ಮಾದರಿ ನೋಂದಣಿ ವ್ಯವಸ್ಥೆಯ (ಎಸ್‌ಆರ್‌ಎಸ್) ಸಾಂಖ್ಯಿಕ ವರದಿಯಲ್ಲಿ ಶಿಶು ಮರಣದ ಪ್ರಮಾಣ ಮತ್ತು ಮಕ್ಕಳ ಸ್ವಾಸ್ಥ್ಯಕ್ಕೆ ಸಂಬಂಧಿಸಿದಂತೆ ಆಶಾದಾಯಕ ಸುದ್ದಿ ಇದೆ. ಭಾರತದ ಪ್ರಧಾನ ನೋಂದಣಾ ಧಿಕಾರಿಯವರು ಈ ವರದಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ. ಶಿಶು ಮರಣ ಪ್ರಮಾಣದಲ್ಲಿ (ಐಎಂಆರ್) ಇಳಿಕೆ ಆಗಿದೆ ಎಂಬುದರತ್ತ ಈ ವರದಿಯು ಬೆಳಕು ಚೆಲ್ಲಿದೆ. ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣವು 2019ರಲ್ಲಿ ಪ್ರತೀ ಸಾವಿರ ಸಜೀವ ಜನನಕ್ಕೆ 35 ಇತ್ತು. ಅದು 2020ರಲ್ಲಿ 32ಕ್ಕೆ ಇಳಿದಿದೆ. ಐಎಂಆರ್ ಮತ್ತು ನವಜಾತ ಶಿಶು ಮರಣ ಪ್ರಮಾಣಗಳೆರಡೂ ಇಳಿಕೆ ಆಗಿವೆ. ನವಜಾತ ಶಿಶು ಮರಣ ಪ್ರಮಾಣವು ಪ್ರತೀ ಸಾವಿರ ಸಜೀವ ಜನನಗಳಿಗೆ 20ಕ್ಕೆ ಇಳಿದಿದೆ. ಮಿಜೋರಾಂ ಮತ್ತು ನಾಗಾಲ್ಯಾಂಡ್‌ನಲ್ಲಿ ಈ ಪ್ರಮಾಣವು ಅತ್ಯಂತ ಕಡಿಮೆ ಇದೆ. ಈ ರಾಜ್ಯಗಳಲ್ಲಿನ ಐಎಂಆರ್ ಪ್ರತೀ ಸಾವಿರ ಸಜೀವ ಜನನಗಳಿಗೆ ಕ್ರಮವಾಗಿ ಮೂರು ಮತ್ತು ನಾಲ್ಕು. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಯನ್ನು (ಎಸ್‌ಡಿಜಿ) ನವಜಾತ ಶಿಶು ಮರಣ ಪ್ರಮಾಣದ ವಿಚಾರದಲ್ಲಿ ಆರು ರಾಜ್ಯಗಳು ಸಾಧಿಸಿವೆ. ಈ ರಾಜ್ಯಗಳಲ್ಲಿ ಶಿಶು ಮರಣ ಪ್ರಮಾಣವು 12ಕ್ಕಿಂತ ಕಡಿಮೆ ಇದೆ. 11 ರಾಜ್ಯಗಳಲ್ಲಿ ಐದು ವರ್ಷದೊಳಗಿನ ಶಿಶು ಮರಣ ಪ್ರಮಾಣವು 25ಕ್ಕಿಂತ ಕಡಿಮೆ ಇದೆ. ಐದು ವರ್ಷದೊಳಗಿನ ಶಿಶು ಮರಣ ಪ್ರಮಾಣವು ಕರ್ನಾಟಕ ಮತ್ತು ಉತ್ತರಪ್ರದೇಶದಲ್ಲಿ ತೀವ್ರವಾಗಿ ಕುಸಿದಿದೆ.
