ADVERTISEMENT

ಕರಾವಳಿ ಭಾಗಕ್ಕೆ ಬೇಕಾಗಿದೆ ಶಾಂತಿ– ಸಂಯಮದ ಮುಲಾಮು

​ಪ್ರಜಾವಾಣಿ ವಾರ್ತೆ
Published 5 ಜನವರಿ 2018, 19:30 IST
Last Updated 5 ಜನವರಿ 2018, 19:30 IST
ಕರಾವಳಿ ಭಾಗಕ್ಕೆ ಬೇಕಾಗಿದೆ ಶಾಂತಿ– ಸಂಯಮದ ಮುಲಾಮು
ಕರಾವಳಿ ಭಾಗಕ್ಕೆ ಬೇಕಾಗಿದೆ ಶಾಂತಿ– ಸಂಯಮದ ಮುಲಾಮು   

ರಾಜ್ಯದಲ್ಲಿಯೇ ಅತಿಹೆಚ್ಚು ಅಕ್ಷರಸ್ಥರು ಇರುವ, ಬುದ್ಧಿವಂತರ ಜಿಲ್ಲೆ ಎಂಬ ಖ್ಯಾತಿಯ ದಕ್ಷಿಣ ಕನ್ನಡಕ್ಕೆ ಏನಾಗಿದೆ? ಯಾಕೆ ಅಲ್ಲಿ ಪದೇ ಪದೇ ಕೋಮು ಘರ್ಷಣೆಗಳು, ಪ್ರತೀಕಾರದ ಕೊಲೆಗಳು ನಡೆಯುತ್ತಿವೆ? ಇದರ ಹಿಂದೆ ಇರುವ ಕಿಡಿಗೇಡಿಗಳು, ಮತಾಂಧರು ಯಾರು? ಅವರ ಉದ್ದೇಶ ಏನು? ಕೆಲ ಸಂಘಟನೆಗಳ ಬಳಿ, ರಾಜಕೀಯ ಪಕ್ಷಗಳ ಬಳಿ ಇದಕ್ಕೆ ಉತ್ತರ ಇದೆ. ಅಶಾಂತಿಗೆ ಅಂತ್ಯ ಹಾಡಿ ಶಾಂತಿ– ನೆಮ್ಮದಿಯ ದಿನಗಳನ್ನು ಮರಳಿ ತರುವ ಶಕ್ತಿಯೂ ಅವಕ್ಕೆ ಇದೆ. ಆದರೆ ಅವು ಆ ಕೆಲಸವನ್ನು ಮಾಡುತ್ತಿಲ್ಲ. ಕ್ಷುಲ್ಲಕ ರಾಜಕೀಯ ಲಾಭಕ್ಕಾಗಿ ಕೋಮು ಸಾಮರಸ್ಯ ಕದಡುವುದೇ ಬಹಳ ಇಷ್ಟ ಎಂಬಂತಿದೆ ಅವುಗಳ ನಡವಳಿಕೆ. ಆದರೆ ಅದಕ್ಕೆ ದುಬಾರಿ ಬೆಲೆ ತೆರುತ್ತಿರುವವರು ಅಮಾಯಕ ಜನಸಾಮಾನ್ಯರು. ನಿತ್ಯವೂ ಆತಂಕದಲ್ಲಿ ಬದುಕು ನೂಕಬೇಕಾದ ಅಸಹಾಯಕತೆ ಅವರದು. ಯಾವ ಕ್ಷಣದಲ್ಲಿ ಏನಾಗುತ್ತದೆಯೋ, ಯಾರ ದ್ವೇಷಕ್ಕೆ ಯಾರು ಬಲಿಯಾಗುತ್ತಾರೋ, ಅದರ ಪರಿಣಾಮ ಇನ್ಯಾರ ಮೇಲೆ ಆಗುತ್ತದೆಯೋ ಎಂಬ ಭಯದಲ್ಲೇ ದಿನ ಕಳೆಯುವಂತಾಗಿದೆ.

