ADVERTISEMENT

ಸಂಪಾದಕೀಯ | ದೂರಸಂ‍ಪರ್ಕ ಮಸೂದೆ; ಸರ್ಕಾರಕ್ಕೆ ನಿರಂಕುಶ ಅಧಿಕಾರ

ಸುಧಾರಣೆ ಮತ್ತು ಪರಿಷ್ಕರಣೆಗಳ ನಡುವೆ ಗಂಭೀರವಾದ ನಕಾರಾತ್ಮಕ ಅಂಶಗಳು ಸಹ ಮಸೂದೆಯಲ್ಲಿ ಇವೆ

ಸಂಪಾದಕೀಯ
Published 25 ಡಿಸೆಂಬರ್ 2023, 19:37 IST
Last Updated 25 ಡಿಸೆಂಬರ್ 2023, 19:37 IST
   

ದೂರಸಂಪರ್ಕ ಮಸೂದೆ– 2023 ಅನ್ನು ಸಂಸತ್ತು ಅಂಗೀಕರಿಸಿದೆ. ದೂರಸಂಪರ್ಕ ಕ್ಷೇತ್ರವನ್ನು ನಿಯಂತ್ರಿಸುತ್ತಿರುವ 138 ವರ್ಷಗಳಷ್ಟು ಹಳೆಯದಾದ ಟೆಲಿಗ್ರಾಫ್‌ ಕಾಯ್ದೆ ಬದಲಿಗೆ ಈ ಮಸೂದೆಯನ್ನು ರೂಪಿಸಲಾಗಿದೆ. ಈಗ ಇರುವ ಪ್ರಕ್ರಿಯೆಗಳು ಮತ್ತು ನಿಯಮಗಳಿಗೆ ಸುಧಾರಣೆ ತಂದು ಅವನ್ನು ಪರಿಷ್ಕರಿಸುವುದು ಹೊಸ ಮಸೂದೆಯ ಉದ್ದೇಶ ಎಂದು ಘೋಷಿಸಲಾಗಿದೆ. ಹೊಸ ಮಸೂದೆಯ ಪರಿಣಾಮವಾಗಿ ಭಾರತೀಯ ವೈರ್‌ಲೆಸ್‌ ಟೆಲಿಗ್ರಾಫಿ ಕಾಯ್ದೆ–1933 ಮತ್ತು ಟೆಲಿಗ್ರಾಫ್‌ ವೈರ್ಸ್‌ (ಅಕ್ರಮವಾಗಿ ಸ್ವಾಧೀನದಲ್ಲಿ ಇರಿಸಿಕೊಳ್ಳುವಿಕೆ) ಕಾಯ್ದೆ–1950 ಕೂಡ ಬದಲಾಗಲಿವೆ. ಹಳೆಯ ಕಾನೂನುಗಳು ಈಗಿನ ಆಧುನಿಕ ಯುಗದಲ್ಲಿ ಅಸಮರ್ಪಕ ಮತ್ತು ಅವು ವಸಾಹತುಶಾಹಿ ಆಳ್ವಿಕೆ ಮತ್ತು ನಿಯಂತ್ರಣದ ದೃಷ್ಟಿಯಿಂದ ರೂಪುಗೊಂಡ ಕಾಯ್ದೆಗಳಾಗಿವೆ. ಸಂವಹನ ಕ್ಷೇತ್ರದಲ್ಲಿ ಈಚಿನ ವರ್ಷಗಳಲ್ಲಿ ಆಗಿರುವ ಪಲ್ಲಟ ಅಗಾಧವಾದುದು. ಹಾಗಿದ್ದರೂ ಹಳೆಯ ಕಾಯ್ದೆಗಳ ಸಮಗ್ರ ಮರುಪರಿಶೀಲನೆಗೆ ಇಷ್ಟೆಲ್ಲ ವರ್ಷಗಳು ಬೇಕಾದವು ಎಂಬುದೇ ಅಚ್ಚರಿಯ ಸಂಗತಿ. ಹತ್ತಾರು ವ್ಯವಸ್ಥೆಗಳನ್ನು
ಹೊಂದಿರುವ ಅತ್ಯಂತ ಸಂಕೀರ್ಣವಾದ ಸಂವಹನ ಕ್ಷೇತ್ರದ ಅಧಿಕಾರಿಶಾಹಿ ಕಾರ್ಯವಿಧಾನ ಮತ್ತು ಪ್ರಕ್ರಿಯೆಗಳನ್ನು ಸರಳಗೊಳಿಸುವುದು ಹೊಸ ಮಸೂದೆಯ ಉದ್ದೇಶ. ಹೊಸ ಮಸೂದೆಯು ಜಾರಿಯಾದರೆ ಪರವಾನಗಿ ನೀಡಿಕೆ ಪ್ರಕ್ರಿಯೆಯು
ಡಿಜಿಟಲೀಕರಣಗೊಳ್ಳಲಿದೆ. ಪರವಾನಗಿ ಮತ್ತು ವಿವಾದ ಪರಿಹಾರ ವ್ಯವಸ್ಥೆಗಳು ವಿಕೇಂದ್ರೀಕರಣಗೊಳ್ಳುವುದರಿಂದ ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಅನುಕೂಲ ಆಗಲಿದೆ. 

