ADVERTISEMENT

35 ಎ ಕಲಂ ವಿಷಯದಲ್ಲಿ ಎಚ್ಚರದಿಂದ ವ್ಯವಹರಿಸಬೇಕು

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2017, 19:30 IST
Last Updated 20 ಆಗಸ್ಟ್ 2017, 19:30 IST
35 ಎ ಕಲಂ ವಿಷಯದಲ್ಲಿ ಎಚ್ಚರದಿಂದ ವ್ಯವಹರಿಸಬೇಕು
35 ಎ ಕಲಂ ವಿಷಯದಲ್ಲಿ ಎಚ್ಚರದಿಂದ ವ್ಯವಹರಿಸಬೇಕು   

ಜಮ್ಮು ಮತ್ತು ಕಾಶ್ಮೀರದ ನಾಗರಿಕರಿಗೆ ಮಾತ್ರ ಆಸ್ತಿ, ಶಿಕ್ಷಣ, ಉದ್ಯೋಗದಲ್ಲಿ ವಿಶೇಷ ಅಧಿಕಾರ ನೀಡುವ ಸಂವಿಧಾನದ 35 ಎ ಕಲಂನ ಕ್ರಮಬದ್ಧತೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನ ಮುಂದೆ ದಾಖಲಾದ ಅರ್ಜಿಗಳು ಆ ರಾಜ್ಯದಲ್ಲಿ ತಲ್ಲಣ ಸೃಷ್ಟಿಸಿವೆ. ಅರ್ಜಿಯ ಬಗ್ಗೆ ವಿಸ್ತೃತ ಚರ್ಚೆ ಅಗತ್ಯ ಎಂದು ಕೇಂದ್ರ ಸರ್ಕಾರ ಕೋರ್ಟ್‌ನಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯ ಮತ್ತು ಅರ್ಜಿಯನ್ನು ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠಕ್ಕೆ ಏಕೆ ವರ್ಗಾಯಿಸಬಾರದು ಎಂಬ ಕೋರ್ಟ್ ಪ್ರಶ್ನೆ ಆ ರಾಜ್ಯದ ಜನರ ಎದೆಬಡಿತ ಹೆಚ್ಚಿಸಿವೆ. ಕಾಶ್ಮೀರಿಗಳು ಈಗಾಗಲೇ ಮುಖ್ಯವಾಹಿನಿಯಿಂದ ಸಾಕಷ್ಟು ದೂರ ಸರಿದಿದ್ದಾರೆ. ಹೀಗಿರುವಾಗ ಅವರನ್ನು ಇದು ಮತ್ತಷ್ಟು ಕೆಣಕುವ ಸಾಧ್ಯತೆಗಳಿವೆ. 35 ಎ ರದ್ದಾದರೆ ಇಡೀ ರಾಜ್ಯದ ಜನಸಂಖ್ಯೆ ಮತ್ತು ಜನಾಂಗೀಯ ಸ್ವರೂಪವೇ ಏರುಪೇರಾದೀತು ಎಂಬುದು ಸ್ಥಳೀಯರ ಆತಂಕ. 35 ಎ ಪ್ರಕಾರ, ಆ ರಾಜ್ಯದ ಕಾಯಂ ನಿವಾಸಿಗಳನ್ನು ಅಂದರೆ ಸ್ಥಳೀಯರನ್ನು ಬಿಟ್ಟು ಹೊರಗಿನವರು ಯಾರೂ ಅಲ್ಲಿ ಭೂಮಿಯ ಒಡೆತನ ಹೊಂದುವಂತಿಲ್ಲ. ಅಲ್ಲದೆ ಶಿಕ್ಷಣ, ವಿದ್ಯಾರ್ಥಿ ವೇತನ ಮತ್ತು ಉದ್ಯೋಗಕ್ಕೆ ಸ್ಥಳೀಯರಷ್ಟೇ ಅರ್ಹರು. ಸಂವಿಧಾನಕ್ಕೆ ಈ ಕಲಂ ಸೇರ್ಪಡೆಯಾಗಿದ್ದು ಕೂಡ ಸಂಸತ್ತಿನ ನಿರ್ಣಯದ ಮೂಲಕ ಅಲ್ಲ; ಕಾಶ್ಮೀರಕ್ಕೆ ಸಂಬಂಧಪಟ್ಟಂತೆ ಇರುವ ವಿಶೇಷಾಧಿಕಾರ ಬಳಸಿ ರಾಷ್ಟ್ರಪತಿ ಹೊರಡಿಸಿದ ಅಧಿಸೂಚನೆಯ ಮೂಲಕ.

