ಸಂಜೋತಾ ರೈಲಿನಲ್ಲಿ 2007ರಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಸ್ವಾಮಿ ಅಸೀಮಾನಂದ ಅವರನ್ನು ರಾಷ್ಟ್ರೀಯ ತನಿಖಾ ದಳದ (ಎನ್ಐಎ) ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ. ಅಸೀಮಾನಂದ ಅವರ ಜೊತೆಯಲ್ಲೇ ಇತರ ಮೂವರು ಆರೋಪಿಗಳೂ ಖುಲಾಸೆಯಾಗಿದ್ದಾರೆ. ಈ ಬಾಂಬ್ ಸ್ಫೋಟದಲ್ಲಿ 68 ಜನ ಮೃತಪಟ್ಟಿದ್ದರು. ಇವರಲ್ಲಿ ಹೆಚ್ಚಿನವರು ಪಾಕಿಸ್ತಾನಿ ಪ್ರಜೆಗಳು. ಅಸೀಮಾನಂದ ಹಾಗೂ ಇತರ ಮೂವರು ಆರೋಪಿಗಳ ಮೇಲಿನ ಆರೋಪಗಳನ್ನು ಸಾಬೀತು ಮಾಡುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಸಂಜೋತಾ ರೈಲಿನಲ್ಲಿ ನಡೆದ ಬಾಂಬ್ ಸ್ಫೋಟ ಅತ್ಯಂತ ಹೇಯವಾದ ಕೃತ್ಯ. ಹಾಗಾಗಿ, ಪ್ರಾಸಿಕ್ಯೂಷನ್ ವೈಫಲ್ಯವನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಈ ಪ್ರಕರಣದಲ್ಲಿ ಒಟ್ಟು ಎಂಟು ಜನರನ್ನು ಆರೋಪಿಗಳೆಂದು ಹೆಸರಿಸಲಾಗಿತ್ತು. ಒಬ್ಬ ಆರೋಪಿಯ ಹತ್ಯೆಯಾಗಿದೆ. ಮೂವರು ಆರೋಪಿಗಳು ಪತ್ತೆಯಾಗಿಲ್ಲ. ಇನ್ನುಳಿದ ನಾಲ್ಕು ಜನ ಈಗ ಖುಲಾಸೆಯಾಗಿದ್ದಾರೆ. ಅಸೀಮಾನಂದ ಅವರು ಹೈದರಾಬಾದಿನ ಮೆಕ್ಕಾ ಮಸೀದಿ ಹಾಗೂ ಅಜ್ಮೀರ್‌ನ ದರ್ಗಾದಲ್ಲಿ ನಡೆದ ಸ್ಫೋಟ ಪ್ರಕರಣಗಳಲ್ಲಿ ಕೂಡ ಆರೋಪಿ ಆಗಿದ್ದರು. ಅವರು ಆ ಎರಡು ಪ್ರಕರಣಗಳಲ್ಲಿ ಸಹ ಈಗಾಗಲೇ ದೋಷಮುಕ್ತಗೊಂಡಿದ್ದಾರೆ.
2002ರಲ್ಲಿ ಅಕ್ಷರಧಾಮ ದೇವಸ್ಥಾನದ ಮೇಲೆ ನಡೆದ ದಾಳಿಯಂತಹ ಘಟನೆಗಳಿಗೆ ಪ್ರತೀಕಾರ ತೆಗೆದುಕೊಳ್ಳಲು ಹುಟ್ಟಿಕೊಂಡ ಹಿಂದೂ ಬಲಪಂಥೀಯ ಸಂಘಟನೆಯ ಪ್ರಮುಖ ಸೂತ್ರಧಾರ ಅಸೀಮಾನಂದ ಎಂದು ಪ್ರಾಸಿಕ್ಯೂಷನ್ ಹೇಳಿತ್ತು. ಅಲ್ಲದೆ, ಅಸೀಮಾನಂದ ಅವರು ಮ್ಯಾಜಿಸ್ಟ್ರೇಟರ ಎದುರು ‘ಕೇಸರಿ ಭಯೋತ್ಪಾದನೆ’ ಬಗ್ಗೆ ವಿಸ್ತೃತ ಹೇಳಿಕೆಯೊಂದನ್ನು ನೀಡಿದ್ದರು. ನಂತರ ಅವರು ತಮ್ಮ ಹೇಳಿಕೆಯಿಂದ ಹಿಂದೆ ಸರಿದಿದ್ದರು. ಪೊಲೀಸರ ವಶದಲ್ಲಿ ಇದ್ದಾಗ ನೀಡಿದ ಹೇಳಿಕೆ ಅದಾಗಿದ್ದ ಕಾರಣದಿಂದಾಗಿ ಅದು ಸ್ವಯಂಪ್ರೇರಣೆಯಿಂದ ನೀಡಿದ್ದಾಗಿತ್ತೇ ಎಂಬ ಅನುಮಾನವೂ ಇದೆ.
ಆರಂಭದಲ್ಲಿ ಪ್ರಕರಣದ ತನಿಖೆಯನ್ನು ಹರಿಯಾಣ ಪೊಲೀಸರು ನಡೆಸಿದರು. ಬಳಿಕ ಇದನ್ನು ಎನ್‌ಐಎಗೆ ಹಸ್ತಾಂತರಿಸಲಾಯಿತು. 2014ರಲ್ಲಿ ಕೇಂದ್ರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಏರಿದ ಬಳಿಕ ಈ ಪ್ರಕರಣವನ್ನು ಎನ್‌ಐಎ ನಿರ್ವಹಿಸಿದ ರೀತಿಯಲ್ಲಿ ಬದಲಾವಣೆ ಉಂಟಾಯಿತು ಎಂಬ ಆರೋಪ ಇದೆ. 2015ರ ಆರಂಭದ ಹೊತ್ತಿಗೆ ಕೆಲವರು ಪ್ರತಿಕೂಲ ಸಾಕ್ಷ್ಯ ನುಡಿಯಲು ಆರಂಭಿಸಿದ್ದರು. ಪ್ರಮುಖ ಸಾಕ್ಷಿಗಳು ಪ್ರತಿಕೂಲವಾಗಿ ಪರಿಣಮಿಸಿದ ಕಾರಣದಿಂದಾಗಿ ಪ್ರಾಸಿಕ್ಯೂಷನ್ ವಾದ ಮೊನಚು ಕಳೆದುಕೊಂಡಿತು.
ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿದ್ದ ಮಾತುಕತೆಯನ್ನು ಹಾಳುಮಾಡುವ ಉದ್ದೇಶದಿಂದ ಸಂಜೋತಾ ರೈಲಿನಲ್ಲಿ ಬಾಂಬ್ ಸ್ಫೋಟ ನಡೆಸಲಾಯಿತು ಎಂಬ ವರದಿಗಳಿವೆ. ಹಾಗಾಗಿ, ತೀವ್ರವಾದಿ ನಿಲುವು ಹೊಂದಿರುವ ಯಾವುದೇ ಸಂಘಟನೆಯ ಕೈವಾಡ ಇದರ ಹಿಂದೆ ಇದ್ದಿರಬಹುದು. ಈ ಬಾಂಬ್ ಸ್ಫೋಟ ಪ್ರಕರಣದ ಜೊತೆ ಲಷ್ಕರ್ ಎ ತಯಬಾ ಸಂಘಟನೆಯ ಆರಿಫ್ ಕಸ್ಮಾನಿ ಎಂಬಾತನ ಹೆಸರನ್ನು 2009ರಲ್ಲಿ ಅಮೆರಿಕ ಮತ್ತು ವಿಶ್ವಸಂಸ್ಥೆಯು ತಳಕು ಹಾಕಿದ್ದು ಇಡೀ ಪ್ರಕರಣದ ಇನ್ನೊಂದು ಮಗ್ಗುಲು ಎಂಬುದನ್ನೂ ಮರೆಯುವಂತಿಲ್ಲ. ಪ್ರಾಸಿಕ್ಯೂಷನ್ ವೈಫಲ್ಯವು ಭಾರತದ ತನಿಖಾ ಸಂಸ್ಥೆಗಳ ಕ್ಷಮತೆಯ ಮೇಲೆ ಬೆರಳು ತೋರಿಸುತ್ತಿದೆ. ಇಷ್ಟು ಜನರನ್ನು ಬಲಿ ತೆಗೆದುಕೊಂಡ ಬಾಂಬ್ ಸ್ಫೋಟಕ್ಕೆ ಕಾರಣರಾದವರನ್ನು ಪತ್ತೆ ಮಾಡಿ, ಅವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಹೊಣೆಯೂ ತನಿಖಾ ಸಂಸ್ಥೆಗಳ ಮೇಲೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.