ADVERTISEMENT

ಸಂಪಾದಕೀಯ: ಪಂಜಾಬ್‌ನ ಗುಂಪು ಹಲ್ಲೆ ಪ್ರಕರಣ ಮುಖಂಡರಲ್ಲಿ ಮೂಡಲಿ ವಿವೇಕ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2021, 19:32 IST
Last Updated 23 ಡಿಸೆಂಬರ್ 2021, 19:32 IST
   

ವಿಧಾನಸಭೆ ಚುನಾವಣೆಗೆ ಅಣಿಯಾಗುತ್ತಿರುವ ಪಂಜಾಬ್‌ನಲ್ಲಿ ಪವಿತ್ರ ಗ್ರಂಥ ಮತ್ತು ಧಾರ್ಮಿಕ ಸಂಕೇತಗಳಿಗೆ ಅಪಚಾರ ಎಸಗಲಾಗಿದೆ ಎಂಬ ಆರೋಪದಲ್ಲಿ ಗುಂಪು ಹಲ್ಲೆ ನಡೆಸಿ ಇಬ್ಬರ ಹತ್ಯೆ ಮಾಡಲಾಗಿದೆ. ಮೊದಲ ಪ್ರಕರಣವು ಅಮೃತಸರದ ಸ್ವರ್ಣ ಮಂದಿರದಲ್ಲಿ ನಡೆಯಿತು. ಅಪಚಾರ ಎಸಗಿದ ಆರೋಪಿಯನ್ನು ಸ್ಥಳದಲ್ಲಿಯೇ ಹೊಡೆದು ಕೊಲ್ಲಲಾಯಿತು. ಎರಡನೇ ಹತ್ಯೆಯು ಕಪುರ್ತಲ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ. ಪವಿತ್ರ ಗ್ರಂಥ ಅಥವಾ ಧಾರ್ಮಿಕ ಸಂಕೇತಗಳಿಗೆ ಆ ವ್ಯಕ್ತಿಯು ಅವಮಾನ ಮಾಡಿದ್ದಾರೆ ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲ. ಸಂಶಯಗಳ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಹೊಡೆದು ಕೊಲ್ಲಲಾಗಿದೆ. ಕೆಲವು ತಿಂಗಳ ಹಿಂದೆಯೂ ಈ ರೀತಿಯ ಹತ್ಯೆಯೊಂದು ಪಂಜಾಬ್‌ನಲ್ಲಿ ನಡೆದಿತ್ತು. ಗುರುದಾಸ್‌ಪುರದ ಗುರುದ್ವಾರದಲ್ಲಿ ಕಳ್ಳತನ ಎಸಗಿದ ಆರೋಪದಲ್ಲಿ ವ್ಯಕ್ತಿಯೊಬ್ಬರನ್ನು ಹೊಡೆದು ಕೊಲ್ಲಲಾಗಿತ್ತು. ಪವಿತ್ರ ಸಂಕೇತಗಳಿಗೆ ಅವಮಾನ ಮಾಡಿದ ಆರೋಪ‍ದಲ್ಲಿ ವ್ಯಕ್ತಿಗಳ ಮೇಲೆ ಗುಂಪುಹಲ್ಲೆ ನಡೆದ ಹಲವು ಘಟನೆಗಳು ರಾಜ್ಯದಲ್ಲಿ ನಡೆದಿವೆ.

ಪವಿತ್ರ ಸಂಕೇತಗಳಿಗೆ ಅಪಚಾರ ಎಸಗುವ ಮೂಲಕ ಯಾವುದೇ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದು ಖಂಡನೀಯ. ಅಪಚಾರ ಮಾಡಿದ ಆರೋಪಿಗಳ ವಿರುದ್ಧ ಕಠಿಣ ಕ್ರಮವನ್ನೂ ಕೈಗೊಳ್ಳಬೇಕು. ಆದರೆ, ಆರೋಪಿಗಳನ್ನು ಜನರ ಗುಂಪುಗಳು ಹೊಡೆದು ಕೊಲ್ಲುವುದು ಕಾನೂನಿನ ಬಗ್ಗೆ ಇರುವ ಅಸಡ್ಡೆಯನ್ನು ತೋರುತ್ತದೆ. ಯಾವುದೇ ಪ್ರಕರಣದಲ್ಲಿ ಯಾವುದೇ ವ್ಯಕ್ತಿಗೆ ದೈಹಿಕ ಹಿಂಸೆಯ ಶಿಕ್ಷೆ ನೀಡುವ ಹಕ್ಕು ಯಾರಿಗೂ ಇಲ್ಲ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿ, ಅವರು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಡುವುದು ಸರಿಯಾದ ಕ್ರಮ.

ಧಾರ್ಮಿಕ ಸಂಕೇತಗಳಿಗೆ ಅಪಚಾರ ಎಸಗಿದ ವ್ಯಕ್ತಿಗಳು ಮಾನಸಿಕ ಸಮತೋಲನ ಕಳೆದುಕೊಂಡವರು ಎಂಬುದು ಬಹಳಷ್ಟು ಪ್ರಕರಣಗಳಲ್ಲಿ ತಿಳಿದುಬಂದಿದೆ. ಧಾರ್ಮಿಕ ಭಾವನೆಗಳಿಗೆ ನೋವು ಉಂಟು ಮಾಡುವ ಘಟನೆಯು ಉದ್ದೇಶಪೂರ್ವಕ ಅಥವಾ ಪಿತೂರಿಯ ಭಾಗವೇ ಆಗಿದ್ದರೂ ಆರೋಪಿಯನ್ನು ಕೊಂದು ಸಾಕ್ಷ್ಯವನ್ನು ನಾಶ ಮಾಡುವುದು ಕಾನೂನುಬಾಹಿರ ನಡವಳಿಕೆ. ಧಾರ್ಮಿಕ ಸಂಕೇತಗಳಿಗೆ ಅವಮಾನ ಆಗಿದೆ ಎಂಬ ಗುಲ್ಲು ಎದ್ದಾಗ ಅದನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುವಲ್ಲಿ ಸ್ವರ್ಣ ಮಂದಿರದ ಆಡಳಿತ ಮಂಡಳಿಯು ವಿಫಲವಾಗಿದೆ. ಕಪುರ್ತಲದ ಘಟನೆಯಲ್ಲಿ, ಧಾರ್ಮಿಕ ಸಂಕೇತಗಳಿಗೆ ಅವಮಾನ ಆಗಿದೆಯೇ ಎಂಬ ಪ್ರಶ್ನೆಗೆ ಸರಿಯಾದ ಉತ್ತರ ಸಿಕ್ಕಿಲ್ಲ.

ADVERTISEMENT

ಪಂಜಾಬ್‌ನ ರಾಜಕೀಯ ನಾಯಕರ ವರ್ತನೆ ಕೂಡ ಖಂಡನಾರ್ಹ. ಜನರ ಗುಂಪುಗಳು ಕಾನೂನನ್ನು ಕೈಗೆತ್ತಿಕೊಂಡು ವ್ಯಕ್ತಿಗಳ ಹತ್ಯೆ ಮಾಡಿದ್ದನ್ನು ಯಾವುದೇ ರಾಜಕೀಯ ಪಕ್ಷದ ನಾಯಕರು ಖಂಡಿಸಿಲ್ಲ. ಪವಿತ್ರ ಸಂಕೇತಗಳಿಗೆ ಅವಮಾನ ಮಾಡಿದ್ದಾರೆನ್ನಲಾದ ಪ್ರಕರಣಗಳನ್ನು ರಾಜಕೀಯ ನಾಯಕರು ಮತ್ತು ಧಾರ್ಮಿಕ ನಾಯಕರು ಕಟುವಾಗಿ ಖಂಡಿಸಿದ್ದಾರೆ. ಆದರೆ, ಗುಂಪು ಹಲ್ಲೆ ಮತ್ತು ಹತ್ಯೆ ಬಗ್ಗೆ ಅವರು ಏನನ್ನೂ ಹೇಳಿಲ್ಲ. ಕಾಂಗ್ರೆಸ್‌ ಪಕ್ಷದ ಪಂಜಾಬ್‌ ರಾಜ್ಯ ಘಟಕದ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು ಅವರಂತೂ ಆರೋಪಿಗಳನ್ನು ಬಹಿರಂಗವಾಗಿ ಗಲ್ಲಿಗೇರಿಸಬೇಕು ಎಂಬ ಹೇಳಿಕೆ ಕೊಟ್ಟಿದ್ದಾರೆ. ಅವಹೇಳನ ಪ್ರಕರಣಗಳ ಹಿಂದೆ ಪಿತೂರಿ ಇದೆ ಎಂದುಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್ ಚನ್ನಿ ಮತ್ತು ವಿರೋಧ ಪಕ್ಷದ ನಾಯಕರು ಯಾವುದೇ ತನಿಖೆ ನಡೆಸದೆಯೇ ತೀರ್ಪು ಕೊಟ್ಟಿದ್ದಾರೆ.