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 356ನೇ ಕಲಂಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ವಿರೋಧ ಹೊಸದೇನಲ್ಲ. ಆ ಬೇಡಿಕೆಗೆ ಈಗ 35 ಎ ಕಲಂ ಸೇರ್ಪಡೆಯಾಗಿದೆ. ‘ಇದು ತಾರತಮ್ಯ ಸೃಷ್ಟಿಸುತ್ತದೆ; ಎಲ್ಲರೂ ಸಮಾನರು ಎಂಬ ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧ’ ಎಂಬುದು ಅವುಗಳ ವಾದ. ‘ಅಲ್ಲಿನ ಮಹಿಳೆ, ರಾಜ್ಯದ ಹೊರಗಿನವರನ್ನು ಮದುವೆಯಾದರೆ ಈ ವಿಶೇಷ ಸೌಲಭ್ಯಗಳಿಂದ ವಂಚಿತಳಾಗುತ್ತಾಳೆ; ಆದರೆ ಅಲ್ಲಿನ ಪುರುಷ ಹೊರರಾಜ್ಯದ ಮಹಿಳೆಯನ್ನು ಮದುವೆಯಾದರೆ ಆತನ ಹಕ್ಕಿಗೆ ಧಕ್ಕೆ ಬರುವುದಿಲ್ಲ; ಆತನ ಪತ್ನಿಗೂ ಈ ಎಲ್ಲ ಹಕ್ಕುಗಳು ಪ್ರಾಪ್ತವಾಗುತ್ತವೆ’. ಇದು ಕಾಶ್ಮೀರಿ ಮಹಿಳೆಗೆ ಮಾಡುವ ಅನ್ಯಾಯ, ಲಿಂಗ ತಾರತಮ್ಯ ಎಂಬುದು ಆರ್‌ಎಸ್‌ಎಸ್‌ನ ಆರೋಪ. ಜಮ್ಮು ಕಾಶ್ಮೀರ ಸರ್ಕಾರದಲ್ಲಿ ಪಿಡಿಪಿ ಜತೆ ಅಧಿಕಾರ ಹಂಚಿಕೊಂಡಿರುವ ಕಾರಣದಿಂದಾಗಿ ಬಿಜೆಪಿ ಈಗ ಈ ಎರಡೂ ವಿಷಯಗಳ ಬಗ್ಗೆ ಜೋರು ದನಿಯಲ್ಲಿ ಮಾತನಾಡುತ್ತಿಲ್ಲ. ರಾಜಕೀಯ ಒತ್ತಡ, ಅನಿವಾರ್ಯ ಅದಕ್ಕೆ ಕಾರಣ ಎನ್ನುವುದು ಸ್ಪಷ್ಟ. ಹೀಗಾಗಿಯೇ ಅದು ಕೋರ್ಟ್‌ನಲ್ಲಿ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ನಡೆದುಕೊಳ್ಳುತ್ತಿದ್ದರೂ ಅದರ ಆಂತರ್ಯದಲ್ಲಿ ಏನಿದೆ ಎಂಬುದು ಎಲ್ಲರಿಗೂ ಗೊತ್ತು. ಅರ್ಜಿದಾರರಲ್ಲಿ ಒಬ್ಬರು ಆರ್ ಎಸ್‌ಎಸ್‌ ಹಿನ್ನೆಲೆಯವರು. ಇನ್ನೊಬ್ಬರು ಅದೇ ರಾಜ್ಯದಲ್ಲಿ ಜನಿಸಿ ಹೊರ ರಾಜ್ಯದವರೊಬ್ಬರನ್ನು ಮದುವೆಯಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿರುವ ಮಹಿಳೆ. ಆದ್ದರಿಂದ ಅಲ್ಲಿನ ಜನ ಅನುಮಾನ ಪಡುವುದು ಸಹಜ.