ಇದು ದೊಡ್ಡ ಸಾಧನೆಯೇ. ಆದರೆ, ಬೇರೆ ಕೆಲವು ವಿಚಾರಗಳಲ್ಲಿ ಕಳವಳವೂ ಉಂಟು. 2017ರಿಂದ 2019ರ ನಡುವೆ ರಾಷ್ಟ್ರಮಟ್ಟದಲ್ಲಿ ಲಿಂಗ ಅನುಪಾತವು ಮೂರು ಅಂಶಗಳಷ್ಟು ಏರಿಕೆ ಆಗಿದೆ. ಆದರೆ, 10 ರಾಜ್ಯಗಳಲ್ಲಿ ಲಿಂಗಾನುಪಾತವು ಕುಸಿದಿದೆ. ಕೇರಳದಲ್ಲಿ ಲಿಂಗಾನುಪಾತವು ಅತ್ಯಂತ ಹೆಚ್ಚು ಅಂದರೆ 974 ಇದೆ. ಉತ್ತರಾಖಂಡದಲ್ಲಿ ಅತ್ಯಂತ ಕಡಿಮೆ ಅಂದರೆ 844 ಇದೆ. ಜನನ ಸಂದರ್ಭದಲ್ಲಿ ಲಿಂಗಾನುಪಾತವು ಒಂದು ವೈದ್ಯಕೀಯ ದಾಖಲೆ ಮಾತ್ರವೇ ಅಲ್ಲ, ಇದು ಸಾಮಾಜಿಕ ಧೋರಣೆಗಳ ಸೂಚಕವೂ ಹೌದು. ಸಮಾಜದ ಉತ್ತಮ ಆರೋಗ್ಯಕ್ಕೆ ಲಿಂಗ ಸಮತೋಲನ ಬಹಳ ಮುಖ್ಯವಾದುದಾಗಿದೆ. ಕೆಲವು ರಾಜ್ಯಗಳಲ್ಲಿ ಲಿಂಗ ಅನುಪಾತವು ಕುಸಿದಿರುವುದರ ಕುರಿತು ಗಂಭೀರವಾದ ಅಧ್ಯಯನ ನಡೆಯಬೇಕಿದೆ ಎಂದು ಪರಿಣತರು ಸಲಹೆ ಕೊಟ್ಟಿದ್ದಾರೆ. ಇದು ಸಮಾಜದಲ್ಲಿ ನೆಲೆಯಾಗಿರುವ ಪ್ರವೃತ್ತಿ ಆಗಿರುವುದರಿಂದ ಈ ಕುರಿತು ಅಧ್ಯಯನ ಅಗತ್ಯ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ಈ ಪ್ರವೃತ್ತಿಯು ದೇಶದಾದ್ಯಂತ ಇರುವ ವಾಸ್ತವವೇ ಆದರೂ ಹರಿಯಾಣ, ಪಂಜಾಬ್‌ನಂತಹ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಹೆಚ್ಚು ಬಲವಾಗಿದೆ. ಬಹಳ ಕಷ್ಟಪಟ್ಟು ಈ ಪ್ರವೃತ್ತಿಯನ್ನು ಬದಲಾಯಿಸಲಾಗಿದೆ. ಹಾಗೆ ಸಿಕ್ಕ ಅನುಕೂಲವು ಕಳೆದುಹೋಗದಂತೆ ನೋಡಿಕೊಳ್ಳಬೇಕಾಗಿದೆ.
ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ಮತ್ತು ಆಯ್ಕೆಯ ಗರ್ಭಪಾತವನ್ನು ಗರ್ಭಧಾರಣೆಪೂರ್ವ ಮತ್ತು ಪ್ರಸವಪೂರ್ವ ತಪಾಸಣೆ ತಂತ್ರಜ್ಞಾನ ಕಾಯ್ದೆ– 1994ರ ಅಡಿಯಲ್ಲಿ ನಿಷೇಧಿಸಲಾಗಿದೆ. ಹೆಣ್ಣು ಭ್ರೂಣ ಹತ್ಯೆ ತಡೆಯುವುದಕ್ಕೆ ಸಂಬಂಧಿಸಿ ಇವು ಅತ್ಯಂತ ಮಹತ್ವದ ಕ್ರಮಗಳಾಗಿವೆ. ಆದರೆ, ಈ ಕಾಯ್ದೆಯ ಕಣ್ಣು ತಪ್ಪಿಸಿ ಭ್ರೂಣ ಲಿಂಗ ಪತ್ತೆ ಮಾಡುವ ಹೊಸ ವಿಧಾನಗಳನ್ನು ಕಂಡುಕೊಳ್ಳಲಾಗಿದೆ ಎಂಬ ವರದಿಗಳು ಇವೆ. ಲಿಂಗ ಅನುಪಾತವು ಕುಸಿದಿರುವುದಕ್ಕೆ ಇದು ಕಾರಣ ಆಗಿರಬಹುದು. ಹೆಣ್ಣು ಮಕ್ಕಳ ಸಂರಕ್ಷಣೆಯನ್ನು ಪ್ರೋತ್ಸಾಹಿಸುವ ನೀತಿಗಳನ್ನು ರೂಪಿಸುವ ಅಗತ್ಯ ಇದೆ. ಅಂತಹ ನೀತಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕಿದೆ. ಶಿಶು ಮರಣ ಪ್ರಮಾಣವು ಇಳಿಕೆ ಆಗಿರುವುದು ಸಕಾರಾತ್ಮಕ ಅಂಶ. ಈ ಸಕಾರಾತ್ಮಕ ಅಂಶವು ಸುಸ್ಥಿರವಾಗಿ ಉಳಿಯಬೇಕಿದೆ. ಶಿಶು ಮರಣ ಮತ್ತು ಲಿಂಗ ಅನುಪಾತದಲ್ಲಿ ರಾಜ್ಯಗಳ ನಡುವೆ ಅಂತರವನ್ನು ಕಡಿಮೆ ಮಾಡಬೇಕಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವೆಯೂ ಅಂತರ ಇದೆ. ಅದನ್ನೂ ಸರಿಪಡಿಸಬೇಕಿದೆ. ಬಡವರ ಜೀವನಸ್ಥಿತಿಯನ್ನು ಉತ್ತಮಪಡಿಸುವುದು, ಅವರಿಗೆ ಅಗತ್ಯ ವೈದ್ಯಕೀಯ ಸೇವೆ ದೊರೆಯುವಂತೆ ಮಾಡುವುದು ಬಹಳ ಮುಖ್ಯವಾದುದಾಗಿದೆ. ಲಿಂಗ ಅನುಪಾತದ ವಿಚಾರದಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.