ಈ ಜಿಲ್ಲೆಯ ಕೋಮು ದ್ವೇಷದ ದಳ್ಳುರಿ 24 ವರ್ಷದ ಯುವಕನೊಬ್ಬನನ್ನು ಮೂರು ದಿನಗಳ ಹಿಂದೆ ಬಲಿ ತೆಗೆದುಕೊಂಡಿದೆ. ಹತ್ಯೆ ನಡೆದದ್ದು ನಡು ಹಗಲಿನಲ್ಲಿ. ಈ ಸಲ ಪೊಲೀಸರೂ ವಿಳಂಬ ಮಾಡಲಿಲ್ಲ. ಶಂಕಿತ ಆರೋಪಿಗಳನ್ನು ಗುರುತಿಸಿ ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾದರು. ಪರಿಸ್ಥಿತಿ ಕೈಮೀರುವುದು ಇದರಿಂದಾಗಿ ಸ್ವಲ್ಪಮಟ್ಟಿಗೆ ತಪ್ಪಿತು. ಆದರೆ ಹತ್ಯೆಗೆ ಪ್ರತೀಕಾರ ಎಂಬಂತೆ ಅದರ ಬೆನ್ನಲ್ಲೇ ಇನ್ನೊಬ್ಬ ಯುವಕನ ಮೇಲೂ ದಾಳಿ
ನಡೆಯಿತು. ಹಿಂದೆಲ್ಲ ಇಂತಹ ಹತ್ಯೆ– ಪ್ರತಿದಾಳಿ ನಡೆದಾಗ ಅದರ ಬಿಸಿ ಇಡೀ ಜಿಲ್ಲೆಗೆ ಹರಡಿತ್ತು. ಕೆಲ ರಾಜಕಾರಣಿಗಳು ಮತ್ತು ಕೋಮು ಸಂಘಟನೆಗಳ ಪ್ರಚೋದನಾತ್ಮಕಹೇಳಿಕೆಗಳು, ಹೊಣೆಗೇಡಿ ನಡವಳಿಕೆಗಳಿಂದ ಪರಿಸ್ಥಿತಿ ಬಿಗಡಾಯಿಸಿತ್ತು. ಅದಕ್ಕೆಲ್ಲ ಹೋಲಿಸಿದರೆ ಈ ಸಲ ಪೊಲೀಸರು ಬೇಗ ಕ್ರಮ ಕೈಗೊಂಡಿದ್ದಾರೆ. ಇಂತಹುದೇ ಕ್ರಿಯಾಶೀಲತೆ, ಕಾರ್ಯದಕ್ಷತೆಯನ್ನು ಅವರು ಯಾವಾಗಲೂಪ್ರದರ್ಶಿಸಬೇಕು. ಹಿಂದೆಲ್ಲ ನಡೆದ ಕೊಲೆ– ಪ್ರತೀಕಾರ ಮತ್ತು ಹಿಂಸಾಚಾರಗಳಿಗೆ ಪೊಲೀಸ್‌ ಮತ್ತು ಬೇಹುಗಾರಿಕೆ ವೈಫಲ್ಯವೂ ಕಾರಣವಾಗಿತ್ತು. ಜಿಲ್ಲೆಯ ಪರಿಸ್ಥಿತಿ ಸೂಕ್ಷ್ಮವಾಗಿರುವುದರಿಂದ ದಕ್ಷ ಅಧಿಕಾರಿಗಳನ್ನು ಸರ್ಕಾರ ನಿಯೋಜಿಸಬೇಕು. ಪೊಲೀಸರು ಕೂಡ ಸದಾ ಜಾಗೃತರಾಗಿರಬೇಕು. ಯಾರೇ ಪುಂಡಾಟಿಕೆ ಮಾಡಿದರೂ ನಿರ್ದಾಕ್ಷಿಣ್ಯವಾಗಿ ಮಟ್ಟಹಾಕಬೇಕು. ಕಾನೂನು ಕ್ರಮ ತೆಗೆದುಕೊಳ್ಳುವ ಸಂದರ್ಭದಲ್ಲೂ ‘ತಾರತಮ್ಯದಿಂದ ನಡೆದುಕೊಂಡರು’ ಎಂಬ ಆರೋಪಕ್ಕೆ ಅವಕಾಶ ಮಾಡಿಕೊಡಬಾರದು. ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕು. ಸಾರ್ವಜನಿಕರ ವಿಶ್ವಾಸ ಗಳಿಸಿಕೊಂಡರೆ ಕೆಲಸ ಸುಲಭವಾಗುತ್ತದೆ ಎಂಬುದನ್ನು ಪೊಲೀಸರು ಮರೆಯಕೂಡದು.