ಕಾಶ್ಮೀರದ ವಿಶೇಷ ಸ್ಥಾನಮಾನದ ಬಗ್ಗೆ ಸಂವಿಧಾನದಲ್ಲಿಯೇ ಉಲ್ಲೇಖ ಇದೆ. ಭಾರತದಲ್ಲಿ ವಿಲೀನಗೊಳ್ಳುವ ಕಾಲಕ್ಕೆ ಅಲ್ಲಿನ ರಾಜರಿಗೆ ನೀಡಿದ ವಾಗ್ದಾನ ಅದು. ಅದನ್ನು ಗೌರವಿಸುವುದು ಇಡೀ ದೇಶದ ಕರ್ತವ್ಯ. ಈಗ ಹಿಂದೆ ಸರಿದರೆ ವಚನಭಂಗ ಎಂಬ ಕಳಂಕ ಹೊರಬೇಕಾಗುತ್ತದೆ. ಅಲ್ಲದೆ, ಹೊರಗಿನವರು ಅಲ್ಲಿ ಆಸ್ತಿ ಮಾಲೀಕರಾಗುವಂತಿಲ್ಲ, ಶೈಕ್ಷಣಿಕ ಸೌಲಭ್ಯ ಮತ್ತು ಉದ್ಯೋಗಗಳು ಸ್ಥಳೀಯರಿಗಷ್ಟೇ ಮೀಸಲು ಎಂಬುದು ಸ್ವಾತಂತ್ರ್ಯಾನಂತರ ಜಾರಿಗೆ ಬಂದದ್ದಲ್ಲ. 90 ವರ್ಷಗಳ ಹಿಂದೆ ಅಂದರೆ 1927ರಲ್ಲಿಯೇ ಆಗಿನ ರಾಜ ಹರಿಸಿಂಗ್‌ ಈ ಆದೇಶ ಹೊರಡಿಸಿದ್ದರು. 1932ರಲ್ಲಿ ಇದಕ್ಕೆ ಪೂರಕವಾದ ಮತ್ತೊಂದು ಆಜ್ಞೆ ಜಾರಿಗೊಳಿಸಿದ್ದರು. ವಿಲೀನ ಕಾಲಕ್ಕೆ ಅದಕ್ಕೆಲ್ಲ ಒಪ್ಪಿಗೆ ಕೊಟ್ಟು ಈಗ ಈ ಸೌಲಭ್ಯಕ್ಕೆ ಮತೀಯ ಬಣ್ಣ ಬಳಿಯುವುದು ಸರಿಯಲ್ಲ. ಇದು ಅತ್ಯಂತ ಸೂಕ್ಷ್ಮ ವಿಷಯ. ಅಷ್ಟೇ ನಾಜೂಕಾಗಿ ನಿಭಾಯಿಸಬೇಕು. ಭಾವೋದ್ವೇಗಕ್ಕೆ ಇಲ್ಲಿ ಎಡೆಯಿಲ್ಲ. ಏಕಪಕ್ಷೀಯವಾಗಿ ತೆಗೆದುಕೊಳ್ಳುವ ಯಾವುದೇ ನಿರ್ಧಾರ ಅನಾಹುತ ಉಂಟು ಮಾಡಬಹುದು. ಆದ್ದರಿಂದ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಈ ವಿಷಯದಲ್ಲಿ ಹೆಚ್ಚು ಪ್ರಬುದ್ಧತೆ, ಪ್ರೌಢಿಮೆ ಪ್ರದರ್ಶಿಸಬೇಕು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.