ಗುಜರಾತ್‌ನಲ್ಲಿ 2002ರಲ್ಲಿ ನಡೆದ ಬಿಲ್ಕಿಸ್ ಬಾನು ಮೇಲಿನ ಅತ್ಯಾಚಾರ ಮತ್ತು ಅವರ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣದ 11 ಅಪರಾಧಿಗಳನ್ನು ಬಿಡುಗಡೆ ಮಾಡಿರುವುದು ಆಘಾತಕರ. ಇದು ಕಾನೂನು ಸುವ್ಯವಸ್ಥೆ, ನ್ಯಾಯದಾನ ಮತ್ತು ಗುಜರಾತ್ ಸರ್ಕಾರವು ನೈತಿಕತೆಯ ಕುರಿತು ಹೊಂದಿರುವ ನಿಲುವು ಏನು ಎಂಬುದರ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದೆ.
ಮಹಿಳೆಯರ ರಕ್ಷಣೆ ಮತ್ತು ಸಶಕ್ತೀಕರಣಕ್ಕೆ ಬದ್ಧ ಎಂದು ಕೇಂದ್ರ ಸರ್ಕಾರವು ಹೇಳುತ್ತಲೇ ಇದೆ. ತೀರಾ ಇತ್ತೀಚೆಗೆ, ಅಂದರೆ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಕೂಡ ಮಹಿಳೆಯರ ರಕ್ಷಣೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದರು. ಆದರೆ, ಹೀನ ಕೃತ್ಯ ಎಸಗಿರುವ ಅಪರಾಧಿಗಳ ಬಿಡುಗಡೆಯು ಸರ್ಕಾರದ ಬದ್ಧತೆಯನ್ನು ಅನುಮಾನಿಸುವಂತೆ ಮಾಡಿದೆ. 11 ಜನ ಅಪರಾಧಿಗಳನ್ನು ಬಿಡುಗಡೆ ಮಾಡುವ ನಿರ್ಧಾರವನ್ನುಗುಜರಾತ್ ಸರ್ಕಾರವು ತನ್ನಶಿಕ್ಷೆ ಕಡಿತ ನೀತಿಯ ಅಡಿಯಲ್ಲಿ ತೆಗೆದುಕೊಂಡಿದೆ. ಇದು ತಪ್ಪು ನಿರ್ಧಾರ; ಅಷ್ಟೇ ಅಲ್ಲ, ಕೈದಿಗಳ ಶಿಕ್ಷೆ ಕಡಿತಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರವು ಹೊರಡಿಸಿದ್ದ ಮಾರ್ಗಸೂಚಿಯ ಉಲ್ಲಂಘನೆ. ಈ ಮಾರ್ಗಸೂಚಿಯ ಪ್ರಕಾರ, ಅತ್ಯಾಚಾರ, ಮಾನವ ಕಳ್ಳಸಾಗಣೆಯಂತಹ ಹೀನ ಕೃತ್ಯಗಳನ್ನು ಎಸಗಿದವರನ್ನು ಶಿಕ್ಷೆ ಕಡಿತಕ್ಕೆ ಪರಿಗಣಿಸಬಾರದು.
ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನು ಮತ್ತು ಇತರ ಮೂವರ ಮೇಲೆ2002ರ ಮಾರ್ಚ್ 3ರಂದು ಅತ್ಯಾಚಾರ ಎಸಗಿ, ಬಾನು ಅವರ ಮೂರು ವರ್ಷದ ಮಗು ಸೇರಿ ಏಳು ಮಂದಿಯನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ನ್ಯಾಯಯುತ ವಿಚಾರಣೆ ನಡೆಯಬೇಕು ಎಂಬ ಕಾರಣಕ್ಕೆ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂಬೈಗೆ ವರ್ಗಾಯಿಸಿತ್ತು.
ಮುಂಬೈನ ನ್ಯಾಯಾಲಯವು 11 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಉನ್ನತ ನ್ಯಾಯಾಲಯಗಳು ಈ ಶಿಕ್ಷೆಯನ್ನು ದೃಢಪಡಿಸಿದ್ದವು. ಈಗ, ಶಿಕ್ಷೆ ಕಡಿತದ ನ್ಯಾಯಸಮ್ಮತತೆಯನ್ನು ವಿವಿಧ ನೆಲೆಗಳಲ್ಲಿ ಪ್ರಶ್ನಿಸಲಾಗಿದೆ.
ಅಪರಾಧಿಗಳಲ್ಲಿ ಒಬ್ಬ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯ ಆಧಾರದಲ್ಲಿ ರಾಜ್ಯ ಸರ್ಕಾರವು ನೇಮಿಸಿದ ಸಮಿತಿಯ ಶಿಫಾರಸಿನಂತೆ ಅಪರಾಧಿಗಳ ಬಿಡುಗಡೆ ಮಾಡಲಾಗಿದೆ. ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಿತ್ತು. ಹಾಗಾಗಿ, ಶಿಕ್ಷೆ ಕಡಿತ ಮಾಡುವ ಅಧಿಕಾರ ಗುಜರಾತ್ ಸರ್ಕಾರಕ್ಕೆ ಇದೆಯೇ ಎಂಬ ಪ್ರಶ್ನೆ ಇದೆ. ಇಂತಹ ಪ್ರಕರಣಗಳಲ್ಲಿ ಕೇಂದ್ರ ಸರ್ಕಾರದ ಸಹಮತ ಅಗತ್ಯ. ಅಪರಾಧಿಗಳ ಬಿಡುಗಡೆಯ ವಿಚಾರದಲ್ಲಿ ಕೇಂದ್ರದ ಜತೆ ಸಮಾಲೋಚನೆ ನಡೆಸಲಾಗಿದೆಯೇ ಎಂಬುದು ತಿಳಿದುಬಂದಿಲ್ಲ.
