ADVERTISEMENT

ಸಂಪಾದಕೀಯ: ಜಾನುವಾರು ಸಾಗಿಸುತ್ತಿದ್ದ ವ್ಯಕ್ತಿ ಕೊಲೆ– ಕಠಿಣ ಶಿಕ್ಷೆ ಆಗಲಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2023, 19:07 IST
Last Updated 3 ಏಪ್ರಿಲ್ 2023, 19:07 IST
.
.   

ಜಾನುವಾರುಗಳನ್ನು ಸಾಗಿಸುತ್ತಿದ್ದ ಇದ್ರೀಷ್‌ ಪಾಷ ಎನ್ನುವ ವ್ಯಕ್ತಿಯನ್ನು ಪುಂಡರು ಥಳಿಸಿ ಕೊಂದಿದ್ದಾರೆ ಎನ್ನಲಾದ ಪ್ರಕರಣವು ಕಾನೂನು ಸುವ್ಯವಸ್ಥೆಯನ್ನು ಅಣಕಿಸುವಂತಹದ್ದು ಹಾಗೂ ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ತರುವಂತಹದ್ದು. ಕನಕಪುರ ತಾಲ್ಲೂಕಿನ ಸಾತನೂರು ಹತ್ತಿರದಲ್ಲಿ ಈ ಕೃತ್ಯ ನಡೆದಿದ್ದು, ‍ಗೋಸಂರಕ್ಷಣೆ ರೀತಿಯ ಭಾವುಕ ವಿಷಯವನ್ನು ಬಳಸಿಕೊಂಡು ನಡೆಸಿರುವ ಹೇಯ ಗೂಂಡಾಗಿರಿ ಖಂಡನೀಯ. ಮದ್ದೂರು ಸಮೀಪದ ತೆಂಡೆಕೆರೆ ಸಂತೆಯಲ್ಲಿ ಜಾನುವಾರುಗಳನ್ನು ಖರೀದಿಸಿ ಒಯ್ಯುವಾಗ ಮಾರ್ಗ ಮಧ್ಯದಲ್ಲಿ ದುಷ್ಕರ್ಮಿಗಳು ಅಡ್ಡಗಟ್ಟಿ ದಾಳಿ ನಡೆಸಿದ್ದಾರೆ. ಸಾವಿಗೀಡಾದ ವ್ಯಕ್ತಿ ಜಾನುವಾರುಗಳ ಖರೀದಿಗೆ ಸಂಬಂಧಿಸಿದ ರಸೀದಿಗಳನ್ನು ತೋರಿಸಿದರೂ ದಾಳಿಕೋರರು ಸುಮ್ಮನಾಗಿಲ್ಲ. ಆರೋಪಿಗಳು ₹ 2 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಹಾಗೂ ವಾಹನದಿಂದ ಇಳಿದು ಓಡಿಹೋಗಿ ಪೊದೆಯಲ್ಲಿ ಅವಿತುಕೊಂಡಿದ್ದ ಇದ್ರೀಷ್‌ ಅವರನ್ನು ಹೊರಗೆ ಎಳೆತಂದು ಹಲ್ಲೆ ನಡೆಸಿದರು ಎಂದು ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ವದಂತಿಗಳು ಹರಿದಾಡುತ್ತಿವೆ. ಸಮರ್ಪಕ ತನಿಖೆ ನಡೆಯುವ ಮೂಲಕವೇ ಸತ್ಯ ಸಂಗತಿ‌ ಹೊರಬರಬೇಕಾಗಿದೆ. ಇದ್ರೀಷ್‌ ಪಾಷ ಅವರ ಕೊಲೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರ ರಕ್ಷಣಾ ಪಡೆ ಸಂಘಟನೆಯ ಮುಖಂಡ ಪುನೀತ್ ಕೆರೆಹಳ್ಳಿ ವಿರುದ್ಧ ಪ್ರಕರಣ ದಾಖಲಾಗಿದೆ. ನಿಷ್ಪಕ್ಷಪಾತ
ವಾಗಿ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು ಪೊಲೀಸರ ಕೆಲಸ. ಚುನಾವಣೆ ಸಂದರ್ಭದಲ್ಲಿ ನಡೆದಿರುವ ಈ ಕೃತ್ಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇಂಥ ಕೃತ್ಯಗಳ ಲಾಭ ಪಡೆದು ಕೋಮುದ್ವೇಷಕ್ಕೆ ಪ್ರಚೋದನೆ ನೀಡಲು ಕಿಡಿಗೇಡಿಗಳು ಸಮಯ ಕಾಯುತ್ತಿರುತ್ತಾರೆ.