ಜೀವ ಅಮೂಲ್ಯ. ವ್ಯಕ್ತಿಯೊಬ್ಬ ಯಾವುದೇ ಜಾತಿ– ಧರ್ಮಕ್ಕೆ ಸೇರಿದ್ದರೂ ಮಾನವೀಯತೆಯೇ ಮುಖ್ಯ; ನಾಗರಿಕ ಸಮಾಜದಲ್ಲಿ ಹಿಂಸೆಗೆ ಸ್ಥಾನವಿಲ್ಲ ಎಂಬುದನ್ನು ಯಾರೂ ಮರೆಯಬಾರದು. ಮತಿಹೀನ ಕಿಡಿಗೇಡಿಗಳು ಮನಬಂದಂತೆ ನಡೆದುಕೊಂಡರೆ, ಯಾರನ್ನಾದರೂ ಕೊಂದು ಶಾಂತಿ ಕದಡಲು ಪ್ರಯತ್ನಿಸಿದರೆ ಅದಕ್ಕೆ ಜನ ಕಿವಿಗೊಡಬಾರದು. ಅಮಾಯಕರ ನೆತ್ತರಿನ ಮೇಲೆ ರಾಜಕಾರಣ ಮಾಡುವುದನ್ನು ನಮ್ಮ ರಾಜಕೀಯ ಪಕ್ಷಗಳು ಬಿಡಬೇಕು. ಕಷ್ಟದಲ್ಲಿದ್ದಾಗ, ನೋವಿನಲ್ಲಿದ್ದಾಗ ಜನ ಜಾತಿ– ಧರ್ಮ ಭೇದ ಮರೆತು ಒಬ್ಬರಿಗೊಬ್ಬರು ಸಹಾಯ ಮಾಡಿದ್ದಾರೆ. ದಕ್ಷಿಣ ಕನ್ನಡದಲ್ಲಿ ಕೂಡ ಕೋಮು ಗಲಭೆಗಳ ಸಂದರ್ಭದಲ್ಲೂ ಇಂತಹ ಮಾನವೀಯ ಪ್ರಸಂಗಗಳು ಬೇಕಾದಷ್ಟು ನಡೆದಿವೆ. ಆದ್ದರಿಂದ ಜನರ ನಡುವಿನ ಸೌಹಾರ್ದದ ಕೊಂಡಿಯನ್ನು ಮತ್ತಷ್ಟು ಗಟ್ಟಿಯಾಗಿ ಬೆಸೆಯುವ ಪ್ರಯತ್ನ ಆಗಬೇಕು. ಆಯಾ ಸಮುದಾಯದ ಧಾರ್ಮಿಕ, ರಾಜಕೀಯ ಮತ್ತು ಸಾಮಾಜಿಕ ಮುಖಂಡರು ಮತೀಯ ಸಂಘಟನೆಗಳ ಕಿವಿಹಿಂಡಿ ಬುದ್ಧಿ ಹೇಳಬೇಕು. ಕೋಮು ಗಲಭೆ, ಸೇಡು, ಹತ್ಯೆಗಳು ಕಾಡಿನ ಬೆಂಕಿ ಇದ್ದಂತೆ. ಒಮ್ಮೆ ಹತ್ತಿಕೊಂಡರೆ ನಿಯಂತ್ರಿಸುವುದು ಕಷ್ಟ. ಬೆಂಕಿಗೆ ಯಾವುದೇ ಕರುಣೆ ಇಲ್ಲ. ಅದು ಯಾರನ್ನು ಸುಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲರೂ ಸಂಯಮ ಮತ್ತು ವಿವೇಕವನ್ನು ಪ್ರದರ್ಶಿಸಬೇಕು. ಚುನಾವಣೆ ಹತ್ತಿರವಾಗುತ್ತಿದ್ದಂತೆ ಶಾಂತಿ– ಸೌಹಾರ್ದ ಕೆಡಿಸುವ ಪ್ರಯತ್ನಗಳು ಹೆಚ್ಚುತ್ತವೆ. ಅವಕ್ಕೆ ಕಿವಿಗೊಡಬಾರದು. ಕರಾವಳಿ ಭಾಗಕ್ಕೆ ಅಂಟಿಕೊಂಡ ಕಪ್ಪುಚುಕ್ಕೆ ಹೋಗಲಾಡಿಸಲು ಸಾಮೂಹಿಕ ಪ್ರಯತ್ನ ನಡೆಯಬೇಕು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.