ಶಿಕ್ಷೆ ಕಡಿತದ ವಿಚಾರದಲ್ಲಿ ಕಾನೂನಿನ ಆಚೆಗಿನ ಅಂಶಗಳೂ ಇವೆ. ಈಗ ಬಿಡುಗಡೆ ಆಗಿರುವ 11 ಅಪರಾಧಿಗಳು ಅತ್ಯಾಚಾರ ಮತ್ತು ಹತ್ಯೆಯಂತಹ ಘೋರ ಕೃತ್ಯ ಎಸಗಿದ್ದಾರೆ; ಇದಕ್ಕೆ ಅವರಲ್ಲಿ ಇದ್ದ ಕೋಮು ಪೂರ್ವಗ್ರಹ ಮತ್ತು ದ್ವೇಷ ಕಾರಣ. ಬಿಲ್ಕಿಸ್ ಬಾನು ಅವರು ನ್ಯಾಯಕ್ಕಾಗಿ ಸುದೀರ್ಘ ಹೋರಾಟ ನಡೆಸಿದ್ದರು. ಅಪರಾಧಿಗಳ ಶಿಕ್ಷೆ ಕಡಿತವು ಬೇರೆಯದೇ ಆದ ಸಂದೇಶವನ್ನು ನೀಡುತ್ತದೆ– ಸರ್ಕಾರದ ಸಹಾನುಭೂತಿಯು ಹಿಂದೂ ಅಪರಾಧಿಗಳ ಮೇಲೆ ಇದೆಯೇ ವಿನಾ ಮುಸ್ಲಿಂ ಸಂತ್ರಸ್ತೆಯ ಮೇಲೆ ಇಲ್ಲ ಎಂಬುದನ್ನು ಇದು ಸೂಚಿಸುತ್ತದೆ.
ಗಲಭೆಯ ಕುರಿತು ಗುಜರಾತ್ ಸರ್ಕಾರ ಹೊಂದಿದ್ದ ನಿಲುವಿಗೆ ಅನುಗುಣವಾಗಿಯೇ ಈಗಿನ ಈ ನಿರ್ಧಾರವೂ ಇದೆ. ಇದು ರಾಜಕೀಯ ಮತ್ತು ಕೋಮು ಸಂದೇಶವೊಂದನ್ನು ನೀಡುತ್ತದೆ. ಶಿಕ್ಷೆ ಕಡಿತಕ್ಕೆ ಇನ್ನೂ ಹೆಚ್ಚು ಅರ್ಹರಾಗಿರುವ ಹಲವರ ಅರ್ಜಿಗಳನ್ನು ತಳ್ಳಿಹಾಕಲಾಗಿದೆ. ಅವರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಹೀಗೆ ಮಾಡಲಾಗಿದೆ. ಜೈಲಿನಿಂದ ಹೊರಗೆ ಬಂದ ಅಪರಾಧಿಗಳಿಗೆ ಸಿಹಿ ತಿನ್ನಿಸಿ ಸ್ವಾಗತಿಸಲಾಗಿದೆ.
ವಿಶ್ವ ಹಿಂದೂ ಪರಿಷತ್ ಕಚೇರಿಯಲ್ಲಿ ಅವರಿಗೆ ಸನ್ಮಾನ ಮಾಡಲಾಗಿದೆ. ‘ಹಿಂದೂ ರಾಷ್ಟ್ರ’ದ ಕಾರ್ಯನಿರ್ವಹಣೆ ಹೀಗೆಯೇ ಎಂಬ ಪ್ರಶ್ನೆಗೂ ಇದು ಆಸ್ಪದ ಕೊಟ್ಟಿದೆ. ಶಿಕ್ಷೆ ಕಡಿತದ ನಿರ್ಧಾರವನ್ನು ಸರ್ಕಾರಗಳು ವಿವೇಕ ಮತ್ತು ವಿವೇಚನೆಯಿಂದ ಕೈಗೊಳ್ಳಬೇಕೇ ವಿನಾ ಸ್ವೇಚ್ಛೆಯಿಂದ ಅಲ್ಲ. ಭೀತಿಗೆ ಒಳಗಾಗಿರುವ ಬಿಲ್ಕಿಸ್ ಬಾನು ಅವರಿಗೆ ನ್ಯಾಯ ದೊರೆಯುವಂತೆ ಸುಪ್ರೀಂ ಕೋರ್ಟ್ ನೋಡಿಕೊಳ್ಳಬೇಕು. ಶಿಕ್ಷೆ ಕಡಿತ ಎಂಬ ಮಾನವೀಯ ನೀತಿಯನ್ನು ವಿಕೃತಗೊಳಿಸುವುದಕ್ಕೆ ಅವಕಾಶ ಕೊಡಬಾರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.