ಪುಂಡರ ಚಟುವಟಿಕೆಗಳನ್ನು ಚಿಗುರಿನಲ್ಲೇ ಚಿವುಟಿ ಹಾಕುವುದು ಅಗತ್ಯ. ಸರ್ಕಾರದ ಜೊತೆಗೆ ರಾಜಕೀಯ ಪಕ್ಷಗಳೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾದ ಸಂದರ್ಭವಿದು. ರಾಜಕಾರಣಿಗಳ ಕಾಳಜಿ, ಆತಂಕ ಹಾಗೂ ಪ್ರತಿಭಟನೆಗಳು ಸಂತ್ರಸ್ತ ವ್ಯಕ್ತಿಯ ಧರ್ಮವನ್ನು ಆಧರಿಸಿರಬಾರದು. ಕಾನೂನು ಸುವ್ಯವಸ್ಥೆ ಮತ್ತು ಸಾಮಾಜಿಕ ಸೌಹಾರ್ದಕ್ಕೆ ಧಕ್ಕೆಯುಂಟಾದಾಗ ರಾಜಕೀಯ ಮುಖಂಡರು ಪಕ್ಷಭೇದ ಮರೆತು ಧ್ವನಿ ಎತ್ತಬೇಕು ಹಾಗೂ ಸಂತ್ರಸ್ತರ ಬೆಂಬಲಕ್ಕೆ ನಿಲ್ಲಬೇಕು. ರಾಜಕಾರಣಿಗಳು ಸಂವಿಧಾನಕ್ಕೆ ಬದ್ಧರಾಗಿರಬೇಕೆ
ವಿನಾ ಧಾರ್ಮಿಕ ಸಂಘಟನೆಗಳಿಗಲ್ಲ.

ಜಾನುವಾರುಗಳ ವಿಷಯದಲ್ಲಿ ಸ್ವಘೋಷಿತ ಧರ್ಮರಕ್ಷಕರು ಮೂಗು ತೂರಿಸುತ್ತಿದ್ದಾರೆ. ಸಂಸ್ಕೃತಿ ಹಾಗೂ ಧರ್ಮದ ಹೆಸರಿನಲ್ಲಿ ಕೆಲವರನ್ನು ಹೀಯಾಳಿಸುವ, ಬೆದರಿಸುವ, ಹಲ್ಲೆ ನಡೆಸುವ ಘಟನೆಗಳು ಹೆಚ್ಚಾಗುತ್ತಿವೆ. ಸಾಮಾಜಿಕ ಸಾಮರಸ್ಯ ಕದಡುವ ಕೃತ್ಯಗಳು ದೇಶದ ಬೇರೆ ಬೇರೆ ಭಾಗಗಳಿಂದ ವರದಿಯಾಗುತ್ತಿದ್ದವು. ಈಚಿನ ದಿನಗಳಲ್ಲಿ ರಾಜ್ಯದಲ್ಲೂ ಹೆಚ್ಚಾಗುತ್ತಿರುವುದು ದುರದೃಷ್ಟಕರ. ಕೋಮು ವೈಮನಸ್ಯಕ್ಕೆ ಆಸ್ಪದ ಕಲ್ಪಿಸುವ ಚಟುವಟಿಕೆಗಳ ವಿಚಾರದಲ್ಲಿ ಸರ್ಕಾರ ನಿರ್ದಾಕ್ಷಿಣ್ಯವಾಗಿ
ಕ್ರಮ ಕೈಗೊಳ್ಳಬೇಕು. ಕಾನೂನನ್ನು ಕೈಗೆ ತೆಗೆದುಕೊಳ್ಳುವುದನ್ನು ಸರ್ಕಾರ ಸಹಿಸಿಕೊಳ್ಳುವುದಿಲ್ಲ ಎನ್ನುವ ಸ್ಪಷ್ಟ ಸಂದೇಶ ರವಾನೆಯಾಗಬೇಕು. ಅಕ್ರಮವಾಗಿ ಗೋವುಗಳನ್ನು ಸಾಗಿಸಿದರೆ ಕಾನೂನು ರೀತ್ಯ ಕ್ರಮ ಜರುಗಿಸಲು ಪೊಲೀಸ್‌ ಇಲಾಖೆ ಹಾಗೂ ನ್ಯಾಯಾಂಗ ವ್ಯವಸ್ಥೆಯಿದೆ. ಈ ಸಾಂವಿಧಾನಿಕ ವ್ಯವಸ್ಥೆಗೆ ಪರ್ಯಾಯವೆಂಬಂತೆ ಕೆಲವರು ನಡೆದುಕೊಳ್ಳುವುದನ್ನು ಸಹಿಸಲಾಗದು. ಧರ್ಮ ಮತ್ತು ಸಂಸ್ಕೃತಿಯ ಹೆಸರಿನಲ್ಲಿ ಕೆಲವರು ಪುಂಡಾಟಿಕೆ ನಡೆಸುತ್ತಿದ್ದಾರೆ, ಹಣ ವಸೂಲಿ ಮಾಡುವ ದಂಧೆ ನಡೆಸುತ್ತಿದ್ದಾರೆ ಹಾಗೂ ತಾವೇ ಶಿಕ್ಷೆ ನೀಡಲು ಮುಂದಾಗಿರುವ ಉದಾಹರಣೆಗಳೂ ಇವೆ. ಲವ್‌ ಜಿಹಾದ್‌, ಗೋಸಂರಕ್ಷಣೆ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ನೈತಿಕತೆ ಹೆಸರಿನಲ್ಲಿ ಅನೈತಿಕ ಪೊಲೀಸ್‌ಗಿರಿ ನಡೆಯುತ್ತಿದೆ. ಜಾತ್ರೆಗಳಲ್ಲಿ ನಡೆಯುವ ವ್ಯಾಪಾರ ವಹಿವಾಟಿನಲ್ಲಿ ನಿರ್ದಿಷ್ಟ ಧರ್ಮದ ವ್ಯಾಪಾರಿಗಳನ್ನು ದೂರವಿಡುವ ಪ್ರಯತ್ನಗಳೂ ನಡೆದಿವೆ. ಇಂಥ ಕೃತ್ಯಗಳನ್ನು ಕೆಲವು ಧಾರ್ಮಿಕ ಸಂಘಟನೆಗಳು ಉತ್ತೇಜಿಸುತ್ತಿವೆ. ಯಾವುದೇ ಸಂದರ್ಭದಲ್ಲಿ ಯಾರೊಬ್ಬರಿಗೂ ಕಾನೂನು ಕೈಗೆ ತೆಗೆದುಕೊಳ್ಳುವ ಅಧಿಕಾರವಿಲ್ಲ. ಕಾನೂನನ್ನು ಕೈಗೆ ತೆಗೆದುಕೊಳ್ಳುವ ಪುಂಡರ ಬಗ್ಗೆ ಸರ್ಕಾರದ ಮೆದುಧೋರಣೆಯೂ ಸರಿಯಲ್ಲ. ಆರೋಪಕ್ಕೆ ಗುರಿಯಾದ ವ್ಯಕ್ತಿಯ ಧರ್ಮದ ಹಿನ್ನೆಲೆಯಲ್ಲಿ, ಕೃತ್ಯವನ್ನು ವೈಭವೀಕರಿಸುವ ಇಲ್ಲವೇ ನಿರ್ಲಕ್ಷಿಸುವ ಧೋರಣೆ ಪ್ರಜಾಸತ್ತಾತ್ಮಕವಾದುದಲ್ಲ. ತಪ್ಪಿತಸ್ಥರು ಯಾರೇ ಆದರೂ ಸರ್ಕಾರ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು. ಸರ್ಕಾರದ ಮೌನ ಅಥವಾ ಕಾನೂನು ಕ್ರಮ ಜರುಗಿಸುವಲ್ಲಿನ ವಿಳಂಬನೀತಿ ಕಿಡಿಗೇಡಿಗಳಿಗೆ ಅನುಕೂಲಕರವಾಗಿ ಪರಿಣಮಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT