ಯಾವುದೇ ಆಚರಣೆಯನ್ನು, ಉತ್ಸವವನ್ನು ನಿಲ್ಲಿಸುವುದು ಸಾಮಾಜಿಕ ತಲ್ಲಣಗಳಿಗೆ ಉತ್ತರ ಕಂಡುಕೊಳ್ಳುವ ಮಾರ್ಗವೂ ಅಲ್ಲ. ಇದರ ಬದಲಾಗಿ, ಈ ಆಚರಣೆಗಳನ್ನೇ ವರ್ತಮಾನದ ತವಕ ತಲ್ಲಣಗಳಿಗೆ ಉತ್ತರ ಹುಡುಕುವ ವೇದಿಕೆಗಳಾಗಿ ರೂಪಿಸುವುದು ಇಂದಿನ ಅಗತ್ಯ. ರೈತರ ಸಂಕಷ್ಟದ ಕಾರಣದಿಂದಾಗಿ ಸಮ್ಮೇಳನವನ್ನು ಮುಂದೂಡಬೇಕೆನ್ನುವ ಒತ್ತಾಯಗಳು ಹೊಸತೇನೂ ಅಲ್ಲ ಎನ್ನುವುದನ್ನೂ ಮರೆಯಬಾರದು. ಇಂಥ ಅಭಿಪ್ರಾಯಗಳು ಬಹುತೇಕ ಸಾಹಿತ್ಯ ಸಮ್ಮೇಳನಗಳು ಹಾಗೂ ಮೈಸೂರು ದಸರಾ ಆಚರಣೆಯ ಸಂದರ್ಭಗಳಲ್ಲಿ ವ್ಯಕ್ತವಾಗುತ್ತಲೇ ಇರುತ್ತವೆ. 

ಈ ಅನಿಸಿಕೆಗಳ ಹಿಂದೆ ಪ್ರತಿಯೊಂದು ವಿಷಯಕ್ಕೂ ವರ್ತಮಾನದ ತಲ್ಲಣವನ್ನು ತಳಕು ಹಾಕುವ ಮನಸ್ಥಿತಿ ಇರುವಂತಿದೆ. ಸಾಹಿತ್ಯ ಸಮ್ಮೇಳನದ ವಿಷಯದಲ್ಲೂ ಇಂಥ ಯೋಚನಾಧಾಟಿಯನ್ನು ಗಮನಿಸಬಹುದು. ಇದು ತಪ್ಪೇನೂ ಅಲ್ಲ. ಆದರೆ, ಈವರೆಗಿನ ಸಾಹಿತ್ಯ ಸಮ್ಮೇಳನಗಳು ವರ್ತಮಾನಕ್ಕೆ ಸ್ಪಂದಿಸುವ ಹಾಗೂ ಸಾಮಾಜಿಕ ಬಿಕ್ಕಟ್ಟುಗಳಿಗೆ ಮುಖಾಮುಖಿಯಾಗುವ ಕೆಲಸವನ್ನು ಮಾಡಿರುವುದನ್ನೂ ಗಮನಿಸಬೇಕು.

ಸಮ್ಮೇಳನಗಳ ಅಧ್ಯಕ್ಷರ ಭಾಷಣಗಳನ್ನು ಅವಲೋಕಿಸಿದರೆ ಈ ಸಾಹಿತ್ಯ ಮೇಳಗಳು ಹೊಂದಿರುವ ಸಾಮಾಜಿಕ ಉತ್ತರದಾಯಿತ್ವದ ಸ್ವರೂಪ ಸ್ಪಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ರಾಯಚೂರಿನ ಉದ್ದೇಶಿತ ಸಮ್ಮೇಳನವನ್ನು ಕೂಡ ಈ ನೆಲದ ರೈತರ ಸಮಸ್ಯೆಗಳ ಚರ್ಚೆಗೆ ವೇದಿಕೆಯನ್ನಾಗಿ ರೂಪಿಸುವ ಅರ್ಥಪೂರ್ಣ ಸಾಧ್ಯತೆ ಇದ್ದೇಇದೆ. ಸಮ್ಮೇಳನವನ್ನು ಆದಷ್ಟೂ ಸರಳವಾಗಿ ನಡೆಸುವ ಮೂಲಕವೂ ವರ್ತಮಾನದ ಬಿಕ್ಕಟ್ಟಿಗೆ ಸ್ಪಂದಿಸಬಹುದು.

ಸಾಹಿತ್ಯ ಸಮ್ಮೇಳನಗಳ ಆಯೋಜನೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮುಖ್ಯವಾದ ಚಟುವಟಿಕೆಯಾಗಿದ್ದು, ಪರಿಷತ್ತನ್ನು ಅದರ ಪಾಡಿಗೆ ಬಿಡುವುದು ಒಳ್ಳೆಯದು. ಸಮೃದ್ಧಿ ಅಥವಾ ಸಂಭ್ರಮದ ಸಮಯದಲ್ಲಷ್ಟೇ ಸಾಹಿತ್ಯ ಸಮ್ಮೇಳನ ನಡೆಯಬೇಕು ಎನ್ನುವುದಾದರೆ ಸಮಾಜದಲ್ಲಿ ಯಾವ ಕಲೆಯ ಚಟುವಟಿಕೆಯೂ ಸಾಧ್ಯವಿಲ್ಲ.

ಆಧುನಿಕ ಬದುಕಿನ ಇತರ ಕ್ಷೇತ್ರಗಳಿಗೆ ಇಲ್ಲದ ಮುಜುಗರವನ್ನು ಸಾಹಿತ್ಯ ಸಮ್ಮೇಳನಗಳಿಗೆ ಹೇರುವುದು ಸರಿಯಲ್ಲ. ರಾಷ್ಟ್ರೀಯ ದಿನಾಚರಣೆಗಳು, ಚುನಾವಣೆಗಳು, ವ್ಯಾಪಾರಿ ಮೇಳಗಳಿಗೆ ಇಲ್ಲದ ವಿರೋಧ ಸಾಹಿತ್ಯ ಸಮ್ಮೇಳನಕ್ಕಷ್ಟೇ ಅನ್ವಯಿಸಬೇಕೆ? ಈ ಹಿನ್ನೆಲೆಯಲ್ಲಿಯೇ ‘ಬರ ಬಿದ್ದಿದೆ ಅಂತ ಮಸಾಲೆ ದೋಸೆ ತಿನ್ನೋದು ಬಿಟ್ಟಿದ್ದಾರೆಯೇ?’ ಎಂದು ಶಿವರಾಮ ಕಾರಂತರು ಮೊದಲ ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ (1985) ಪ್ರಶ್ನಿಸಿದ್ದು. ಸಾಹಿತ್ಯವನ್ನು ಒಂದು ಸಂಭ್ರಮದ ರೀತಿ ಭಾವಿಸುವುದರಿಂದ ಅದಕ್ಕೆ ಚೌಕಟ್ಟು ಹಾಕಿದಂತಾಗುತ್ತದೆ.

ಸಾಹಿತ್ಯ ಬದುಕಿನ ಎಲ್ಲ ಸಂಗತಿಗಳನ್ನು ಪ್ರತಿಫಲಿಸುವಂತಹದ್ದು. ಹಾಗೆ ನೋಡಿದರೆ ಸಾಹಿತ್ಯದಂಥ ಸೃಜನಶೀಲ ಪ್ರಕಾರಗಳು ಅತ್ಯಂತ ಪರಿಣಾಮಕಾರಿಯಾಗಿ ಅಭಿವ್ಯಕ್ತಗೊಳ್ಳುವುದು ಸಂಘರ್ಷ ಹಾಗೂ ಸಂಕಟದ ಸಂದರ್ಭಗಳಲ್ಲಿಯೇ. ಕನ್ನಡದ ಬಹುತೇಕ ಅತ್ಯುತ್ತಮ ಸಾಹಿತ್ಯ ಕೃತಿಗಳನ್ನು ರೂಪಿಸಿರುವುದು ಸಂಘರ್ಷವೇ ಹೊರತು ಸಂಭ್ರಮವಲ್ಲ. ಆದರೆ, ರಾಯಚೂರು ಸಮ್ಮೇಳನವನ್ನು ಮುಂದೂಡಬೇಕೆನ್ನುವ ಒತ್ತಾಯದ ಹಿನ್ನೆಲೆಯಲ್ಲಿ ಪ್ರಸ್ತಾಪಿಸಲಾಗುತ್ತಿರುವ ಕಸಾಪ ಅಧ್ಯಕ್ಷರ ಅಧಿಕಾರದ ಅವಧಿಯ ವಿಷಯ ಕಳವಳಕಾರಿ. ನವೆಂಬರ್‌ ತಿಂಗಳಲ್ಲಿ ಅಧ್ಯಕ್ಷ ಹುದ್ದೆಯಿಂದ ನಿರ್ಗಮಿಸುವ ಕಾರಣದಿಂದಾಗಿ ಅದಕ್ಕೆ ಮೊದಲು ಸಮ್ಮೇಳನವನ್ನು ನಡೆಸಲು ಪರಿಷತ್‌ ಅಧ್ಯಕ್ಷರು ಉದ್ದೇಶಿಸಿದ್ದಾರೆ ಎನ್ನಲಾಗಿದೆ.

ಸಮ್ಮೇಳನಗಳ ಆಯೋಜನೆ ಪರಿಷತ್‌ ಅಧ್ಯಕ್ಷರ ಅನುಕೂಲ– ಹಿತಾಸಕ್ತಿಗೆ ಅನುಗುಣವಾಗಿ ಇರಬೇಕಾಗಿಲ್ಲ. ಅವು ನಡೆಯುವುದು ಸಾಹಿತ್ಯ ಮತ್ತು ಸಮಾಜದ ನಡುವಿನ ನಂಟಿನ ರೂಪದಲ್ಲಿ. ದುರದೃಷ್ಟವೆಂದರೆ ಪರಿಷತ್ತಿನ ಸಮ್ಮೇಳನಗಳಿಗೆ ನಿರ್ದಿಷ್ಟ ಕಾಲಸೂಚಿ ಎನ್ನುವುದಿಲ್ಲ. ಒಂದೇ ವರ್ಷ ಎರಡು ಸಮ್ಮೇಳನ ನಡೆದಿರುವುದೂ ಇದೆ.  ವಿವಿಧ ಸಂಸ್ಥೆಗಳು ನಡೆಸುವ ಸಮ್ಮೇಳನಗಳು ನಿಗದಿತ ಕಾಲಸೂಚಿಯನ್ನು ಹೊಂದಿರುವುದಾದರೆ ಅದು ಪರಿಷತ್ತಿಗೆ ಏಕೆ ಸಾಧ್ಯವಾಗುವುದಿಲ್ಲ? ಹೀಗೆ ಸಮಯದ ಶಿಸ್ತಿಗೆ ಒಳಪಡದೆ ಇರುವುದು ಕೂಡ ಸಮ್ಮೇಳನಗಳು ಹಿಂದಕ್ಕೂ ಮುಂದಕ್ಕೂ ಜಗ್ಗಾಡುವುದಕ್ಕೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.