ಈಗ ಇರುವ ತ್ರಾಸದಾಯಕವಾದ ಪರವಾನಗಿ ವ್ಯವಸ್ಥೆಯನ್ನು ಈ ಮಸೂದೆಯು ಕೊನೆಗೊಳಿಸಲಿದೆ. ದೂರಸಂಪರ್ಕ ಎಂಬುದು ಅಂತರರಾಷ್ಟ್ರೀಯ ನಂಟು ಹೊಂದಿರುವ ಕ್ಷೇತ್ರವಾಗಿದೆ. ಹಾಗಾಗಿ, ಈ ಮಸೂದೆಯಲ್ಲಿ ಅಂತರರಾಷ್ಟ್ರೀಯವಾಗಿ ಅನುಸರಿಸ
ಲಾಗುವ ಕೆಲವು ಪದ್ಧತಿಗಳನ್ನು ಅನುಸರಿಸಲಾಗಿದೆ. ಉಪಗ್ರಹ ಅಂತರ್ಜಾಲ ಕ್ಷೇತ್ರದಲ್ಲಿ ಇರುವವರು ತರಂಗಾಂತರಕ್ಕೆ ಬಿಡ್‌ ಸಲ್ಲಿಸಬೇಕಾದ ಅಗತ್ಯ ಇಲ್ಲ ಎಂದು ಮಸೂದೆಯು ಹೇಳುತ್ತದೆ. ಏಕೆಂದರೆ ಬಿಡ್‌ ಸಲ್ಲಿಕೆಯ ಮೂಲಕ ತರಂಗಾಂತರ ಪಡೆದುಕೊಂಡರೆ ಒಟ್ಟು ಸೇವೆಯ ವೆಚ್ಚ ಏರಿಕೆಯಾಗುತ್ತದೆ. ಕಾನೂನು ಬಾಹಿರವಾಗಿ ದೂರವಾಣಿ ಕದ್ದಾಲಿಕೆ ಮತ್ತು ಅನಧಿಕೃತ ಹ್ಯಾಕಿಂಗ್‌ಗೆ ದಂಡ ಮತ್ತು ಸಜೆ ವಿಧಿಸುವ ಅವಕಾಶವನ್ನೂ ಮಸೂದೆಯಲ್ಲಿ ಸೇರಿಸಲಾಗಿದೆ. ಸಿಮ್‌ ಕಾರ್ಡ್‌ ನೀಡುವುದಕ್ಕೆ ಬಯೊಮೆಟ್ರಿಕ್‌ ಪ್ರಮಾಣೀಕರಣ ಕುರಿತ ಪ್ರಸ್ತಾಪವೂ ಇದೆ. ಇದರಿಂದಾಗಿ ಬೇರೆಯವರ ಹೆಸರಿನಲ್ಲಿ ಸಿಮ್‌ ಕಾರ್ಡ್‌ ಪಡೆದು ವಂಚನೆ ನಡೆಸುವುದು ಮತ್ತು ಇದೇ ರೀತಿಯ ಇತರ ಅಪರಾಧಗಳನ್ನು ತಪ್ಪಿಸಬಹುದಾಗಿದೆ. ಈ ಎಲ್ಲ ಸುಧಾರಣೆ ಮತ್ತು ಪರಿಷ್ಕರಣೆಗಳ ನಡುವೆ ಗಂಭೀರವಾದ ನಕಾರಾತ್ಮಕ ಅಂಶಗಳೂ ಮಸೂದೆಯಲ್ಲಿ ಇವೆ. ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯ ಖಾಸಗಿತನ ಮತ್ತು ಸ್ವಾಯತ್ತೆಯು ಬಹಳ ಮುಖ್ಯವಾದುದಾಗಿದೆ. ಆದರೆ, ಈ ಕ್ಷೇತ್ರದ ನಿಯಂತ್ರಣ ಮತ್ತು ನಿರ್ವಹಣೆಗೆ ಸರ್ಕಾರಕ್ಕೆ ನಿರಂಕುಶ ಅಧಿಕಾರವನ್ನು ನೀಡಲಾಗಿದೆ. ಮಸೂದೆಯಲ್ಲಿ ಇರುವ ಕೆಲವು ವ್ಯಾಖ್ಯೆಗಳು ಎಷ್ಟು ಸ್ಥೂಲವಾಗಿವೆ ಎಂದರೆ, ಯಾವುದೇ ರೀತಿಯ ಸಂವಹನವನ್ನು ಸರ್ಕಾರವು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದಾಗಿದೆ. ಹಲವು ಸೇವೆಗಳನ್ನು ಮಸೂದೆಯ ವ್ಯಾಪ್ತಿಗೆ ತರಲಾಗಿದೆ. ವ್ಯಕ್ತಿಗಳು ಮತ್ತು ಸಂಘಟನೆಗಳ ಖಾಸಗಿತನದ ಮೇಲೆ ನಿಗಾ ಇರಿಸುವ ಮತ್ತು ಹಸ್ತಕ್ಷೇಪ ನಡೆಸುವ ಅಧಿಕಾರವನ್ನು ಸರ್ಕಾರಕ್ಕೆ ಕೊಡಲಾಗಿದೆ.  