ಸಮತೋಲನ ಇಲ್ಲದ ಇಂತಹ ನಡವಳಿಕೆಯು ಸಾಮಾಜಿಕ ಸುವ್ಯವಸ್ಥೆಗೆ ಭಾರಿ ಅಪಾಯಕಾರಿ. ಧಾರ್ಮಿಕ ಮತ್ತು ರಾಜಕೀಯ ನಾಯಕರು ಕೂಡ ಸಮೂಹ ಸನ್ನಿಗೆ ಒಳಗಾದ ಗುಂಪುಗಳ ರೀತಿಯಲ್ಲಿ ಯೋಚಿಸಿದರೆ, ವರ್ತಿಸಿದರೆ ಜನರಿಗೆ ತಿಳಿ ಹೇಳುವ ಕೆಲಸವನ್ನು ಯಾರು ಮಾಡಬೇಕು? ಪವಿತ್ರ ಸಂಕೇತಗಳಿಗೆ ಅವಮಾನ ಎಸಗುವುದು ಪಂಜಾಬ್‌ನಲ್ಲಿ ಅತ್ಯಂತ ಸೂಕ್ಷ್ಮ ವಿಚಾರವಾಗಿದೆ. ಇಂತಹ ಘಟನೆಗಳು ಕೋಮು, ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಸೃಷ್ಟಿಸಿವೆ. ಪಂಜಾಬ್‌ ವಿಧಾನಸಭೆಗೆ 2015ರಲ್ಲಿ ನಡೆದ ಚುನಾವಣೆಗೂ ಮೊದಲಿನ ಅಪಚಾರ ಕೃತ್ಯಗಳ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಚುನಾವಣೆಗೆ ಮುಂಚಿನ ದಿನಗಳಲ್ಲಿ ಅದೇ ರೀತಿಯ ಕೃತ್ಯಗಳು ಮತ್ತೆ ನಡೆದಿವೆ. ಇದು ಅತ್ಯಂತ ಕಳವಳಕಾರಿ ವಿದ್ಯಮಾನ.

ಚುನಾವಣೆಯ ಹೊಸ್ತಿಲಲ್ಲಿ ಈ ಕೃತ್ಯಗಳು ನಡೆದಿರುವುದರಿಂದ ಅದರ ಹಿಂದೆ ರಾಜಕೀಯ ಪಿತೂರಿ ಇರಬಹುದು ಎಂಬ ಅನುಮಾನ ಇದೆ. ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳುವುದಕ್ಕಾಗಿ ರಾಜಕೀಯ ನಾಯಕರು ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು ಭಾರತದಲ್ಲಿ ಹೊಸತೇನೂ ಅಲ್ಲ. ಜನರ ಗುಂಪುಗಳು ಕಾನೂನನ್ನು ಕೈಗೆತ್ತಿಕೊಂಡು ಅಪರಾಧ ಎಸಗುವುದನ್ನು ಬೆಂಬಲಿಸುವುದು ಕೂಡ ಇಲ್ಲಿ ವಿರಳ ಏನಲ್ಲ. ಇಂತಹ ನಡವಳಿಕೆಗೆ ಪಂಜಾಬ್‌ ಈ ಹಿಂದೆಯೂ ಬಹುದೊಡ್ಡ ಬೆಲೆ ತೆತ್ತಿದೆ. ಅದು ಎಲ್ಲರಿಗೂ ಪಾಠವಾಗಬೇಕು. ಧಾರ್ಮಿಕ ಸಂಕೇತಗಳಿಗೆ ಅವಮಾನದಂತಹ ಸೂಕ್ಷ್ಮ ವಿಚಾರಗಳಲ್ಲಿ ಹೆಚ್ಚು ಎಚ್ಚರದ ನಡೆ ಅಗತ್ಯ. ರಾಜಕಾರಣಿಗಳು, ಧಾರ್ಮಿಕ ನಾಯಕರು ಸೇರಿದಂತೆ ಎಲ್ಲರೂ ವಿವೇಕದಿಂದ ವರ್ತಿಸಿದರೆ ಸಾಮಾಜಿಕ ಬಿಕ್ಕಟ್ಟು ಉಂಟಾಗುವುದನ್ನು ತಡೆಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.