‘ದೇಶದ ಸುರಕ್ಷತೆ’ ಮತ್ತು ‘ಸಾರ್ವಜನಿಕ ಸುವ್ಯವಸ್ಥೆ’ಯ ಕಾರಣಗಳನ್ನು ಕೊಟ್ಟು ಯಾವುದೇ ಇಬ್ಬರು ವ್ಯಕ್ತಿಗಳ ನಡುವಣ ಸಂವಹನವನ್ನು ಸರ್ಕಾರವು ತಡೆಯಬಹುದು. ‘ದೇಶದ ಸುರಕ್ಷತೆ’ ಮತ್ತು ‘ಸಾರ್ವಜನಿಕ ಸುವ್ಯವಸ್ಥೆ’ ಎಂಬುದನ್ನು ಸರ್ಕಾರವು ತನ್ನ ಇಷ್ಟಕ್ಕೆ ಬೇಕಾದಂತೆ ವ್ಯಾಖ್ಯಾನಿಸುವುದಕ್ಕೆ ಸದಾ ಅವಕಾಶ ಇದೆ. ಜನರ ದೂರವಾಣಿ ಮಾತುಕತೆಗಳನ್ನು ಆಲಿಸಲು ಸರ್ಕಾರದ ಸಂಸ್ಥೆಗಳಿಗೆ ಅನುಮತಿ ನೀಡುವ ಪ್ರಸ್ತಾವವು ಮಸೂದೆಯಲ್ಲಿ ಇದೆ. ಸಾರ್ವಜನಿಕ ತುರ್ತು ಸಂದರ್ಭದಲ್ಲಿ ದೂರಸಂಪರ್ಕ ಸೇವೆಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಕೂಡ ಅವಕಾಶ ಸೃಷ್ಟಿಸಲಾಗಿದೆ. ಬಳಕೆದಾರರ ಅನುಕೂಲಕ್ಕಾಗಿ ಸೇರಿಸಿಕೊಳ್ಳಲಾಗಿದೆ ಎಂದು ಹೇಳಲಾಗಿರುವ ಹಲವು ಅವಕಾಶಗಳನ್ನು ಬಳಕೆದಾರರ ವಿರುದ್ಧವೇ ದುರ್ಬಳಕೆ ಮಾಡಿಕೊಳ್ಳಬಹುದಾಗಿದೆ. ಕಾಯ್ದೆಗಳ ಸುಧಾರಣೆ ಮತ್ತು ಸರಳೀಕರಣವನ್ನು ಉದ್ಯಮದ ಸಂಘಟನೆಗಳು ಸ್ವಾಗತಿಸಿವೆ. ಆದರೆ, ಮಸೂದೆಯಲ್ಲಿ ಪ್ರಸ್ತಾಪಿಸಿರುವ ನಿಯಂತ್ರಣ ವ್ಯವಸ್ಥೆಗಳು ಉದ್ಯಮವನ್ನೂ ಬಾಧಿಸಲಿವೆ. ಆದರೆ, ಈಗಿನ ರಾಜಕೀಯ ಸನ್ನಿವೇಶದಲ್ಲಿ ಈ ವಿಚಾರವನ್ನು ಉದ್ಯಮದ ವ್ಯಕ್ತಿಗಳು ಬಹಿರಂಗವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ವಿರೋಧ ಪಕ್ಷದ ಬಹುಪಾಲು ಸದಸ್ಯರು ಅಮಾನತಾಗಿ ಸಂಸತ್ತಿನಲ್ಲಿ ಉಪಸ್ಥಿತರಿಲ್ಲದ ಸಂದರ್ಭದಲ್ಲಿಯೇ ಈ ಮಸೂದೆಯನ್ನು ತರಾತುರಿಯಲ್ಲಿ ಅನುಮೋದಿಸಲಾಗಿದೆ ಎಂಬುದೇ ಸರ್ಕಾರದ ಉದ್ದೇಶ ಏನು ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ. ಹಾಗೆಯೇ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಸ್ಥಿತಿಗೂ ಇದು ಕನ್ನಡಿ ಹಿಡಿಯುತ್ತದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.